20070529

ಕೆಟ್‌ಮನುಷ್ಯ..ಚೆನ್ನಾಗಿ ಬರೀತಾನೆ.


ಸಾಹಿತ್ಯ ಲೋಕಕ್ಕೆ ಯಾರೂ ಮೆಣಸಿನ ಹೊಗೆ ಹಾಕಬೇಕಿಲ, ಇಲ್ಲಿ ಹೊಗೆ ಬಿಡಿ, ತಂಗಾಳಿ ಬೀಸಿದರೂ ಯಾರೂ ಸುಳಿಯಲಿಕ್ಕಿಎಂದು ಅನಿಸುತ್ತದೆ.

ಬೇರೆ ಸಾಹಿತ್ಯ ನನಗೆ ಗೊತ್ತಿಲ್ಲ, ಆದರೆ ಈ ಕನ್ನಡ ಸಾಹಿತ್ಯ ಲೋಕ ಇದೆಯಲ್ಲಾ, ಇದು ಪಕ್ಕಾ ಹಲವು ಗ್ಯಾಂಗುಗಳ ಒಂದು ಕಳಾಸಿಪಾಳ್ಯ.

ಇಲ್ಲಿ ರೌಡಿಶೀಟ್‌ನಲ್ಲಿ ಇದ್ದವನು ಮಾತ್ರಾ ಉಳಿಯಬಲ್ಲ.

ಅಥವಾ ಗ್ಯಾಂಗ್‌ನ ಲೀಡರ್‌ನನ್ನು "ಅಣಾ "ಎಂದು ಥೇಟ್ ಕನ್ನಡ ಪಿಕ್ಚರ್‌ನ ಸೈಡ್ ಆಕ್ಟರ್ ಮಾದರಿಯಲ್ಲಿ ಕೈ ಕಟ್ಟಿ ಕ್ರಾಪ್ ಸೈಡ್‌ಗೆ ಎಳೆದು ನಿಂತವನು ಮಾತ್ರಾ ಉಳಿಯಬಲ್ಲ.

ಪಕ್ಕಾ ಮೂತಿ ನೆಕ್ಕೋರ,ಹಲ್ಲು ಗಿಂಜೋರ, ಸರಿಯಾಗೇ ಹೇಳಬೇಕಾದರೆ ಒಬ್ಬರ ಬೆನ್ನು ಒಬ್ಬರು ಉಜ್ಜವವರ ಕೂಟ ಇದು.

ಅಲ್ಲಾ ಎಂದರೆ ನಿಮ್ಮಾಣೆ.

ವಟವಟ, ಹಸಿಹಸಿ ಸುಳ್ಳುಗಳನ್ನೇ ನೇಯುವವರೇ ಈ ಕ್ಷೇತ್ರದಲ್ಲಿ ಇರೋದು.

ಬೆಂಗಳೂರು ಇವರ ಕೇಂದ್ರ.ಇಲ್ಲಿ ಸಂಜೆಯಾಯಿತು ಎಂದರೆ ಗುಂಡು, ಗಂಡು ಸ್ವ॒ಲ್ಪ ಮಟ್ಟಿಗೆ ಹೆಣ್ಣು ಸೇರಿ ಇವರ ಆರಾಧನೆ ನಡೆಯುತ್ತದೆ..

ಯಾವನೋ ಒಬ್ಬ ಅದೇನೋ ಬರೆದು ಓದುತ್ತಾನೆ , ಉಳಿದವರು ಅದನ್ನು ಭಾಪ್ರೇ ಅನ್ತಾರೆ.ಇವರ ಬೆನ್ನು ತುರಿಸುವುದನ್ನು ತಪ್ಪದೇ ಅಸ್ವಾದಿಸುವ ಪತ್ರಿಕಾ ಮಂದಿ ಭಯಂಕರವಾದ ಒಂದು ಲೋಕ ಕಲ್ಯಾಣ ಆಗಿದೆ ಎಂದು ಮರುದಿನ ಬರೆದು ಈ ಗ್ಯಾಂಗಿನ ಕೃಪಾಕಟಾಕ್ಷಕ್ಕೆ ಪಾತ್ರರಾಗುತ್ತಾರೆ.


ಅಲ್ಲಿಗೆ ಕನ್ನಡ ತಾಯಿ ಕೃತಾರ್ಥಳಾಗುತ್ತಾಳೆ.


ಯೂನಿವರ್ಸಿಟಿ ಕ್ಯಾಂಪಸ್ಸು ಈ ಬೆನ್ನು ತುರಿಸುವ ಗ್ಯಾಂಗಿನ ತರಬೇತಿ ಕೇಂದ್ರ.ಇಲ್ಲಿಯೇ ಗ್ಯಾಂಗುಗಳಿಗೆ ಅಡ್ಮಿಶನ್ ಆಗೋದು.

ಗ್ಯಾಂಗುವಾರುಗಳೂ ಶುರುವಾಗುವುದೂ ಉಂಟು.

ಈ ಘೋರ ಸಾಹಿತಿಗಳು ಎಂಥಾ ನಯವಂಚಕರು ಎಂದರೆ ಇವರನ್ನು ನಿಮ್ಮೂರಿಗೆ ಕರೆಸಿ ನೋಡಿ, ಗೊತ್ತಾಗುತ್ತದೆ.ಇವರ ಕ್ರಾತಿಕಾರಿ ಬುಕ್ಕುಗಳನ್ನು ಏನಾದರೂ ನೀವು ಓದಿ,ಅದರಿಂದ ಖುಶ್ ಆಗಿ ಅವರನ್ನು ಭೇಟಿ ಮಾಡಲು ಹೋದಿರಿ ಎಂದು ಕೊಳ್ಳಿ, ಆಹಾ ಏನು ನಯ, ಏನು ವಿನಯ, ಸಾರ್ ನಾನು ಇಂಥವನು ಎಂದರೆ ಸಾಕು ಫಳ್ಳನೇ ನಗು ಬೀರಿ, ವಾವ್ ಗೊತ್ತು ಗೊತ್ತು ಅನ್ತಾರೆ.ಏನ್ ಗೊತ್ತು ನಿಮ್ಮ ಪಿಂಡ ಅಂತ ಮನಸ್ಸಿನಲ್ಲೇ ಹೇಳಿಕೊಳ್ಳಲಾರದೆ ನೀವು ಆನಂದ ತುಂದಲಿತರಾಗಿ ಹೊರಟರಿ.ಸಂಜೆ ಈ ಗ್ಯಾಂಗಿನ ಹಲವು ಅಸಾಮಿಗಳು ಬಂದು ಸೇರಿರುತ್ತವೆ.ಆ ಹೊತ್ತಿಗೆ ನೀವು ಮತ್ತೊಮ್ಮೆ ಬೆಳಗಿನ ಪರಿಚಯದಲ್ಲಿ ಮಾತನಾಡಿಸಲು ಹೋಗಿ,ಏನಾಯಿತು ಎಂದು ಆಮೇಲೆ ಹೇಳುವಿರಂತೆ.
ಈ ಸಾಹಿತಿಗಳೆಂಬ ಕೂಟ ಕಾರಸ್ಥಾನಿಗಳು ರಾಜ್ಯದುದ್ದಕ್ಕೂ ಒಂದು ನೆಟ್‌ವರ್ಕ್ ಹೊಂದಿದ್ದಾರೆ.ಇಲ್ಲೊಂದು ಪುಸ್ತಕ ಹೊರಟಾಗ ಅಲ್ಲೊಂದು ಪುಂಗಿ ಊದಲಾಗುತ್ತದೆ.ಅಲ್ಲೊಂದು ಪುಸ್ತಕ ಹೊರಟಾಗ ಇಲ್ಲಿ ಪುಂಗಿ ಊದುತ್ತಾರೆ.ನಿಜವಾದ ಓದುಗ ಅಬ್ಬೇಪ್ಪಾರಿಯಂತೆ ಆಗಿ ಯಾವುದು ಅಸಲಿ ಯಾವುದು ನಕಲಿ ಎಂದು ಗೊತ್ತಾಗದೆ ಮೇಲೆ ಕೆಳಗೆ ನೋಡುತ್ತಾನೆ.ದೇಶದುದ್ದಕ್ಕೂ ದಿನ ಬೆಳಗಾದರೆ ಸೆಮಿನಾರ್, ಸಂಕಿರಣ,ಸಮ್ಮೇಳನ ಎಂದೇ ಬದುಕುವ ಕಲೆ ಇವರಿಗೆ ಕರಗತ.ಅದಕ್ಕೆಂದೇ ಯಾವ ಯಾವ ಸರಕಾರ, ಸಂಘ, ವಿವಿಗಳಲ್ಲಿ ಎಷ್ಟೆಷ್ಟು ಹಣ ಇದೆ ಎಂದು ಇವರಿಗೆ ಗೊತ್ತು ಮತ್ತು ಅದನ್ನು ಹೇಗೆ ಕಕ್ಕಿಸಬೇಕೆಂದು ಗೊತ್ತು.

ಅದಕ್ಕಾಗಿಯೇ ರಾಜಕಾರಣಿಗಳ ಮನೆ ಹಿಂದೆ ಮುಸುರೆ ತಿಕ್ಕುತ್ತಾರೆ ಈ ಘನ ಜನ.

ಈ ಅಖಂಡ ಚಿಂತಕರು ತಮ್ಮ ವಿದ್ವತ್ತನ್ನು ನಿಮ್ಮ ಬಳಿ ಬಂದು ಸೇರು ಸೇರು ಅಳೆದು ಕೊಡಬಲ್ಲರು.ನೀವು ವಿಮಾನ ಟಿಕೇಟು,ಐಷಾರಾಮಿ ಕಾರು ಮತ್ತು ಒಂದು ಸುಖಕರ ವಸತಿ ಕೊಟ್ಟರಾಯಿತು ಅಷ್ಟೇ.ಊಟದ ಬಗ್ಗೆ ಹೋಟೇಲಿನ ಕ್ಯಾಷರ್ ಬಳಿ ಹೇಳಿದರೆ ಸಾಕು, ನೀವೇ ಊಟದ ಬಟ್ಟಲಿನೆದುರು ಇರುವ ಅಗತ್ಯವಿಲ್ಲ.ಆಮೇಲೆ ಕವರೇಜ್ ಎಷ್ಟೆಂಬುದನ್ನು ಅವರು ಆರಂಭದಲ್ಲೇ ಹೇಳಿದಂತೆ ತುಂಬಿಸಿಕೊಟ್ಟರಾಯಿತು.

ನಮ್ಮ ಊರಲ್ಲಿ ಒಂದು ಹೋಟೇಲಲು ಉದ್ಘಾಟನೆ ಅಂಗವಾಗಿ ಓರ್ವ ಗಾಯಕ ಮಹಾಶಯರನನು ಕರೆಸಲಾಗಿತ್ತು.ಅವರು ತಂಡದೊಂದಿಗೆ ಬಂದು ಚೆನ್ನಾಗಿಯೇ ಹಾಡಿ ಹೊರಟರು.ವಾಪಾಸ್ ಹೋಗುವಾಗಲೇ ಆದದ್ದು ಕಷ್ಟ.ಅವರನ್ನು ನಮ್ಮೂರ ಲಟಾರಿ ಬಾರ್‌ನಿಂದ ಅವರ ಕಾರಿಗೆ ತುಂಬಲು ನಮಗೇ ಸಾಕೋ ಸಾಕಾಗಿತ್ತು.

ನಮ್ಮ ಗೆಳೆಯನೊಬ್ಬ ಅದು ಹೇಗೋ ಮಾಡಿ ಒಂದು ಕಥಾ ಸಂಕಲನ ತಯಾರು ಮಾಡಿದ್ದ.ಅದಕ್ಕೆ ಅವನ ಫೇವರೇಟ್ ಸಾಹಿತಿಯ ಮುನ್ನುಡಿ ಬೇಕು ಎಂದು ಒಂದು ಕಾಗದ ಬರೆದ.ಫೋsನು ಮಾಡಿದ.ವರ್ಷ ಏಳಾಯಿತು, ಇನನೂ ಉತ್ತರವಿಲ್ಲ.

ಸೌಜನ್ಯಕ್ಕೂ ಒಂದು ನೋ ಎನ್ನಲೂ ಇವರಿಂದಾಗವುದಿಲ್ಲ.

ಆಮೇಲೆ ಆ ಕಿತಾಬನ್ನು ಒಂದು ಮಾನವೀಯ ಬರಹಗಳ ಮೇಡಂ ನಿಂದ ಬಿಡುಗಡೆ ಮಾಡಿಸಬೇಕೆಂದು ಆಕೆಯ ಮನೆ ಮುಂದೆ ಹೋಗಿ ನಿಂತ.

ಎಸ್ ಎಂದಳು ಮೇಡಂ.

ಇವನು ಊರಿಗೆ ಬಂದು ಕಾಗದ ಪ್ರಿಂಟು ಮಾಡಿ ಹಂಚಲು ಶುರು ಮಾಡಿದರೆ ಆಯಮ್ಮನ ಟೆಲಿಗ್ರಾಂ..

ಉಸಾರಿಲ್ಲ.

ಆಮೇಲೆ ಇವನು ಯಾರದ್ದೋ ಬಳಿ ಹೋಗಿ ಅದೇ ದಿನಕ್ಕೆ ಕಿತಾಬು ಹೊರಗಿಡುವ ಫಂಕ್ಷನ್ನು ಮಾಡಿದ. ಉಸಾರಿಲ್ಲದ ಮೇಡಂ ಆದಿನ ಬೆಂಗ್ಳೂರಲ್ಲಿ ದೊಡ್ಡ ಕವರೇಜು ಸಿಗುವ ಕವಿಗೋಷ್ಠಿಯಲ್ಲಿ ಕವನ ಓದಿದ್ದು ಇವನ ಕಿತಾಬು ಬಿಡುಗಡೆಯ ಸುದ್ದಿ ಬಂದ ಪೇಪರಿನ ಪುಟದಲ್ಲೇ ಎದ್ದೆದ್ದು ಕಾಣುತ್ತಿತ್ತು.

ಒಂದು ರೇಶನ್ನು ಕಾರ್ಡು ಕೂಡಾ ಬಡವನಿಗೆ ಕೊಡಿಸಲು ಬಾರದ, ಒಬ್ಬ ಅಂಗವಿಕಲನಿಗೆ ಸರಕಾರದಿಂದ ಸೌಲಭ್ಯ ಇದೆ ಎಂದು ದಿಕ್ಕು ತೋರಿಸಲಾರದ,ಮನೆ ಎದುರಿನ ನಳ್ಳಿಯಲ್ಲಿ ನೀರು ಬರ್ತಾ ಇಲ್ಲಾ ಎಂದು ಕಾರ್ಪೋರೇಶನ್‌ಗೆ ಫೋನೂ ಮಾಡಲು ಬಾರದ,ಈ ಮಂದಿ ಸಾಹಿತ್ಯದಿಂದ ಸಮಾಜ ಉದ್ಧಾರ ಮಾಡುತ್ತಾರೆ ಎಂದರೆ ಯಾರು ನಗಲಿಕ್ಕಿಲ್ಲ,

ನಗುವುದಕ್ಕೇನು ಇದೆ ಅಲ್ಲಿ.?

ಅದು ಎಲ್ಲರಿಗೂ ಗೊತ್ತಿದೆ.

ಹೀಗಿದ್ದರೂ ಈ ಮಂದಿ ತಮ್ಮದೇ ಸಮರ್ಥನೆ ಮುಂದಿಡುತ್ತಾರೆ.ಬದುಕು, ಮಾನವೀಯತೆ, ಆಮೇಲೆ ಬದ್ಧತೆ ಮುಂತಾಗಿ ಪಾರಿಭಾಷಿಕ ಪದ ಪುಂಜ ಇವರ ಬಳಿ ಸದಾ ಇರುತ್ತದೆ.ಇನ್ನು ಯಾವನೋ ಯುರೋಪಿಯನ್ನ್ ರೈಟರ್‌ನ ಕೋಟ್ ಮಾಡಿ ಮಾಡಿ ನಮ್ಮ ತಿಥಿ ಮಾಡುತ್ತಾರೆ.

ಆಮೇಲೆ ಮಾತಿನ ನಡುವೆ ಇವರ ಆಂಗಿಕ ಅಭಿನಯ ನೋಡಬೇಕು.ಅದೇನು ಕಣ್ಣು ಹೊರಳುವುದು,ಅದೇನು ಕೈ ತಿರುಚೋದು,ಅದೇನು ಉಗ್ಗುವುದು,..ಅವರ ತ್ರಾಣ ನಮ್ಮ ನಿತ್ರಾಣ.


ಕ್ಷಮಿಸಿ,

ನನ್ನ ಮುಂದೆ ಯಶವಂತ ಚಿತ್ತಾಲರ ಚಿತ್ರವಿದೆ. ನಾನೂ ನನ್ನ ಗೆಳೆಯ ಜೋಗಿ ಅಲಿಯಾಸ್ ಗಿರೀಶ್ ರಾವ್ ಕಾಲೇಜಲ್ಲಿ ಇದ್ದಾಗ ಅವರಿಗೆ ಕಾಗದ ಬರೆದದ್ದು,ಅವರು ಉತ್ತರಿಸಿದ್ದು,ಆಮೆಲೆ ನಮಗೆಂದೇ ಎರಡು ದೊಡ್ಡ ಪುಸ್ತಕ ಕಳುಹಿಸಿದ್ದು, "ಹಣದ ಮಾತು ಮರೆತು ಬಿಡಿ" ಎಂದದ್ದು..

ಅದು ಆಗಿನ ಮಾತಾಯಿತು.ಕಳೆದ ವರ್ಷ ಚಿತ್ತಾಲರು ನಮ್ಮ ಊರಿಗೆ ಬಂದಿದ್ದರು. ಯಾವುದೋ ಸಮಾರಂಭದಲ್ಲಿ ಮಾತನಾಡಿ ಹೋಗಿದ್ದರು. ನಾನೂ ಹೋಗಿದ್ದೆ.ಸಭೆ ಮುಗಿಸಿ ಬಂದಿದ್ದೆ.ಒಂದು ತಿಂಗಳು ಕಳೆದು ಚಿತ್ತಾಲರ ಪತ್ರ.ಅದು ಎಂದೋ ನಾನೂ ಜೋಗಿ ಬರೆದಿದ್ದ ಕಾಗದವನ್ನು ಹುಡುಕಿ ತೆಗೆದು ವಿಳಾಸ ಸಂಪಾದಿಸಿದ್ದರು. ನಮ್ಮ ಕಿವಿ ಹಿಂಡುತ್ತಾ ಇರುವ ಸುಬ್ರಾಯ ಚೊಕ್ಕಾಡಿ ಮುಂಬೈಗೆ ಹೋಗಿದ್ದಾಗ,ಅದೇನೋ ಮಾತಿಗೆ ನಾನೂ ಆ ಸಭೆಗೆ ಬಂದಿದ್ದನ್ನು ಹೇಳಿದ್ದರಂತೆ.

ಆಮೇಲೆ,..ಚಿತ್ತಾಲರು ಅವರದ್ದೇ ಭಾಷೆಯಲ್ಲಿ ಹೇಳಬೇಕಾದg, ಅದೆಷ್ಟು ಖತಿ ಗೊಂಡಿದ್ದರೆಂದರೆ, ಉದೆಕಾಲ ನಾಲ್ಕು ಗಂಟೆಗೆ ಕುಳಿತು ನನಗೆ ಕಾಗದ ಬರೆದಿದ್ದರು, ಅದರಲ್ಲಿ ಒಂದು ಸಾಲು "ಯಾಕೆ ಮೀಟ್ ಮಾಡಲಿಲ್ಲ?ನಾನೇನು ಅಷ್ಟೊಂದು ದೂರ ಆಗಿದ್ದೇನಾ?"

ಈ ತನಕ ನಾವು ಎಂದೂ ಮೀಟೇ ಮಾಡಿಲ್ಲ.

ವೈಎನ್‌ಕೆ ಇದ್ದರಲ್ಲಾ ,ಎಂಥವರನ್ನೆಲ್ಲಾ ಉಳಿಸಿದರು, ಬೆಳೆಸಿದರು,ಎಂದರೆ.....

ಅವನೊಬ್ಬ ದೀಪಾವಳಿ ವಿಶೇಷಾಂಕಕ್ಕೆ ಕಥೆ ಬರೆದು ತಂದು ಕೊಟ್ಟಾಗ ಅವನ ಕಾಲ್ಲಿ ಹವಾಯಿ ಚಪ್ಪಲು ನೋಡಿ ಎಷೊಂದು ಅಪ್ ಸೆಟ್ ಆದರೆಂದರೆ ಅವನು ಕೆಲಸ ಮಾಡುತ್ತಿದ್ದ ಲೆಕ್ಕಪತ್ರ ದೂಕಾನಿಗೆ ಫೋನು ಮಾಡಿ ದಬಾಯಿಸಿ ಶೂ ಕೊಳ್ಳಲು ಬೆಕಾದಷ್ಟು ತಿಂಗಳ ಪಗಾರ ಹೆಚ್ಚಿಸಿದ್ದರು.

ಗೆಳೆಯ ಸರದೇಶಪಾಂಡೆ ಜೊತೆ ಬೇಂದ್ರೆ ಅವರ ಮನೆಗೆ ಹೋಗಿದ್ದೆ. ಸಂಜೆ ಕತ್ತಲಾಗಿತ್ತು.ಪಾಂಡುರಂಗ ಬೇಂದ್ರೆ ಇದ್ದರು. ಚಹ ಕೊಟ್ಟರು.ಇಡೀ ಮನೆ ತೋರಿಸಿದರು. ನಾನು "ಬೇಂದ್ರೆ ಅವರನ್ನು ನೋಡಲಾಗಲಿಲ್ಲ, ನಾವು ದೊಡ್ಡೋರಾಗುವ ಮುನ್ನ ಅವರು ಹೋಗಿದ್ದರು ಆದರೇನಂತೆ,ಈಗ ಅವರನ್ನೇ ನೋಡಿದ ಹಾಗಾಯಿತು" ಎಂದೆ.ಪಾಂಡುರಂಗ ಬೇಂದ್ರೆ ಕಣ್ಣಲ್ಲಿ ಬಳ ಬಳ ನೀರು ..

ಇನ್ನೂ ಮರೆತಿಲ್ಲ.

ಅಂದೊಮ್ಮೆ ನಾನು ಅಡಿಗರ ಮನೆಗೆ ಹೋಗಿ ಕುಳಿತೆ. ಅವರ ಪೊಮೆರಿಯನ್ ಪುಟ್ಟ ಇತ್ತು."ಲಿಲಿತಾ" ಎಂದು ಕರೆದು ಕಾಫಿ ಕೊಡಿಸಿದ್ದರು.

ಅವರು ಆ ಅರ್ಧ ಗಂಟೆಯಲ್ಲಿ ನನ್ನ ಪ್ರೀತಿಗೆ ಪಾತ್ರರಾಗಿದ್ದರು.

ಲಂಕೇಶ್ ಬಗ್ಗೆ ಕೇಳಿದಾಗ, ಅವರು ಹೇಳಿದ್ದು,

" ಕೆಟ್ಮನುಷ್ಯ, ಚೆನ್ನಾಗಿಬರೀತಾನೆ.’

20070528

ಸ್ಟೇಟಸ್ ಮಾರಾಯರೇ ಸ್ಟೇಟಸ್ಎಲ್ಲಾ ಸುಳ್ಳು.
ನಮ್ಮದೆಲ್ಲಾ ಲೊಳಲೊಟ್ಟೆ.
ಆ ದಿನ ದೇವೇಗೌಡರು ಪಾರ್ಲಿಮೆಂಟಿನಲ್ಲಿ ಸರಕಾರ ಉರುಳುವ ಭಾಷಣ ಮಾಡುತ್ತಾ ತಮ್ಮನ್ನು ಹೊರಹಾಕಲು ಬಂದ ಕಾಂಗ್ರೆಸಿಗರಿಗೆ ಚಾಟಿ ಬೀಸುತ್ತಾ ಜೋಬಿನೊಳಗೊಂದು ಕೈ ಮತ್ತು ಚಾಳೀಸಿನ ಮೇಲೊಂದು ಕೈ ಇಟ್ಟು ತಮ್ಮ ಹಾಸನ ಇಂಗ್ಲೀಷ್‌ನಲ್ಲಿ ಕೇಳಿದ್ದರು,
"ಯೂ ಟಚ್ ಯುವರು ಹಾರ್ಟು ಏಂಡ್ ಟೆಲ್ಲು ಇಟ್ ಈಸ್ ಫೇರ್.."
ಯಾಕೋ ಅವರ ಮಾತು ಈಗ ಇಲ್ಲಿ ನೆನಪಾಗುತ್ತಿದೆ.ನಮ್ಮ ಸ್ಟೇಟಸ್ಗಾಗಿ ನಾವು ಪಡುವ ಪಾಡು ಯಾರಿಗೂ ಬೇಡ.
ಅಕಟಕಟಾ ಇದೆಲ್ಲಾ ಬರೀ ಕೃತ್ರಿಮ!!
ಹಾಗೆಂದು ನಮಗೂ ಗೊತ್ತಿದೆ.ಆದರೆ ನಾವು ನಮ್ಮ ಹಾರ್ಟು ಟಚ್ಚು ಮಾಡುವುದೇ ಇಲ್ಲಾ.ಗೊತ್ತಿದ್ದೂ.
"ಚಿಲ್ಲರೆ ಮನುಷ್ಯರಲ್ಲ ನಾವು’-ಅಂತ ನಮಗೆ ನಾವೇ ಹೇಳಿಕೊಳ್ಳುತ್ತೇವೆ, ಇತರರೂ ನಮ್ಮನ್ನು ಹೇಳುತ್ತಾರೆ.
ಡಿಗ್ನಿಫೈಡು, ವಂಡರ್‌ಫುಲ್ ಕ್ಯಾರೆಕ್ಟರ್ ಪೈಕಿ ನಾವು ಎಂದು ಫೋಸ್ ಕೊಡುತ್ತೇವೆ.ನಾವು ಚಿಲ್ಲರೆ ಅಲ್ಲ ಎಂದಾದರೆ, ಇನ್ಯಾರೋ ಚಿಲ್ಲರೆ ಜನ ಇರಲೇ ಬೇಕು ಎಂದಾಯಿತಲ್ಲ. ನಾವು ಡಿಗ್ನಿಫೈಡು ಆದರೆ ಡಿಗ್ನಿಟಿ ಇಲ್ಲದವರ ಸಾಲೇ ಇರಲೇಬೇಕಲ್ಲ. ನಾವು ವಂಡರ್‌ಫುಲ್ ಆದರೆ ವಂಡರ್ ಫೂಲ್ ಯಾರು ?
ಹಾದಿ ತಕ್ಕ ಟೆಂಟು ಹಾಕಿ ಹೊರಗೆ ನಾಲ್ಕು ತರಗಲೆ ಮಡಗಿ ಉರಿ ಉರಿಸುತ್ತಾ, ಮೋರಿಯ ಕಟ್ಟೆಯಲ್ಲಿ ಚಟ್ನಿ ರುಬ್ಬುತ್ತಾರಲ್ಲ... ಅವರು ಏನ್ ಥತ್ತೇರಿಕೆ ಕೊಳಕು ಜನ ! ಬಸ್ಟ್ಯಾಂಡಲ್ಲಿ ಸಿಮೆಂಟು ಖುರ್ಸಿ ಮೇಲೆ ಕುಕ್ಕರು ಕೂತು ಬೀಡಿ ಸೇದ್ತಾರಲ್ಲ ಆ ಮಂದಿ ! ಹೈವೇ ಬದುವಲ್ಲಿ ಮರದ ಕೆಳಗೆ ಗೀಟು ಗೀಟಿನ ಚಡ್ಡಿ ಹಾಕಿ ತಣ್ಣಗೆ ಮಲಗಿರ್‍ತಾರಲ್ಲ ; ಅವರು !ಎಷ್ಟು ಮಂದಿ ಬೇಕು ಇಂಥವರು, ನಮ್ಮ ನಾಗರಿಕ ಭಾಷೆಯಲ್ಲಿ ಇವರಿಗೆ ನಾಮಕರಣ ಮಾಡಿದ್ದು"ನಾಲಾಯಖ್ಖು ಮಂದಿ’
ಇವರು ಕೆಳಗಿನ ಸ್ತರದಲ್ಲಿ ಕುಳಿತಿದ್ದರೆ ನಮ್ಮ ಸೀಟು ಎಲ್ಲಿದೆ ಅಂತ ನೋಡುತ್ತೇವೆ. ನಾವು ಕುಳಿತ ಸೀಟಿಗೂ ಮೇಲೆ ಅಟ್ಟಳಿಗೆ ಇಟ್ಟ ಹಾಗಿದೆ; ಅರೆ ಅಲ್ಲೂ ಜನ ಇದ್ದಾರೆ ! ಅರೆರೆ, ಅವರ ಮಟ್ಟಿಗೆ ನಾವೂ ನಾಲಾಯಖ್ಖಾಗಿ ಬಿಟ್ಟರೆ, ಯೂಸ್ಲೆಸ್ಸು ಅಂತನಿಸಿದರೆ !
ನಾವು ಮೆಟ್ಟಿಲು ಏರಲು ಮುಂದಾಗುತ್ತೇವೆ ; ನಮ್ಮದಲ್ಲದ ನೋಟ, ನಿರ್ಮಾಣಗಳನ್ನು ನಿರ್ಮಿಸಿಕೊಳ್ಳುತ್ತೇವೆ, ಯಾರದ್ದೋ ಲಯವನ್ನು ಪೇರಿಸಿಕೊಳ್ಳುತ್ತೇವೆ. ನಾವು ಮೇಲೇರಬೇಕು ಎಂಬ ಹಪಹಪಿಗೆ ನಮ್ಮ ಮನಸ್ಸಿನ ಗೊರಸಿಗೇ ಲಾಳ ಹೊಡೆಯುತ್ತೇವೆ.
"ಓಡಬೇಕು ಕಣ್ರೀ, ನಿಲ್ಲಬಾರದು’
ನಮ್ಮ ಓಟಕ್ಕೆ ಗುರಿ ಇದೆಯಾ ?
ಇದೆಲ್ಲಾ ಅಸಹಜತೆಯ ಕಾಲ. ಸಹಜವಾಗಿ ಇರಬೇಕೆಂದು ನಮಗನ್ನಿಸಿದರೂ, ಓರಗೆಯವರ ಅಸಹಜತೆ ನಮ್ಮನ್ನು ಸಹಜತೆಗೆ ಇರಗೊಡುವುದಿಲ್ಲ.
ಎಲ್ಲವನ್ನೂ ಕಿತ್ತು ಸಾಗುವ ಧಾರ್ಷ್ಟ್ಯವಾಗಲಿ, ಧೈರ್ಯವಾಗಲಿ ನಮ್ಮಲ್ಲಿ ಇರುವುದೂ ಇಲ್ಲ.
ನಮ್ಮೆದುರು ಆ ನಾಲ್ಕನೇ ಟೇಬಲಲ್ಲಿ ಕುಳಿತ ಅರೆಮಾಸಲು ಬಣ್ಣದ ಅಂಗಿ ಹಾಕಿದ ಫೂಲ್ ಮಸಾಲೆ ದೋಸೆ ಕಬಳಿಸುವುದನ್ನು ನೋಡಿದರೆ ನಮಗೆ ಅಯ್ಯೋ ಅನಿಸುತ್ತದೆ. "ಏನ್ ಮ್ಯಾನರ್‍ಸೇ ಇಲ್ಲ’ ಎನ್ನುತ್ತೇವೆ. ಮಸಾಲೆ ದೋಸೆಗೂ ಸ್ಪೂನ್, ಫೋರ್ಕು ಚುಚ್ಚುವ ನಾವು ಹಸಿವಾಯಿತೆಂದು ಬಂದ ಗಿರಾಕಿಗಳಲ್ಲ, ಆ ಫೂಲ್‌ಗೆ ಹಸಿವಾಗಿದೆ, ಮುಕ್ಕುತ್ತಿದ್ದಾನೆ ಎಂದು ನಮ್ಮೊಳಗೊಬ್ಬ ಇರೋನು ಎಲ್ಲೋ ಗುಣಗುಣಿಸಿದ ಹಾಗಾಗುತ್ತದೆಯಾ ?
ಇದು ಪೂರ್ತಿ ಪ್ಲಾಸ್ಟಿಕ್ ಯುಗ. ಇಲ್ಲಿ ತಿನ್ನೋದು, ಕುಡಿಯೋದು, ಡ್ರೆಸ್ಸು, ಧಿರಸು, ವಾಕು, ವಾಕ್, ಎಲ್ಲವೂ ಪ್ಲಾಸ್ಟಿಕ್ಕು.
ಒಂದೊಮ್ಮೆ ನಾವೇ ಅಂಟಿಸಿಕೊಂಡದ್ದು, ಕೆಲವೊಮ್ಮೆ ಯಾರಿಂದಲೋ ಅಂಟಿಸಲ್ಪಟ್ಟದ್ದು.
ನಮ್ಮ ನಗು ಕೂಡಾ ಕೃತ್ರಿಮ.ನಡೆ ಕೂಡಾ.
ಆಹಾರ-ವಿಹಾರ ಕೂಡಾ ನಟನೆಯಾಗುತ್ತಿರುವ ಯುಗ ಇದು, ಯುಗ ಧರ್ಮವಿದು.
ಸುಮ್‌ಸುಮ್ನೇ ಕೇಳಿನೋಡಿ, ನೀವು ಇದೇ ಥರಾ ಮನೇನಲ್ಲೂ ನಗ್ತೀರಾ ? ನಡೀತೀರಾ ? ಉಣ್ತೀರಾ ? ಯೋಚೀಸ್ತೀರಾ ?....
ಏಕೆ ಗೊತ್ತಾ ನಮಗೆ ಈ ಸ್ಟೇಟಸ್ ಮೈಂಟೇನ್ ಮಾಡಬೇಕು ಅಲ್ವಾ?
ಅಮೇರಿಕನ್ನರು ಈ ಸ್ಟೇಟಸ್ ವಿಚಾರದಲ್ಲಿ ಅರಿಭಯಂಕರರು.ಅವರಿಗೆ ಅದೆಂಥಾ ಸ್ಟೇಟಸ್ ಆಂಕ್ಸೈಟಿ ಇದೆ ಎಂದರೆ ಅವರ ಕಾರಿನ ಹಿಂದಿನ ಕನ್ನಡಿಯಲ್ಲೂ ಅವರ ಡಿಗ್ರಿ,ಕಾಲೇಜು,ಯುನಿವರ್ಸಿಟಿಯ ಹೆಸರು ಹಾಕಿಕೊಳ್ಳುತ್ತಾರೆ.ಅವರದ್ದೇ ಪೀಳಿಗೆಯ ನಮ್ಮವರೂ ಮದುವೆ ಕಾಗದದಲ್ಲೂ ಗಂಡಿನ ಹೆಸರಿನ ಜೊತೆಗೆ ಡಿಗ್ರಿ, ಮಾತ್ರವೇನು ಅವನ ಸೋದರಮಾವನ ಕಂಪನಿಯ ಹೆಸರು ಹಾಕುತ್ತಾರೆ.ಸಿಂಪ್ಲೀ ಸ್ಟೇಟಸ್‌ಗಾಗಿ.
ರೌಂಡ್ ಟೇಬಲ್ಲಿನಲ್ಲಿ ಜಾಗದ ತಕರಾರೇ ಇರುವುದಿಲ್ಲ ಎಂಬ ಇಟಾಲಿಯನ್ ಮಾತೊಂದನ್ನು ಇಲ್ಲಿ ಕೋಟ್ ಮಾಡಬಹುದು.
ಸ್ಟೆಟಸ್ಗಾಗಿಯೇ ಹೋಟೇಲಲ್ಲಿ ಊಟ ಮಾಡುವವರಿದ್ದಾರೆ, ಸ್ಟೇಟಸ್ಗಾಗಿಯೇ ಮನೆ ಕಟ್ಟಿಸುವವರಿದ್ದಾರೆ, ಸ್ಟೆಟಸ್ಗಾಗಿಯೇ ಕಾರು ಓಡಿಸುವವರಿದ್ದಾರೆ.ಇದ್ದಾರೆ ಏನು, ಇರೋದೇ ಅಂಥವರು.
ಅದನ್ನೇ ಮತ್ತೆ ಹೇಳಬೇಕು ಕೇಳಬೇಕು
ಎಲ್ಲಾ ಸುಳ್ಳು,ಎಲ್ಲಾ ಲೊಳಲೊಟ್ಟೆ.
ಕೇಳೋದಕಕೆ ಹೇಳೋದಕ್ಕೆ ಎಂದು ಒಂದು ಮೊಬೈಲ್ ಫೋನು ಇದ್ದರೆ ಸಾಕು ಎಂದು ಗೊತ್ತಿದ್ದೂ ಸಿಕ್ಕಾಪಟ್ಟೆ ಫೀಚರ್ ಇದೆ ಎಂದು ಸ್ಟೆಟಸ್ ಎಂಬ ಆಂತರಂಗಿಕ ಪ್ರಸಂಗವನ್ನು ಅಡಗಿಸಿ ಇಟ್‌ಟುಕೊಳ್ಳುತ್ತೇವಲ್ಲಾ ,
ಲೊಳಲೊಟ್ಟೆ ಅಲ್ಲದೆ ಮತ್ತೇನು?

20070520

ಬದಲಾವಣೆ ಎಂಬ ಬಡಿವಾರ


ಮಹಾ ಬುದ್ಧಿವಂತರು ಮತ್ತು ರಣ ಹುಚ್ಚರು ಯಾವತ್ತೂ ಬದಲಾಗೋದಿಲ್ಲ-ಕನ್ಫ್ಯೂಶಿಯಸ್
ಯಾವುದು ಬದಲಾಗುತ್ತದೆ?

ಈ ಪ್ರಶ್ನೆಯಿಟ್ಟು ಸಾವಿರಾರು ಮಂದಿ ಚಿಂತಿಸಿದ್ದಾರೆ, ನೂರಾರು ಮಂದಿ ಬರೆದಿದ್ದಾರೆ, ಲಕ್ಷಾಂತರ ಮಂದಿ ಮಾತನಾಡಿದ್ದಾರೆ.

ಅವರ ಪಾಡೇನಾಯಿತು?

ಅವರೂ "ಮಣ್ಣು ಬಾಯನು ಮುಚ್ಚೆ ಸೋತು ಮಲಗಿದರು’.

ಯಾವುದೂ ಬದಲಾಗಿಲ್ಲ. ಕಾಲವಾಗಲಿ, ಮೌಲ್ಯವಾಗಲಿ, ವ್ಯಕ್ತಿಯಾಗಲಿ, ವ್ಯಕ್ತಿತ್ವವಾಗಲಿ. ಎಲ್ಲವೂ ಹಾಗೆಯೇ ಇದೆ ಎಂಬುದು ಒಂದು ವಾದ.

ಪೂರ್ತಿ ಬದಲಾಗಿದೆ ;ಇಡೀ ಜಗತ್ತು. ಬದಲಾವಣೆಯೊಂದೇ ಶಾಶ್ವತ, ಉಳಿದದ್ದೆಲ್ಲಾ ಸುಳ್ಳು ಎಂಬುದು ಮತ್ತೊಂದು ವಾದ.

ಕೆಲವರು ಕಾಲ ಬದಲಾಗುವುದಿಲ್ಲ ಮೌಲ್ಯ ಬದಲಾಗುತ್ತದೆ ಎಂದರೆ ಇನ್ನೂ ಕೆಲವರು ವ್ಯಕ್ತಿ ಬದಲಾಗುತ್ತಾನೆ, ವ್ಯಕ್ತಿತ್ವವೂ ಬದಲಾಗುತ್ತದೆ ಎನ್ನುತ್ತಾರೆ.

ಇದು ಮುಗಿಯದ ವಾದ ಸರಣಿ.

ಈ ಲೋಕದ ಅತಿ ದೊಡ್ಡ ಅಪಾಯಕಾರಿಗಳೆಂದರೆ, ಎಲ್ಲವನ್ನೂ ಬದಲಾಯಿಸುತ್ತೇವೆ ಎಂಬ ಜನರು ಮತ್ತು ಏನನ್ನೂ ಬದಲಾಯಿಸದ ಜನರು ಎಂಬ ವಾಕ್ಯವನ್ನು ಎಲ್ಲೋ ಓದಿದ ನೆನಪು.

ನಾವು ಮೊದಲಾಗಿ ನಮ್ಮೊಳಗೆ ಬದಲಾದದ್ದೇನು ಎಂದು ಹುಡುಕಬೇಕು. ನಿತ್ಯವೂ ಬೆಳಗೆದ್ದು ಇಂದು ಬದಲಾವಣೆಯಾಗಬೇಕಾದ್ದನ್ನು ತರ್ಕಿಸಿಕೊಳ್ಳಬೇಕು. ರಾತ್ರಿ ಮಲಗುವ ಮುನ್ನ ಎಷ್ಟು, ಎಲ್ಲೆಲ್ಲಿ ಬದಲಾದೆವೆಂದು ಅವಲೋಕಿಸಬೇಕು ಎಂಬುದು ಬದಲಾಗುವ ಕುರಿತು "ಬದಲಾವಾದಿ’ಗಳ ಸಲಹೆ.

ಏಕರೂಪಿ ಏಕತ್ರವಾಗಿರುವುದು ಸಲ್ಲದೆಂಬುದು ಬದಲಾವಾದಿಗಳ ಸೂಚನೆ. ಇದರಿಂದ ಮೈ ಮನಸ್ಸು ಜಡ್ಡುಕಟ್ಟುತ್ತದೆ. ಹೊಸದರತ್ತ ತುಡಿಯುವುದು ನಿಲ್ಲುತ್ತದೆ. ಬದಲಾವಣೆಗೆ ಒಡ್ಡಿಕೊಳ್ಳದಿದ್ದರೆ ಅಭಿವೃದ್ಧಿ ಸಾಧ್ಯವಿಲ್ಲ ಎಂದು ಬದಲಾವಾದಿ ಉವಾಚ.

ಇಷ್ಟಕ್ಕೂ ಎಲ್ಲಿಂದ ಆರಂಭ ಈ ಬದಲಾವಣೆ? ಹಾಗೇ ಕೇಳಿದರೆ ನಮ್ಮ ಬದುಕಿನಿಂದಲೇ ಎಂಬುದು ಉತ್ತರವಾದೀತು.

ಅಂದರೆ ಈ ಬದುಕನ್ನು ಯಾರು ಬದಲಾಯಿಸಬೇಕು?ಕರ್ಮವೇ ಕಾಲವೇ ,ಅಥವಾ ನಾವೂ ತೀರಾ ನಂಬಿದ ವಿಧಿಯೇ?ಯಾವುದೂ ಅಲ್ಲ.ನನ್ನ ಬದುಕನ್ನು ನಾನು ಮಾತ್ರಾ ಬದಲಾಯಿಸಬಲ್ಲೆ,ಇನ್ಯಾರು ಅದನ್ನಂತೂ ಮಾಡಲಾರರು.

ಇದ್ದಲ್ಲೇ ಇರುವುದು ಎಂಬುದೇ ಇಲ್ಲ.

ನಾವು ಬೇಡ ಎಂದರೂ ಬದಲಾವಣೆ ನಮ್ಮನ್ನು ಬದಲಾಯಿಸುತ್ತದೆ.

ಶಿಶುವಾಗಿ ಅಂಗಾತ ಬಿದ್ದಿದ್ದೆವು. ಹೊರಳಲಿಲ್ಲವೇ, ತೆವಳಲಿಲ್ಲವೇ, ಅಂಬೆಗಾಲಿಟ್ಟು ನಡೆಯಲಿಲ್ಲವೇ, ಓಡಾಡಿ ಬೆಳೆಯಲಿಲ್ಲವೇ, ಹುಟ್ಟುವಾಗ ಮೂರು ಕಿಲೋ ಇದ್ದೆವು. ಈಗ ಅರುವತ್ತು ಕಿಲೋ ಆಗಿದ್ದು ನಾವೇನು ಬಯಸಿ ಆದದ್ದೇ?

ಬದಲಾವಣೆ ಆಗುತ್ತದೆ. ಮೀಸೆ ಬಂದದ್ದು ,"ದೊಡ್ಡೋಳಾದದ್ದು’.....,

ಕನಸುಗಳು, ಚಿಂತನೆ, ಯೋಜನೆ, ಆಲೋಚನೆ, ಮಾತಿನ ವರತೆ.... ಎಲ್ಲವೂ ನಾವು ಕೇಳಿ ಬದಲಾದದ್ದಲ್ಲ.

ನಾವು ಬೇಡ ಎಂದರೂ ಬದಲಾಗದೇ ಉಳಿದಿಲ್ಲ.

ಬುದ್ಧ ಹೇಳಿದ್ದ,ಎಲ್ಲವೂ ಬದಲಾಗುತ್ತದೆ,ಯಾವುದೂ ಬದಲಾಗದೇ ಉಳಿಯುವುದಿಲ್ಲ,ಮತ್ತು ಅದರ ಬಗ್ಗೆ ಸಂಶಯವೇ ಬೇಡ ಎಂದು.

ನಾಲ್ಕನೇ ತರಗತಿಯಲ್ಲಿ ಇದ್ದಾಗ ಗೆಳೆಯಬೇಕೆಂದೆನಿಸಿತ್ತು. ಹದಿನಾಲ್ಕನೇ ತರಗತಿ ಬಂದಾಗಲೂ ಗೆಳೆಯ ಬೇಕೆಂದು ಅನಿಸಿತು. ಆದರೆ ಗೆಳೆಯರ ಕಲ್ಪನೆ, ಚಿತ್ರಣ ಹತ್ತೇ ವರ್ಷಗಳಲ್ಲಿ ಪೂರ್ತಿ ಬದಲಾಗಿರುತ್ತದಲ್ಲಾ. ಇದು ಏನು ಎಂದರೆ ಹುಡುಗಿಗೆ ಅಚ್ಚರಿ!

ಪ್ರೀತಿ ಎಂಬುದೂ ಬದಲಾಗುತ್ತದೆ ಎಂದಿತ್ಯಾದಿ ಹೇಳಿದರೆ ಅದೆಲ್ಲಾ ಸವಕಳಿ ಮಾತಾಯಿತು,ಆದರೆ ಪ್ರೀತಿ ಕೂಡಾ ಕನಸಿನ ಲೋಕದ ಒಂದು ತುಂಡನ್ನು ನಿಜದ ಅರಿವಿಗೆ ಬದಲಾಯಿಸುವ ಒಂದು ಪ್ರಾಮಾಣಿಕ ಪ್ರಯತ್ನ ಎಂದರೆ ಅದು ಹೊಸ ಮಾತೇ. ಕಾಲವೆಂಬುದು ಅದ್ಭುತವಾದದ್ದು.

ಕೋಟಿ ಕೋಟಿ ವರ್ಷಗಳಿಂದ ತಾನೊಂದಿನಿತು ಬದಲಾಗದೆ ಅದು ಎಲ್ಲರ, ಎಲ್ಲ ಬಗೆಯವರ, ಎಲ್ಲವೂ ಬದಲಾಗಲು ಕಾರಣವಾಗುತ್ತದೆ.

ಭೂರಂಗಕೆ ಅಭಿಸಾರಕೆ ಕರೆಯುತ

ತಿಂಗಳು ತಿಂಗಳು ನವೆಯುತಿದೆ

ತುಂಬುತ, ತುಳುಕುತ, ತೀರುತ

ತನ್ನೊಳುತಾನೇ ಸವಿಯನು ಸವಿಯುತಿದೆ

ಎಂದು ಬೇಂದ್ರೆ "ಅನಂತ ಪ್ರಣಯ’ ದಲ್ಲಿ ಪ್ರಕೃತಿಯ ಬದಲಾಗದ ಅನನ್ಯ ಬದುಕನ್ನು ವರ್ಣಿಸಿದ್ದಾರೆ.

ಪ್ರಕೃತಿ ತನ್ನ ಹಾಸನ್ನು ಹಾಸುತ್ತದೆ. ಮಾಯೆ ತನ್ನ ಬಲೆಯನ್ನು ಬೀಸುತ್ತದೆ.

ಬಯಲಿನಲ್ಲಿ ಗಾಳಿಯಾಡಿದಂತೆ ನಮ್ಮನ್ನು ಆಡಿಸಿ ಕ್ರೀಡಿಸುತ್ತದೆ.

ಬದಲಾವಣೆ ಅಂತ ನಾವೇಕೆ ಬಡ ಬಡಿಸಬೇಕು?

20070518

ಇಲ್ಲಿರೋದು ಸುಮ್ಮನೇ


The deepest feelings always show itself in SILENCE...

ದೇವರು ಮೌನದ ಗೆಳೆಯ
ನೋಡಿ,
ಮರ ಗಿಡ ಹುಲ್ಲು ಹೂವು ಹುಟ್ಟುವುದು
ನಕ್ಷತ್ರಗಳು ಮಿನುಗುವುದು,
ಸೂರ್‍ಯನ ಆಗಮನ
ಚಂದಿರನ ನಡಿಗೆ
ಇದೋ ಈ ಹೃದಯದ ಮಾತು..
ಎಲ್ಲವೂ ಮೌನದಲ್ಲೇ
॒॒॒॒॒॒॒॒.॒.ಯಾರೋ ಕವಿ ಹೇಳಿದ್ದು.
ಮೌನ..
ಅದು ನಮ್ಮದೇ ಅಂತೆ ನಿಜವೇ?
ಸುಮ್ಮನಿರುವುದರ ಹಿಂದಿನ ಅಥವಾ ಮುಂದಿನ ಅಥವಾ ಎರಡೂ ಆಗಿ ಮೌನ..
ಅದು ಶೂನ್ಯದ ತೆಕ್ಕೆ,
ಅದು ಒಂದು ಅಚ್ಚರಿ
ಪ್ರತಿಯೊಂದರಲ್ಲೂ ಅಚ್ಚರಿಗಳಿವೆ,ಕತ್ತಲಲ್ಲೂ ಹಾಗೆ ಮೌನದಲ್ಲೂ,
ಅದನ್ನು ಚಾರ್ಲಿ ಚಾಪ್ಲಿನ್ ಹೇಳಿದ್ದು ಹೀಗೆ,
ಶಬ್ದ ಮೌನವೆಂಬ ದೊಡ್ಡ ಚೆಲುವನ್ನು ಅಡ್ಡ ಹಾಕಿತು ಥತ್..
ಮೌನದ ಕ್ರಿಯೆಯೇ ಸುಮ್ಮನಿರೋದು
ಅದನ್ನು ಅನೇಕರು ,ವಿಶೇಷವಾಗಿ ಅರಿಭಯಂಕರ ದುಡಿಯೋರು ದಡ್ಡರ ಲಕ್ಷಣ ಎಂದು ನಿರ್ಧರಿಸುತ್ತಾರೆ.
ಅವರಿಗೇನು ಗೊತ್ತು,ಕೊನೆಯಲ್ಲಿ ನೆನಪಲ್ಲಿ ಉಳಿಯೋದು ಕೂಡಾ ವೈರಿಯ ಮಾತಲ್ಲ,ಗೆಳೆಯನ ಮೌನ ಮಾತ್ರಾ ಎಂದು.
ಎಲ್ಲರೂ ಎಣಿಸಿದಷ್ಟು ಸುಲಭವಲ್ಲ ಈ ಮೌನ ಅಥವಾ ಆ ಸುಮ್ಮನಿರುವುದು..
ಏನೂ ಆಗಿಲ್ಲ ಎಂಬಂತೆ ಸುಮ್ಮನಿರಲು ಸಾಧ್ಯವೋ ?
ಅದೊಂದು ಪ್ರಯತ್ನವನ್ನು ನಾವು ಎಂದಾದರೂ ಮಾಡಿದ್ದೇವಾ ? ಮಾಡಬಲ್ಲೆವಾ ?
ಸುಮ್ಮನೇ ಇರೋದು ಒಂದು ತಪಸ್ಸು ಕೂಡಾ ಸಿದ್ಧಿ ಮಾಡಿ ಕೊಡಲಾಗದ ಸಾಧನೆ. ಚಡಪಡಿಕೆ ಇಲ್ಲ, ಹಳಹಳಿಕೆ ಇಲ್ಲ, ಗೊಂದಲಗಳಿಲ್ಲ, ಹಿಂದಿನ ಕನವರಿಕೆಗಳಿಲ್ಲ, ಮುಂದಿನ ಯೋಚನೆಗಳಿಲ್ಲ, ಅದನ್ನು ನೆನೆದು ಭಯ ಪಡಲಾರೆವು, ಇದನ್ನು ಊಹಿಸಿ ಸಂಭ್ರಮಿಸಲಾರೆವು.
ನಿನ್ನೆ ನಿನ್ನೆಗೇ, ನಾಳೆ ನಾಳೆಗೇ ಎಂಬಂತಿರುವುದು. ಇಂದು ನಮ್ಮದೇ ಎಂಬ ಸ್ಥಿತ ಪ್ರಜ್ಞೆಯಲ್ಲಿರುವುದು.
ಇಂಥ ಸ್ಥಿತಿಗೆ ಯಾರಾದರೂ ತಲುಪಲು ಸಾಧ್ಯವೇ ?
ಕಷ್ಟವೇನಲ್ಲ,ಯಾರೂ ತಲುಪಬಹುದು, ಕೊಂಚ ಸಾಧನೆ, ಇನ್ನಷ್ಟು ದೊಡ್ಡ ಹಠ ಬೇಕಾದೀತು.ಒಂದೊಮ್ಮೆ ಹಾಗೂ ಹೀಗೂ ತಲುಪಿತು ಎಂದಾಯಿತು,ಆದರೆ ಈ ಸ್ಥಿತಿಯನ್ನು ಕಾಪಾಡಿಕೊಳ್ಳುವುದೇ ತೀರಾ ತ್ರಾಸ.
ಎಲ್ಲವೂ ನಿರ್ಧಾರದಂತೆ ಆಗುತ್ತದೆ.
"ಅಪ್ಪದು ತಪ್ಪ, ಆಗದ್ದಾಗ’ ಎಂದು ಹವಿಗನ್ನಡದಲ್ಲಿರುವ ಘೋಷ ವಾಕ್ಯವನ್ನು ಇಲ್ಲಿ ನೆನಪಿಸಬಹುದು.
ಅದೇ ನೋಡಿ ; ಸುಮ್ಮನಿರುವುದು or ಮೌನವೆ ಎನ್ನಿ, ಅದೊಂದು ಲಹರಿ.
ಝೆನ್ ಕಥೆಗಳಲ್ಲಿ ಗುರುವಿನ ಬಳಿ ಶಿಷ್ಯ ಎಂಥೆಂಥಾ ತರ್ಕ, ವಾದ, ಸಮಸ್ಯೆಗಳ ಸರಪಣಿ ತಂದಿಟ್ಟಾಗ ಹಲವಾರು ಬಾರಿ ಗುರು ಸುಮ್ಮನಿರುವ ಮೂಲಕವೇ ಆ ಜಟಿಲತೆಗೆ ಉತ್ತರ ನೀಡಿದ್ದು, ಉತ್ತರವಾದದ್ದು ಉಲ್ಲೇಖವಿದೆ.ಶಿಶುಪಾಲನ ನಿಂದನೆಗೆ ಕೃಷ್ಣ ತೊಂಭತ್ತೊಂಭತ್ತು ಬಾರಿ ಸುಮ್ಮನಿದ್ದ ಕತೆ ನಮಗೆ ಗೊತ್ತಿದೆ.
ನರಸಿಂಹರಾಯರು ಪ್ರಧಾನಿಯಾಗಿದ್ದಾಗ ದೇಶಕ್ಕೆ ದೇಶವೇ ಕ್ಷೆಭೆಗೊಂಡಾಗಲೆಲ್ಲಾ ಸುಮ್ಮನಿದ್ದು-ಸಾಲದ್ದಕ್ಕೆ ಮಧ್ಯಾಹ್ನದ ನಿದ್ದೆ ಮೆದ್ದು-ಉತ್ತರವಾಗುತ್ತಿದ್ದರು.
ದ್ರೌಪದಿಯ ಕೂಗಿಗೆ ಕೃಷ್ಣ ಕೂಡಾ ಆರಂಭದಲ್ಲಿ ಸುಮ್ಮನಿದ್ದೇ ಬಿಡುತ್ತಾನೆ. ಜೊತೆಗಾತಿಯರು ಕೇಳಿದರೆ, "ಪಾಪ, ಒಂದು ಕೈಲಿ ಸೀರೆ ಚುಂಗು ಹಿಡಿದುಕೊಂಡಿದ್ದಾಳೆ, complete ಇನ್ನೂ ಶರಣಾಗಿಲ್ಲ’ ಎಂಬ ಅಸಾಧಾರಣ ಉತ್ತರ ನೀಡುತ್ತಾನೆ.
ಇಂಥ ಸುಮ್ಮನಿರುವ ಕ್ರಿಯೆ ಅನಾಹುತಕಾರಿಯೋ, ಅಪ್ರತಿಮವೋ ಊಹಿಸಲಾಗದು. ದೇಶದ ಮೇಲೆ ವೈರಿಗಳು ಮುರುಕೊಂಡು ಬಿದ್ದರೆ ಸುಮ್ಮನಿರಲಾಗುತ್ತದಾ, ಅಥವಾ ಸುಮ್ಮನಿದ್ದರೆ ಉಳಿಯುತ್ತೇವಾ ಎಂಬಲ್ಲಿಂದ ಪ್ರಶ್ನೆಗಳನ್ನು ಸುಮ್ಮನೇ ಕೇಳಿಕೊಳ್ಳಬೇಕು....
ಇಷ್ಟಕ್ಕೂ ಈ ಭೂಮಿ ಕೂಡಾ ನಾಳೆಯಿಂದ ಸುಮ್ಮನಿದ್ದು ಬಿಟ್ಟರೆ ? ಹಕ್ಕಿಗಳು ಬೆಳಗ್ಗೆ ಏಳದೇ ಸುಮ್ಮನಿದ್ದರೆ ? ನೀರು ಹರಿಯುವುದಿಲ್ಲವೆಂದೂ, ಸಾಗರವು ಭೋರ್ಗರೆಯುವುದಿಲ್ಲವೆಂದೂ ಸುಮ್ಮನಿದ್ದರೆ ? ಮುಗಿಲು ಬಾನ ಕಡೆಗೆ ಓಡದೇ, ನೆಲದ ಎಡೆಗೆ ನೋಡದೆ ಸುಮ್ಮನಿದ್ದರೆ ?
ಹಿಮಾಲಯವೇ ಸುಮ್ಮನಿಲ್ಲ. ಚೋಮೋ ಲುಂಗ್ಮಾ ವರ್ಷಕ್ಕೆ ನಾಲ್ಕೈದು ಸೆಂಟಿ ಮೀಟರ್ ಬೆಳೆಯುತ್ತಿದೆ !
ಮೊಗ್ಗು ಹೂವಾಗುತ್ತದೆ, ಹೂವಿನ ಮೇಲೆ ಇಬ್ಬನಿ ಮುತ್ತಿಕ್ಕುತ್ತದೆ, ಪಾರಿಜಾತ ರಾತ್ರಿ ಇಡೀ ಅರಳಿ, ಕಮ್ಮನೆಯ ಹರಡಿ, ಹಗಲಿಗೆ ಉರುಳಿ ಬೀಳುತ್ತದೆ.
ಸುಮ್ಮನಿರೋದೆಂದರೆ ಯಾವುದು ? ಎಂದು ನೀವು ಕೇಳಬಹುದು.ಜೀವ ಜಗತ್ತಿನ ಈ ನಿಯಮ ನಡೆಯನ್ನೆಲ್ಲಾ ಒಟ್ಟಾರೆಯಾಗಿ ಬ್ರಹ್ಮಾಂಡ ಮೌನ ಎಂದು ಹೇಳುತ್ತಾರೆ.
ಇಷ್ಟೊಂದು ನೀತಿ ಕಟ್ಟುಪಾಡಿನ ಹೊರತಾಗಿ ಈ ಜಗತ್ತು ಬದಲಾಗುವುದಿಲ್ಲ. ಅಂದರೆ ಜಗತ್ತು ಸದಾ ಮೌನಿ. ಅದರ ಪಾಡಿಗೆ ಅದು.
"ಅಣುವನೊಡೆ, ಮಹತ್ತನ್ನು ಪಡೆ
ಬ್ರಹ್ಮಾಂಡಕ್ಕೆ ತೊಟ್ಟುಬಿಡು ಬ್ರಹ್ಮಾಸ್ತ್ರ
ವಿಜಯೀ ಭವ’- ಎಂದಿದ್ದರು ಅಡಿಗರು.
ಏನಾದರೂ ಮಾಡುತಿರು ತಮ್ಮ
ನೀ ಸುಮ್ಮನಿರಬ್ಯಾಡ-ಎಂದು ಹೇಳಿದ್ದರು.
ಹುಡುಗಿಯ ಮೊದಲ ಕುಡಿ ನೋಟವನ್ನು ಹಿಡಿಯಬೇಕಂತೆ.ಅವಳು ಒಮ್ಮೆ ಮಾತ್ರಾ ಕುಡಿನೋಟ ಹಾರಿಸುತ್ತಾಳಂತೆ.ಮೊದಲ ನೋಟವನ್ನು ದಡ್ಡ ಹುಡುಗ ಹಿಡಿಯಲಿಲ್ಲ ಎಂದರೆ ಅಲ್ಲಿಗೆ ಆ ಕುಡಿ ಒಡೆಯದು,ಅದು ಕಡಿಯಿತು ಎಂದೇ ಅರ್ಥ ಎಂದು ಸಂಶೋಧನಾ ವರದಿ ಹೇಳಿದೆ. ಸುಮ್ಮನಿದ್ದರೆ ಹುಡುಗ ಪ್ರೇಮ ಪರ್ವದಲ್ಲಿ ಸೋತಂತೆಯೇ ಎಂಬ ಈ ಅಧ್ಯಯನದ ವರದಿ ಸುಮ್ಮನಿರುವುದಕ್ಕೆ ಆಕ್ಷೇಪ.
in end just thik of this...
ಇದೊಂದು ತುಂಟ ಪ್ರಶ್ನೆ
ಹೀಗೆ ನಿಮ್ಮೊಳಗೆ ಇಟ್ಟುಕೊಳ್ಳಿ,
ನಮ್ಮ ಅಪ್ಪ ಅಮ್ಮ ಸುಮ್ಮನೇ ಇರುತ್ತಿದ್ದರೆ ನಾವು ಇಲ್ಲಿ ಇರುತ್ತಿದ್ದೆವಾ?
ಭಯಂಕರ ಪ್ರಶ್ನೆಗೇನು ಮಾಡೋಣ?
ಸುಮ್ಮನೇ ಇರಬೇಕು.

20070517

ಕನ್ನಡಿಯೊಳಗಿನ ಗಂಟು


ಹೇಗೆ ಹೇಳಲಿ ಅವನಿಗೆ,?
ನನ್ನ ಹೃದಯ ಬಿರಿಯುತ್ತಿದೆ ಎಂದು
ಅವನೋಕನ್ನಡಿಯೊಳಗಿನ ಬಿಂಬ
ತಲುಪಲಾರದು ಅವನಿಗೆ ನನ್ನ ಈ ನೋವ "ಚೆಂದ"
-ಹ್ಲಾ ಸ್ತವಾಹನ

ಮತ್ತೆ ಕನ್ನಡಿ ನೆನಪಾಗುತ್ತಿದೆ.
ಏನಿದು ?
ಏಕೆ ?
ಕನ್ನಡಿಯೇ ಏಕೆ ನೆನಪಾಗಬೇಕು?
ಗೊತ್ತಿಲ್ಲ.
ಓಶೋ ಹೇಳುತ್ತಾರೆ. ಎರಡು ಕನ್ನಡಿಯನ್ನು ಎದುರಾ ಬದುರಾ ಇಟ್ಟರೆ ಏನಿದೆ?
ನಿಜ
ಏನಿದೆ
ಕನ್ನಡಿಯೊಂದು ಇನ್ನೊಂದು ಕನ್ನಡಿಗೆ ಏನು ಕಾಣಿಸೀತು?
ನಥಿಂಗ್!

.ಮೊನ್ನೆ ನಾನು ಈ ತನಕ ನೋಡೇ ಇರದ ಗೆಳತಿ ಒಂದು ಸಂದೇಶ ಕಳುಹಿಸಿದ್ದಳು.
ಅದು ಕವನವೊಂದರ ಸಾಲು
"ಎಷ್ಟೊಂದು ಮುಖಗಳ ಚೆಲುವನ್ನು ಹಿಡಿದು ತೋರಿಯೂ ಉಳಿಯಿತೇ ಕನ್ನಡಿಯ ಪಾಲಿಗೆ ಒಂದಾದರೂ.." ಎಂದು ಆ ಸಾಲು.
ನನಗೆ ಯಾಕೊ ತುಂಬಾ ಇಷ್ಟವಾಯಿತು.
ಈ ಕನ್ನಡಿಯ ಹುಟ್ಟು ಸಾವು ಎಲ್ಲಾ ರಾಶಿ ಹಾಕಿ ಸುಮ್ಮನೇ ಕಾಲ ಸಮಯ ಹಾಗು ಉತ್ಸಾಹ ಹರಣ ಮಾಡಲಾರೆ.
ಇಷ್ಟಕ್ಕೂ ಕನ್ನಡಿಯೇನು ಇಂದು ನಿನ್ನೆಯದಾ?
ನಮ್ಮ ಜೊತೆ ಅನಾದಿ ಕಾಲದಿಂದ ಬಂದ ಸಖ ಅಥವಾ ಸಖಿ ಕನ್ನಡಿ.
ಆ ರಾಮುಗೆ ಚಂದಿರನ ಜೀವಂತ ತಂದು ತೋರಿದ ಕನ್ನಡಿ,ಅರಮನೆಯ ಅಂತಃಪುರದಿಂದ ತೊಡಗಿ ಬಡವನ ಮನೆಯ ಹಿಂದಿನ ಗೋಡೆಯ ವರೆಗೆ ನೇತಾಡಿದೆ.
ಕನ್ನಡಿಯ ಮೂಲಕವೇ ಈ ಚರಿತ್ರೆ ಬೆಳೆದು ಬಂದಿದೆ.ಕನ್ನಡಿಯ ಮೂಲಕವೇ ನಮ್ಮ ವ್ಯಕ್ತಿತ್ವ ಬೆಳೆದಿದೆ.ನಮ್ಮನ್ನು ತಿದ್ದಿ ತೀಡಿ ಬೆಳೆಸಿದ್ದು ಕನ್ನಡಿಯೇ ಅಲ್ಲವೇ?
ಅದರ ಎದುರು ಇನ್ಯಾವ ಸತ್ಯದ ಪುರಾವೆ ಬೇಕು?ಅದರ ಸತ್ಯದ ಎದುರು ಇನ್ಯಾವ ಸತ್ಯ ಸಾಬೀತಾಗಬೇಕು?
ಕನ್ನಡಿಯಷ್ಟು ಸತ್ಯ ಇನ್ನೊಂದು ಇರಲಾರದೆನೋ?
ದರ್ಪಣ ಸುಂದರಿ ಎಂದರು.ಅವಳ ಬಗ್ಗೆ ಶಿಲ್ಪಿಗಳು ಕಲ್ಲು ಕೆತ್ತಿದರು.ಆ ಕಲ್ಲಲ್ಲೂ ಅದೆಷ್ಟು ಸುಂದರವಾಗಿ ಕನ್ನಡಿಯ ಮಾಡಿದರೆಂದರೆ ಕಲ್ಲು ಯಾವುದು,ಕನ್ನಡಿ ಯಾವುದೆಂದು ಗೊತ್ತಾಗದು..!
ನೋಡುತ್ತಾ ನೋಡುತ್ತಾ ಕನ್ನಡಿ,ಕಲ್ಲು,ಆ ಹುಡುಗಿ ಎಲ್ಲಾ ಒಂದಾಗುತ್ತದೆ.
ಕವಿಗಳೂ ಸುಮ್ಮನಿರರು.
ಅವರೂ ಕಾವ್ಯಗಳಲ್ಲಿ ಕನ್ನಡಿಯ ತಂದು ಇಟ್ಟರು.ಮತ್ತೆ ಆ ಚೆಲುವೆ ,ಅವಳ ಜೊತೆ ಆ ಕನ್ನಡಿ..ಯಾವುದು ಬೇಕಾಗಿತ್ತು ಇವರಿಗೆ? ಚೆಲುವೆಯೋ ಕನ್ನಡಿಯೋ ಅಥವಾ ಕನ್ನಡಿಯೊಳಗಿನ ಆ ಚೆಲುವೆಯೋ??ಇನ್ನೂ ಗೊತ್ತಾಗುತ್ತಿಲ್ಲ.
ಶಿಲೆಯೂ ಕನ್ನಡಿಯಾಗುತ್ತದೆ,ಚೆಲುವೆಯೂ ಆಗುತ್ತದೆ.ಹಾಡೊಂದೂ ಕನ್ನಡಿಯಾಗುತ್ತದೆ,ಆ ಚೆಲುವೆಗೂ ಮೊದಲು..!
ಹರೆಯವನ್ನು ಹಿಡಿದು ತೋರುವುದು ಮೊದಲು ಕನ್ನಡಿಯೇ.
ಆ ಪೋರಿ ಕನ್ನಡಿಯ ಎದುರೇ ತನ್ನ ಜೀವನದ ಮೊದಲ ಚೆಲುವನ್ನು ಅನುಭವಿಸುತ್ತಾಳೆ.ಕನ್ನಡಿ ಮಾತ್ರಾ ನನ್ನ ಕಾಣದೇ ಇರುವ ಗೆಳತಿ ಅಂದಂತೆ ಸಾವಿರ ಬಾರಿ ಅವಳ ಚೆಲುವನ್ನು ಹಿಡಿದು ತೋರಿಸುತ್ತದೆ ಆದರೆ ಅದರ ಪಾಲಿಗೇನೂ ಸಿಗುವುದೂ ಇಲ್ಲ,ಉಳಿಯುವುದೂ ಇಲ್ಲ.
ಕನ್ನಡಿಯ ಒಳಗೇನಿದೆ ಎಂದರೆ ನಾವೇ ಎಂಬ ಉತ್ತರ.ಅಲ್ಲಿ ಏನು ಹುಡುಕುವಿರಿ ಎಂದರೆ ನಮ್ಮನ್ನೇ ಎನ್ನಬಹುದು.
ಸೌಂದರ್ಯವೆಂಬುದು "ಅನುಭಾವ"ವಾಗುವುದು ಅದು ಕನ್ನಡಿಯೊಳಗಿದ್ದಾಗಲೇ ಎಂದು ಖಲೀಲ್ ಗಿಬ್ರಾನ್ ಹೇಳಿದ್ದ.
.....ಎಂಥಾ ಮಾತು!
ಸೌಂದರ್ಯವನ್ನು ಅನುಭವಿಸಬೇಕೆಂದು ಕನ್ನಡಿಯೆದುರು ಬಂದು ನಿಂತರೆ ,ಅದನ್ನು ಅನುಭವಿಸುತ್ತಾ ಅನುಭವಿಸುತ್ತಾ ಅನುಭಾವ ಗೊಳ್ಳುವುದು ಎಂಥಾ ವಿಶೇಷ..!
ನಾವು ವರ್ತಮಾನವನ್ನು ಹಿಂಗನ್ನಡಿಯಲ್ಲಿ ನೋಡುತ್ತೇವೆ,ಮತ್ತು ಭವಿಷ್ಯದತ್ತ ಹಿಂದೆ ಸಾಗುತ್ತೇವೆ ಎಂಬ ಹೇಳಿಕೆಯೊಂದನ್ನು ಇಲ್ಲಿ ಸುಮ್ಮನೇ ದಾಖಲಿಸಬಹುದು.
ಕನ್ನಡಿ ಎದುರು ನಿಂತು ನೀನು ನಿನ್ನ ಒನಪು, ವೈಯಾರ ಸರಿಪಡಿಸಿಕೊಳ್ಳಬಹುದು ಆದರೆ ನಿನ್ನನ್ನು ನೀನು ತಿದ್ದಿಕೊಳ್ಳಲಾಗುವುದಿಲ್ಲಾ ಎಂದು ಯಾರೋ ಎಚ್ಚರಿಸಿದ್ದು ಇಲ್ಲಿ ನೆನಪು ಮಾಡಿಕೊಳ್ಳೋಣ.
ಇಷ್ಟು ಸಾಕು,ಇನ್ನು ಉಳಿದದ್ದು ಆ ಕನ್ನಡಿಯೆದುರು ನಿಂತಾಗ ಕಂಡು ಕಾಣಿಸೀತು.
ಸೂಚನೆ : ನಿಜಕ್ಕೂ ಈ ಕನ್ನಡಿಯನ್ನು ಯಾವುದಕ್ಕೆಲ್ಲಾ ಹೋಲಿಸಬಹುದು,ಹೊಂದಿಸಬಹುದು.ಆದರೆ ನಾನು ನಿಜವಾದ ಕನ್ನಡಿಯ ಬಿಟ್ಟು ಹೊರಬರಲಾರೆ.ಸಮೀಕರಿಸುವ, ಹೋಲಿಸುವ ಕೆಲಸ ಈಗಾಗಲೇ ಬೇಕಾದಷ್ಟು ಗಣ್ಯರು ಮಾಡಿದ್ದಾರೆ.

20070512

ಪೊಸೆಸಿವ್‌ನೆಸ್... ಅಬ್ಬಾ ! ಇದುವೇ


ಅಬ್ಬಾ !

ಈ ಪೊಸೆಸಿವ್‌ನೆಸ್ ಅಂತ ಒಂದು ಇರುತ್ತದಾ ?

ಇದೆ ಎಂದು ನಾವು ನಿತ್ಯ ನಮ್ಮೊಳಗೇ ಮಡಗಿಕೊಂಡ ಮೇಲೆ ಇರುತ್ತದಾ ಎಂಬುದು ಒಂದು ಪ್ರಶ್ನೆಯಾ ?

ಎಲ್ಲಿಲ್ಲ ಪೊಸೆಸಿವ್‌ನೆಸ್ ?

ಇದನ್ನು ಕನ್ನಡದಲ್ಲಿ ಹೇಗೆ ಹೇಳೋದು ?

ನಮಗೆ ಗೊತ್ತಿಲ್ಲದಂತೆ ನಾವು ಮತ್ತೊಬ್ಬರನ್ನು ಅಥವಾ ಮತ್ತೊಂದನ್ನು ಅಥವಾ ಎರಡನ್ನೂ ಅವಲಂಬಿಸುತ್ತೇವೆ ಅಥವಾ ಅವಲಂಬಿತಗೊಳಿಸಿಕೊಳ್ತೇವೆ ಅಥವಾ ಅವಲಂಬಿಸಲ್ಪಡುತ್ತೇವೆ ಅಥವಾ ಮೂರು ಆಗಬಹುದು.

ಹೀಗೆಲ್ಲಾ ಹೇಳಿದರೆ ತೀರಾ ಜಾಡ್ಯ ಎನಿಸಬಹುದು.

ತಾಯಿ-ಮಗು ಸಂಬಂಧ ನೋಡಿದರೆ ಇದು ಸರಳವಾಗಿ ಅರ್ಥವಾಗುತ್ತದೆ. ಮಗುಗೆ ಅಮ್ಮ ಬೇಕು, ಅಮ್ಮಾನಿಗೂ. ಇಬ್ಬರಿಗೂ ಪರಸ್ಪರ ಪೊಸೆಸಿವ್‌ನೆಸ್.

ಒಬ್ಬರನ್ನೊಬ್ಬರು ಬಿಟ್ಟು ಇರಲಾರರು ಎಂದರೆ ಥೇಟ್ ಫಿಕ್ಷನ್ ಆಗಿ ಬಿಡಬಹುದು.

ಯಾವುದೋ ಒಂದು ಕ್ಷಣದಲ್ಲಿ ಅಮ್ಮನಿಗೂ ಸಾಕಪ್ಪಾ ಈ ಮಗುವಿನ ಹಂಬಲ, ಅವಲಂಬನ ಎನಿಸಬಹುದು. ಎನಿಸೋದಿಲ್ಲ ಎಂದರೆ ಅವಳು ತಾಯಿಯಲ್ಲ, ಇನ್ನಾವುದೋ

. ಒಂದು ಕ್ಷಣ ಹಾಗೆನ್ನಿಸಿದ ಕಾರಣಕ್ಕೇ ಮತ್ತೊಂದು ಕ್ಷಣಕ್ಕೆ ಅಮ್ಮನಿಗೆ ಮಗುವಿನತ್ತ ಅದ್ಭುತ ತುಡಿತ ಮೂಡುತ್ತದೆ. ಮಗು ಮತ್ತಷ್ಟು ಬೇಕೆನ್ನಿಸುತ್ತದೆ. ಮಗುವಿಗೂ ಹೀಗೇ ಅಭಿಪ್ರಾಯಗಳುಂಟಾಗುತ್ತದೆ. ಪೊಗದಸ್ತಾಗಿ ಹಾಲು ಕುಡಿದ ಮಗು ಅಮ್ಮನ ತೆಕ್ಕೆಯಿಂದ ಜಾರಿ ಹೊರಳಿಕೊಂಡು ಅಂಗಾತ ಚೆಲ್ಲಿ ಒಂದು ಭರ್ಜರಿ ನಿದ್ದೆ ತೆಗೆದುಕೊಳ್ಳುವುದು ಈ ನಿರಾಕರಣಕ್ಕೇ.

ತಾಯಿ ಮಗುವಿನ ಸಂಬಂಧ ಮಾತ್ರ ಅಲ್ಲ. ಎರಡು ಪ್ರೀತಿಸೋ ಜೀವನಗಳಲ್ಲೆಲ್ಲಾ ಇದು ಆಗುತ್ತದೆ.

ಗೆಳೆಯನ ಪ್ರೀತಿ ಸಾಕಪ್ಪಾ ಎಂದು ಗೆಳತಿ ದೂರವಾಗಬಹುದು. ತಾನು ದೂರ ಇದ್ದು ಬಿಡುತ್ತೇನೆಂದು ಗೆಳೆಯನಿಗೆ ಹೇಳಿ ನಿರುಮ್ಮಳಗೊಳ್ಳಬಹುದು.

ಮರುಕ್ಷಣವೇ ಆಕೆಗೆ ಗೊತ್ತಿಲ್ಲದಂತೆ ಜೀವದಲ್ಲೊಂದು ಜಾತ್ರೆ ಶುರುವಾಗುತ್ತದೆ. ಮನಸು ವಟಗುಟ್ಟುತ್ತದೆ. ಎಲ್ಲ ಇರಬಿಟ್ಟು ಓಡಿ ಹೋಗಿ ಅವನನ್ನು ತಬ್ಬಿಕೊಳ್ಳೋಣ ಅನಿಸುತ್ತದೆ.

ಪೊಸೆಸಿವ್‌ನೆಸ್ ಮಾಡುವ ಆಟೋಪ ಇದು. ಅದು ಗೊತ್ತು ಪಡಿಸುವ ಸಂಚಲನ ಇದು.

ಅದು ಅಪಾರ ಶಕ್ತಿಯ ಸೃಷ್ಟಿ. ಅದು ತುಡಿತ, ಸ್ಪಂದನ, ಜೀವಕ್ರಿಯೆಯ ನಿತ್ಯ ವೃಷ್ಟಿ.

ಇನ್ನೊಬ್ಬನನ್ನು ಬಳಸುವುದು ಹೀಗೇ ನಡೆದಿದೆ. ಬಹುಶಃ ನಡೆಯುತ್ತಾ ಬಂದಿದೆ.

ಅಣ್ಣ ಎಂದರೆ ಎಲ್ಲವೂ, ಅಣ್ಣ ಎಂದರೆ ಮಾತು, ಅವನೆಂದರೆ ಸರ್ವಸ್ವವೂ ಎಂದು ನಂಬಿದ್ದ ಭೀಮ ಕೂಡಾ ದ್ರೌಪದಿಯ ವಿಚಾರ ಬಂದಾಗ ಅಣ್ಣನಿಗೂ ಗುರ್ರೆಂದಿದ್ದ. ಭೀಮನಿಗೆ ದ್ರೌಪದಿ ಮೇಲೆ ಎಲ್ಲರಿಗಿಂತ ಹೆಚ್ಚು ಪೊಸೆಸಿವ್‌ನೆಸ್ ಇತ್ತು ಎಂದು ಮಹಾಭಾರತ ಓದಿದವರಿಗೆ ಗೊತ್ತಾಗಿ ಬಿಡುತ್ತದೆ.

ನಮ್ಮ ನೈಮಿತ್ತಿಕ ಸಂಗತಿಗಳತ್ತ ನೋಡಿ. ನಾವು ನಮ್ಮ ರಾಜಕಾರಣಿಗಳನ್ನು, ಅಧಿಕಾರಿಗಳನ್ನು ಬಾಯ್ತುಂಬ ಬೈಯುತ್ತೇವೆ. ಎಲ್ಲಾ ಪಾರ್ಟಿಗಳ ಹಣೆ ಬರಹವೂ ಒಂದೇ ಎನ್ನುತ್ತೇವೆ. ರಾಜಕಾರಣಿಗಳ ಪೊಸೆಸಿವ್‌ನೆಸ್ ನಮ್ಮ ಮೇಲೆ ಹೇಗಿದೆ ಎಂದರೆ ಚುನಾವಣೆ ಬಂದಾಗ ನಾವು ಅವರೇ ಎಲ್ಲಾ, ಅವರಿಂದಲೇ ಎಲ್ಲಾ ಎಂದುಕೊಳ್ಳುತ್ತೇವೆ.ಈ ಸಂಬಂಧದ ಆಧಾರವೇ ಪರಸ್ಪರ ಅಗತ್ಯ ಮತ್ತು ಉಪಯುಕ್ತತೆ. ರಾಜಕಾರಣಿಗೆ ಅಧಿಕಾರ ಬೇಕು, ಅದಕ್ಕಾಗಿ ಓಟು ಬೇಕು, ಓಟಿಗಾಗಿ ಜನ ಬೇಕು. ಅಷ್ಟಕ್ಕಾಗಿ ಆತ ಜನರನ್ನು ಬಳಸುತ್ತಾನೆ. ಇದು ಮಾನಸಿಕವಾಗುವ ಬಳಕೆ, ಅಗತ್ಯವೂ ಆಗಬಹುದು.

ನಮ್ಮ ಬದುಕಿನ ಬೇರೆ ಬೇರೆ ಸ್ತರಗಳಲ್ಲಿ ಇದು ನಡೆಯುತ್ತಾ ಇರುತ್ತದೆ. ಒಂದು, ಎರಡು ಬಾರಿ ಅಲ್ಲ, ನಿತ್ಯವೂ, ನಿರಂತರವಾಗಿ.ಅದಿಲ್ಲದ ಕ್ಷೇತ್ರವಿಲ್ಲ. ಸಮಾಜ, ರಾಜಕಾರಣ, ಧರ್ಮ, ಜಾತಿ, ತುಂಬಾ ವೈಯಕ್ತಿಕವಾಗಿ ಪ್ರೀತಿ..... ಹೀಗೆ ಜಾತಿ, ಧರ್ಮದ ಪೊಸೆಸಿವ್‌ನೆಸ್ ಎಷ್ಟು ಬಿಗುವಾಗಿರುತ್ತದೆ ಎಂದರೆ ಬಿಟ್ಟೆನೆಂದರೂ ಬಿಡದು ಎಂಬಂತೆ.

ಇನ್ನು ಪ್ರೀತಿಯ ವಿಚಾರದಲ್ಲಿ ಅದರ ವಿವರಣೆಯೇ ಅನಗತ್ಯ.... ಏಂತಕೆ ಗೊತ್ತಾ ? ಈ ಪೊಸೆಸಿವ್ ಶಬ್ದದ ಅರ್ಥದೊಳಗೇ ಪ್ರೀತಿ ಅಡಗಿ ಕುಳಿತಿದೆ. ಡಿಕ್ಷನರಿ ಬಿಡಿಸಿ ನೋಡಿ.

ಪೊಸೆಸಿವನೆಸ್ ಎಂಬುದು ನಿಜವಾಗಿಯೂ ನಿಮ್ಮದೇ ಅನುಭವ ಆಗಬೇಕಾದರೆ ನೀವೊಂದು ಪ್ರೀತಿಯ ಸುಳಿಗೆ ಸಿಲುಕಬೇಕು.ಆಗ ಅದರ ಎಲ್ಲಾ ಒಳ ಹೊರಗು ನಿಮಗೆ ಅನುಭವ ವೇದ್ಯವಾಗುತ್ತದೆ.ನೀವು ಪ್ರೀತಿಸೋ ಜೀವ -ಇದನ್ನು ನಾನು ಜೀವ ಅಂತ ಉದ್ದೇಶ ಪಟ್ಟೇ ಹೇಳುತ್ತಿರುವೆ--ನಿಮ್ಮ ಪೊಸೆಶನ್ ನಲ್ಲಿ ಇದ್ದಾಗ ಅದರ ತೀವ್ರತೆ ಗೊತ್ತಾಗದು.ಯಾವಾಗ ಅನುಮಾನ ಆ ಜೀವದ ಬಗ್ಗೆ ಶುರುವಾಯಿತೋ ,ಯಾವಾಗ ನಿಮ್ಮ ಮತ್ತು ಜೀವದ ಮುಖಾಮುಖಿ ದೂರವಾಗತೊಡಗಿತೋ,ಆ ಪೊಸೆಸಿವ್‌ನೆಸ್‌ನ ನೈಜ ರುಚಿ ನಿಮಗೆ ಗೊತ್ತಾಗುತ್ತದೆ, ನಿಮಗೇ ಅಲ್ಲ ನಿಮ್ಮ ಆ ಪ್ರೀತಿಯ ಜೀವಕ್ಕೂ ಅನುಭವವಾಗತೊಡಗುತ್ತದೆ.ಕೊನೆಗೊಮ್ಮೆ ಇಬ್ಬರಿಗೂ ಈ ಪೊಸೆಸಿವ್‌ನೆಸ್ ಸಾಕೋ ಬೇಕೋ ಮಾಡುತ್ತದೆ.

ಯಾವುದಕ್ಕೂ ನೀವು ಮೊದಲು ಪ್ರೀತಿಗೆ ಬೀಳಬೇಕು ಅಷ್ಟೇ.

ಇಲ್ಲಿ ಓಶೋ ರಜನೀಶ ಹೇಳಿದ್ದನ್ನು ಕೋಟ್ ಮಾಡಲೇ ಬೇಕು.ಮನಸು ಎರಡನ್ನು ಹೊಂದಿದೆ.ನೆಗೆಟಿವ್ ಮತ್ತು ಪೊಸಿಟಿವ್.ಪ್ರೀತಿ ಪೊಸಿಟಿವ್ ಮತ್ತು ಅಸೂಯೆ ನೆಗೆಟಿವ್.ಶೇರ್ ಮಾಡೋದು ಪೊಸಿಟಿವ್ ಮತ್ತು ಪೊಸೆಸಿವ್ನೆಸ್ ನೆಗೆಟಿವ್.

ಪಕ್ಕಾ ಹುಡುಗನ ವಿಚಾರಕ್ಕೆ ಬಂದರೆ,ಈ ಪ್ರೀತಿಯ ನೆಲದಲ್ಲಿ ಅವನಿಗೆ ಹುಡುಕಾಟವೆಂಬುದು ಪೊಸಿಟಿವ್ ಮತ್ತು ಸಂಶಯವೆಂಬುದು ಸದಾ ನೆಗೆಟಿವ್.

ಖಲೀಲ್ ಗಿಬ್ರಾನ್ ಹೇಳಿದ್ದ, ನಿಮ್ಮ ಪ್ರೀತಿಯ ಅಪ್ಪುಗೆಯ ನಡುವೆಯೂ ನಡುವೆ ಸ್ವಲ್ಪ ಜಾಗ ಬಿಡಿ.ಪ್ರೇಮದ ಆರಂಭದಲ್ಲಿ ಇದು ಅರ್ಥವಾಗಲಿಕ್ಕಿಲ್ಲ,ಆದರೆ ಬೆಳೆಯುತ್ತಾ ಹೋದಂತೆ ,ಪೊಸೆಸಿವ್‌ನೆಸ್‌ನ ಅರ್ಥವಾಗುತ್ತಿದ್ದಂತೆ ಹೌದಲ್ಲ ,ಸ್ವಲ್ಪ ಗ್ಯಾಪ್ ಇರಬೇಕಿತ್ತು ಎಂದನಿಸಬಹುದು,ಆದರೆ ಆ ಹೊತ್ತಿಗೆ ಎಲ್ಲಾ ಮುಗಿದಿರುತ್ತದೆ.

ನಮ್ಮ ಸಿನೆಮಾಗಳಲ್ಲಿ ನೋಡಿ,ಪ್ರೀತಿಗಿಂತಲೂ ಹೆಚ್ಚು ಹಾಡು,ಕತೆ ಇರುವುದು ಪೊಸೆಸಿವ್‌ನೆಸ್ ಕುರಿತೇ.ಅವರಿಗೂ ಈ ಸೆಂಟಿಮೆಂಟಲ್ ಚೆನ್ನಾಗಿ ಮಾರಾಟವಾಗುತ್ತದೆ ಎಂದು ಗೊತ್ತಿದೆ.

ಏಕೆಂದರೆ ಇದು ಪ್ರೀತಿಯ ಕಾಲವೇ ಅಲ್ಲ.

20070509

ಬುದ್ಧನೇನಲ್ಲ


ಬಹುತೇಕ ನೆಲ ಮುಟ್ಟುವಂತೆ ಬಗ್ಗಿದ್ದರು ಲಿಂಗಪ್ಪಯ್ಯ.

ಅವರಿಗೆ ಕಣ್ಣು ಮಂಜಾಗುತ್ತಿರುವುದು ಅವರ ಕಣ್ಣು ಡಾಕುಟರಿಗಿಂತಲೂ ಖಚಿತವಾಗಿ ಅವರಿಗೆ ಗೊತ್ತಿತ್ತು.

ಲಿಂಗಪ್ಪಯ್ಯ ಸ್ವಭಾವತಃ ಯಾವುದನ್ನೂ ಅವರು ಇವರು ಹೇಳಿದರೆಂದು ಒಪ್ಪುವ ಪೈಕಿಯಲ್ಲ.ಒಂದು ವೇಳೆ ಡಾಕುಟರೇ ನಿಮ್ಮ ಕಣ್ಣು ಸರಿ ಇಲ್ಲ ಎಂದಿದ್ದರೆ ಸರಿ ಉಂಟು ಅಂತ ವಾದ ಮಾಡಿ ಅವನ ಬಾಯಿ ಮುಚ್ಚಿಸುತ್ತಿದ್ದರು.ಈಗ ಡಾಕುಟರು ಹೇಳುವ ಅಗತ್ಯ ಇರುವುದಿಲ್ಲ,ಅವರಿಗೇ ಗೊತ್ತಾಗಿದೆ.

ಅವರು ಮೈಸೂರಿನಲ್ಲಿರುವ ಅವರ ಏಕಮಾತ್ರ ಪುತ್ರಿಯಾದ ವಿನೀತಳ ಮನೆಗೆ ಹೊರಟು ನಿಂತಾಗ ನೋಡಬೇಕು ಅವರ ಸ್ಟೈಲು.ಅವರು ಹೊರಡುತ್ತಾರೆಂದು ಗೊತ್ತಾಗುವುದೇ ಆ ದಿನ ಬೆಳಗ್ಗೆ.ಹಟ್ಟಿಯಲ್ಲಿ ದನಗಳ ಬೆನ್ನುಜ್ಜುತ್ತಾ,"ಇನ್ನು ಹತ್ತು ದಿನ ನಾನು ಇಲ್ಲ ಆಯಿತಾ.." ಎಂದು ದೊಡ್ಡದಾಗಿ ದನಗಳಿಗೆ ಎಂದು ಹೇಳಿದ್ದನ್ನು ಅವರ ಸೊಸೆ ಪ್ರಪುಲ್ಲ ಪಾತ್ರೆ ತೊಳೆಯುತ್ತಾ ಕೇಳಿಸಿಕೊಳ್ಳಬೇಕು.ಲುಗುಬಗೆಯಿಂದ ಓಡಿ ಬಂದ ಆಕೆ ಪಾತ್ರೆ ಪರಡಿ ದಡಬಡ ಹಾಕಿ," ಮೂಪರು ಮೈಸೂರಿಗೆ ಹೊರಟ ಹಾಗುಂಟು’ಎಂದು ಗಂಡ ವಸಂತನ ಕಿವಿಯಲ್ಲಿ ಪಿಸಪಿಸ ಊದುವಳು.ಅವನೋ ಮಾತೆತ್ತದೇ ಚಪ್ಪೆ ನಗೆ ಬೀರುವನು.ಲಿಂಗಪ್ಪಯ್ಯ ಆಗ ಸೀದಾ ಒಳಗೆ ಬಂದು ಪ್ರಫುಲ್ಲಾ ,ನಾಕು ಕಟ್ಟು ಹಪ್ಪಳ,ಬಾಳ್ಕು,ಆ ಏಲಕ್ಕಿ, ಎರಡು ಪಾಡ ಕದಳಿ ಬಾಳೆಹಣ್ಣು,ಒಂದು ಕುಪ್ಪಿ ಜೇನು ರೆಡಿ ಮಾಡಮ್ಮ,ಹನ್ನೊಂದು ಗಂಟೆ ಬಸ್ಸಿಗೆ ನಾವು ಮೈಸೂರಿಗೆ ಚಲೋ.. ಎಂದು ಡೈಲಾಗು ಬಿಡುವುದರಲ್ಲಿ ನೋಡಬೇಕು ಅವರ ಸಂಭ್ರಮ,ಸಡಗರ..ಛೇ..

ಪ್ರಫುಲ್ಲ ಈ ಮುದುಕನ ಹುಚ್ಚು ನೋಡಿ ಒಮ್ಮೆ ದಂಗಾಗುವಳು,ಇನ್ನೊಮ್ಮೆ ಬಚಾವ್ ಇನ್ನು ಹತ್ತು ದಿನ ಈ ಮುದುಕನ ಬಾಧೆ ಇಲ್ಲ ಅಂತ ನೆಮ್ಮದಿ ಪಡುವಳು.ಆಗಾಗ ಟೂರು ಹೊಡೆಯುವ ಮುದುಕನ ಹಾಂಕಾರಕ್ಕೆ ಅವಳಿಗೆ ಅಸೂಯೆ ಆಗುವುದೂ ಉಂಟು.

ಒಮ್ಮೆ ವಸಂತ ಹೀಗೆ ಹೊರಡುವುದಕ್ಕೆ ರೇಗಿ "ಎಂಥಾ ಖರ್ಮಕ್ಕೆ ಈಗ ಮೈಸೂರಿಗೆ ?ಭ್ರಾಂತು ನಿಮಗೆ'' ಎಂದಷ್ಟೇ ಹೇಳಿದ್ದು, ಲಿಂಗಪ್ಪಯ್ಯ ಎಷ್ಟೊಂದು ಕೋಪದಲ್ಲಿ ಹಾರಿದರೆಂದರೆ ನಾಲ್ಕು ದಿನ ಊಟವೇ ಮಾಡದೆ ಹುಡಿ ಅವಲಕ್ಕಿ ತಿಂದು ಕೂತಿದ್ದರು.ಆ ನಂತರ ಅವರ ತಂಟೆಗೆ ಮಗನೂ ಬರಲಿಲ್ಲ,ಸೊಸೆಯೂ ಬರಲಿಲ್ಲ.

ಅಂತ ಲಿಂಗಪ್ಪಯ್ಯ ಈಗೀಗ ಮೈಸೂರಿಗೆ ಹೋಗುವ ಉಮೇದು ತಾನಾಗಿಯೇ ಕಡಿಮೆ ಮಾಡಿದ್ದಾರೆ.ಆಗುವುದಿಲ್ಲ ಅಂತ ಅವರಿಗೆ ಗೊತ್ತಾಗಿದೆ.ನೆಲಕ್ಕೆ ಬಗ್ಗಿದ್ದಾರೆ,ಎಲ್ಲಿಗೆ ಹೋಗುವುದು॒

<<<<<<<<<<<<<<<<<<<<<<<<<<<<<<<<<<<<<


"ಏನೂ ಲಿಂಗಪ್ಪಯ್ಯನವರು ನೆಲದಲ್ಲಿ ಹುಡುಕುವುದು?.".ಎಂದು ಹೇಳಿ ಡೋಂಗಿ ಮಾಡಿದವನು ನಾಚಪ್ಪ.

ಲಿಂಗಪ್ಪಯ್ಯ ಖಡಕ್ ಜನ.ಕಣ್ಣಿಗೆ ಕೈ ಹಾಕಿದ ಹಾಗೇ ಹೇಳುವ ಪೈಕಿ.’ನಿನ್ನ ತರಡು ನೋಡುವುದು" ಎಂದರು.

ನಾಚಪ್ಪ ಛಿ..ಛಿ ಎಂದು ನಕ್ಕ.

ಲಿಂಗಪ್ಪಯ್ಯ ಅದನ್ನೇ ಕಾಪಿ ಮಾಡಿದರು.

ವ್ಯಗ್ರರಾಗಿದ್ದರು.

’ನಾಚಪ್ಪನ ಸವಾರಿ ಎತ್ಲಾಗಿಂದ.?’’

ಹೀಗೆ ಬಂದದ್ದು..’’

"ಅದು ಗೊತ್ತಾಯ್ತು,ಎಲ್ಲಿಂದ ಮೇಳ ಹೊರಟದ್ದೂ ಅಂತ’?

"ರಾಯಣ್ಣನ ಮನೆಗೆ ಹೋಗಿದ್ದೆ.."ಎಂದು ಪುಲಿಸ್ಟಾಪು ಇಟ್ಟ ನಾಚಪ್ಪ.

"ಹೋಗು,ಕುಳಿತುಕೋ" ಎಂದು ಲಿಂಗಪ್ಪಯ್ಯ ಹೇಳಲಿಲ್ಲ.ಹೇಳುವುದೂ ಇಲ್ಲ ಎಂದು ಅವನಿಗೂ ಗೊತ್ತಿತ್ತು.ಹೇಳಬೇಕಾದ ವ್ಯಕ್ತಿ ಅವನಲ್ಲ ಎಂದು ಲಿಂಗಪ್ಪಯ್ಯನವರಿಗೂ ಗೊತ್ತಿದ್ದುದರಿಂದ,ಬಂದವನಿಗೆ ಬಾಯಾರಿಕೆ ಬೇಕಾ ಅಂತಲೂ ಕೇಳದೇ,

’ನಾಚಪ್ಪನ ಕ್ಯಾಂಪು ಎಷ್ಟು ದಿನವೋ"?ಎಂದೇ ಉಪಚರಿಸಿದರು.
ಅಷ್ಟರಲ್ಲಿ ಪ್ರಫುಲ್ಲ ಹೊರಗೆ ಬಂದಳು.ನಾಚಪ್ಪ "ಕ್ಕೆಕ್ಕೆಕ್ಕೆ ಎಂದು ನಕ್ಕ.

"ನೀರು ಬೇಕಿತ್ತು’ ಎಂದ.ಹಾಗನ್ನುತ್ತಾ ಚಾವಡಿಯ ಬಾಗಿಲ ಪಡಿಗೆ ಒರಗಿ ಕಾಲು ಚಾಚಿದ."ಕೂಸೇ ನೀರಿನ ಜೊತೆಗೆ ಎರಡಚ್ಚು ಉಳ್ಳಾಲದ ಬೆಲ್ಲವೂ ಬರಲಿ ತಪ್ಪದೇ’ ಎಂದು ಕೂಗಿದ.

ಹಾಗೇ ಉಳ್ಳಾಲದ ಬೆಲ್ಲಕ್ಕಾಗಿ ರಾವು ಬಿಡುವುದು ಅವನ ಚಾಳಿ.ಲಿಂಗಪ್ಪಯ್ಯ ಕೈಯಲ್ಲಿ ಒಂದು ಹಣ್ಣಡಿಕೆ ಹಿಡಿದುಕೊಂಡು ಒಳಗೆ ಬಂದರು."ನಾಚಪ್ಪನಿಗೆ ಬಚ್ಚಿರೆ ತಿನ್ನಬೇಡವಾ’ ಎಂದರು.

"ತಿನ್ನುವಾ’ ಎಂದ ನಾಚಪ್ಪ,ತನ್ನ ಬಗಲಲ್ಲಿದ್ದ ಖಾಕೀ ಚೀಲ ಬಿಡಿಸುತ್ತಾ.ಘಮ್ಮನೆ ನಾತ ಹೊರಬಿತ್ತು.ಅವನಖಾಕೀ ಚೀಲ ತೊಳೆಯದೇ ಅವನ ಕಾಲವೇ ಆಗಿರಬೇಕು.

’ರಾಯಣ್ಣನ ಮನೆಯಲ್ಲಿ ತಿಥಿ ಇತ್ತು’ ಎಂದ,ಹುಳಿಹುಳಿ ನಗೆ ಯನ್ನು ಲಿಂಗಪ್ಪಯ್ಯನವರತ್ತ ಹಾಯಿಸುತ್ತಾ.ಒಂದು ಮಿನಿಟು ಸುಮ್ಮನಾದರು ಲಿಂಗಪ್ಪಯ್ಯ.ಆ ವಿಲಕ್ಷಣ ವಾಸನೆಗೆ ನಾಲ್ಕು ಪೊಡಸಲೇ ಎಂದು ಯೋಚಿಸಿದರು.ಯಾಕೋ ಬೇಡ ಎಂಬವರಾಗಿ 'ಎಂತದ್ದ ನಿನ್ನ ಗಂಟುಮೂಟೆ ?ಎಂದರು.

’ತಿಥಿ ಶೇಷ’ ಎನ್ನುತ್ತಾ ಚೀಲದಿಂದ ನಾಕೈದು ವಡೆ,ಸುಟ್ಟೋವು ಹೊರತೆಗೆದ.

ಈ ಬಾರಿ ಲಿಂಗಪ್ಪಯ್ಯ ಸುಮ್ಮನೇ ಕೂರಲಿಲ್ಲ.

’ಎಂಥಾ ಖರ್ಮಕ್ಕೆ ತೆಗೆದೆ ಅದನ್ನು ?ರಾಯಣ್ಣನ ಪಿತೃಶೇಷ ತಿಂದು ನಮಗೇನಾಗಲಿಕ್ಕುಂಟು?’ ಎಂದು ದೊಡ್ಡ ಸ್ವರದಲ್ಲೇ ಘರ್ಜಿಸಿದರು.

ನಾಚಪ್ಪ ಪೆಚ್ಚಾಗಿ ’ಆಯಿತು,ಆಯಿತು’ಎನ್ನುತ್ತಾ ಅದನ್ನೆಲ್ಲಾ ಚೀಲದೊಳಕ್ಕೆ ತೂರಿದ.ಲಿಂಗಪ್ಪಯ್ಯ ಡ್ರಾವರಿನಿಂದ ತೋಟ್ರೆ ಪೀಶಕತ್ತಿ ತೆಗೆದು,ನವಿರಾಗಿ ಅದನ್ನು ಬಿಡಿಸಿ,ನಾಚಪ್ಪನಿಂದ ಹತ್ತು ಮಾರು ದೂರದಲ್ಲಿ ಕಾಲು ನೀಡಿ ಕುಳಿತು ಅಡಿಕೆ ಹೆರೆಸಲು ಶುರುಮಾಡಿದರು.ಈ ಬಾರಿ ಅಕ್ಕಮ್ಮ ಹೆಂಗ್ಸು ಹೇಗಿದ್ದಾಳೆಂದು ವಿಚಾರಿಸಬಾರದೇ ಬಾರದು ಎಂದು ನಿರ್ಧರಿಸಿದ್ದರು.ನಾಚಪ್ಪ ಪ್ರಫುಲ್ಲ ತಂದಿಟ್ಟ ಎರಡಚ್ಚು ಉಳ್ಳಾಲ ಬೆಲ್ಲವನ್ನು ಗಟ್ಟಿಗೆ ಗಮಾಯಿಸಿದ.ಅರ್ಧ ತಪಲೆ ನೀರನ್ನೂ ಕುಡಿದ.ಆಮೇಲೆ ಗಂಟಲು ಕೆರೆಸಿಕೊಳ್ಳುತ್ತಾ ಚಾವಡಿಯಲ್ಲಿ ತೆವಳುತ್ತಲೇ ಲಿಂಗಪ್ಪಯ್ಯನವರ ಬಳಿ ಬಂದ."ತಿಥಿ ಊಟ ಮಾಡಿದರೆ ಎಂಥಾ ಆಸರಿಕೆ’ ಎಂದು ಲಿಂಗಪ್ಪಯ್ಯನವರಿಗೆ ಕೇಳುವಂತೆಯೂ, ತನ್ನಷ್ಟಕ್ಕೂ ಹೇಳಿಕೊಂಡ.ಲಿಂಗಪ್ಪಯ್ಯ ಮಾತನಾಡಲಿಲ್ಲ.

ಆಮೇಲೆ ಅತ್ತಿತ್ತ ನೋಡಿ ,ಲಿಂಗಪ್ಪಯ್ಯನವರು ಎಲೆ ಅಡಿಕೆ ಸಾಹಿತ್ಯವನ್ನು ತಯಾರು ಮಾಡುವಲ್ಲಿಗೆ ಕೈ ಹಾಕಿದ.ತಟ್ಟೆಯಿಂದ ಮೊದಲು ಎರಡುದ್ದ ಗೇಣಿನ ಹೊಗೆಸೊಪ್ಪಿನೆಸಳೆನ್ನೆತ್ತಿ ,ಮೂಸಿ,''ಕುಣಿಯವಾ?’ ಎಂದ.ಲಿಂಗಪ್ಪಯ್ಯ ಅದೇನೋ ಲೋಕದಲ್ಲಿದ್ದರು. 'ಹೂಂ' ಎಂದರು.ನಾಚಪ್ಪ ಗಹಗಹಿಸಿ ನಕ್ಕು ''ಯೇ ಇದು ಕುಣಿಯ ಅಲ್ಲ,ಬೆಜವಾಡ’ ಎಂದದ್ದು ಅವರನ್ನು ರೇಗಿಸಲಿಲ್ಲ.ಸಣ್ಣ ಸ್ವರದಲ್ಲಿ 'ಯಾವುದೊ ಒಂದು’ ಎಂದರು.ಎರಡು ಎಲೆ ತೆಗೆದು,ತುದಿ ಚಿವುಟಿ,ಕೆನ್ನೆಗ ಅಂಟಿಸಿಕೊಂಡ ಬಳಿಕ ನಾಚಪ್ಪ ಎಲೆಗಳನ್ನು ಮುಂಗೈನಲ್ಲಿ ಹಾಕಿ ಉಜ್ಜಿದ.

ಎಲೆ ಉಜ್ಜುತ್ತಾ,ಸಣ್ಣ ಸ್ವರದಲ್ಲಿ, ''ಅಕ್ಕಮ್ಮ ಸತ್ತದ್ದು ಗೊತ್ತಾಗಿದಾ?’ಎಂದ.ಅದೂ ಕೂಡಾ ಅವರಿಗೆ ಮಾತ್ರ ಕೇಳಬೇಕು ಎಂಬಂತೆ.ಅವನ ಪಿಸುಮಾತಿನಲ್ಲೇ ಈ ಸಮಾಚಾರ ತೀರಾ ಖಾಸಗಿ,ನಮ್ಮಿಬ್ಬರಿಗೆ ಮಾತ್ರಾ ಸಂಬಂಧಿಸಿದ್ದು ಎಂಬ ಧಾಟಿಯಾಗಿತ್ತು.

ಅಡಿಕೆ ಹೋಳನ್ನು ಎತ್ತಿ ಎತ್ತಿ ಬಾಯಿಗೆ ಹಾಕಿಕೊಳ್ಳುತಿದ್ದ ಲಿಂಗಪ್ಪಯ್ಯ ಇದಕ್ಕೆ ಏನೆನ್ನಬೇಕೆಂದು ತಿಳಿಯದೇ ಒದ್ದಾಡಿ,''ಹೌದಾ’ ಎಂದರು.

''ಅವಳು ಹೋದಳು,ಕೇನ್ಸರು ಆಗಿತ್ತಂತೆ.''ಎಂದ ನಾಚಪ್ಪ ಯಾವುದೋ ಸೇಡು ತೀರಿಸಿದ ಸಂತೃಪ್ತಿಯಂತೆ.

ಲಿಂಗಪ್ಪಯ್ಯ ಕನಲಿದರು ಅಂತ ಪ್ರತ್ಯೇಕ ಹೇಳಬೇಕಾಗಿಲ್ಲ.ಅವರು ಕುದಿದರು,ನರಳಿದರು.ಮಾತು ಹೊರಳಿ ಇನ್ನೊಂದು ದಾರಿ ಹಿಡಿಯಬಾರದಾ ಎಂದು ವಿಹ್ವಲಿಸಿದರು.ನಾಚಪ್ಪ ತುಂಬಾ ಸಂತೋಷದಲ್ಲಿ ಎಂಬಂತೆ ಅಕ್ಕಮ್ಮ ಸತ್ತ ಕತೆಯನ್ನು ಸವಿಸ್ತಾರವಾಗಿ ಹೇಳುತ್ತಿದ್ದ.ಎಲ್ಲೋ ಒಂದು ಕಡೆ ಲಿಂಗಪ್ಪಯ್ಯ ಆರ್ದ್ರವಾದರು.

<<<<<<<<<<<<<<<<<<<<<<<<<<<<<<<


ನಾಚಪ್ಪ ಇಂಥದ್ದೇ ಒಂದು ಸಂಜೆ ಬಂದಿದ್ದ.ಅವನು ಮೊದಲ ಬಾರಿಗೆ ಬಂದದ್ದು.ಗುರ್ತಾರ್ತವಿಲ್ಲ.ಈಗಿನಂತೆ ಹಲ್ಕಟ್ ಥರ ಇರಲಿಲ್ಲ.ನೀಟಾಗಿದ್ದ.ಎತ್ತರಕ್ಕಿದ್ದ.ಬಗಲಿಗೆ ಖಾಕಿ ಚೀಲ ಮಾತ್ರಾ ಇತ್ತು,ಅವನ ಟ್ರೇಡು ಮಾರ್ಕುಅದು.ಮರದ ಕಾಲಿನ ಉದ್ದ ಕೊಡೆ.ಅದನ್ನು ಗಿಳಿಬಾಗಿಲಿಗೆ ಸಿಕ್ಕಿಸಿ,ಚರ್ಮದ ಜೋಡನ್ನು ಎತ್ತಿ ಚಿಟ್ಟೆಗೆ ಒರಗಿಸಿ ಇಟ್ಟು,ಸೊಂಟಕ್ಕೆ ಕೈ ಇಟ್ಟು ಉಶ್ ಎಂದು ನಿಂತದ್ದು ನೋಡಿದಾಗ ದಂಗಾದ್ದು,ಲಿಂಗಪ್ಪಯ್ಯನವರೇ.ಬೆಂಡೆ ಸಾಲು ತೆಗೆಯುತಿದ್ದವರು ಕೊಟ್ಟನ್ನು ಅಲ್ಲೇ ಬಿಟ್ಟು ಬಂದು ''ಏನೂ.. ನಮಸ್ಕಾರಾ..''ಎನ್ನುತ್ತಿದ್ದಂತೆ,ಹೊಸ ಹೊಸ ಮದಿಮಾಳು ಅವರ ಮಡದಿ,ಗಂಗಾಳ ಚೆಂಬಿನಲ್ಲಿ ನೀರು ತಂದು ಬಾಗಿಲ ಬಳಿ ಇಟ್ಟು, ''ಕೈ ಕಾಲು ತೊಳೆದುಕೊಳ್ಳಿ''ಎಂದು ಉಪಚರಿಸಿದಳು, ಬಂದವನು ಜಿಲ್ಲಾ ಕಲೆಕ್ಟ್ರನೇ ಇರಬೇಕೆಂಬ ಚರ್ಯೆಯಲ್ಲಿ.

ಮಡಲಿನ ಕಟ್ಟು ಮತ್ತೆರಡು ಸೌದೆ ತುಂಡು ಹಿಡಕೊಂಡು ಅಡುಗೆ ಕೋಣೆಗೆ ಲಗುಬಗೆಯಿಂದ ಧಾವಿಸುತ್ತಿದ್ದ ಆಕೆ ''ಯಾರು ನಿಮ್ಮ ಪೈಕಿಯಾ?'' ಎಂದರೆ ''ನಾನು ನಿನ್ನ ಪೈಕಿ ಎಂದು ಕೇಳಲೆಂದು ಒಳಗೆ ಬಂದೆ ''ಎಂದರು ಲಿಂಗಪ್ಪಯ್ಯ.

ಹೊರಗೆ ಬಂದರೆ ಅಸಾಮಿ ಬೀಟೆ ಮರದ ಬೆಂಚಿನ ಮೇಲೆ ಕಾಲ ಮೇಲೆ ಕಾಲು ಹಾಕಿ ಕುಳಿತು ,ಉಳ್ಳಾಲದ ಬೆಲ್ಲದ ಅಚ್ಚನ್ನು ಇಡೀ ಬಾಯಿಗೆ ಎಸೆದು,ಬುರೂ ಎಂದು ನೀರು ಉರ್ಪಿ ''ನನ್ನ ಗುರುತು ಇಲ್ಲಾ ಅಂತ ಕಾಣ್ತದೆ'' ಎಂದಿತು.

ಲಿಂಗಪ್ಪಯ್ಯ ತುಸು ಅನುಮಾನದಿಂದಲೂ,ಪ್ರೀತಿಯಿಮದಲೂ, ’ಎಲ್ಲೋ ನೋಡಿದ ಹಾಗೇ ಉಂಟು’ ಎಂದರೆ,''ಎಲ್ಲಿ ನೋಡ್ತೀರಿ? ಎಲ್ಲಿ ನೋಡಿರಲಿಕ್ಕೂ ಸಾಧ್ಯವಿಲ್ಲ,ನಾನು ಘಟ್ಟದ ಮೇಲಿನವನು,ಇತ್ಲಾಗಿ ಬಂದು ಒಂದು ತಿಂಗಳೂ ಆಗಿಲ್ಲ.'', ಎಂದವನು ತಾನೊಬ್ಬ ಘಟ್ಟಿಗ ಗಮಕಿಯೆಂದೂ,ಹರಿಕತೆ ಕೂಡಾ ಮಾಡುತ್ತೇನೆಂದೂ,ದೊಡ್ಡವರ ಜಂಬರಗಳಲ್ಲಿ ಖಾಯಂ ಕಾರ್ಯಕ್ರಮ ನೀಡುತ್ತಿರುವುದಾಗಿಯೂ,ಈಗ ಘಟ್ಟ ಇಳಿದು ವಲಸೆ ಬಂದಿದ್ದು ಇನ್ನು ಮುಂದೆ ಈ ಊರುಗಳಲ್ಲಿ ಖಾಯಂ ವಾಸಿಸುವುದಾಗಿಯೂ ಹೇಳಿದ.

ಹೆಸರೂ?’ ಎಂದರು ಲಿಂಗಪ್ಪಯ್ಯ.

ನಾರಾಯಣ ಶಾಸ್ತ್ರಿ ಅಂತ..ನಾಚಪ್ಪ ಅಂತಲೂ ಹೇಳಬಹುದು..''

ಏಕೋ ಸ್ವಲ್ಪ ಗತ್ತು ಹೆಚ್ಚಾಯಿತು ಅಂತ ಲಿಂಗಪ್ಪಯ್ಯನವರ ಹೆಂಡತಿಗೆ ಅನಿಸಿತು.

’ಓದಿದ್ದೆಲ್ಲಾ ಘಟ್ಟದಲ್ಲೇ’ ಎಂದ ನಾಚಪ್ಪ,ಇವರು ಕೇಳುವ ಮೊದಲೇ.ಅದೆನೋ ಹೆಸರು ಘಟ್ಟದಲ್ಲಿ ತನ್ನೂರು ಎಂದಿದ್ದ ಆತ,ಲಿಂಗಪ್ಪಯ್ಯನವರಿಗೆ ಅದು ನೆನಪಿಲ್ಲ.ಒಳಗಿಂದ ಹೆಂಡತಿ ’ಓಯ್’ ಎಂದಳು.ಇವರು ಹೋದರೆ ''ಪಾಯಸ ಮಾಡಬೇಕಾ?''ಎಂದು ಕೇಳಿದಳು.

'' ಊಹೂಂ..ಬೇಕೂಂತ ಇಲ್ಲಾ'' ಎಂದರು ಲಿಂಗಪ್ಪಯ್ಯ.

ಆದರೆ ಅವಳು ಆ ರಾತ್ರಿ ಅಕ್ಕಿ ಪಾಯಸ ಮಾಡಿದಳು,ಕೈ ತೊಳೆಯುವಾಗ ಕೇಳಿದ್ದಕ್ಕೆ, ಎಷ್ಟಾದರೂ ಬ್ರಾಹ್ಮಣನಲ್ಲವಾ? ಎಂದಳು.


<<<<<<<<<<<<<<<<<<<<<<<<<<<<<<<<<<<<<<<<<


ಏನು ಯೋಚನೆ ಮಾಡುತ್ತ ಇದ್ದೀರಿ?'' ಎಂದ ನಾಚಪ್ಪ.

''ಹೌದಾ ನಾಚಪ್ಪಾ.ಈಗ ಸದ್ಯ ಎಲ್ಲಾದರೂ ಪ್ರೋಗ್ರಾಂಕೊಟ್ಟ್ಟದ್ದುಂಟೋ? ''ಎಂದರು ಲಿಂಗಪ್ಪಯ್ಯ

''ಉಂಟಲ್ಲಾ..ಸೀತಾರಾಮನ ಮಗಳ ಮದುವೆಯಲ್ಲಿ ರಾತ್ರಿ ಚತುರ್ಥಿಗೆ ಪುರಾಣವಚನ ಮಾಡಿದ್ದೆ'' ಎಂದ ನಾಚಪ್ಪ.

''ಹೌದೌದು,ಕೇಳಲಿಕ್ಕೆ ಎಷ್ಟು ಜನ ಇದ್ದರಂತೆ?'' ಹಂಗಿಸಿದರು ಲಿಂಗಪ್ಪಯ್ಯ.

''ಯಾಕೆ ಇರುವುದಿಲ್ಲ ಚತುರ್ಥಿಗೆ ಬಂದವರೆಲ್ಲಾ ಇದ್ದರು.''

''ಹೌದು ಇದ್ದರು,ಎಲ್ಲಿ ಕೌಚಿ ಮಲಗಿದ್ದರೋ ಏನೋ? ನಿನ್ನ ಈ ಪೊಟ್ಟು ಕತೆ ಕೇಳ್ತಾರೆ ?ಲಾಟು ಬಿಡುವುದಕ್ಕೂ ಮಿತಿ ಬೇಕು..''ಎಂದರು.

ನಾಚಪ್ಪ ಒಂದು ಮುಷ್ಟಿ ಗಂಜಿಗೆ ಬಂದು ನಿಂತವನು ವಾದಮಾಡಲಿಲ್ಲ , ''ಆಯಿತು ಹಾಗಾದರೆ..''ಎಂದ.ಈ ತಿರುಗಾಡಿ ಪರ್ದೆಸಿ ಜೊತೆ ಎಂಥಾ ಕರ್ಮಕ್ಕೆ ಜಗಳ ಎಂದು ಲಿಂಗಪ್ಪಯ್ಯನವರಿಗೆ ಕಂಡುಹೋಯಿತು, ''ಆಯಿತು ಮಾರಾಯ..ಈಗ ಒಂದು ಗಾಯನ ಮಾಡು ನೋಡುವಾ.''.ಎಂದು ಗಾಳಿ ಹಾಕಿದರು ,

ಅದು ಟಾಂಟೂ ಅಂತ ಅವನಿಗೆ ಗೊತ್ತು, ಶುರು ಮಾಡಿದ....

....ಊರ್ವಶಿಯ ಪದ !!

ಬಂದಳೂವರ್ಶಿ..ಬಳ್ಳಿ ಮಿಂಚಿನ ಮ॒ಂದಿಯಲಿ ಮರಿ ಮುಗಿಲಿಳಿವಂದದಲಿ..

ಆ ಪ್ರಾಯದಲ್ಲೂ ಮೈ ಝುಂ ಎಂದಿತು ಲಿಂಗಪ್ಪಯ್ಯನವರಿಗೆ.


ನಾಚಪ್ಪ..!ಹಬ್ಬಾ ! ಅಂದು ಹೀಗೇ ಬಂದಿದ್ದ.ಇದೇ ರೀತಿ ಚಾವಡಿಯಲ್ಲಿ ಕುಣಿಯಾ ಹೊಗೆಸೊಪ್ಪಿನ ಎಸಳು ಮೂಸಿದ್ದ.ಆಗಲೇ ಅವನು ಹೇಳಿದ್ದು,ಅವಳ ಕುರಿತು,ಗುಟ್ಟಾಗಿ..ಏಕೆ ಅಂದು ರಾತ್ರಿ ನಾನು ನಿದ್ದೆ ಸೋಕದ ಕಣ್ಣಿನಲ್ಲಿ ಆಕಾಶವನ್ನು ಗಿಳಿ ಬಾಗಿಲಿನಲ್ಲಿ ನೋಡಿದೆನೋ?ಆ ಕತ್ತಲಿನ ಬಾನಿನಿಂದ ಅಂತೊಬ್ಬಳು ಊರ್ವಶಿ ಇಳಿದು ಬರುತ್ತಾಳೆಂದು ಕಾದೇನೋ..ಬಡ್ಡೀಮಗ.ದೇಹದ ನಿಟಿಕೆ ಮುರಿಯಲು ಏನು ಅಗತ್ಯವಿತ್ತು ಆಗ?ಏನದೆ ಅದರಲ್ಲಿ?ಅದೇ ದೇಹ, ಅದೇ ಬೆವರು,ಅದೇ ಘಾಟು,ಅದೇ ನರಳಾಟ..ಹೀಗೆಲ್ಲಾ ಅನಿಸೋದು ಈಗ ಈ ವಯಸ್ಸಲ್ಲಿ..ಆಗ ಅದೇಕೆ ಬೇರೆಯೇ ಬೇಕೆಂದು ಅನಿಸಿತೋ?

ನಿದ್ದೆ ಹತ್ತಲಿಲ್ಲವಾ?ಎಂದು ಕೇಳಿದ್ದ ನಾಚಪ್ಪ .ಅದೆಷ್ಟು ವರ್ಷಗಳಾದವೋ?..
ಈಗ ಈ ನಾಚಪ್ಪ ರಾಯಣ್ಣನ ತಿಥಿಶೇಷ ಹೊತ್ತು ತಂದ ಆ ಕಮಟು ವಾಸನೆಯ ಚೀಲವನ್ನು ಕಂಡಾಗ ಲಿಂಗಪ್ಪಯ್ಯನವರಿಗೆ ಎಲ್ಲಾ ನೆನಪಾಗುತ್ತದೆ.

ಆ ರಾತ್ರಿ ಕಾರ್ತಿಕ ಹುಣ್ಣಿಮೆಯ ಹಿಂದಿನ ದಿನ ಅಕ್ಕಮ್ಮ ಹೆಂಗ್ಸುವಿನ ಜೊತೆ ಇಡೀ ಮೈ ಮರ್ದನ ಮಾಡಿಸಿ ಹೊರಟಾಗ ನಾಚಪ್ಪನ ನೆನಪೇ ಆಗಿರಲಿಲ್ಲ.ಈಗ ಅವರಿಗೆ ಅದೆಲ್ಲಾ ಎಂದೋ ಗೊತ್ತಾಗಿದೆ,ಆ ಅಕ್ಕಮ್ಮ ಹೆಂಗ್ಸು ಈ ನಾಚಪ್ಪನ ಹೆಂಡತಿಯೇ ಎಂಬುದು, ಆದರೆ ಅವರಿಗೆ ಇನ್ನೂ ಗೊತ್ತಾಗಲಿಲ್ಲ ಈ ನಾಚಪ್ಪ ಆ ಅಕ್ಕಮ್ಮನ ಬಳಿಗೆ ತನ್ನನ್ನು ಅದೇಕೆ ಬಿಟ್ಟುಬಂದನೆಂಬುದು .ಇದನೆಲ್ಲಾ ಗೊತ್ತು ಮಾಡಿಕೊಂಡು ಅವರಿಗೆ ಈ ಕಾಲದಲ್ಲಿ ಇನ್ನೇನಾಗಬೇಕಿದೆ?ಮೈ ಕೈ ಎಲ್ಲಾ ಸೋತು ಹೋಗಿ ,ಮಂಕು ಮಂಕು ಅನಿಸುವ ಹೊತ್ತಿಗೆ ಬೇಕಾ?ಕ್ಷೌರದಂಗಡಿಯಲ್ಲಿ ಕುಳಿತಿದ್ದಾಗ ,ಸೀತಾರಾಮ ರಾಯಣ್ಣನಿಗೂ ನಾಚಪ್ಪನ ಹೆಂಡತಿಗೂ ದೋಸ್ತಿ ಇದೆ ಎಂದು ಹೇಳಿದಾಗ ,ಲಿಂಗಪ್ಪಯ್ಯನವರಿಗೆ ದುಃಖವಾಗಲಿ, ಭಯವಾಗಲಿ ಆಗಲೇ ಇಲ್ಲ.ಅ ವೇಳೆಗೆ ಅವರು ಅಕ್ಕಮ್ಮನ್ನನ್ನು ಏನು,ಸ್ವತಃ ಹೆಂಡತಿಯನ್ನೇ ಮರೆತು ಅದೆಷ್ಟು ವರ್ಷಗಳಾಗಿದ್ದವೋ ಏನೋ.ನಾಚಪ್ಪನ ಬಗೆಗೆ ಲಿಂಗಪ್ಪಯ್ಯನವರಿಗೆ ಭಾವನೆಗಳೇ ಮುರಿದುಹೋಗಿವೆ.ಅದೆಷ್ಟೂ ಬಾರಿ ಅವನು ಬಂದಾಗಲೆಲ್ಲ ಕೋಪಿಸಿಕೊಳ್ಳಬೇಕೆಂದು ನೋಡಿದ್ದಾರೆ,ಸಾಧ್ಯವಾಗಿಲ್ಲ.


<<<<<<<<<<<<<<<<<<<<<<<<<<<<<<<<<<<<<<<<<<<


ಇದೆಲ್ಲಾ ಈಗ ನೋಡಿದರೆ ಎಷ್ಟು ವರ್ಷಗಳ ಹಿಂದಿನ ಕತೆಯೋ ಏನೋ.ಈಗ ಲಿಂಗಪ್ಪಯ್ಯ ಮುದುಕ ಮುದುಕ ಆಗಿದ್ದಾರೆ.ಅವರ ಹೆಂಡತಿ ಒಂದು ಮಾತೂ ಆಡದೆ ಹೊರಟು ಹೋದಾಗ ವಸಂತನಿಗೆ ಎಷ್ಟು ಸುಮಾರು ಹತ್ತು ವರ್ಷ ಆಗಿರಬಹುದು.ಅದೆಲ್ಲಾ ಈಗ ಅವರಿಗೆ ನೆನಪು ಮಾಡಿದರೆ ನೆನಪಾಗುತ್ತದೆ ಅಷ್ಟೆ.ಆದರೆ ಅಕ್ಕಮ್ಮ ಸತ್ತಿದ್ದಾಳೆ ಎಂದು ಈ ನಾಚಪ್ಪ ಇಂದು ಇಲ್ಲಿ ಬಂದು ಆ ರಾಯಣ್ಣನ ತಿಥಿಶೇಷ ಹೊರತೆಗೆದು ಹೇಳಿದಾಗ ಮಾತ್ರಾ ಅವರಿಗೆ ಭಯಂಕರ ನೋವು ಶುರುವಾಗಿದೆ .ಬೇಡಾಗಿತ್ತು ಈ ಪ್ರಾಯದಲ್ಲಿ ಈಗ ಇದು ನೆನಪಾಗೋದು ಎಂದು ಅವರಿಗೆ ಆ ರಾತ್ರಿ ತುಂಬಾಸಲ ಅನಿಸಿತ್ತು. ಮಾತಾಡದೇ ಮುಚ್ಚಿ ಮಲಗಿದರೆ ಅಕ್ಕಮ್ಮ ಹೆಂಗಸು ಯಾರು ನಾಚಪ್ಪ ಯಾರು ಎಂದೇ ಅರ್ಥವಾಗುತ್ತಿಲ್ಲ. ಇನ್ನಷ್ಟು ಕಣ್ಣು ಮುಚ್ಚಿದರು. ಯಾಕೋ ಪಕ್ಕದಲ್ಲಿ ಸುಳಿದಂತಾಗಿ ಕಣ್ಣು ತೆರೆದರೆ ನಾಚಪ್ಪ.ಏನು ನಿದ್ದೆ ಬರುತ್ತಿಲ್ಲವಾ?ಲಿಂಗಪ್ಪಯ್ಯ ನಕ್ಕರು.ಊರ್ವಶಿಯಂಥವಳು ಇದ್ದರೆ ಹೇಳುಎಂದರು.ನಾಚಪ್ಪನು ನಕ್ಕ.ಸಣ್ಣಗೇ,ಮತ್ತೆ ಜೋರಾಗಿ.ಅವನು ಹೆಗಲಿಗೆ ಅವನ ಕಮಟು ವಾಸನೆಯ ಚೀಲ ಸಿಕ್ಕಿಸಿ ಎದ್ದು ನಿಂತ.ಲಿಂಗಪ್ಪಯ್ಯನವರೂ ಎದ್ದು ನಿಂತರು.ಅದೆಷ್ಟು ಬೀಸ ಬೀಸ !ಆ ಅಪರ ರಾತ್ರಿಯಲ್ಲಿ. ಎಲ್ಲಿಗೆ ಎಂದು ಕೇಳಲು ಅಲ್ಲಿ ಯಾರೂ ಎಚ್ಚರ ಇರುತ್ತಾರೆ ?

<<<<<<<<<<<<<<<<<<<<<<<<<<<<<<<<<<<<<<<<<<<<<<<<

ಮರುದಿನ ಬೆಳಗ್ಗೆ ಪ್ರಫುಲ್ಲ ಸ್ವಲ್ಪ ಬೇಗವೇ ಎದ್ದು ಹೊರಗೆ ಬಂದು ನೋಡುತ್ತಾಳೆ,ತುಳಸಿ ಕಟ್ಟೆಯ ಬಳಿ ನಾಚಪ್ಪನ ಶವ !ಅವಳ ಮೂಪರು ಎಂದರೆ ಲಿಂಗಪ್ಪಯ್ಯ ಮಾತ್ರಾ ಕಾಣೆಯಾಗಿದ್ದರು. ನಾಚಪ್ಪನ ಹಿಂದೆ ಅವರು ಹೊರಟಿದ್ದರು ಎಂಬುದು ಅಲ್ಲಿ ಯಾರಿಗೆ ಗೊತ್ತಿರುತ್ತದೆ?ಲಿಂಗಪ್ಪಯ್ಯನವರು ಹಾಗೇ ಕಾಣೆಯಾಗಿದ್ದು ಮಾತ್ರಾ ನಿಜ,ಜೊತೆಯಲ್ಲಿ ಅವರ ಏಕ ಮಾತ್ರಾ ಪುತ್ರಿ ವಿನೀತಳ ಜನ್ಮ ರಹಸ್ಯ ಕೂಡಾ.

20070505

ನದಿಯ ನೆನಪಿನ ಹಂಗು...ಒಂದು ಜಿನುಗು,

ಮತ್ತೊಮ್ಮೆ ಸೆಲೆ

ನೋಡ ನೋಡುತ್ತಾ ಝರಿ, ಬರಬರುತ್ತಾ ತೊರೆ,

ಮುಂದಿನದ್ದು ತಣ್ಣಗಿನ ನಡಿಗೆ

ಮತ್ತದೋ ಬಳುಕುವ ವೈಯಾರಿ,

ಆಗೀಗ ಮಂದಗಾಮಿನಿ, ಮಗದೊಮ್ಮೆ ಗುಪ್ತಗಾಮಿನಿ,

ಅಷ್ಟಿಷ್ಟರಲ್ಲೇ ಅಪಾರ ಚಾಚು, ಅಬ್ಬರದ ಆಟೋಪ, ನಡೆ ನಡೆದು ಸಾಗುತ್ತಾ,

ಎಲ್ಲವನ್ನೂ ಸ್ವೀಕರಿಸುತ್ತಾ, ಕುಣಿಯುತ್ತಾ, ಕುಪ್ಪಳಿಸುತ್ತಾ, ಜೀಕುತ್ತಾ, ಚಿಮ್ಮುತ್ತಾ ಸಾಗಿ ಕಡಲ ಮಡಿಲಲ್ಲಿ ಕರಗುವವಳು...

.......... . . . . . ನದಿ !

ಅವಳ ಬದುಕೇ ನಿತ್ಯ ನೂತನ.

ಅದು ಸುಪ್ತ, ಪ್ರe, ತುರ್ಯಾ ಅವಸ್ಥೆಗಳ ಮುಖಾವಲೋಕನ

.ನದಿ ಈ ಲೋಕದ ಕೌತುಕಗಳಲ್ಲೊಂದು.

ನಿಜವಾಗಿಯೂ ವಿಶ್ಲೇಷಿಸಿದರೆ ನದಿಯಂಥ ವಿಸ್ಮಯಕಾರಿ ಇನ್ನೊಂದಿರಲಿಕ್ಕಿಲ್ಲ.

ನದಿ ಜೀವಜಾಲದ ಸೃಷ್ಟಿಕರ್ತೃ.

ಅದಕ್ಕೇ ಇರಬೇಕು ನದಿ ಸದಾ ಸ್ತ್ರೀ.

ಅಲ್ಲೊಂದು ಇಲ್ಲೊಂದು ಬಿಟ್ಟರೆ ಜಗತ್ತಿನ ನದಿಗಳೆಲ್ಲಾ ನೀರೆಯರೇ !

ನಿಮಗೆ ಗೊತ್ತಾ ಈ ಖಗೋಳದ ನಾಗರಿಕತೆಗಳೆಲ್ಲಾ ನದಿಯ ದಂಡೆಗಳಲ್ಲೇ ಹುಟ್ಟಿವೆ. ನದಿ ಪಾತ್ರಗಳಲ್ಲೇ ಬೆಳೆದಿವೆ.

ಆದಿ ಮಾನವ ಕೂಡಾ ನದಿ ದಡದಲ್ಲೇ ಕುಳಿತು ಯೋಚಿಸಿದ್ದ.

ಅಕ್ಷರಗಳು ಕೂಡಾ ನದಿಯ ಮರಳ ರಾಶಿಯಯಲ್ಲೇ ಮೂಡಿದವು.

ನದಿಯ ನೀರಿನ ಹಂಗು, ನದಿಯ ನೆನಪಿನ ಗುಂಗು ಬಿಟ್ಟು ಮನುಷ್ಯ ಉಳಿಯಲಾರ. ಊರು ಬಿಟ್ಟು ಪರವೂರ ಸೇರಿದ ಮಂದಿ ತನ್ನೂರ ನದಿ ತುಂಬಿ ಹರಿಯುವ ನೆನಪಲ್ಲಿ ಗರ್ಕನಾಗುತ್ತಾನೆ.

ತವರೂರ ನದಿ ದಂಡೆಯಲ್ಲಿ ಹಸುಕರುಗಳು ಮೇಯುವ ಚಿತ್ರ ಗಂಡನ ಮನೆಯಲ್ಲಿ ಹೆಣ್ಮಗಳಿಗೆ ನೆನಪಾಗಿ ಕಾಡುತ್ತದೆ.

ನದಿಯ ಕಲರವ, ನದಿಯ ಆರ್ಭಟ, ನದಿ ಬಿತ್ತಿದ ಮಂದಹಾಸ ನಮ್ಮ ಹೃದಯ ಸಂವಾದಕ್ಕೆ ಸದಾ ವಸ್ತು, ವಿಷಯ.ಪುಣ್ಯ ನದಿ ಎಂಬ ಕಲ್ಪನೆ ಇದೇ ಕಾರಣಕ್ಕೆ ಬಂದಿರಬೇಕು.

ನದಿ ಪಾಪಾನಾಶಿನಿ ಎಂಬ ನಂಬಿಕೆ ನದಿಯ ಅನಂತ ಸಾಧ್ಯತೆಗಳಲ್ಲಿ ಒಂದು.

ಗಂಗೇ ಚ ಯಮುನೇ ಚೈವ ಗೋದಾವರಿ ಸರಸ್ವತೀ ಎಂದು ನದಿಗಳ ಪಾವಿತ್ರ್ಯದ ಪಟ್ಟಿ ಪಠಿಸುವವರು ನಾವು.ಗಂಗೆಯನ್ನು ಭಗೀರಥ ಕರೆಸಿಕೊಂಡಾಗ ಅವಳ ಆಗಮನಕ್ಕೆ ಶಿವನೇ ತಲೆಯೊಡ್ಡಿದ ಕಥೆ ನಮ್ಮ ನದಿಗಳ ದಾಂಗುಡಿ ಸಾಕ್ಷಿಯಾಗಿದೆ.

ವೆಸ್ಟ್ ಮಿನಿಸ್ಟರ್ ಬ್ರಿಜ್ ಮೇಲೆ ನಿಂತ ವರ್ಡ್ಸ್‌ವರ್ತ್ ಥೇಮ್ಸ್ ನದಿಯ ಮೂಲಕ ಜಗತ್ತಿನ ಸೌಂದರ್ಯವನ್ನು ಆಸ್ವಾದಿಸಿದ ಪದ್ಯ ಹೈಸ್ಕೂಲ್ ದಿನಗಳಲ್ಲಿ ಓದಿದ ನೆನಪು.ಇದೇ ಥೇಮ್ಸ್ ನದಿಯ ವೈಭವವನ್ನು ಕೊಂಡಾಡಿದ ಬ್ರಿಟನ್‌ನ ರಾಜಕಾರಣಿ ಬರ್ನ್ಸ್, ಮಿಸಿಸಿಪ್ಪಿ ಎಂದರೆ ಕದಡಿದ ನೀರು, ಸೈಂಟ್ ಲಾರೆನ್ಸ್ ನದಿ ಹವಳದ ನೀರು ಆದರೆ ಥೇಮ್ಸ್‌ನದ್ದು ದ್ರವೀಕೃತ ಇತಿಹಾಸ ಎಂದಿದ್ದ.

ಜಗತ್ತಿನ ಕೋಟ್ಯಂತರ ವರ್ಷಗಳ ಪ್ರತಿ ಕ್ಷಣಕ್ಕೂ ನದಿ ಸಾಕ್ಷಿ

. ನದಿಯಲ್ಲಿ ಕೋಟಿ ವರ್ಷಗಳಿಂದ ನೀರು ಹರಿಯುತ್ತಿದೆ, ಕೊಂಚವೂ ಎಗ್ಗಿಲ್ಲದೇ. ದೇಶ, ಕಾಲ, ಜನ ಜೀವನ ಮಾತ್ರ ಬದಲಾಗುತ್ತಾ ಸಾಗುತ್ತಿದೆ.ನದಿಯ ನೀರೆಂಬುದು ಪ್ರತಿಕ್ಷಣವೂ ನವನವೀನ.

ನದಿಯಲ್ಲಿ ಹಳೆಯ ನೀರೆಂಬುದೇ ಇಲ್ಲ. ಪ್ರತಿ ಬಾರಿಯೂ, ಪ್ರತಿಕ್ಷಣವೂ ಹರಿಯೋದು ಹೊಸನೀರೇ.

ಕಳೆದು ಹೋದ ಕ್ಷಣಗಳು ಪುನಃ ಬರುವುದಿಲ್ಲ. ತುಂಬಿ ಹರಿಯುವ ಯಮುನೆ ಸಮುದ್ರ ಸೇರುತ್ತದೆ ಹೊರತು ಪುನಃ ಹಿಂತಿರುಗುವುದಿಲ್ಲ ಎಂದು ರಾಮಾಯಣದ ಅಯೋಧ್ಯಾ ಕಾಂಡದಲ್ಲಿ ಉಲ್ಲೇಖವಿದೆ.

ಇದೇ ಯಮುನೆಯ ದಡದಲ್ಲಿ ಕೃಷ್ಣನ ರಾಸಕ್ರೀಡೆ "ನೀರ ಸಮೀರೇ ಯಮುನಾ ತೀರೇ’ ಎಂದು ಜನಜನಿತ. ಇದೇ ಯಮುನೆಯ ದಡದಲ್ಲಿ ರಾಧೆ ಕೂಡಾ ತನ್ನ ಕನ್ನಯ್ಯನಿಗಾಗಿ ಹಂಬಲಿಸಿದ್ದಳು.

ಪ್ರೀತಿ ಕೂಡಾ ಹೀಗೆಯೇ. ಒಂದು ಜಿನುಗು ಸೆಲೆಯೊಡೆದು ಝರಿ ಜಲಪಾತವಾಗಿ ಭೋರ್ಗರೆದು ಜೀವವನ್ನು ತಬ್ಬಿಕೊಳ್ಳುತ್ತದೆ.

ಬದುಕಿನಲ್ಲಿ ನದಿಯ ಪಾತ್ರ ಮುಗಿಯೋದಿಲ್ಲ. ಸತ್ತ ಮೇಲೂ ನದಿ ಇರುತ್ತದೆ. ಪರಲೋಕಕ್ಕೆ ಸಾಗಿದ ವ್ಯಕ್ತಿ ವೈತರಣೀ ನದಿ ದಾಟುವ ಬಗ್ಗೆ ಗರುಡ ಪುರಾಣ ವಿವರಣೆ ನೀಡುತ್ತದೆ.

"ನದ ನದಿಗಳ ಆವರಿಸಿದೆ, ಹೊಸ ಚೇತನದುಸಿರು’ ಎಂಬ ಕವಿ ವಾಣಿಯನ್ನು ಇಲ್ಲಿ ಕೋಟ್ ಮಾಡಲೂಬಹುದು.

ನದಿ ದಡದಲ್ಲಿ ನಿಂತು ಇಷ್ಟನ್ನೂ ಮೆಲುಕು ಹಾಕಿನೋಡಿ,

ತುಂಬಿ ಹರಿಯುವ ನದಿ

ನಿಮ್ಮೊಳಗೆ

ಹೊಸ ಭಾವ, ಹೊಸ ಜೀವ ಮೂಡಿಸದಿದ್ದರೆ .....

ನನ್ನಾಣೆ !

20070504

ಇದು ಕವನವಲ್ಲ,ಕನವರಿಕೆ.


ಯಾರಿಗಾಗಿ ಕಾಯುವುದು?

ಈ ಕತ್ತಲಲ್ಲಿ?

ಎಂದೂ ಬೀಳದ ಆ ತಾರೆಗಳಿಗಾಗಿಯಾ?

ಆಕಾಶಕ್ಕೆ ಕಣ್ಣಿಟ್ಟು ಕಾದು ಕುಳಿತಿದ್ದೇನೆ.....

ಚಂದಿರನ ಗೆಳೆತನ ಬೇಕೆಂಬ...

ಹಂಬಲಕ್ಕೆ....

ಕತ್ತಲನ್ನೂ ಕಳೆದುಕೊಳ್ಳಲಾರೆ,

ಬೆಳಕಿನ ಬಗೆ ಬಗೆ ಕಾಣಿಸಿದ್ದೇ ಈ ಕರಿಗತ್ತಲು.

ಚಂದಿರನ ಹಂಬಲಕ್ಕೆ ಆ ಸೂರ್ಯದಾರಿ..

ಎತ್ತೆತ್ತಲೂ ಹೊರಡಲಾರೆ,ಕತ್ತಲನ್ನು ಸೀಳಿ,

ಕಾಯುತ್ತಾ ಕಾಯುತ್ತಾ ಸುಖಿಸುತ್ತಿರುವೆ,

ಈ ಬಯಲ ಹಾದಿ..

ಬೀಳ್ಕೊಡೆಂದರೆ ಒಲ್ಲೆ ಎನ್ನುತ್ತಿದೆ..

ಎಷ್ಟೊಂದು ಅಹಂ..!

ಬಿಡಲಾರೆ,ಬಿಡದೆ ಇರಲಾರೆ..

ಸಾಕು ಈ ಹಲುಬು...

ಹೊಸ ನೋಟ ಹುಡುಕೆಂದರೆ ಕಣ್ಣೆಲ್ಲ ಮಬ್ಬು....

ಎಲ್ಲಿ ಇರುವುದು ಇನ್ನು?

ಹುಡುಕಬೇಕು ಹೊಸ ಗೂಡು.

ಮೆತ್ತನೆಯ ಹಾಸುಗೆಗೆ ಹತ್ತಿ

ಹೊಸೆಯಬೇಕು.

ನೇಯುವೆನೇ ಹೊಸ ಗೂಡು??...,

ಅದರೊಳಗೆ ಹೊಸ ಹೊದಿಕೆ,??

ಅಲ್ಲಿ ಇಟ್ಟ ಮೊಟ್ಟೆಗಳೆಲ್ಲಾ ಕಾವಿಟ್ಟು ಕಾಯುವೆನೇ?

ನನ್ನನ್ನೇ ನಾನು ಇನ್ನು ಕೇಳಬೇಕು.

ಇಳಿದು ನನ್ನೊಳಗೆ ನಾನು

ಬೆರಳ ತದಿಗಿಣ ಬಡಿಯುತ್ತಾ,,,

ಜೀವ ಲಹರಿಯ ಜೊತೆ ಕೇಳಿ ಬರುವೆ

......ಸಾಕೆಂದು ಹೇಳಿದರೆ

ನನ್ನ ಗೂಡನು ನಾನೆ

ಸುತ್ತಲೂ ಮುತ್ತಿಟ್ಟು

ಹೊಲಿದುಬಿಡುವೆ......

20070503

ಜೀವನ ಜೋಕಾಲಿ... ಜೀವನವೇ ಜೋಕಾಲಿ.!.ಜೋಕಾಲಿ ಎಂಬೊಂದು ವಸ್ತು ನಮ್ಮ ಜೊತೆ ಏಕಿದೆ ? ಎಂದು ಕೇಳಿದರೆ ಅರೆರೆ ಎಂಥಾ ಸಿಲ್ಲಿ ಮಾತ್ನಾಡ್ತಿ ಎನ್ನಬಹುದು.

ಹುಟ್ಟಿದ ಹದಿನೈದನೇ ದಿನಕ್ಕೆ ಬಣ್ಣದ ತೊಟ್ಟಿಲಿಗೆ ಸೇರಿ ಅಂಗಾತ ಮಲಗಿ ಪಿಳಿಪಿಳಿ ಕಣ್ಣು ಬಿಟ್ಟು ತೂಗು ಲೋಕದಲ್ಲಿ ಚಿತ್ತಾರದ ಕನಸುಗಳ ಜೊತೆ ಸಂವಾದ ಮಾಡಿ ನಕ್ಕದ್ದೆಷ್ಟು ? ಅತ್ತದ್ದೆಷ್ಟು ? ನಾವೆಲ್ಲಿ ಲೆಕ್ಕ ಇಟ್ಟಿದ್ದೇವಾ ?

ಈ ಲಂಬಾಕೃತಿಯ ಸ್ತಂಭ ಸ್ವರೂಪಿ ಮನುಷ್ಯ ವರ್ಟಿಕಲ್ ಆಗಿ ಗಮಿಸುವವನು ಏಕಾಏಕಿ ಹರಿಜಾಂಟಲ್ ಆಗಿರುವ ಈ ತೂಗು ತೊಟ್ಟಿಲಿಗೆ ಏಕೆ ಮಾರು ಹೋಗುತ್ತಾನೆ ?

ಏನಿದೆ ಈ ತೂಗಿನಲ್ಲಿ?

ಏನಿದೆ ಈ ತೊಟ್ಟಿಲಲ್ಲಿ?

ಆ ಹಠಮಾರಿ ಮಗು ಅದೆಂಥಾ ರೆಚ್ಚೆ ಹಿಡಿದು ಅತ್ತು ಅಯ್ಯೋ ಎನಿಸುವಂತಿದ್ದರೂ ಅದು ಹೇಗೆ ಅಮ್ಮ ತೊಟ್ಟಿಲಿಗೆ ಹಾಕಿ ನಾಲ್ಕು ಬಾರಿ ಜೀಕಿದರೆ ಎಲ್ಲಾ ಮರೆತು, ಆ ಸಿಹಿ ನಿದ್ದೆಯ ಲೋಕ ಸೇರಿ ಕನಸುಗಳ ಚಿಣ್ಣಿದಾಂಡು ಆಡುತ್ತದೆ ನೋಡಿ,ಏನಂತಿರಿ ಇದಕ್ಕೆ?ಅಮ್ಮನ ಜೋಗುಳದ ಜೊತೆ ಬದುಕಿನ ಹಾಡನ್ನು ಹಾಡುತ್ತಾ, ಅರಸುತ್ತಾ, ಗುನುಗುನಿಸುತ್ತಾ ಗಮಿಸುತ್ತೇವಲ್ಲಾ ಆ ಕಾಲದ ಹಾಡಿಗೆ....

....ತೊಟ್ಟಿಲು ತಾನೇ ನಮ್ಮ ಮೊದಲ ಜೀವ ಜಂತಿ?

ಇಷ್ಟಕ್ಕೂ ಈ ಜೋಕಾಲಿಯ ಜೀಕಿನಲ್ಲಿ ನಮ್ಮನ್ನು ಇಷ್ಟಗೊಳಿಸುವ ಸಂತಸ ಹೊಮ್ಮಿಸುವ, ಸಂಭ್ರಮದ ಗುಡ್ಡೆ ಕಟ್ಟುವಂಥದ್ದು ಏನಿದೆ ?

ಯಾರಿಗೂ ಗೊತ್ತಿಲ್ಲ. ನಾವು ಮಾತ್ರ ಜೀಕುವುದು ಸಿಕ್ಕಾಗ ತಪ್ಪಿಸುವುದಿಲ್ಲ.

ಕಾಡಿನಲ್ಲಿ ಅಬ್ಳಕ್ಕದ ಹಣ್ಣಿಗೆ ಹುಡುಕಾಡುತ್ತಾ ನಡೆದಾಗ ಕಲ್ಲಟೆಯ ಜಂತಿ ಸಿಕ್ಕರೆ ಕೈ ಚಾಚಿ ಹಿಡಿದು ಪೋ ಪೋ ಎನ್ನುತ್ತಾ ಎರಡು ಬಾರಿ ಜೀಕಿ ಉಲ್ಲಾಸಗೊಂಡ ಬಾಲ್ಯ ಬೆನ್ನಟ್ಟುತ್ತದೆ.

ಬಸ್ಸಿಗಾಗಿ ಕಾಯುತ್ತಾ ಅಜ್ಜಿ ಜೊತೆ ನಿಂತಿದ್ದವರು ಆಲದ ಮರದ ಇಳಿ ಬೇರು ಹಿಡಿದು ಠಯ್ಯನೇ ಜೀಕಿ ಅಜ್ಜಿಯಿಂದ ವಾರ್ನ್ ಮಾಡಿಸಿಕೊಂಡದ್ದಾಗಿದೆ.ಜಾತ್ರೆ ಗದ್ದೆಯಲ್ಲಿ ಮಕ್ಕಳನ್ನು ಉಯ್ಯಾಲೆಗೆ ಹಾಕಿ, ಕದ್ದು ಮುಚ್ಚಿ ಜಯಂಟ್ ವೀಲ್‌ನಲ್ಲಿ ಸುತ್ತು ಹೊಡೆಯುವ ಆಸೆ ಒಳಗೊಳಗೆ ಸುತ್ತು ಹಾಕುವಾಗ ಏನು ಮಾಡೋದು ಎನಿಸುತ್ತದೆ.

ಇನ್ನೂ ಮದುವೆಯಾಗದ ಹುಡುಗ ಅಬ್ಬಾ ಜೊತೆಗೊಬ್ಬಳು ಹುಡುಗಿ ಇದ್ದಿದ್ದರೆ ತೊಟ್ಟಿಲಲ್ಲಿ ತೂಗಿಕೊಳ್ಳಬಹುದಿತ್ತು ಎಂದು ಆಸೆ ಪಡುತ್ತಾನೆ.ಬೆಂಡು, ಬತ್ತಾಸು, ರಥ, ಸುತ್ತು ಬಲಿ ಜೊತೆಗೆ ತೊಟ್ಟಿಲೆಂಬುದು ಒಂದು ಇಲ್ಲದಿದ್ದರೆ ಜಾತ್ರೆ ಅನ್‌ಕಂಪ್ಲೀಟ್ !

ಇಳಿ ವಯಸ್ಸಿನಲ್ಲಿ ಮನೆ ಮಾಡಿಗೆ ಜೋಕಾಲಿ ಕಟ್ಟಿಸಿಕೊಂಡು ಗಂಡ ಹೆಂಡತಿ ಎಲೆಯಡಕೆ ಮೆಲ್ಲುತ್ತಾ ಬದುಕಿನ ಸಿಹಿಯನ್ನು ಸವಿಯುವ ಚಿತ್ರ ಅಲ್ಲಲ್ಲಿ ಕಾಣುತ್ತದೆ.

ಈ ಜೋಕಾಲಿಯಲ್ಲಿ ಅಂಥದ್ದೇನಿದೆ ? ಆ ಕುಲುಕು-ಪಲಕುಗಳು ನಮ್ಮ ಒಳ ತೋಟಿಗಳಾ ? ತೂಗುತೊಟ್ಟಿಲ ಮೂಮೆಂಟು ನಮ್ಮನ್ನು ಅಂತರ್ಮುಖಿತ್ವಕ್ಕೆ ಆವರಿಸಿಕೊಳ್ಳುವಂತೆ ಮಾಡುತ್ತದಲ್ಲಾ, ಆ ಶಕ್ತಿ ಏನದು ? ಎಲ್ಲಿಂದ ಬಂತು ?

ಜೋಕಾಲಿಯ ಮಾಂತ್ರಿಕತೆ ಬದುಕಿನುದ್ದಕ್ಕೂ ಅಂಟಿಕೊಳ್ಳುತ್ತದೆ.

"ಬದುಕೇ ದೇವನ ಉಯ್ಯಾಲೆ’ ಎಂಬ ಸಿನಿಮಾ ಹಾಡು ಇಲ್ಲಿ ಕೋಟ್ ಮಾಡಬಹುದು.

ಪುರಾಣದ ದೇವರುಗಳು, ಪುರಾಣದ ಪ್ರೇಮಿಗಳು, ಇತಿಹಾಸದ ಅರಸ ಅರಸಿಯರು, ಕೃಷ್ಣ-ರಾಧೆಯರು ಜೋಕಾಲಿಯಾಡಿದ ಅದ್ಭುತ ವಿವರಗಳು ಈಗಲೂ ಹಸಿರಾಗಿವೆ.

ಜೋಕಾಲಿಯಲ್ಲಿ ತಣ್ಣಗೆ ಕುಳಿತ ಹುಡುಗಿ ತನ್ನ ಲಂಗದಾವಣಿಯನ್ನು ಭದ್ರಪಡಿಸಿ, ತಲೆ ಎತ್ತಿ ಬಾನಿನ ನಕ್ಷತ್ರಗಳನ್ನು ಎಣಿಸುತ್ತಾ ಚಂದಿರನ ಜೊತೆ ನೆಂಟಸ್ತಿಕೆ ಮಾಡುವ ದೃಶ್ಯ ನಿಮ್ಮನ್ನು ಕೊಂಡಾಟ ಪಡಿಸಿದೇ ಇದ್ದೀತಾ?