20070430

ಮೌನದ ಗಿರಿ ದುರ್ಗದಲ್ಲಿ ನಿಂತದೇನೋ....


ಪ್ರೀತಿಯ ಜೋಳಿಗೆ ಹಾಕಿಕೊಂಡು ಕನಸುಗಳ ಆಯುತ್ತಾ ತುಂಬಿಕೊಳ್ಳುವ, ನಿತ್ಯ ಶುದ್ಧ ಮನಸ್ಸಿನ ಜೀವವೊಂದಿದ್ದರೆ ಅದು ಹೆಣ್ಣು.

ಹುಡುಗಿಯರೆಂಬ ಈ ಮಾನವ ಸಂಕುಲದ ಭರ್ತಿ ಅರ್ಧ ಭಾಗ ಎಷ್ಟೊಂದು ಒಳ್ಳೆಯವರು !

ವಟವಟಗಳಿಲ್ಲ, ವಂಚನೆಗಳಿಲ್ಲ, ಅಸಂಬದ್ಧ ಸ್ಥಿತಿಗಳಿಲ್ಲ , ಕ್ರೂರಿ ಮೊದಲೇ ಅಲ್ಲ....

ಹಾಗಿರುವುದು ಹುಡುಗಿ.

ಅಸೂಯೆ, ಜಿಪುಣತನ, ಅಹಂಕಾರಗಳನ್ನು ಅಲ್ಪಸ್ವಲ್ಪ ಹದಪಾಕ ಮಾಡಿ, ಮನಸ್ಸು, ದೇಹಗಳನ್ನು ಸುಖಾಸುಮ್ಮನೆ ಸಿಂಗರಿಸಿಕೊಳ್ಳುವ ಹುಡುಗಿ ಮಗುವಾಗಿ, ತರುಣಿಯಾಗಿ, ತಾಯಿಯಾಗಿ, ಅಜ್ಜಿಯಾಗಿ ಸಾಗಿಬಂದ ರೀತಿ ಸಾವಿರ ಗ್ರಂಥ ಬರೆದರೂ ಮುಕ್ತಾಯವಾಗದು.

ಸಿಟ್ಟು, ಸೆಡವು, ಕರುಣೆ, ಕ್ಷಮೆ ಜೊತೆಗೆ ಕಣ್ಣಾಲಿಗಳು ನೆನೆದಾಗಲೆಲ್ಲಾ ತುಂಬಿಕೊಳ್ಳುವುದು ಹುಡುಗಿ.

ಆಕೆ ಕ್ಷಮೆಗೆ ಭೂಮಿಯ ಸದೃಶಳು.ಆಕೆ ಕಾಯಬಲ್ಲಳು, ಹಂಬಲಿಸಬಲ್ಲಳು. ಭಾವನೆಗಳ ಇಟ್ಟಿಗೆ ಕಟ್ಟಿ, ಪ್ರೀತಿಯ ಮನೆಯಲ್ಲಿ ತನ್ನನ್ನು ತಾನು ರೂಪಿಸಬಲ್ಲಳು.

ತನ್ನತನ ಎಂಬುದನ್ನು ಒಂದೇ ಏಟಿಗೆ ತ್ಯಾಗ ಮಾಡಿ ಅವನಿಗಾಗಿ ಅರ್ಪಿಸಿಕೊಳ್ಳಬಲ್ಲಳು. ಅವನಿಲ್ಲದಿದ್ದರೆ ಅವಳದ್ದೇ ತನವನ್ನು ರೂಪಿಸಿ ಅಸದೃಶವಾಗಿ ಬೆಳೆಯಲೂ ಬಲ್ಲಳು.

ಅಂಥ ಹುಡುಗಿ ಪ್ರತಿ ಹುಡುಗನ ಬದುಕಿನಲ್ಲಿ ಯಾವ್ಯಾವ ರೀತಿ ಹಾದುಹೋಗಬಲ್ಲಳೋ ?

ಪ್ರತಿ ಆಗಮನದಲ್ಲೂ ಒಂದು ಹಿಡಿ ಪ್ರೀತಿ, ಒಂದು ಮುಷ್ಠಿ ಕ್ಷಮೆ ಹೊತ್ತು ಬರುವಳು.

ನಿರ್ಗಮನದ ಕ್ಷಣಕ್ಕೆ ಆಕೆಯ ಮೈ ಮನ ತುಂಬಾ ವಿರಹ.

ಪ್ರೀತಿ ಚೆಲ್ಲಿ ಹೋದ ದುಃಖ, ಕ್ಷಮೆಯ ಹೊದಿಕೆಯೊಳಗೆ ಅವಳ ಭಾವನೆಗಳ ಹರಹು.ಹುಡುಗಿಯ ಸಂಕುಲದ ಮೇಲೆ ಹುಡುಗ ಸಂಕುಲದ ಬಾಸಿಸಂ ಕಾಲಾಂತರದಿಂದ ಬಂದಿದೆ. ಪ್ರಕೃತಿ, ವಿeನ, ಸಮಾಜದ ರೀತಿ ನೀತಿಗಳು ಈ ಬಾಸಿಸಂನ್ನು ಸೃಷ್ಟಿಸಿವೆ, ಆದೇಶಿಸಿವೆ, ಪಾಲಿಸುತ್ತಾ ಬಂದಿವೆ.

ಹುಡುಗಿ ಯುಗಯುಗಗಳಿಂದ ಅಷ್ಟನ್ನೂ ಸಹಿಸಿಕೊಂಡಿದ್ದಾಳೆ.

ಫೆಮಿನಾ, ಫೆಮಿನಿಸಂ, ಫೆಮಿಸಿಸ್ಟ್ ಎಲ್ಲ ಆಗಿಯೂ, ಆಗದೇ ಉಳಿದ ಮನಸ್ಸು ಶಾಶ್ವತವಾಗಿರುವ ಅವಳ ಲಹರಿ ಅನನ್ಯವೂ ಹೌದು, ಅಪ್ರತಿಮವೂ ಹೌದು.

ಹುಡುಗಿ ಎಂಬ ಭಾವ ಜೀವಿ, ಭಾವನಾ ಜೀವಿ ಅಥವಾ ಜೀವನವನ್ನೇ ಭಾವನೆಗಳ ರೂಪವಾಗಿ ಸ್ವೀಕರಿಸಿದ ಜೀವಿ ಇತಿಹಾಸದುದ್ದಕ್ಕೂ ತನ್ನ ನಿಲುವನ್ನು ದಾಖಲಿಸಿದ್ದಾಳೆ.

ಕಥೆ, ಕಾವ್ಯ, ಪುರಾಣ, ಮಹಾಕಾವ್ಯಗಳಲ್ಲಿ, ಅರಸೊತ್ತಿಗೆಗಳ ಪುಟಗಳಲ್ಲಿ, ಜಾನಪದ ತಂತುಗಳಲ್ಲಿ ಹುಡುಗಿಯ ಪ್ರೀತಿ, ಹಂಬಲ, ಕ್ಷಮೆ, ಕಾಯುವಿಕೆ ಪ್ರತಿ ಪಾತ್ರಗಳಲ್ಲಿ ದಾಖಲಾಗಿದೆ.

ಆಕೆ ನೊರೆಹನಿಗಳ ನಗೆಯ ತೊಟ್ಟು, ತೆರೆತೆರೆಗಳ ಮುತ್ತನಿಟ್ಟು, ತಿಳಿಯದಂತೆ ಹರಿಯುತಿಹ ಗಮನೆ !

ಆಕೆ ಮೌನದ ಗಿರಿ ದುರ್ಗದಲ್ಲಿ, ನಿಂತದೇನೋ ಜಾನಿಸುವಳು,

ಮನದೊಳೇನೋ ಧೇನಿಸುವ ತಪಸ್ವಿ.

ಇಹಪರಗಳ ಹೊಂಬೆಟ್ಟ ಜೋಡಿಗೆ, ನಡುವೆ ತೂಗುವ ಹೂವಿನ ಹಾಸಿಗೆ, ಇದೆ ಇದೆ ಸೇತುವೆ ಇಲ್ಲಿಂದಿಲ್ಲಿಗೆ ಎಂಬ ಲವಲವಿಕೆಗಾರ್ತಿ !

ಅಂಥ ಒಳ್ಳೆಯ ಮನಸ್ಸಿನ ಹುಡುಗಿಯನ್ನು ಬೇಂದ್ರೆ "ಉಗುರ್‍ಗೆಂಪಿನ ಹುಡುಗಿ, ಉಸಿರ್‍ಗಂಪಿನ ಹುಡುಗಿ’ ಎಂದು ಒಂದೆಡೆ ಬಣ್ಣಿಸಿರುವುದು ಅಪ್ರತಿಮವಾದದ್ದು.

ಅಂತೊಬ್ಬಳು ಉಸಿರು ಕಂಪಿನ ಹುಡುಗಿ ತನ್ನ ಗೆಳೆಯನೆದುರು ಕುಳಿತು, ಅವನ ಕಣ್ಣೊಳಗೆ ಕಣ್ಣನಿಟ್ಟು, ಅವನ ಹೃದಯ ಕಾವ್ಯವಾಗುತ್ತಾಳೆ. ಆ ಹುಡುಗಿ ತಾನು ಬದಲಾಯಿಸಿಕೊಂಡ ಹೇರ್‌ಸ್ಟೈಲ್, ಹೊಸತಾಗಿ ಧರಿಸಿದ ಚೂಡಿ, ಬೆರಳ ಬುಡದ ಪುಟ್ಟ ಉಂಗುರ, ಪಾಕೇಟಿನೊಳಗಿಟ್ಟ ಹವಳದ ಕಲ್ಲನ್ನು ಹುಡುಗ ನೋಡಿ ಕೊಂಡಾಡುವನೆಂದು ಹಂಬಲಿಸುತ್ತಾಳೆ.

ಆ ದಡ್ಡ ಅಷ್ಟೆಲ್ಲಾ ಕಾಣದಿದ್ದಾಗ ಕೊಂಚವೂ ವಿಚಲಿತಳಾಗದೆ, ಹೊರಟು ಹೋಗುವ ಮುನ್ನ "ನನ್ನ ಹೇರ್‌ಸ್ಟೈಲ್ ನೋಡಿದೆಯಾ’ ಎಂದು ತಲೆ ಕುಲಕಿಸಿ ನಕ್ಕು ಹೋಗುತ್ತಾಳೆ.

ಆ ಪಲುಕಿನಲ್ಲೇ ಅದೆಂಥಾ ಆಧ್ಯಾತ್ಮ್ಯ !

20070428

ಬಿಸಿಲೇ ನಿನಗೆ ಶರಣು ಎಂಬೆ.ಮಳೆಯ ಮೇಲಿನ ಮಮತೆಯಾಗಲಿ, ಚಳಿ ಬಗೆಗಿನ ಬೆಚ್ಚಗಿನ ಪ್ರೀತಿಯಾಗಲಿ ಬಿಸಿಲಿನ ಬಗೆಗೆ ನಮಗೆ ಹುಟ್ಟುವುದಿಲ್ಲ.

ಅದು ಯಾಕೆ ?

ಬಳ್ಳಾರಿಯ ಧಗೆ, ರಾಜಸ್ಥಾನದ ಗರಂ, ಕರಾವಳಿಯ ಬಿಸಿಗಾಳಿ ಎಂದೆಲ್ಲಾ ಲಬೋಲಬೋ ಎನ್ನುತ್ತೇವೆ.

ಆಗುಂಬೆಯ ಮಳೆ, ಮಡಿಕೇರಿಯ ಛಳಿ ಎಂದಾಗ ಉಂಟಾಗುವ ಅವ್ಯಕ್ತ ಸ್ಪಂದನ ಈ ಬಿಸಿಲ ಝಳಕ್ಕೆ ಬರೋದೇ ಇಲ್ಲ.

ಬಿಸಿಲಿದೇನು ತಪ್ಪೂ?

ವರ್ಷವೊಂದನ್ನು ಮೂರಾಗಿ ಸೀಳಿ ಮಡಗಿದರೆ ಸರಿಪಾಲು ಬೇಸಗೆಯದ್ದೂ ಇದೆಯಲ್ಲಾ? ಕಾಲ ತೆಕ್ಕೆಯಲ್ಲಿ ಅದರ ಬಿಗುವು ಸಹಜವಾಗಿಯೇ ಇರಬೇಕಲ್ಲಾ?ಆದರೂ ನಾವೇಕೆ ಬಿಸಿಲನ್ನು ಪ್ರೀತಿಸಲ್ಲ ? ಅದಕ್ಕೇಕೆ ನಮ್ಮ ಪ್ರೀತಿಗೆಸಲ್ಲ ?

ಬಿಸಿಲನ್ನು ಪ್ರೀತಿಸುವ ಒಂದು ಮನಸ್ಸು ಹುಟ್ಟಬೇಕು. ಆಗ ನೋಡಿ ಬದುಕಿನ ಪೂರ್ಣತ್ವಕ್ಕೆ ನಾವು ಕಾಲು ಇಡೋದು.

ಗಮನಿಸಿ, ಭರ್ಜರಿ ಬಿಸಿಲು, ತಲೆ ಹುರಿಗಾವಲಿಯಾಗುವಂಥ ಬಿಸಿಲು. ಮೈ ತುಂಬಾ ಬೆವರು. ಅಷ್ಟರಲ್ಲಿ ಒಂದು ಮರದ ನೆರಳು ನಿಮ್ಮನ್ನು ಸ್ವಾಗತಿಸುತ್ತದೆ. ಬಿಸಿಲು ದಾಟಿ ನೆರಳ ಹಿಡಿದ ನಿಮಗೆ ಜೀವ ಚೈತನ್ಯದಲ್ಲಿ ಹೊಸ ನೆತ್ತರುಕುಕ್ಕಿ ಬಂದ ಅನುಭವ.

ಅದು ಬಿಟ್ಟಾಕಿ.

ಧಗೆಯ ಬಗೆಯಲ್ಲಿ ಬಸವಳಿದ ನಿಮ್ಮ ಅಂಗೈಯಲ್ಲೊಂದು ಐಸ್‌ತುಂಡು ಇಟ್ಟರೆನ್ನಿ. ಮೈ ತಂಪಾಗುವ ಮುನ್ನವೇ ಮನಸ್ಸು ಮುದಗೊಂಡಾಯಿತು.ಗಬ್ಬು ಬಿಸಿಲಿನ ಹಬ್ಬಿನಾಚೆಗೆ ಒಂದು ಕುಳುರು ಗಾಳಿ ಶರಟಿನೊಳಗೆ ಸೂಸಿಕೊಂಡರೆ ಕಣ್ಣು ತಾನೇ ತಾನಾಗಿ ಮುಚ್ಚಿ ಸುಖವನ್ನು ಆಸ್ವಾದಿಸುತ್ತದೆ.

ನೆತ್ತಿಯ ಮೇಲೆ ಬಿಸಿಲು ರೂಬುರೂಬಾಗಿ ಸುರಿದ ಹೊತ್ತಲ್ಲೇ ನೀಲ ನೀರಿನ ಕೊಳಕ್ಕೆ ಧುಮುಕಿಕೊಂಡರೆ ಅಥವಾ ತೊರೆಯ ತುಂತುರುವಿಗೆ ತಲೆ ಇಟ್ಟರೆ ಆಹಾ ಅದು ಸ್ವರ್ಗ ಸುಖದ ನಡಿಗೆ.

ಇಷ್ಟೂ ಅಮೃತತ್ವ ಪಡೆಯುವುದು ಆ ಬಿಸಿಲ ಕೃಪೆಯಿಂದ.

ಥಂಡಿ ಹಿಡಿದ ಸೋನೆ ಮಳೆಗೆ, ಮರಗಟ್ಟಿಸುವ ಚಳಿಯ ವರ್ತನೆಗೆ ಹೋಲಿಸಿದರೆ ಬಿಸಿಲ ಬಿಸಿ ಅಪ್ಯಾಯಮಾನ. ಬಿಸಿಲಿನ ಮೂಲಕವೇ ಮಳೆ, ಚಳಿಯ ತೆಕ್ಕೆಗೆ ನಮ್ಮ ಪಯಣ.

ಬಿಸಿಲೇ ಇಲ್ಲದ ದೇಶಗಳಲ್ಲಿ ನೋಡಿ. ಒಂದು ಸೊಗಸಾದ ಮಾವಿನ ಹಣ್ಣು ಕೂಡಾ ಸೃಷ್ಟಿಸಲಾರದ ಮಣ್ಣು, ಮನುಷ್ಯರು ಅವರು. ಗರುಕೆ ಹುಲ್ಲು ಕೂಡಾ ಬೆಳೆಸಲಾರದ ಮಂದಿ ಬಿಸಿಲೇ ಇಲ್ಲದ ನೆಲದಲ್ಲಿ ಬರಡು ಜೀವಿಗಳು.

ಒಂದು ಲೋಟಾ ನೀರು, ಒಂದು ಬಟ್ಟಲು ಹಾಲು ಬಿಸಿಲಿಲ್ಲದೆ ಒದಗೀತು ಹೇಗೆ ?

ಭತ್ತದ ತೆನೆ ಅರಳುವುದು, ಸಮುದ್ರ ಬಾನಿಗೆ ನೀರ ಹನಿಗಳನ್ನು ಅಟ್ಟಿ ಮಳೆಯ ಕಟ್ಟುವುದು ಬಿಸಿಲ ಕೃಪೆಯಿಂದಲೇ ಅಲ್ಲವೇ ?ನಿಮಗೆ ಗೊತ್ತಾ, ಬಿಸಿಲ ದೇಶಗಳಲ್ಲೇ ಪ್ರೀತಿಗೊಂದು ಸಖತ್ ನೆಲೆಗಟ್ಟು. ಐಸ್‌ಲ್ಯಾಂಡ್‌ಗಳಲ್ಲಿ ದೇಹದ ಕಾಮನೆಗಳೆಲ್ಲಾ ಫರ್‌ಕೋಟುಗಳೊಳಗೆ ಲೊಳಲೊಟ್ಟೆಯಾಗುತ್ತದೆ.

ಬಿಸಿಲ ನಾಡಿನಲ್ಲಿ ಪ್ರೀತಿ ಹದವಾಗಿ, ಬಯಕೆ ಬೆತ್ತಲಾಗಿ, ಬೆವರು ಮುತ್ತಾಗಿ ಪ್ರೇಮ ಬದುಕಿನ ಆಖ್ಯಾಯಿಕೆ ಬರೆಯುತ್ತದೆ.

............... ಬಿಸಿಲೇ ನಿನಗೆ ಶರಣು ಶರಣು ಕಣೋ.

20070424

ಬಳ್ಳ ಇನ್ನು ಬರಲ್ಲ.


ಈ ಬಾರಿಯೂ ಬಳ್ಳ ಮಾಸ್ಟರರ ಮನೆಗೆ ಹೋದಾಗ ಅವರಿರಲಿಲ್ಲ.
ತಣ್ಣಗೆ ಒಳಗಿನ ಚಾವಡಿಯಲ್ಲಿ ಮಲಗಿದ್ದರು.
ತಲೆ ಮೇಲೆ ಎರಡು ದೀಪಗಳು ಉರಿಯುತ್ತಿದ್ದವು.
ಅವರ ಮನೆ ತುಂಬಾ ನಾನು ನಿರೀಕ್ಷಿಸಿದ ಮೌನ ಹರಡಿತ್ತು.
ತಮ್ಮ ಬಂದು ಮುಖದ ಸೆರೆ ಸರಿಸಿದ.ನನಗೆ ಅಚ್ಚರಿ.ನಾನು ಅಪರೂಪಕ್ಕೆ ಮಾತ್ರಾ ಕಾಣುತ್ತಿದ್ದ ನಗೆ ಮುಖದಲ್ಲಿ ಹರಡಿತ್ತು.ಅದೇ ನೀಟಾದ ಕ್ರಾಪು.
ಪೀಚು ದೇಹದ ಈ ಕುಳ್ಳ ನಮ್ಮ ಕಾಲೇಜಿಗೆ ಇಂಗ್ಲೀಷು ಮೇಸ್ಟ್ರಾಗಿ ಬಂದ ಕೆಲವೇ ದಿನಗಳಲ್ಲಿ ನಮ್ಮ ಫ್ರೆಂಡ್ ಆದರು.ಯಾವ ಆಕ್ರೋಶ,ಸಿಟ್ಟು, ಬಂಡಾಯದ ಸ್ಪೋಟಗಳಿಲ್ಲದ ,ಹಪಿಹಪಿಗಳಿಲ್ಲದ ಸಹಜ ಪ್ರೊಫೆಸ್ಸರು.ಎರಡು ವರ್ಷಗಳ ಕಾಲ ನಮ್ಮನ್ನು ಓದಿಸುತ್ತಾ ,ಬೋಧಿಸುತ್ತಾ ಹೊಸ ಹಾದಿಯಲ್ಲಿ ಕರೆದೊಯ್ದಿದ್ದರು.ಎಂದೂ ಆರ್ಭಟೆ ಕೊಟ್ಟವರಲ್ಲ. ಸಾಮಾನ್ಯವಾಗಿ ಪ್ರೊಫೆಸ್ಸರುಗಳಿಗಿರೋ ಹುಂಬತನ,ತೆವಲು, ತಿಳಿಗೇಡಿ ಬುದ್ದಿ ಯಾವುದೂ ಅವರಿಗಿರಲಿಲ್ಲ.ಹುಡುಗಿಯರನ್ನು ಎಂದೂ ಹತ್ತಿರಕ್ಕೆ ಮಾಡಿಕೊಂಡವರಲ್ಲ.ಸಲುಗೆ ಅಂತ ಇದ್ದದ್ದು ನಮ್ಮ ನಾಲ್ಕೈದು ಜನರ ಬಳಿ ಮಾತ್ರಾ.
ಸೂಡೆಂಟುಗಳಿಗೆ ಹಾಗ್ಮಾಡು,ಹೀಗ್ಮಾಡು, ಅಲ್ಲಿ ನೋಡು, ಇಲ್ಲಿ ಕಲಿ,ಆ ಗುರಿ, ಈ ರೀತಿ ..ಎಂದು ಹೇಳಲೇಇಲ್ಲಾ. ನೀನು ನಿನ್ನಿಷ್ಟ ..ನಿನಗೆ ಅನಿಸಿದ ಹಾಗೇ ಇದ್ದರಾಯಿತು..ಎನ್ನುತ್ತಿದ್ದರು.
ಅವರೂ ಹಾಗೇ ಬದುಕಿದರು.ಅವರದ್ದು ಸಹಮತ ನಿಲವು.ಅದೇ ಮನಸ್ಸು.ಯಾವುದನ್ನೂ ವಿರೋಧಿಸದೇ ಇರೋ ಸ್ಥಿತಿ.ಎಲ್ಲವನ್ನೂ ಸ್ವೀಕರಿಸುತ್ತಾ ಬದುಕಿದರು.ಪ್ರತಿಯೊಂದನ್ನೂ ಕಾತರಿಸಿದ್ದು ಮಾತ್ರಾ ನಿಜ.
ರೋಸಮ್ಮ ಳನ್ನು ಮದುವೆಯಾದಾಗ ಯಾರನ್ನೂ ಧಿಕ್ಕ್ರಿಸದಂತೆ ನೋಡಿಕೊಂಡರು.ಅವಳನ್ನು ಬ್ರಾಹ್ಮಣೀಕರಣಗೊಳಿಸಿ ಕೊಲ್ಲೂರಲ್ಲಿ ಸಾಂಪ್ರದಾಯಿಕವಾಗಿಯೇ ಮದುವೆಯಾದದ್ದು ಅವರ ಸಹಮತ ಮನಸಿಗೆ ಸಾಕ್ಷಿ.ಮದುವೆಯಾದ ಮೇಲೂ ಅಪ್ಪ ಅಕ್ಕ ತಂಗಿ ತಮ್ಮ ಮಾವಭಾವಂದಿರನ್ನು ಜತೆಗಿಟ್ಟುಕೊಂಡರು ಎಂಬುದು ಅವರಲ್ಲಿ ಎಂದೂ ಬಂಡಾಯ,ಆರ್ಭಟಗಳಿರಲಿಲ್ಲ ಎಂಬುದಕ್ಕೆ ಸಾಕ್ಷಿ.
ಆದರೆ ಮದುವೆ ಮುಗಿದೊಡನೆ ಜನಿವಾರ ಕಿತ್ತೆಸೆದರು.ಅದು ಯಾವುದಕ್ಕೆ ಪ್ರತೀಕಾರವೋ ಕಾಣೆ.
ರೋಸಮ್ಮ ಹೊರಟುಹೋದಳು.ಆಮೇಲೆ ಇನ್ನೊಂದು ಮದುವೆಯಾದರು.ಸಂಸಾರದಲ್ಲಿ ಶೃತಿ ಮೂಡಿಸಿದರು.ಜನಿವಾರ ಮತ್ತೆ ಮೈಯಲ್ಲಿ ಕಾಣಿಸಿಕೊಂಡಿತು.ಮಗನಿಗೂ ಜನಿವಾರ ಹಾಕಿದರು.
ಎರಡಲ್ಲ,ಮೂರು ಕಡೆ ಭೂಮಿ ಮಾರಿ ಹೋಗಿ ನೆಲೆ ನಿಲ್ಲಲು ಯತ್ನಿಸಿದರು.ಕೌಡಿಚ್ಚಾರಿನಲ್ಲಿ ನೀರಿಲ್ಲದಿದ್ದರೂ ಅಡಿಕೆ ತೋಟ ಮಾಡಿದರು.ಅದು ಬರಡಾದಾಗ ನೀರು ಹುಡುಕಿದರು.ಸಿಗದಾಗ ಅಡಿಕೆ ಬಿಟ್ಟು ಬೇರೇನೋ ಮಾಡಬೇಕೆಂದು ಕಾತರಿಸುತ್ತಿದ್ದರು.ಅವರಿಗೆ ಮುಂದೊಂದು ದಿನ ವೃದ್ಧಾಶ್ರಮ ಕಟ್ಟಿಸುವ ಬಯಕೆ ಇತ್ತು. ಅದಕ್ಕಾಗಿ ಏನೇನೋ ಪ್ಲಾನ್ ಮಾಡುತ್ತಿದ್ದರು.ಎಷ್ಟೋ ವರ್ಷಗಳಿಂದ ಕಾರು ಖರೀದಿಸುವ ಮಾತನಾಡುತ್ತಿದ್ದರು.
ಕೊನೆಗೂ ಹಳೆಯದೇ ಸತ್ಯ,ಹೊಸತೆಲ್ಲಾ ಸುಳ್ಳು ಎಂದು ಅವರು ಅನುಭವಿಸಿಯೇ ಕಂಡಿದ್ದರು.
ನಿನ್ನೆ ರಾತ್ರಿ ಒಂದು ವಿಲಕ್ಷಣ ಧ್ವನಿ ಹೊರಡಿಸಿ ಹೊರಟು ಹೋಗುವ ಮುನ್ನ ಯಾವುದೋ ನೋಟ್ಸ್ ಮಾಡಿಕೊಂಡಿರಬೇಕು. ಆ ಒಂದು ಬಿಳಿ ಹಾಳೆ ಅವರ ಪಕ್ಕ ಬಿದ್ದಿತ್ತು.ಏನೆಲ್ಲಾ ಬರೆಯಬೇಕೆಂಬ ಉತ್ಸಾಹ ಅವರಲ್ಲಿ ಇತ್ತು.ಯಾವುದನ್ನೂ ಪೂರ್ತಿ ಬರೆದವರಲ್ಲ. ಹಾಗೇ ಯಾವುದನ್ನೂ ಪೂರ್ತಿ ಮಾಡಿದವರೂ ಅಲ್ಲ.ಈಗ ನೋಡಿದರೆ ಈ ಮನುಷ್ಯ ಬದುಕನ್ನೇ ಪೂರ್ತಿ ಮಾಡಲಿಲ್ಲ..!!!ರೋಸಮ್ಮ ಸತ್ತಾಗ ನನ್ನನು ಕಂಡು" ಎಂಥಾ ಮಾರಾಯಾ..ಇದು ಸ್ಟೇಂಜರ್ ದಾನ್ ಫಿಕ್ಷನ್ ಆಯ್ತಲ್ಲಾ "ಎಂದಿದ್ದರು. ಈಗ ಅವರ ಸಾವೂ ಹಾಗೇ ಆಯಿತು.
ಎಲ್ಲಾ ಬಗೆಯಲ್ಲಿ ಸಾವಿರಾರು ಆಪ್ತ ವಿದ್ಯಾರ್ಥಿಗಳನ್ನು ಪಡೆದಿದ್ದ ಬಳ್ಳ ಮಾಸ್ಟ್ರು ಸತ್ತು ಬೂದಿಯಾಗುವ ತನಕ ಯಾವ ವಿದ್ಯಾರ್ಥಿಯನ್ನೂ ಹತ್ತಿರ ಸೇರಿಸಲಿಲ್ಲ.ಏಕೆಂದರೆ ಎಲ್ಲರಿಗೂ ಎಕ್ಸಾಂ ಇತ್ತು.
ಸಹಜತೆ ಎಂದರೆ ಅದು .ಅವರಿಗೂ ಅದೇ ಇಷ್ಟ.
ಅವರ ವಿದ್ಯಾರ್ಥಿಗಳ ಪೈಕಿ ಅಲ್ಲಿ ಇದ್ದವ ನಾನೊಬ್ಬನೇ.
......ಇಷ್ಟಕ್ಕೂ ನಾನು ಅವರಿಗೆ ವಿದ್ಯಾರ್ಥಿ ಮಾತ್ರಾ ಆಗಿರಲಿಲ್ಲ.

20070423

ಮೈಲ್‌ಸ್ಟೋನ್


ಸಂಜೀವ ನಾಯಕ್ ನಮ್ಮೂರಿಗೆ ಪೊಲೀಸ್ ಆಫೀಸರಾಗಿ ಬಂದ ಸಮಯದಲ್ಲಿ ನಮ್ಮ ರಂಜನ ಅವರ ಕುರಿತು ತುಂಬಾ ಹೇಳಿದ್ದ. ಆದರೆ ಈ ಪೊಲೀಸು, ಅವರ ಅನಗತ್ಯ ದರ್ಪ,ತೆವಲು, ಹುಂಬತನ ಎಲ್ಲಾ ನೋಡಿದ್ದ ನನಗೆ ಸಂಜೀವ ನಾಯಕ ಕೂಡಾ ಹಾಗೇ ಒಂದು ಕ್ಯಾರೆಕ್ಟರ್ ಇರಬಹುದು ಅನಿಸಿತ್ತು .
ನಾನು ಠಾಣೆ ಕಡೆ ಹೋಗಲಿಲ್ಲ.
ಅಸಲಿಗೆ ಹೊಸ ಪೊಲೀಸರನ್ನು ಪರಿಚಯ ಮಾಡಿಕೊಳ್ಳುವ ಚಾಳಿ ನನ್ನದಾಗಿರಲಿಲ್ಲ.
ನಮ್ಮ ಉಪ್ರಂಗಡಿಯಲ್ಲಿ ಪೊಲೀಸರ ಸಂಗ ಮೂಲಕ ಸಾಕ್ಷಾತ್ ಶಿವ ಸಾನ್ನಿಧ್ಯ ಪಡೆದೆವು ಎಂದೇ ಭಾವಿಸುವ ದೊಡ್ಡ ತಂಡವೇ ಇದೆ.ಅವರಿಗೆ ಪೊಲೀಸ್ ಆಫೀಸರ ಜೊತೆ ಕಾಫಿ ಕುಡಿದೆವು ಎಂದರೆ ಅದು ಅಮೃತ ಪಾನ ಮಾಡಿದಷ್ಟೇ ಮಹತ್ವದ ಸಂಗತಿ .ಇನ್ನು ಸಿಗರೇಟು ಸೇದುವ ಮಟ್ಟಕ್ಕೆ ತಲುಪಿದರು ಅಂದರೆ ಅಲ್ಲಿಗೆ ಇಡೀ ಉಪ್ರಂಗಡಿಯೇ ಅವರ ಸ್ವಾಧೀನಕ್ಕೆ ಬಂತು ಎಂಬ ತೃಪ್ತಿ.ಇಂಥವರು ಠಾಣೆಯ ಜಗುಲಿಯಲ್ಲಿ ಕುಳಿತು ಅವರಿವರ ಜಗಳಗಳನ್ನು ಅಲ್ಲೇ ಪಂಚಾತಿಕೆ ಮಾಡಿಸಿ ,ಅಷ್ಟಿಷ್ಟು ಕಬಳಿಸಿ , ಪೊಲೀಸರಿಗೂ ಹಂಚಿ ತಾವೂ ತಿಂದೂ ಜೀವನ ಕಳೆಯುತ್ತಾರೆ.
ಉಪ್ರಂಗಡಿಯ ಜನ ಈ ಪೊಲೀಸ್ ಠಾಣೆಯ ಏಜಂಟರನ್ನು ಸ್ವಲ್ಪ ಅನುಮಾನ, ಇನ್ನೂ ಸ್ವಲ್ಪ ಹೆದರಿಕೆಯಿಂದ ನೊಡುತ್ತಾ ,ಅವರಿಗೆ ಅನಗತ್ಯ ಗೌರವ ಕೊಡುತ್ತಾರೆ. ಹೇಗೆ ಹೇಳೋದು, ನಾಳೆ ನಮ್ಮ ಟೈಮು ಚೆನ್ನಾಗಿರದಿದ್ದಾಗ, ಏನಾದರೂ ಅನಾಹುತ ಆಗಿ ಠಾಣೆ ಮೆಟ್ಟಿಲು ತುಳಿವಂತಾದರೆ ಆಗ ಈ ಏಜಂಟರೇ ಬೇಕಲ್ಲ ಎಂಬ ಪೂರ್ವಭಾವೀ ಮುನ್ನೆಚ್ಚರಿಕೆಯಿಂದ ಈ ಕ್ರಮ ಅವರು ರೂಡಿಸಿಕೊಂಡಿದ್ದಾರೆ.
ಸಂಜೀವ ನಾಯಕ ಠಾಣಾಧಿಕಾರಿಯಾಗಿ ಬಂದ ಮೇಲೆ ಈ ಏಜಂಟರೆಲ್ಲಾ ಓಡಿಹೋಗಿದ್ದಾರೆ ಎಂದು ರಂಜನ ಮನೆಗೆ ಬಂದವನು ಹೇಳಿದ.ನನಗೆ ಆಗ ಅನುಮಾನ ಇತ್ತು.ಇದೆಲ್ಲಾ "ಮಾಮೂಲಿ" ಎಂದು ನಾನು ಪನ್ ಮಾಡಿದೆ.
ರಂಜನ ಎಲ್ಲರ ಮಾಮೂಲಿಯಂತೆ ಅಲ್ಲ ಇದು.ಉಳಿದವರು ತಮ್ಮ ಮಾಮೂಲಿ ಫಿಕ್ಸ್ ಆಗೋ ತನಕ ಹಾವ್ ಹೂವ್ ಅಂತಾರೆ,ಒಮ್ಮೆ ಸೆಟ್ಟಿಂಗು ಆಯಿತೆಂದ ಮೇಲೆ ಎಲ್ಲರನ್ನೂ ಮತ್ತೆ ತಲೆಯಲ್ಲೇ ಕೂರಿಸುತ್ತಾರೆ , ತಲೆ ಮೇಲೆ ಏನು ಠಾಣೆಯಲ್ಲೇ ಚಾಪೆ ತಲೆದಿಂಬು ಹಾಸಿ ಮಲಗಿಸಲೂ ಈ ಆಫೀಸರುಗಳು ಮುಂದಾಗುತ್ತಾರೆ ಎಂದ. ಆದರೆ ಸಂಜೀವ ನಾಯಕ ಸ್ವಲ್ಪ ಡಿಫರೆಂಟೆಂದೂ,ಅವನಿಗೆ ಇಂಥ ಏಜಂಟರ ಉಸಾಬರಿ ಇಲ್ಲವೆಂದೂ ಹೇಳಿ ಆತ ಮೂಡಿಗೆರೆ ,ಸುಳ್ಯ,ಪುತ್ತೂರು,ಬ್ರಹ್ಮಾವರ, ಬೆಂಗಳೂರು ಸಿಸಿಬಿಗಳೇ ಮುಂತಾಗಿ ಹಲವೆಡೆ ಮಾಡಿದ ಸಾಹಸಗಳ ವರದಿ ಒಪ್ಪಿಸಿದ.ನನಗೂ ಯಾಕೋ ನೋಡೋಣ ಅನಿಸಿತು.
ಅಂದು ಸಂಜೆ ಠಾಣೆ ಒಳಗೆ ಹೋದೆ.ಸಂಜೀವ ನಾಯಕ ಒಳಗೆ ಕುಳಿತ್ತಿದ್ದ.ಇಡೀ ಕುರ್ಚಿಯೊಳಗೆ ತನ್ನನ್ನು ಹುದುಗಿಸಿ ಬರೀ ತಲೆ ಮಾತ್ರಾ ಹೊರಗೆ ಎತ್ತಿ ಯಾವುದೋ ಹಿಂದಿ ಹಾಡನ್ನು ದೊಡ್ಡದಾಗಿ ಹಾಡುತ್ತಿದ್ದ.ನನ್ನನ್ನು ಕಂಡವನೆ ಸರಕ್ಕನೇ ಎದ್ದು ಬನ್ನಿ ಬನ್ನಿ ನಿಮಗಾಗಿ ಕಾಯುತ್ತಾಇದ್ದೆ ಎಂದ. ನನಗೆ ಅಚ್ಚರಿಯೂ ಅನುಮಾನವೂ ಒಮ್ಮೆಗೇ ಆಯಿತು.ಯಾಕೆ ಕಾಯಬೇಕು ಈ ಪೊಲೀಸು ತಲೆ ವರ್ಕು ಮಾಡ್ತಾ ಇರಬಹುದಾ?ಬೇಡವಾದವರನ್ನು ಈ ರೀತಿಯ ಸ್ವಾಗತದಿಂದಲೇ ಹೊರಗೆ ಓಡಿಸುತ್ತಾವೆ ಈ ಪೊಲೀಸರೆಂಬ ಕಾಕಿ ಗೂಂಡಾಗಳು ಎಂಬುದು ನನಗೆ ಚೆನ್ನಾಗಿ ಗೊತ್ತಿತ್ತು.ನಾನು ನಕ್ಕೆ. ನನ್ನ ಪರಿಚಯವೇ ಇಲ್ಲಾ ನಿಮಗೆ ,ಕಾಯತ್ತಾ ಇದ್ದೆ ಅಂದರೆ ಏನರ್ಥ ಎಂದೆ.ಸಂಜೀವ ನಾಯಕನೂ ತನ್ನ ಉಬ್ಬು ಹಲ್ಲುಗಳನ್ನು ಬಿಚ್ಚಿ ನಕ್ಕ.ನೀವು ಅಂದುಕೊಂಡಿರಬಹುದು ಈ ಪೊಲೀಸರು ಸುಮ್ಮಗೇ ಢೋಂಗಿ ಮಾಡ್ತಾ ಇದ್ದಾರೆ ಅಂತ. ಆದರೆ ಸಂಜೀವಾ ಹೀಗಲ್ಲಾ ಮಾಡೋನಲ್ಲ,ಇವ ತುಂಬಾ ಕಲ್ಚರ್‍ಡ್ ಆಫೀಸ್ಸರು.ಡೋಂಟ್ ಮಿಸ್ಟೇಕ್ ಮಿ ..ಎಂದ. ಅವನ ರೀತಿ ಯಾಕೋ ನನಗೆ ಆಪ್ಯಾಯಮಾನ ಎನಿಸಿತು.ನಾನು ಏನು ಹೇಳಲಿಲ್ಲ.
ಸಂಜೀವ ನಾಯಕನೇ ಶುರು ಮಾಡಿದ. ಆ ಮಾತು ಈ ಮಾತು ಅಂತ ಯಾಕೆ ಸೀದಾ ಒಂದು ಸಂಗತಿ ಕೇಳುತ್ತೇನೆ ನಿಮಗೆ ಕಂಚಿಕಲ್ಲಿನ ವಿಷಯ ಗೊತ್ತಿದ್ದರೆ ಹೇಳಿ.ನನ್ನ ಈ ಊರಿನ ಸರ್ವಿಸಿನಲ್ಲಿ ಕಂಚಿಕಲ್ಲಿನ ರಹಸ್ಯ ಬಟ್ಟಾ ಬಯಲಾಗಬೇಕು,ನೀವು ಸಪ್ಪೋರ್ಟು ಮಾಡಿದರೆ ಸಾಕು.
ನನಗೆ ಎಲ್ಲವೂ ಅಚಾನಕ ಹಾಗೂ ಅಯೋಮಯ ಎಂದು ಕಾಣತೊಡಗಿತು.ನಾನು ಯಾರೆಂದು ಹೇಳುವ ಮೊದಲೇ ಈ ಮನುಷ್ಯ ಸೀದಾ ಕಂಚಿಕಲ್ಲಿನ ವಿಷಯಕ್ಕೇ ಬರುತ್ತಿದ್ದಾನೆ ಎಂದರೆ ನನ್ನ ಮತ್ತು ಕಂಚಿಕಲ್ಲಿನ ಸಂಬಂಧ ಇವನಿಗೆ ಯಾರು ಹೇಳಿದ್ದಾರೆ,ಮತ್ತು ಅದು ನಾನೇ ಅಂತ ಇವನಿಗೆ ಹೇಗೆ ಗೊತ್ತಾಗಿದೆ..? ಎಂದು ಕೂಲಾಗಿ ಊಹಿಸಲು ತೊಡಗಿದೆ.
ಸಂಜೀವ ನಾಯಕ ಮಾತು ಮುಂದುವರಿಸುತ್ತ ಹೋಗುತ್ತಿದ್ದಾಗ ಒಳಗಿಂದ ರಂಜನ ಪ್ಯಾಂಟಿನ ಜಿಬ್ಬು ಎಳೆಯುತ್ತಾ, ಬೆಲ್ಟು ಸರಿಮಾಡುತ್ತ ಬರುವುದು ಕಾಣಿಸಿತು.ಸಂಜೀವ ನಾಯಕನ ಇಂಟಲಿಜೆನ್ಸು ಆಗಲೇ ನನಗೆ ಬಯಲಾಯಿತು.ರಂಜನನ ಕೆಲಸವೋ ಇದೆಲ್ಲಾ ಎಂದೆ.ರಂಜನ ತಾನೇ ಕುರ್ಚಿ ಎಳೆದು ಕೂತು,ಮತ್ತೇ ಈ ಕಂಚಿಕಲ್ಲಿನ ಬಗ್ಗೆ ನೀವೇ ಫಿಟ್ಟು ಅಂತ ನಾಯಕರಿಗೆ ಹೇಳೂದೂ, ನೀವು ಬರುವುದೂ ಸರೀಯಾಯಿತು.ನಾನು ಮೂತ್ರ ಮಾಡಿಬರುವಾಗ ನೀವಿಬ್ಬರೂ ಸಬ್ಜೆಕ್ಟಿಗೆ ಬಂದಾಗಿತ್ತುಎಂದು ವಿವರಿಸಿದ.ಆ ಮೇಲೆ ನಾವು ಮೂವರೂ ಊರಿ ಪೊಲಿಟಿಕ್ಸ್ ಮತ್ತು ಆ ಮಂದಿ, ಈ ಜನರ ಕುರಿತೇ ತುಂಬಾ ಹೊತ್ತು ಮಾತನಾಡಿ ಹೊರಟೆವು.ಕಂಚಿಕಲ್ಲು ವಿಷಯ ಅಲ್ಲ್ಗೇ ಬಾಕಿಯಾಯಿತು.ಎಲ್ಲಿಯ ತನಕ ಅಂದರೆ ಮೊನ್ನೆ ಮೊನ್ನೆ ಸಂಕ್ರಾಂತಿಯ ದಿನ ಕಂಚಿಕಲ್ಲಿನ ಬಳಿ ಮೂರು ಮಂದಿ ರಾಯಚೂರು ಹತ್ತಿ ಮಂಡಿಯ ಹುಡುಗರು ನೀರುಪಾಲಾಗುವ ತನಕವೂ..
ಭಾಗ -೨ ....
ನಾನು ಆಮೇಲೆ ಸಂಜೀವ ನಾಯಕನನ್ನು ನೋಡಲೇ ಇಲ್ಲ.ಮೊನ್ನೆ ನಮ್ಮ ಹಳೇ ದೋಸ್ತಿ ರಾಮಣ್ಣನ ಮಗಳ ಮದುವೆಯಲ್ಲಿ ಸಿಕ್ಕ ಶಶಿಧರ ಎಂದು ಗುರುತಿಸಿ,ಮಾತನಾಡಿದ ಪೊಲೀಸು ಅಧಿಕಾರಿಯೊಬ್ಬ ಅಕಸ್ಮಾತ್ ತನು ಸಂಜೀವ ನಾಯಕನ ಬ್ಯಾಚುಮೇಟು ಎಂದು ಹೇಳಿದ.ಆಗ ಕುತೂಹಲವಾಗಿ ಅವನ ಬಗಗೆ ವಿಚಾರಿಸಿದೆ.ಆಗ ಗೊತ್ತಾದ ಸಂಗತಿ ಪ್ರಕಾರ ಸಂಜೀವ ನಾಯಕ ಕೆಲಸ ಬಿಟ್ಟು ಹೋಗಿ ಹಲವು ವರ್ಷಗಳಾಗಿವೆ.ಒಮ್ಮೆ ಯಾವನೋ ಆಫೀಸರನ ಜೊತೆ ಜಗಳ ಬಂದು ಆ ಸಿಟ್ಟಿನಲ್ಲಿ ಕೆಲಸ ಬಿಟ್ಟು ಹೋದ ಆತ ಈಗ ಮಗನ ಜೊತೆ ಇಸ್ರೇಲಿನಲ್ಲಿ ಇದ್ದಾನೆ.
ಅದೇ ದಿನ ನಾನು ನನ್ನ ಪಿ ಎ ಗೆ ಹೆಳಿ ಇಸ್ರೇಲಿನ ಅವನ ಫೋನಿಗೆ ಕನೆಕ್ಟ್ ಮಾಡಿಸಿದೆ.ನನ್ನ ಪಿಎ ಒಂದು ಎಡವಟ್ಟು ಮಾಡಿದ್ದ,ಸೀದಾ ಮಿನಿಸ್ಟರ್ ಮಾತಾಡ್ತಾರೆ ಎಂದು ಹೇಳಿಬಿಟ್ಟ.ಆಗ ಸಂಜೀವ ನಾಯಕನಿಗೆ ಅನುಮಾನ ಬಂದಿರಬೇಕು,ಮಾತಾಡಲ್ಲ ಎಂದನಂತೆ.ಪಿಎ ನನ್ನ ಬಳಿ ಬಂದು , ಸಾರ್ ಅವ ಮಾತಾಡಲ್ಲಂತ ಎಂದುಬಿಟ್ಟ.ನಾನು ಆಮೆಲೆ ವಿಚಾರಿಸಿ, ನನ್ನ ಬಗ್ಗೆ ಹೇಳು ಆಮೇಲೆ ನನಗೆ ಕೊಡು ಎಂದು ವಿವರಿಸಿದ ಮೇಲೆ ಸಂಜೀವ ನಾಯಕನ ಸ್ವರ ಕೇಳಿದ್ದು.
ಸ್ಸಾರೀ ಸಾರ್..ಎಂದಿತು ಆ ಗಡಸು ದನಿ.ನಾನು ಅವನಿಗೆ ನಾನು ಪೊಲಿಟಿಕ್ಸ್‌ಗೆ ಇಳಿದದ್ದು,ಬೆಳೆದದ್ದು ,ಮಂತ್ರಿ ಆದದ್ದು ಎಲ್ಲವನ್ನೂ ವಿವರಿಸಿದೆ.ಆಗಲೇ ಸಂಜೀವನಾಯಕ "ಸಾರ್..ನಾವು ಕೊನೆಗೂ ಕಂಚಿಕಲ್ಲಿನ ಕುರಿತು ಏನೂ ಮಾಡಲೇ ಇಲ್ಲಾ" ಎಂದ.ನನಗೆ ಇತ್ತೀಚೆಗೆ ವಿಪರೀತ ಸಿಟ್ಟು ಹೇಳದೇ ಕೇಳದೆ ಚಿಮ್ಮುತ್ತದ.ಈಗಲೂ ಹಾಗೇಯೇ ಆಯಿತು ."ಏನ್ರೀ ನಾಯಕ್ ಜವಾಬ್ದಾರಿ ಇದ್ದಾಗ ಏನೂ ಮಾತಾಡದೇ,ಏನೂ ಮಾಡದೇ ಈಗ ಯಾವುದೋ ದೇಶದಲ್ಲಿ ಕುಳಿತು ಮತ್ತೆ ಅದೇ ನಾನ್‌ಸೆನ್ಸ್ ಮಾತಾಡ್ತಿದ್ದೀರಲ್ಲಾ" ಎಂದು ಖಾರವಾಗಿ ಹೇಳಿದೆ.ಫೋನ್ ಕಟ್ ಆಯಿತು.ಪಿಎಗೆ ಮತ್ತೆ ಕನೆಕ್ಟ್ ಮಾಡಬೇಡ ಎಂದು ಸೂಚಿಸಿ ಯಾವುದೋ ಮೀಟಿಂಗಿಗೆಂದು ಹೊರಬಿದ್ದೆ.
ಆ ರಾತ್ರಿ ನಾನು ತುಂಬಾ ಹೊತ್ತು ಕಂಚಿಕಲ್ಲಿನ ಕುರಿತು ನಾನೇದರೂ ಮಾಡಬಹುದಾ ಅಂತ ಯೋಚಿಸಿದೆ . ಏನು ಹೊಳೆಯಲಿಲ್ಲ.ರಂಜನನಿಗೆ ಆ ರಾತ್ರಿಯೇ ಫೋನು ಹಚ್ಚಲು ನೋಡಿದೆ, ಆದರೆ ಆ ಮನುಷ್ಯ ಮಂಜೇಶ್ವರದಲ್ಲಿ ಇರೋ ತನ್ನ ಸಾಕು ಮಗಳ ಮನೆಗೆ ಹೋಗಿದ್ದಾನೆ ಎಂದು ಗೊತ್ತಾಯಿತು,ಎಲ್ಲಾ ವಿಷಯ ಕೈಬಿಟ್ಟೆ.
ಮೂರೇ ದಿನದಲ್ಲಿ ಸಂಜೀವ ನಾಯಕನ ಇ- ಮೇಲು ನನ್ನ ಲಾಪ್ಟಾಪ್ನಲ್ಲಿ ಬಂದು ಕುಳಿತಿತ್ತು. ಮುಂದಿನ ತಿಂಗಳು ತಾನು ಇಸ್ರೇಲಿನಲ್ಲಿ ಐದುಸಾವಿರ ಎಕರೆ ಹೊಲದಲ್ಲಿ ಗುತ್ತಿಗೆ ವಹಿಸಿರುವ ಧಾನ್ಯದ ಬಿತ್ತನೆ ಕೆಲಸ ಮುಗಿಸಿ,ಹೊರಡುವುದಾಗಿಯೂ,ಸೀದ ಇಂಡಿಯಾಕ್ಕೆ ಬರುವುದಾಗಿಯೂ,ತಾನು ಕಂಚಿಕಲ್ಲಿನ ಬಳಿಯಲ್ಲಿ ಬಿಡಾರಹೂಡುವುದಾಗಿಯೂ ಸ್ಪಷ್ಟವಾಗಿ ತಿಳಿಸಿದ್ದ. ನನಗೇ ಅಚ್ಚರಿಯಾಯಿತು.ಜೊತೆಗೆ ಅಸೂಯೆಯು ಆಯಿತು.ಇಷ್ಟು ಕಾಲ ಆ ಕಂಚಿಕಲ್ಲಿನ ಕುರಿತು ಏನೂ ಮಾಡಲಾಗದ ನಾನು ಈಗ ಈ ಮಂತ್ರಿ ಆದ ಮೇಲೆ ಏನಾದರೂ ಮಾಡಿಸಬಹುದೇ ವಿನಃ ನಾನಾಗಿಯೇ ಏನನ್ನೂ ಮಾಡಲಾಗದು ಎಂದು ಸ್ಪಷ್ಟವಾಗಿತ್ತು.ಸಂಜೀವ ನಾಯಕ ಬಂದು ಏನಾದರೂ ಮಾಡಿಬಿಟ್ಟರೆ ಎಂಬ ಭಯವೂ ಕಾಡತೊಡಗಿತು. ಮುಂದಿನ ಕ್ಯಾಬಿನೆಟ್ ಮೀಟಿಂಗಲ್ಲಿ ಒಂದು ವಿಚಾರ ಮಂಡಿಸಲು ನಿರ್ಧರಿಸಿದ್ದು ನಾನು ಆಗಲೇ.
ಭಾಗ -೩ (ಕೊನೆ ಚಾಪ್ಟರು)
ಇನ್ನು ಹೇಳಲು ನನಗೆ ಏನೂ ಉಳಿದಿಲ್ಲ. ನಾನು ಎಣಿಸಿದಂತೆ ಸಂಜೀವ ನಾಯಕ ಕೊನೆಗೂ ಬರಲೇ ಇಲ್ಲ. ನೇತ್ರಾವತಿ ನದಿಯ ನಡುವೆ ಉಪ್ರಂಗಡಿಯಲ್ಲಿ ಕಾಣಸಿಗುತ್ತಿದ್ದ ಆ ಕಂಚಿಕಲ್ಲು ಈಗಲೂ ಹಾಗೆ ಉಳಿದಿಲ್ಲ.ಅದನ್ನು ಒಡೆದು ಹಾಕಬೇಕೆಂದು ನನು ಸಂಪುಟ ಸಭೆಯಲ್ಲಿ ಅಹವಾಲು ಇಟ್ಟರೆ ಅದನ್ನು ಯಾರೂ ಸೀರಿಯೆಸ್ಸಾಗಿ ತಗೊಳ್ಳಲೇ ಇಲ್ಲ.ಡೆಪ್ಯಟೀ ಸಿಎಮ್ಮು ಅಂತೂ ಅಲ್ರೀ ಆ ಒಂದು ಬಂಡೆ ಬಗ್ಗೆ ಇಲ್ಲಿ ಅದೂ ಈ ಮೀಟಿಂಗಿನಲ್ಲಿ ಮಾತಾಡ್ತೀರಲ್ಲ, ವಾಟ್ ಸಾರ್ಟ ಆಫ್ ನಾನ್ ಸೆನ್ಸ್ ಈಸ್ ದಿಸ ಂತ ಉಗಿದು ಬಿಟ್ಟ. ನಾನು ತೆಪ್ಪಗಾದೆ. ಸಂಜೀವ ನಾಯಕ ಅಲ್ಲಿಗೆ ಬರದಂತೆ ಏನು ಮಾಡುವುದು,ಒಂದು ವೇಳೆ ಬಂದರೆ ಏನು ಮಾಡಬಹುದು ಎಂದು ಯೋಚಿಸಿದೆ .ಗೊ॒ತ್ತಾಗಲಿಲ್ಲ. ಯಾವುದಕ್ಕೂ ಬರಲಿ ಎಂದು ಕಾದೆ.
ಈ ಮಧ್ಯೆ ಅದು ಯಾರೋ ಆ ಕಂಚಿಕಲ್ಲು ಟೂರಿಸ್ಟ್ ಸ್ಪಾಟ್ ಎಂದು ಸರಕಾರವೇ ಘೋಷಣೆ ಮಾಡಬೇಕು ಎಂದು ಮಂಗ್ಳೂರು ಕಡೆ ಹೋಗಿದ್ದ ನಮ್ಮ ಟೂರಿಸಂ ಮಿನಿಸ್ಟರ್‌ಗೆ ಅಹವಾಲು ಕೊಟ್ಟ ರಂತೆ.ಆ ಮನುಷ್ಯ ಅದನ್ನೇ ನನ್ನ ಛೇಂಬರಿಗೆ ಹಿಡಿದು ತಂದಿದ್ದ. ಮಾಡು ಎಂದಿದ್ದೆ.ಅಲ್ಲಾ ಅದರ ಇಂಪಾರ್ಟೆನ್ಸು ಏನೂ ಅಂತ ಹೇಳಿ ಅಂತ ನನ್ನ ಎದುರು ಕೈ ಚಾಚಿ ಕುಳಿತ. ನಾನು ಆ ಕುರಿತು ನೋಟ್ಸ್ ಹಾಕಿ ಕಳುಹಿಸುವುದಾಗಿ ಸಾಗಹಾಕಿದೆ.
ಇಷ್ಟೆಲ್ಲಾ ಆಗಿ ವಾರವಾಗಿಲ್ಲ.ಕಂಚಿಕಲ್ಲಿನ ಮೇಲೆ ನಾಡ ಬಾಂಬು ಎಸೆದು ಅದರ ಪಾರ್ಶ್ವ ಬಿರುಕು ಬಿಟ್ಟಿದೆ ಎಂಬ ಸುದ್ದಿ ಊರಿಂದ ಬಂತು. ಕಂಚಿಕಲ್ಲು ನಿಷೇಧಿತ ಪ್ರದೇಶ ಎಂದು ಸರಕಾರದಿಂದ ಆದೇಶ ಹೊರಡಿಸುವಲ್ಲಿ ನನಗೆ ಯಶಸ್ಸು ದೊರೆಯಿತು.ನಾಡ ಬಾಂಬು ಹಾಕಿದವರು ಮೀನು ಬೇಟೆಗಾರರು ಅಂತ ಜಿಲ್ಲಾ ಪೊಲೀಸು ಸರಕಾರದ ಬಳಿಗೆ ವರದಿ ಕಳುಹಿಸಿತ್ತು.ಅದನ್ನು ನಾನೇ ಹ್ಯಾಂಡಲ್ ಮಾಡಿದೆ.
ಸಂಜೀವ ನಾಯಕ ಬರಲೇ ಇಲ್ಲಾ. ಎಲ್ಲಿಗೆ ಹೋದನೋ? ನನ್ನ ಕಂಚಿಕಲ್ಲು ನನ್ನ ಮಟ್ಟಿಗೆ ಸುರಕ್ಷಿತವಾಗಿತ್ತು.
ನಾನು ಕಂಚಿಕಲ್ಲು ಕುರಿತು ಮಾಡಿಟ್ಟ ಟಿಪ್ಪಣಿಗಳು ಅದು ಹೇಗಾದರೂ ಬಯಲಾದರೆ ಎಂಬ ಭಯ ನನ್ನನ್ನು ಕಾಡತೊಡಗಿತ್ತು.ಅದನ್ನೂ ಬೆಂಕಿಗೆ ಹಾಕಿಬಿಡಲಾ ಎಂದುಕೊಂಡೆ.ಆದರೆ ಮನಸ್ಸು ಮಾತ್ರಾ ಕೇಳಲಿಲ್ಲ.ಏಕೆಂದರೆ ಆ ಟಿಪ್ಪಣಿಯಲ್ಲಿ ನನ್ನ ಜೀವ ಅಡಗಿತ್ತು .ನನ್ನ ಪ್ರೀತಿಯ ಇವಾ ಮತ್ತು ನಾನು ಅದೇ ಕಂಚಿಕಲ್ಲಿನ ಬುಡದಲ್ಲಿ ಆಗಾಗ ಭೇಟಿಯಾಗುತ್ತಿದ್ದುದು..,ಅದೊಮ್ಮೆ ಅವಳೂ ನಾನು ಅಲ್ಲೇ ಎಲ್ಲವನ್ನೂ ಕಳೆದುಕೊಂಡದ್ದು ,ಅವಳು ಹೂವಾಗಿ ಅರಳಿದ ಸಂಭ್ರಮವನ್ನು ಆಚರಿಸಿದ್ದು॒ ಮತ್ತು...
.... ಮತ್ತು ನನ್ನ ಇವಾ ನನ್ನಿಂದ ದೂರವಾದ ದಿನ ನಾನು ಆ ಕಂಚಿಕಲ್ಲಿನ ಬಳಿ ನ್ಯಾಯ ಕೇಳಲು ಹೋದದ್ದು ತುಂಬಾ ನೆನಪಾಯಿತು.20070422

ಮಮಕಾರ


ಯಾರನ್ನ ಪ್ರೀತಿಸ್ತೀಯಾ ಎಂದರೆ ನನ್ನನ್ನೇ ಅಂತ ಯಾರಾದರೂ ಹೇಳುತ್ತಾರಾ?

ನಮ್ಮೊಳಗಿನ ನಮ್ಮನ್ನು ಬಿಟ್ಟು ಸುಂಸುಮ್ಮನೇ ಅವಳನ್ನು ಅವನನ್ನು ಎಂದೆಲ್ಲಾಬೊಂಬಡಿ ಬಿಡುತ್ತೇವೆ.

ಅಮ್ಮ ಹೇಳ್ತಾಳೆ- ನನ್ ಮಗು ನನ್ ಜೀವಾ.

ಮಗೂನ ಸಿಕ್ಕಾಪಟ್ಟೆ ಪ್ರೀತಿಸ್ತಾಳೆ ಅಮ್ಮ ಅಂತ ಅಂದುಕೊಳ್ಳುತ್ತೇವೆ.

ಅದು ರಾಂಗ್.

ಮಗೂಗಿಂತ ಮೊದಲು ಅವಳು ತನ್ನನ್ನು ಪ್ರೀತಿಸುತ್ತಿದ್ದಾಳೆ.

ಹಾಗೇ ನೋಡಿದರೆ ಇನ್ನೊಂದು ಜೀವದ ಜೊತೆಗಿನ ಸೆಳೆತ,ನಂತರದ ಪ್ರೀತಿ ಒಸರುವುದೇ ನಾವು ಅಪಾರವಾಗಿ ಪ್ರೀತಿಸೋ ನಮ್ಮ ದೇಹದಲ್ಲಿ ಉಂಟಾಗುವ ರಾಸಾಯನಿಕ ಪರಿಣಾಮದ ಕಾರಣದಿಂದಲೇ.ಈ ದೇಹಕ್ಕೆ ಅವಳು ಬೇಕು ಅನಿಸುವುದರಿಂದ ತೊಡಗಿ ಎಲ್ಲಾ ಇನ್ನೊಂದು ಪ್ರೀತಿಗೆ ಶ್ರೀಕಾರ ಆರಂಭ.ತಾಯಿಯ ವಾತ್ಸಲ್ಯ,ಪ್ರೇಮಿಯ ಪೊಸೆಸಿವ್‌ನೆಸ್ ಗಂಡನ ಪಟ್ಟು, ಹೆಂಡತಿಯ ಬಯಕೆ..ಎಲ್ಲದರಲ್ಲೂ ಅದೇ

ಅದೇ ನಮ್ಮನ್ನು ನಾವು ಪ್ರೀತಿಸೋದಕ್ಕೆ ಯಾವ ಕೆಮಿಕಲ್ಲೂ ಕಾರಣವಲ್ಲ.ನಮ್ಮೊಳಗೆ ನಮ್ಮ ದೇಹದಲ್ಲೇ ಸೃಷ್ಟಿಯಾದ ವ್ಯವಸ್ಥೇ ಅದು.ಭಾಪ್ರೇ..!!

ಗಂಡನೂ ಏನೂ ಕಮ್ಮಿಯಲ್ಲ .ಹೆಂಡತಿಗಾಗಿ ಏನೂ ಬೇಕಾದರೂ ಮಾಡಬಲ್ಲ ನಿಜ.ಆದರೆ ತನ್ನನ್ನು ಬಿಟ್ಟುಕೊಡದೇ.ತಾನು ತನ್ನತನ ಮೊದಲು.ಹಾಸಿಗೆಯಲ್ಲಿ ತನ್ನತನಕ್ಕೆ ಸೋಲಾಗದಂತೆ ಎಲ್ಲಾ ಕಸರತ್ತು ಮಾಡುವ ಗಂಡ ಹೆಂಡತೀನ ಸೋಲಿಸುವ ಕಲೆಯನ್ನು ಏಕೆ ಮೈಗೂಡಿಸಿಕೊಳ್ಳುತ್ತಾನೆ ಎಂದರೆ ಅವನನ್ನು ಅವನು ಸಿಕ್ಕಾಪಟ್ಟೆ ಪ್ರೀತಿಸುತ್ತಿರುವ ಕಾರಣಕ್ಕಾಗಿಯೇ.

ಮಗು ತನ್ನನ್ನು ತಾನು ಪ್ರೀತಿಸುತ್ತಿರುವ ಕಾರಣಕ್ಕಾಗಿಯೇ ಅಲ್ವಾ ಚೆಂದಚೆಂದದ ಚಡ್ಡಿ ಅಂಗಿ ಹಾಕಿ ಕುಣಿಯೋದು,ಬಣ್ಣಬಣ್ಣದ ಬೊಂಬೆಗಾಗಿ ಅಪ್ಪ ಅಮ್ಮನನ್ನು ಕೇಳೋದು.

ಪಕ್ಕಾ ಆಲ್ಟ್ರೇಶನ್ ಮಾಡಿದ ಮೊಬೈಕ್ ಮೇಲೆ ಬರ್ರೋ ಅಂತ ಇಸ್ಟೈಲ್ ಮಾಡಿಕೊಂಡು,ದಿನಕ್ಕೊಂದು ಬಗೆಯ ಕ್ರಾಪು,ನೀಟು,ನಿಡಿದು ಇಸ್ತ್ರಿ,ಪಾಲೀಶು..ಕೆಲವೊಮ್ಮೆ ಎಲ್ಲಾ ಇರ್ರೆಗ್ಯುಲರ್ತನ್ನನ್ನು ಕಾಣಿಸಿಕೊಂಬ ಹುಡುಗನ ಇಂಗಿತ ಸೆಲ್ಪ್ ಲವ್


ಅವಳನ್ನು ಅವಳು ವಿಪರೀತ ಪ್ರೀತಿಸುತ್ತಿದ್ದಾಳೆ.ಆದ್ದರಿಂದಲೇ ತಾನು ಪಡೆಯಲು ಕೊಡಲೂ ಶಕ್ತಳು ಎಂದು ಅವಳಿಗೆ ಗೊತ್ತಾಗಿದೆ.ಅದಕ್ಕಾಗಿ ಕನ್ನಡಿ ಎದುರು ತನ್ನತನವನ್ನು ಅಕ್ಷರಶಃ ತೀಡುತ್ತಾಳೆ.ಮಾತು,ನಗು,ಹರಟೆಯಲ್ಲಿ ರೀತಿ ತೋರುವುದು,ಬಂದು ಬಿಕರಿಯಾಗುವ ಎಲ್ಲಫ್ಯಾಶನ್‌ಗಳನ್ನು ಅಡಾಪ್ಟ್ ಮಾಡಿಕೊಳ್ಳುವುದು..

ಬಾರದ ರೋಗದ ಬಗ್ಗೆ ಬಂತೇ ಬಂತು ಎಂಬ ಭಯ ಕೂಡಾ ಈ ಸ್ವಪ್ರೀತಿಯ ಕಾರಣದಿಂದಲೇ.ವಾಕಿಂಗು,ಡಯಟ್ಟು,ಮುಂತಾಗಿ ದೇಹ ಸಾಕೋದು ಆ ಪ್ರೀತಿಗಾಗಿಯೇ ಅಲ್ಲವೇ..

ಈ ಸ್ವಪ್ರೀತಿಗೇ ಐಷಾರಾಮಿ ಬದುಕಿನ ಹಂಬಲ,ಹಂಬಲಕ್ಕೆ ಕೊಂಡಿಯಾಗಿ ಹಠ, ಹಠಕ್ಕೆ ಹಿಂಬಾಲಕನಾಗಿ ಹಿಡಿವ ಅಡ್ಡ ಅಥವಾ ಸೀದಾ ದಾರಿ

ರೈಟೋ,ರಾಂಗೋ ಅಂತೂ ನಮ್ಮನ್ನು ನಾವು ಪ್ರೀತಿಸೋದರಿಂದ ದೊಡ್ಡದು ಯಾವುದೂ ಇಲ್ಲ.

ಇನ್ನೊಂದು ಪ್ರೀತಿಯ ಮೊರೆತ ಮೂಡುವುದೇ ನಮ್ಮ ನಾವು ಪ್ರೀತಿಸವುದರ ಮೂಲಕವೇ.ಹಾಗೇ ಪ್ರೀತಿಸುವುದರಿಂದಲೇ ನಮಗೆ ನೆಲವನ್ನು ಪ್ರೀತಿಸಲು ಸಾಧ್ಯವಾಗುತ್ತದೆ,ಸಮಾಜ ಸಂಸ್ಕೃತಿ ಇಷ್ಟವಾಗುತ್ತದೆ .ಈ ಲೋಕದ ವರ್ತುಲದೊಳಗೆ ಇರಲು ಸಾಧ್ಯವಾಗುತ್ತದೆ .

ಇಷ್ಟಕ್ಕೂ ಈ ದೇಹ ನಮ್ಮದೇ.ಈ ವಿನ್ಯಾಸ ಇನ್ನೊಬ್ಬರಿಗಿರಲು ಸಾಧ್ಯವೇ ಇಲ್ಲ.ಪ್ರತಿಕ್ಷಣಕ್ಕೂ ಬಗೆ ಬಗೆಯ ವಿನ್ಯಾಸದ ಜೀವ ದೇಹಗಳು ಆಗಮಿಸಬಹುದು. ಆದರೆ ಒಂದರಂತೆ ಒಂದಿಲ್ಲ.ಪ್ರತಿಯೊಬ್ಬನೂ ಡಿಫರೆಂಟು.ಅಂದಮೇಲೆ ಪ್ರೀತಿಸದೇ ಇರೋದು ಹೇಗೇ ?

ದೇಹೋ ದೇವಾಲಯಃ-ಎಂದ ಉಪನಿಷತ್ ಮೊದಲಾಗಿ ಈ ಪ್ರೀತಿಯ ಪಾವಿತ್ರ್ಯವನ್ನು ತಿಳಿಸಿದೆ.ಎನ್ನ ಕಾಲೇ ಕಂಬ ದೇಹವೇ ದೇಗುಲ,ಶಿರ ಹೊನ್ನ ಕಳಸ ಎಂದ ಬಸವಣ್ಣ ಅದನ್ನೇ ವಿಸ್ತರಿಸಿದರು.ಇದಂ ಶರೀರಂ ಖಲು ಧರ್ಮ ಸಾಧನಂ- ದೇಹದ ಮಮಕಾರಕ್ಕೆ ಮುನ್ನುಡಿ.ವೈಎನ್ಕೆ ಹೇಳುತ್ತಿದ್ದರು -ವಾಚ್ ಯುವರ್ ಬಾಡಿ ,ಅದರ್ ವೈಸ್ ಯು ವಿಲ್ ಬಿ ನೋ ಬಾಡಿ.

ದೇಹ ಬೇರಲ್ಲ.ಆತ್ಮ ಬೇರಲ್ಲ.ಅದ್ವೈತದೊಳಗಿನ ದ್ವೈತ ವನ್ನೂ,ಅದ್ವೈತದೊಳಗೆ ಅಡಗಿರುವ ದ್ವೈತವನ್ನೂ ಕಂಡು ಬೆರಗಾಗಲೇ ಬೇಕು

.ಎರಡನ್ನೂ ಒಟ್ಟಾಗಿ ತುಂಬಿ ನನ್ನನ್ನು ನಾನು ಮತ್ತಷ್ಟು ಪ್ರೀತಿಸುತ್ತೇನೆ .

ಐ ಲ ವ್ ಮಿ ವೆ ರಿ ಮ ಚ್.!!!


20070421

ತಪ್ಪು ನೋಡದೇ ಬಂದೆಯಾ..ಹೆಚ್ಚಾಗಿ ಅಂತ ಏನು,ಯಾವಾಗಲೂ ಹೆಬ್ಬಾರ್ರು ನಮ್ಮ ಕಡೆ ಬರುತ್ತಿದ್ದುದೇ ಸೈಕಲ್ ಮೇಲೆ.

ಅವರ ಸೈಕಲ್ಲಿಗೆ ಎರಡೂ ಬದಿಗೆ ಎರಡು ಕನ್ನಡಿ,ಎರಡು ಕಿಣಿಕಿಣಿ ಬೆಲ್ಲು.ಚಕ್ರಗಳ ಕಡ್ಡಿಗಳಿಗೆ ಬಣ್ಣದ ಪುಚ್ಚಗಳ ಸರಮಾಲೆ.ನಾವು ಮಧ್ಯಾಹ್ನ ನಮ್ಮ ಹೊಸಗದ್ದೆ ಶಾಲೆಯಿಂದ ಊಟಕ್ಕೆ ಬರುತ್ತಿದ್ದವರು.

ವಾರಕ್ಕೆ ಎರಡು ಬಾರಿಯಾದರೂ ನಮ್ಮ ತಡಮೆ ಬಳಿ ಹೆಬ್ಬಾರರ ಸೈಕಲ್ಲು ನಿಂತಿರುತ್ತಿತ್ತು.ನಾವು ಅದನ್ನು ಕಂಡೊಡನೆ ಸಾಕ್ಷಾತ್ ವಿಮಾನ ನೋಡಿದಷ್ಟು ಸಂತೋಷಗೊಳ್ಳುತ್ತಿದ್ದೆವು.ನಮಗೆ ಆಗ ಇದ್ದ ಎಲ್ಲಾ ತ್ರಾಣವನ್ನು ಹಾಕಿ ಪೆಡಲ್ಲ್ಲ್ಲ್ನು ತಿರುಗಿಸಿ ತಿರುಗಿಸಿ ಕುಶಿಪಡುತ್ತಿದ್ದೆವು.ಆಮೇಲೆ ಆ ಡೈನಮೋವನ್ನು ಚಕ್ರಕ್ಕೊತ್ತಿಸಿ ಅದರಿಂದ ಹೊಮ್ಮುವ ಗೂಂ ಗೂಂ ಶಬ್ದವನ್ನು ,ಲೈಟಿನ ಬಲ್ಬು ಆ ನಡುಹಗಲಿನಲ್ಲಿ ಬಿರುವ ಬೆಳಕನ್ನೂ ಕಂಡು ಆನಂದ ತುಂದಲಿತರಾಗುತ್ತಿದ್ದೆವು. ಊಟ ಮಾಡಿ ಹೊರಟಾಗ ಸೈಕಲ್ಲನ್ನು ಮತ್ತೊಮ್ಮೆ ಅದೇ ರೀತಿ ಪೂಜಿಸಿ ಎರಡು ಬೆಲ್ಲುಗಳನ್ನು ಕಿಣಿ ಕಿಣಿ ಬಜಾಯಿಸಿ ಶಾಲೆಗೆ ಓಡುತ್ತಿದ್ದೆವು.

ಸೈಕಲ್ಲು ಮೂಲಕವೇ ಈ ಕತೆಯಲ್ಲಿ ಹೆಬ್ಬಾರರು ಹುಟ್ಟಿಕೊಳ್ಳಲು ಅನ್ಯ ಕಾರಣಗಳಿಲ್ಲ.ಮೊನ್ನೆ ಮೊನ್ನೆ ಉತ್ತರ ಭಾರತ ಯಾತ್ರೆ ಹೋದ ನಮ್ಮ ದೇವಸ್ಥಾನ ಕಮಿಟಿಯವರಿಗೆ ಹೆಬ್ಬಾರರು ಬದರಿಕಾಶ್ರಮದಲ್ಲಿ ಸಿಕ್ಕಿದರು ಎಂದು ಗೊತ್ತಾದ ಮೇಲಷ್ಟೇ ನಾವು ಈ ಕತೆ ಬರೆಯಲು ಮತ್ತು ಬರೆದ ಕತೆಯಲ್ಲಿ ಸೈಕಲ್ಲನ್ನೂಸೇರ್ಪಡೆಗೊಳಿಸಲು ನಿರ್ಧರಿಸಿದ್ದು.

ಹೆಬ್ಬಾರರು ಬದರಿಕಾಶ್ರಮದಲ್ಲಿ ಸಿಕ್ಕಿದ ಕತೆ ಹೇಳಿದ ದೇವಸ್ಥಾನ ಕಮಿಟಿಯ ಸುಧಾಕರನ ಬಳಿ ಅಷ್ಟೇನೂ ಆ ವಿಷಯವನ್ನು ಸೀರಿಯಸ್ಸಾಗಿ ವಹಿಸಿಕೊಳ್ಳದವರು ಅವರ ಜೊತೆ ಸೈಕಲ್ಲೂ ಇತ್ತಾ ?ಎಂದು ಕೇಳಿ ನಕ್ಕರಂತೆ.ಸುಧಾಕರ ನಮ್ಮಲ್ಲಿ ಅದನ್ನು ಹೇಳಿದ್ದ.ನಮಗೆ ಅಚ್ಚರಿಯಾದದ್ದು ಎಂದರೆ ಹೆಬ್ಬಾರರು ಅಲ್ಲಿ ನಮ್ಮನ್ನೂ ಕೇಳಿದ್ದರು ಎಂಬ ವಿಷಯ.ನಾವು ಈಗ ಹೇಗಾಗಿದ್ದ್ಢೇವೆ,ಮಡದಿ ಮಕ್ಕಳು ಆಗಿದ್ದಾವಾ? ಎಂದು ವಿಚಾರಿಸಿ ನಾವು ಅವರ ಸೈಕಲ್ಲ್ಲು ಮೇಲೆ ಇಟ್ಟಿದ್ದ ಪ್ರೀತಿಯ ಕುರಿತಾಗಿ ಪ್ರತ್ಯೇಕ ಹೇಳಿದ್ದರಂತೆ.ಇದು ನಿಜಕ್ಕೂ ಹೌದೇ ಅಥವಾ ನಮ್ಮನ್ನು ಖುಶಿಪಡಿಸಲು ಸುಧಾಕರ ರಂಗು ಮಾಡಿದ್ದೇ ಗೊತ್ತಿಲ್ಲ . ನಾವು ಸದ್ಯಕ್ಕೆ ಹೌದೆಂದೇ ನಂಬಿ ಸೈಕಲ್ ಮೂಲಕ ಹೆಬ್ಬಾರರ ಕತೆ ಬರೆಯತೊಡಗಿದೆವು.
ನಾವು ನೋಡುವಾಗಲೇ ಹೆಬ್ಬಾರರಿಗೆ ವಯಸ್ಸು ನಲುವತ್ತು ಸಲ್ಲುವಂತಿತ್ತು.ಅವರ ಕಣ್ಣಿಗೆ ದಪ್ಪ ಗಾಜಿನ ಕನ್ನಡಕ ,-ನಾವದನ್ನು ಪ್ರೀತಿಯಿಂದ ಲಾಟೀನು ಎಂದು ಕರೆಯುತ್ತಿದ್ದೆವು.-ಅದನ್ನು ಮೂಗಿನ ಮೇಲೆ ಉಳಿಸಿಕೊಳ್ಳಲು ಅವರು ಗಳಿಗೆಗೊಮ್ಮೆ ಪಡುತ್ತಿದ್ದ ಪಾಡು ಇನ್ನೂ ಹಸುರಾಗಿಯೇ ಇದೆ.ಅವರ ಬಿಳಿ ಖದ್ದರು,ಮತ್ತೆ ಕೆಂಗಾವಿ ಬಣ್ಣದ ಅವರ ಪಂಚೆ ,ಮೀಸೆ ಸಮೇತ ಸಪಾಟಾಗಿ ಬೋಳಿಸಿದ ಮುಖ,ಕೊರಳಿನ ಬಳಿ ಯಾರೋ ಬಯಲಾಟವೊಂದರಲ್ಲಿ ಚೂರಿ ಇರಿದು ಗಾಯ ಮಾಸಿ ಉಳಿದ ಗಂಟು..

ಹಾಗೇ ನೋಡಿದರೆ ಅವರ ಹೆಸರೇ ನಮಗೆ ಗೊತ್ತಿಲ್ಲ .ಯಾವಾಗಲೋ ಒಮ್ಮೆ ಕೇಳಿದ್ದಕ್ಕೆ ಕೆ.ಡಿ. ಹೆಬ್ಬಾರ..ಎಂದು ನಕ್ಕಿದ್ದರು.ಕೆಡಿ ಏನು ಎಂದರೆ ಅದರಲ್ಲಿ ತುಂಬಾ ಉಂಟು’ ಅಂತ ಅಲ್ಲಿಗೇ ನಿಲ್ಲಿಸಿದ್ದರು.

ನಮ್ಮ ಅಜ್ಜ ,ಅವರು ಕಳೆದ ವರ್ಷ ಹೊಟ್ಟೆಯೊಳಗೆ ಬಾವು ಬಂದು ತೀರಿಕೊಂಡರಲ್ಲ,ಅವರು ಹೇಳುತ್ತಿದ್ದ ಪ್ರಕಾರ ಹೆಬ್ಬಾರ ಎಂಬುದು ಅವರ ಜಾತಿಯಲ್ಲ,ಅದೊಂದು ಬಿರುದು.

ಉಪ್ರಂಗಡಿ ಅರಸರ ಮುಖ್ಯಮಂತ್ರಿಗಳಾಗಿ ಇವರ ಹಿರಿಯರು ಇದ್ದರಂತೆ,ಆ ಉಪ್ರಂಗಡಿ ಅರಸನೊಬ್ಬನಿಗೆ ದೂರ ದೇಶ ಪ್ರವಾಸ ಈ ಹೆಬ್ಬಾರರ ಮುತ್ತಾತನ ಮುತ್ತಾತ ಗೈಡ್ ಆಗಿ ಭಾಷೆ,ತಿಳುವಳಿಕೆ ಎಲ್ಲದರಲ್ಲೂ ಸಹಕರಿಸಿದ್ದನಂತೆ,ಆಗ ಆ ಅರಸು ಸಖತ್ ಖುಷಿಯಾಗಿ ಐವತ್ತು ಪವನಿನ ಚಿನ್ನದ ಚಕ್ರಸರಮಾಲೆಯನ್ನೂ,ಹೆಬ್ಬಾರ ಎಂಬ ಬಿರುದನ್ನೂ ಕೊಟ್ಟು ಭೇಷ್ ಅಂದನಂತೆ.

ನಾವು ಅನೇಕ ಭಾರಿ ಅಜ್ಜನಿಂದ ಈ ಕಥೆ ಕೇಳಿ ಆ ಚಕ್ರಸರಮಾಲೆಯನ್ನು ನೋಡಲು ಆಸೆ ಪಟ್ಟಿದ್ದೆವು.ನಾವು ಕೇಳಿದಾಗಲೆಲ್ಲಾ ಇನ್ನೊಮ್ಮೆ ತೋರಿಸುತ್ತೇನೆ..ಎಂದು ನಮ್ಮನ್ನು ಮಂಕಾಡಿಸುತ್ತಿದ್ದರು ಹೆಬ್ಬಾರರು.

ನಮ್ಮ ಮನೆಗೇ ಎಂದು ಹೆಬ್ಬಾರರು ಬಂದದ್ದೇ ಇಲ್ಲ.ದಾರಿ ಮೇಲೆ ಹೋದಾಗ ಬಂದೆ ಎನ್ನುತ್ತಿದ್ದರು.ನಿಜವಾಗಿಯೂ ನಮ್ಮ ಮನೆ ಹಿಂದಿನ ಗುಡ್ಡದ ಆಚೆಗೆ ಐದು ಫರ್ಲಾಂಗು ಆಚೆಗೆ ಅವರಿಗೆ ಮೂರು ಬೆಳೆ ಬೆಳೆಯುವ ಗದ್ದೆ ಒಂದಿತ್ತು. ಗದ್ದೆಯ ಪಕ್ಕದಲ್ಲಿ ಹಳ್ಲದ ದಿಡ್ಡಿನ ಮೇಲೆ ಒಕ್ಕಲ ಹೆಂಗಸೊಬ್ಬಳ ಜೊತೆ ದೋಸ್ತಿಯೂ ಇತ್ತು ಎಂದು ನಮ್ಮ ಅಜ್ಜ ಎಲೆಅಡಿಕೆ ಜಗಿಯುತ್ತಾ ಕೆಲಸದವರ ಜೊತೆ ಹಾಟ್ ಡಿಸ್‌ಕಶನ್ ಮಾಡುತ್ತಿದ್ದುದು,ಆಗ ಕೆಲಸದವರೆಲ್ಲಾ ವಿಪರೀತ ಪುಳಕಗೊಳ್ಳುತ್ತಿದ್ದುದು..ಕೊನೆಗೆ ಅಪ್ಪ ಬಂದು ಅವರಿವರ ಉಸಾಬರಿ ನಮಗೆ ಏಕೆ..ಎಂದು ಸ್ಟೋರಿಯನ್ನು ಸ್ಟಾಪ್ ಮಾಡುತ್ತಿದ್ದುದು ನೆನಪಿದೆ.
ಇದೆಲ್ಲಾ ಚರಿತ್ರೆಯ ಮಾತಾಯಿತು.ನಿಜವಾದ ಕತೆ ಓದುವ ಆಸೆ ಉಳ್ಳ ನೀವುಗಳು ಇದನ್ನೆಲ್ಲಾ ಕಟ್ಟಿಕೊಂಡು ಏನು ಮಾಡುತ್ತೀರಿ..ಹೆಬ್ಬಾರರಂಥ ಹೆಬ್ಬಾರರು ಎಷ್ಟೋ ಜನ ಇರಬಹುದು ಅಲ್ಲವಾ.?ಎಷ್ಟೊಂದು ಕತೆಗಳಲ್ಲಿ ಅಂಥವರನ್ನು ನೀವು ಭೇಟಿ ಮಾಡಿರಲಿಕ್ಕಿಲ್ಲ..?ಕತೆ ಇನ್ನೂ ಆರಂಭವಾಗಿಲ್ಲ.ನಿಜವಾದ ಕತೆ ಈಗಷ್ಟೇ ತೊಡಗುತ್ತಿದೆ.

ಸುಮ್ಮನೇ ಸೈಕಲ್ ಮೇಲೆ ಓಡಾಡುತ್ತಿದ್ದ ಹೆಬ್ಬಾರರು ,ಅಲ್ಲಲ್ಲಿ ರಸಿಕತನ ಮಾಡುತ್ತಾ ಸುಖವಾಗಿದ್ದ ಹೆಬ್ಬಾರರು..ಒಮ್ಮೆಗೇ ನಲುವತ್ತೈದರ ವಯಸ್ಸಿನಲ್ಲಿ ಮದುವೆ ಆಗಿಬಿಟ್ಟರು ಮತ್ತು ಒಂದು ಜೀಪು ಖರೀದಿಸಿದರು.ಆಮೇಲೆಯೇ ಅವರಿಗೆ ಎಲ್ಲಾ ಕಷ್ಟ,ಅನಿಷ್ಟಗಳೂ ಶುರುವಾದದ್ದು ಎನ್ನಬೇಕು.ಅವರ ಕಷ್ಟ ಕಾಲದಲ್ಲಿ ನಾವೊಮ್ಮೆ ಅವರ ಜೊತೆ ಜೀಪಿನಲ್ಲಿ ಮಂಗಳೂರಿಗೆ ಹೋಗಿದ್ದೆವು.ಸುಮ್ಮನೇ ಅಂಗಡಿಗೆ ಹೋಗಿದ್ದ ನಮ್ಮನ್ನು ತುಂಬಾ ಒತ್ತಾಯ ಮಾಡಿ ಜೀಪಿಗೆ ಏರಿಸಿಕೊಂಡು , ನಾವು ಒಲ್ಲೆ ಎಂದರೂ ಮನೆಯವರಿಗೆ ತಾನೇ ಖುದ್ದಾಗಿ ಬಂದು ಸಮಾಧಾನ ಹೇಳುವುದಾಗಿಯೂ , ಮಂಗಳೂರು ತನಕ ಬಂದರೆ ತನಗೆ ಸಂತೋಷವಾಗುವುದಾಗಿಯೂ ಹೇಳಿ ಜೀಪಿಗೆ ಹಾಕಿಸಿಕೊಂಡರು.

ಆ ದಿನ ಸಿಡಿಲು ಮಳೆ ಬೀಳುತ್ತಿದ್ದ ನೆನಪು.ವಾಪಾಸು ಬರುವಾಗ ಅರ್ಕುಳದ ಬಳಿ ಆ ಬಡ ಬಡ ಸಿಡಿಲಿಗೆ ನಾವು ಅಳುಕಿದಾಗ ಜೀಪು ನಿಲ್ಲಿಸಿ ಹೆದರಬೇಡ ಎಂಬರ್ಥದಲ್ಲಿ ನಮ್ಮನ್ನು ಎತ್ತಿ ಮಡಿಲಲ್ಲಿ ಹುದುಗಿಸಿ ಮುದ್ದು ಮಾಡಿದ ರೀತಿ ಏನೆಂದು ,ಯಾಕೆಂದು ನಮಗೆ ಈ ತನಕ ಅರ್ಥವೇ ಆಗಿಲ್ಲ.

ಮಂಗಳೂರಿಗೆ ಹೋಗಿ ಬರುವ ದಾರಿಯುದ್ದಕ್ಕೂ ಹೆಬ್ಬಾರರು ತಾನು ಮದುವೆಯಾಗಿ ನಿಜವಾಗಿಯೂ ಒಂದು ಹೆಣ್ಣಿಗೆ ಮೋಸ ಮಾಡಿದೆ ಎಂದು ಬೇರೆ ಬೇರೆ ರೀತಿಯಲ್ಲಿ ಹಲುಬಿದ್ದರು.ಅದೇಕೆ ಎಂದು ನಮಗೆ ಈ ತನಕ ಅರ್ಥವಾಗುತ್ತಿಲ್ಲ. ಕೊನೆಯ ತನಕವೂ ಹೆಬ್ಬಾರರಲ್ಲೇ ಕೇಳಿ ಬಿಡಬೇಕು ಎಂದು ಕೊಂಡರೂ ಸಾಧ್ಯವಾಗಿರಲಿಲ್ಲ.

ಅವರು ಹಾಗೆ ಹೇಳುತ್ತಾ ಅಲ್ಲಲ್ಲಿ ಕನ್ನಡಕ ತೆಗೆದು ಕಣ್ಣು ಒರೆಸಿಕೊಳ್ಳುತ್ತಿದ್ದುದು ಆಗಲೂ ಈಗಲೂ ಪಾಪ ಬೇಜಾರು ಎಂಬ ಫೀಲಿಂಗ್ ಮಾಡಿತ್ತು.

ಆ ದಿನ ಹೆಬ್ಬಾರರು ನಮಗೆ ಇಡೀ ಮಂಗಳೂರು ತೋರಿಸಿದ್ದರು .ಹಂಚಿನ ಕಾರ್ಖಾನೆ ,ಬತ್ತೇರಿ, ಬಂದರದ ಅಡಕೆ ಮಂಡಿ, ಬೆಲ್ಲದ ಗೋಡಾನು,ಕೃಷ್ಣಭವನ,ಉಳ್ಳಾದ ಪಳ್ಳಿ,ವೆನ್ಲಾಕುಆಸ್ಪತ್ರೆ, ಬಾವುಟಗುಡ್ಡೆ, ಬೀರಿ, ಪಣಂಬೂರುಬೀಚು, ಜ್ಯೋತಿ ಟಾಕೀಸಿನ ಸಿನಿಮಾ.....

...ಸಿನಿಮಾ ಅರ್ಧದಲ್ಲಿದ್ದಾಗ ತಡಕಾಡಿದರೆ ಹೆಬ್ಬಾರರು ನಾಪತ್ತೆ.ಆ ಮಧ್ಯಾಹ್ನದ ಹೊತ್ತಿನಲ್ಲಿ ಆ ಟಾಕೀಸಿನ ಕರ್‍ಘೂಢ ಕತ್ತಲೆಯಲ್ಲಿ ಅವರಿಗಾಗಿ ಟಾಕೀಸಿನಲ್ಲಿ ಹುಡುಕಾಡಲು ಹೊರಟು, ಯಾರು ಯಾರ ಮೇಲೆಲ್ಲಾ ಬಿದ್ದು ಬೈಗಳು ತಿಂದು,ಪರದಾಡಿ ಗಳಗಳನೇ ಅತ್ತು ಓಡಿ ಹೊರಗೆ ಬಂದರೆ ,ಅವರ ಜೀಪು ಹಾಗೇ ಅಲ್ಲೇ ನಿಂತಿತ್ತು.ತಪಕ್ಕನೇ ಹಾರಿ ಕುಳಿತು ಅವರಿಗಾಗಿ ಸಿನಿಮಾ ಮುಗಿದು ಜನ ಬಿರಿಯೋ ತನಕ ಕಾದದ್ದು ಎಂಥಾ ಸಣ್ಣ ಸಾಹಸವಾ ಆ ಕಾಲದಲ್ಲಿ ??ಸಂಜೆ ಕತ್ತಲಾಗಿ, ಕತ್ತಲು ರಾತ್ರಿಯಾಗಿ ,ಮಂಗಳೂರು ತುಂಬೆಲ್ಲಾ ಬೆಳ್ಳಿ ಬೆಳಕು ಜುಮ್ ಜುಮ್ ಎಂದಾಗ ಹೆಬ್ಬಾರರು ಬಂದರು.ಜೀಪು ಹತ್ತಿ ನಮ್ಮ್ತತ್ತ ನೋಡಿ ಹೆದರಿಕೆಯಾಯಿತಾ ಎಂಬ ಹಾಗೇ ನೋಟದಲ್ಲೇ ಕೇಳಿದರು.ಅವರಿಗೆ ನಾವು ಆಗ ಯಾಕೆ ಬೈಯಲಿಲ್ಲ? ನಾಯಿಗೆ ಬೈದಂತೆ ಬೈಯಬೇಕು ಅಂತ ಉರಿಯುತ್ತಿದ್ದರೂ ಏಕೆ ತಣ್ಣಗಾದೆವೋ ಗೊತ್ತಿಲ್ಲ.

ಆ ದಿನ ಆ ಹೊತ್ತು ಮಾತ್ರಾ ಹೆಬ್ಬಾರರು ಉಂಡು ಮೆದ್ದವರ ಹಾಗೇ ಕತ್ತಲಲ್ಲೂ ಕಂಡರು..ಮೈ ತುಂಬಾ ಏನೋ ನಿಟಿಕೆ ಮುರಿದು ಮೆತ್ತಗಾದ ಹಾಗೇ..!!

ಹೆಬ್ಬಾರರು ಆಗಲೇ ನಮ್ಮ ಕೈ ಎಳೆದು ತಮ್ಮತ್ತ ಚಾಚಿಕೊಂಡರು.ಕಿಸೆಯಿಂದ ಫಳ್ಳನೇ ಹೊಳೆಯುವ ಎಚ್ಚೆಮ್ಟಿ ವಾಚನ್ನೂ ಕಟ್ಟಿಬಿಟ್ಟರು.ಆಹಾ ವಾಚು! ಇಂಥ ಒಂದು ವಾಚು ಬೇಕೆಂದು ಎಷ್ಟೊಂದು ಸಮಯದಿಂದ ನಾವು ಅಪ್ಪನಿಗೆ ಕೇಳಲೂ ಆಗದೇ ಒಳಗೊಳಗೆ ಹಂಬಲಿಸಿದ್ದೆವು..


ಇದೆಲ್ಲಾ ಆಗಿ ಒಂದು ವಾರದೊಳಗೆ ಹೆಬ್ಬಾರರು ಜೀಪನ್ನು ಮಾರಿದರೆಂದೂ,ಹೆಂಡತಿಯನ್ನೂ ಬಿಟ್ಟರೆಂದೂ ಗೊತ್ತಾಯಿತು.ಯಥಾ ಪ್ರಕಾರ ಅಜ್ಜ ಕವಳ ಹಾಕಿ ರಂಗು ರಂಗಾಗಿ ಮಾತಾಡಿದ್ದದರಲ್ಲಿ ನಮಗೆ ಸುಮಾರು ವಿಷಯ ಅರ್ಥವಾಗಿರಲಿಲ್ಲ.ಈ ಬಾರಿ ಈ ಕುರಿತು ಅವರಲ್ಲೇ ವಿವರವಾಗಿ ಕೇಳಬೇಕು ಎಂದು ಎಂದು ನಾವು ಕಾದಿದ್ದೆವು.ಅದೇ ನಾವೆಣಿಸಿದಂತೆ ಹೆಬ್ಬಾರರು ಬಂದೇ ಬಂದರು.ಅದೇ ಅವರ ಕಿಣಿ ಕಿಣಿ ಸೈಕಲ್ ಮೇಲೆ.ಆದರೆ ಆ ಸೈಕಲ್ಲಿಗೆ ಹಿಂದಿನ ಧಿಮಾಕೇ ಇರಲಿಲ್ಲ..ತುಂಬಾ ಸೋತು ಹೋಗಿತ್ತು.ಅವರು ಮನೆಯೊಳಗೆ ಹೋದ ಮೇಲೆ ನಾವು ಸೈಕಲ್ಲಿನ ಬೆಲ್ಲು ಬಜಾಯಿಸಲು ನೋಡಿದೆವು,ಅದು ಕಿರಿಂಕ್ ಅಂತ ಹೇಳಿ ಸುಮ್ಮನಾಯಿತು.ಈ ಬಾರಿ ಅವರು ಒಂದು ಚೀಲ ತುಂಬಾ ಕೊಟ್ಟೆಮುಳ್ಳು ಹಣ್ಣು ತಂದಿದ್ದರು .ಅವರು ಗದ್ದೆ ಕಡೆ ಹೋದರು.

ಮರಳಿ ಬರುವಾಗ ಊಟಕ್ಕೆ ಬರಬಹುದು ಅಂತ ಅಜ್ಜ ಅವರಿಗಾಗಿ ಅವರ ಇಷ್ಟದ ಕಾಟು ಮಾವಿನ ಹಣ್ಣು ಹಿಚುಕಿ ಗೊಜ್ಜಿ ಮಾಡಿಟ್ಟಿದ್ದರು.

ಹೆಬ್ಬಾರರು ಬರಲೇ ಇಲ್ಲ.

ಈ ತನಕವೂ..

ಕಳೆದ ಹದಿನೈದು ವರ್ಷಗಳಿಂದ ಕಾದಿದ್ದೇವೆ.ಅವರ ಸುಳಿವೇ ಇಲ್ಲಾ ಎಂದ ಮೇಲೆ ಬರುವುದು ಎಲ್ಲಿಗೆ?ನಮ್ಮ ತಡಮೆ ಬಳಿ ಇದ್ದ ಆ ಸೈಕಲ್ಲನ್ನು ತಿಂಗಳು ಬಳಿಕ ಪೊಲೀಸರು ತೆಗೆದುಕೊಂಡು ಹೋದರು.ಅವರ ತಪಾವಣೆ ಕುರಿತಂತೆ ಅಪ್ಪ ಟೇಶನ್ನಿಗೆ ಹೋಗಿ ಸ್ಟೇಟ್‌ಮೆಂಟು ಕೊಡಬೇಕಾಯಿತು.ಹಳ್ಳದ ದಿಡ್ಡಿನಲ್ಲಿ ಇದ್ದ ಆ ಒಕ್ಕಲ ಹೆಂಗಸು ಅವರು ಅಬ್ಳುಕ್ಕನ ಹಣ್ಣು ತರುತ್ತೇನೆಂತ ಹೋಗಿದ್ದಾರೆ ಎಂದು ಟೇಶನ್ನಿನಲ್ಲೂ, ಊರವರಲ್ಲೂ ಸುಮಾರು ವರ್ಷ ಹೇಳಿಕೊಂಡಿತ್ತು.

ದೇವಸ್ಥಾನ ಕಮಿಟಿಯವರು ಹೆಬ್ಬಾರರನ್ನು ಬದರೀಕಾಶ್ರಮದಲ್ಲಿ ಕಂಡ ವಿಷಯ ಹೇಳಿದ ಮೇಲೆ ಅವರು ಇನ್ನೊಮ್ಮೆ ಅದೇ ಸೈಕಲ್ಲಿನಲ್ಲಿ ಕಿಣಿಕಿಣಿ ಮಾಡಿಕೊಂಡು ಬರಬಹುದು ,ಕೊಟ್ಟೆ ಮುಳ್ಳುಹಣ್ಣು ತರಬಹುದು ಎಂದನಿಸುತ್ತದೆ.

ಇಷ್ಟೆಲ್ಲಾ ಆಗಿಯೂ ಅವರು ಕೊಟ್ಟ ಆ ಎಚ್ಚೆಮ್ಟಿ ವಾಚನ್ನು ಈಗಲು ಇಟ್ಟುಕೊಂಡಿರಬೇಕಿತ್ತು ಎಂದು ಹಳಹಳಿಕೆಯಾಗುತ್ತಿದೆ.

ಬದರಿಕಾಶ್ರಮಕ್ಕೆ ಸೀದಾ ಹೋಗಿ ಅವರನ್ನು ಮೀಟ್ ಮಾಡಿದರೆ ಹೇಗೆ ಎಂದುಕೊಳ್ಳುತ್ತೇವೆ.

ಆಗುತ್ತಾ?

ಹೌದೂ.. ಈ ದೇವಸ್ಥಾನ ಕಮಿಟಿಯವರು ಅವರನ್ನು ಊರಿಗೆ ಬರುವಂತೆ ಕರೆದರಾ.?ಅವರೇ ಆ ಬಗ್ಗೆ ಏನಾದರೂ ಹೇಳಿದರಾ?ಸುಧಾಕರನ ಪ್ರಕಾರ ಆವರು ಇತ್ತ ಬರುವ ಮಾತೆತ್ತಿದ ಕೂಡಲೇ ಸರಕ್ಕನೇ ಮಾಯವಾಗಿಬಿಟ್ಟರು;.

ಯಾಕಿರಬಾರದು? ಈ ಕಮಿಟಿಯವರು ಲಾಟೇ ಬಿಟ್ಟದ್ದೂ ಆಗಿರಬಹುದು..ಆಥವಾ ಅವರು ಕಂಡದ್ದು ಇದೇ ಹೆಬ್ಬಾರರೆಂದು ಏನು ಖಾತ್ರಿ?ಒಬ್ಬ ಹೆಬ್ಬಾರರಂತೆ ಇನ್ನೊಬ್ಬ ಹೆಬ್ಬಾರ ಇರಬಾರದೇಕೆ ?..ಎಂದಿತ್ಯಾದಿ ಎಂದುಕೊಳ್ಳುತ್ತಾ ಕತೆ ಇನ್ನೊಬ್ಬ ಹೆಬ್ಬಾರರತ್ತ ಸರಿಯುವುದನ್ನು ಕಂಡು ಚಕಿತಗೊಳ್ಳುತ್ತೇವೆ.!!

20070420

ಕಾಲದ ಕಾಲುಹಾದಿಯಲ್ಲಿ ಒಂದರಗಳಿಗೆ ವಿಶ್ರಾಂತಿ


ನಾವು ಕಾಣದ ಕಾಲದ ಬಗ್ಗೆ ನಾಲ್ಕು ಮಾತು..ಇದನ್ನು ಇಂಟ್ರೊಡಕ್ಷನ್ ಆಂತ ಓದಿ..

ಕಾಲ ಸುಮ್ಮನಿರೋದಿಲ್ಲಾ ಅಂತ ಹೇಳಿದೋರು ಯಾರು ?

ಕಾಲ ಬದಲಾಗೊದಿಲ್ಲ.

ಕೋಟಿ ಕೋಟಿ ವರ್ಷಗಳ ಮೊದಲು ಕಾಲ ಹೀಗೆಯೇ ಇತ್ತು.

ಆ ಬುಗರಿ ಚೆಂಡು ಅಲ್ಲಿಂದ ಸಿಡಿದು ಇಲ್ಲಿಗೆ ತಂದು ಹೀಗೆ ತಿರುಗಿಸಿ ಬಿಟ್ಟು ಕಾಲ ಸುಮ್ಮನೇ ಕುಳಿತಿತಾ ?

ಅದೂ ಇಲ್ಲಾ.

ಇಲ್ಲಿ ಜೀವಾನು ಜೀವಿಗಳನ್ನು ಹುಟ್ಟು ಹಾಕಿ..ಅವರಲ್ಲಿ ಒಂದನ್ನು ಮತ್ತೊಂದಕ್ಕೆ ತಿನ್ನಿಸಿ..

ಅವರ ಮೇಲೆ ಇವರ ಬಿಟ್ಟು ..

ಕಾಲ ತನ್ನ ಪಾಡಿಗೆ ತಾನು ಕುಳಿತು..

ಯಾರೆಂದರು ಕಾಲ ಬದಲಾಗಿದೆ ಎಂದು?

ಕಾಲಾಯ ತಸ್ಮೈ ನಮಃ ಎಂದದ್ದು ಹಿರಿಯರು ಅದಕ್ಕೇ ಇರಬೇಕು.

ಅದರೊಡನೆ ಸ್ಪರ್ಧಿಸಲಾಗದು..ಮತ್ತು ಅದರೊಂದಿಗೆ ಇರಲೂ ಆಗದು ಅದರ ಪಾಡಿಗೆ ಅದು ನಮ್ಮ ಪಾಡಿಗೆ ನಾವು ಇದ್ದು ಬಿಡೋಣ ಅಂತ ಕಾಲಕ್ಕೇ ನಮಸ್ಕಾರ ಹಾಕಿದರು..

ಕಾಲವನ್ನು ಸಾವಿಗೆ ಸಮೀಕರಿಸಿ ಮತ್ತಷ್ಟು ಡೇಂಜರು ಮಾಡಿದರು ನಂ ಹಿರೀಕರು.

ಕಾಲ ಪುರುಷ ಎಂಬ ಕ್ಯಾರೆಕ್ಟರ್ ತಯಾರಿಸಿ ಅವನ ಕೈಯಲ್ಲಿ ನಮ್ಮ ಜೀವ ಕೊಟ್ಟು ತುಂಬಾ ದುರ ನಿಂತು ಬಿಟ್ಟರು.

ಕಾಲಪುರುಷಂಗೆ ಗುಣಮಣಮಿಲ್ಲಂಗಡ..ನಿಸ್ತೇಜಂಗಡ ..ಎಂದಿದ್ದ ಮುದ್ದಣ

..ಪೂರ್ ಫೆಲೋ

ಮಗಳು ಯಾವನ ಜೊತೆಗೋ ಓಡಿ ಹೋದರೆ ಕಾಲ...ಅನ್ನೋ ಕಾಲ ಬಂತು

ಅಪ್ಪನಿಗೆ ಮಗ ರೋಪ್ ಹಾಕಿದರೆ ಅದೇ ಕಾಲ..ಕೆಟ್ಟತೂ ..

ಕಾಲ ತುಂಬಾ ಪಾಪ ಕಣ್ರೀ.

ವೆರೀ ಸಿಂಪಲ್...

ಅದರ ಪಾಡಿಗೆ ಅದು ಇರತ್ತೆ..ನಾವು ಅದರ ಹೊದ್ದಿನಲ್ಲಿ ಇದ್ದು ಅದಕ್ಕೇ ಯಾಮಾರಿಸುತ್ತಾ ಅದನ್ನೇ ಟಾರ್ಗೆಟ್ಟು ಮಾಡುತ್ತೇವೆ.

ನಾವು ಹೇಗಿರಬೇಕೂಂತ ನಾವು ನಿರ್ಧರಿಸಲು ಆಗುತ್ತಾ?

ಇಂಪಾಸಿಬಲ್.

ನಾವು ಯಾವಾಗ ಹುಟ್ಟಬೇಕು?? ಯಾವಾಗ ಸಾಯಬೇಕು?? ಯಾರನ್ನು ಹಿಡೀಬೇಕು ??ಎಲ್ಲಿಗೆ ಯಾವಾಗ ಹೋಗಬೇಕು ಎಂಬುದೆಲ್ಲಾ ಆಲ್‌ರೆಡೀ ಡಿಸೈಡೆಡ್.

ಯಾವಾಗ ಏನ್ ತಿನ್ತೀವೆ ಅಂತ ನಮಗೇ ಗೊತ್ತಿರೋದಿಲ್ಲ..!?ನಾಳೆ ಕಾಫಿಗೆ ದೋಸೆ ಮಾಡುತ್ತೇನೆ ಅಂತ ಹೊರಟರೆ ಬೆಳಗ್ಗೆ ಕರೆಂಟು ಇಲ್ಲದಾಗಿ ಅವಲಕ್ಕಿ ಉಸ್ಲಿ ಮುಕ್ಕುತ್ತೇವೆ.

ದಾರಿ ಮಧ್ಯ ಕಾರು ಕೆಟ್ಟು ಹೋದ ಕೆಲಸ ಎಡವಟ್ಟಾಗಿ,ಎಲ್ಲೋ ಸೇರಬೇಕಾದವರು ಎಲ್ಲೋ ನಿಂತು ಏನೇನೊ ಆಗಿ ಕೊನೆಗೆ ಹೈರಾಣ ಆಗಿ..

ದಾನೆ ದಾನೆ ಮೆ ಲಿಖಾ ಹೈ ಖಾನೇವಾಲೇ ಕಾ ನಾಮ್

ನಾವು ತಿನ್ನೋದೂ, ಕುಡಿಯೋದೂ ,ನಗೋದೂ ,ನಲಿಯೋದೂ ಎಲ್ಲಾ ಆಗಲೇ ವೇಳಾಪಟ್ಟಿ ಆಗಿದೆ.

ನಾವು ಮಾತ್ರಾ ಎಲ್ಲಾ ನಮ್ಮದೇ ಸ್ವಂತ ಪ್ಲಾನ್ ಎಂಬ ಹಾಗೆ ಶೋ ಮಾಡುತ್ತೇವೆ,

...ನಮ್ಮದಲ್ಲ ಎಂದು ಗೊತ್ತಿದ್ದೂ

ಇದನ್ನೇ ಚೊಕ್ಕದಾಗಿ ಹೇಳಿದ್ದು..

...ಅಪ್ಪದು ತಪ್ಪ..ಆಗದ್ದು ಆಗ

20070418

ನಿದ್ದೆ ಎಂಬ ನಿತ್ಯ ಮರಣಅದನ್ನು ಹಾಗೂ ಹೀಗೂ ಹೇಳುತ್ತಾರೆ.

ನಿದ್ದೆ

-ಅದೆಂದರೆ ವಿಶ್ರಾಂತಿ,

ನಿದ್ದೆ-ಹಾಗೆಂದರೆ ಬರಿಯ ಮಾಯೆ.

ಅದು ಇಲ್ಲದಿದ್ದರೆ ಬದುಕು ಸಾಧ್ಯವಿಲ್ಲ,

ಅದು ಇರಬೇಕಷ್ಟೇ ; ಅದುವೇ ಇರಬೇಕೆಂದೇನಿಲ್ಲ....

....ವಾದ ಮುಗಿಯುವುದಿಲ್ಲ.

'ಮತ್ತೊಮ್ಮೆ ನಿಮ್ಮೊಳಗೆ ನೀವು ನಿದ್ದೆಯನ್ನೊಮ್ಮೆ ಸದ್ದಿಲ್ಲದೆ ನೋಡಿ. ನಿದ್ದೆ ವಿಶ್ರಮವೂ ಅಲ್ಲ, ಮಾಯೆಯೂ ಅಲ್ಲ. ಅದು ನಮ್ಮೊಳಗೆ ನಾವು ಇಳಿಯುವ ಸ್ಥಿತಿ. ಜಗದ ಜಂಜಡ ಮನೋವ್ಯಾಪಾರಗಳನ್ನು ಮುಗಿಸಿ, ಬಾಗಿಲು ಮುಚ್ಚಿ ಕದವಿಕ್ಕುವ ಕ್ರಿಯೆ.

ನಿದ್ದೆಯೂ ಒಂದು ಧ್ಯಾನಸ್ಥಿತಿ ಏಕಾಗಬಾರದು ?

ಹೀಗೆಂದರೆ ಇದನ್ನು ತರ್ಕದಿಂದ ಸಾಧಿಸಿ ತೋರಿಸುವುದು ಕಷ್ಟ.

ನಿದ್ದೆಯಿಲ್ಲದೆ ಹೊರಳಾಡಿ, ನಿದ್ದೆಯಿಲ್ಲದೆ ನರಳಾಡಿ ನಿದ್ದೆ ಬಂದರೆ ಮಾತ್ರಾ ಮನಸ್ಸು ಶಾಂತವಾಗುತ್ತದೆಯೆಂದು ಭ್ರಮಿಸಿ, ಆ ಭ್ರಮೆಯಲ್ಲೇ ಹಣ್ಣಾಗಿ, ನಿದ್ರಿಸುವುದೇ ಜೀವನದ ಪರಮಗುರಿ ಎಂಬ ಶಯನಾಗ್ರೇಸರರ ನಡುವೆ ನಿಂತು, ನಿದ್ದೆ ಕೂಡಾ ಧ್ಯಾನವಾಗಲಿ, ಧ್ಯಾನಿಸುವ ಕೆಲಸ ಮನಸ್ಸಿನಲ್ಲಾಗಲಿ, ಎಂದು ಸೂಚಿಸಿದರೆ ಹೇಗಿರಬಹುದೋ !

"ನಿದ್ದೆಗೊಮ್ಮೆ ನಿತ್ಯ ಮರಣ..’ ಎಂದಿದ್ದ ಕವಿ.

ಪ್ರತಿನಿತ್ಯ ನಾವು ಸಾಯುತ್ತೇವೆ.

ನಿದ್ದೆ ನಮ್ಮ ನಿತ್ಯ ಸಾವು.

ಎದ್ದಾಗ ಹೊಸಹುಟ್ಟು.

ಇಂಥ ನಿತ್ಯ ಸಾವಿನಲ್ಲೂ ನಮ್ಮ ಜೀವನದ ನಿರಾಕರಣ, ಅಕರಾಳ-ವಿಕರಾಳ ಜೀವನ ವ್ಯಾಪಾರಕ್ಕೆ ನಿತ್ಯ ಮುಕ್ತಿ.

ಸಿದ್ಧಾರ್ಥ ಬುದ್ಧನಾದದ್ದು ಇಂಥ ಸಾವನ್ನು ಗೆದ್ದಾಗಲೇ.

ಕಪಿಲ ವಸ್ತುವಿನಲ್ಲಿ ಜಗವೆಲ್ಲ ಮಲಗಿರಲು ಇವನೊಬ್ಬನೆದ್ದು ಹೊರಟು ಹೋದನು. ಮರಳಿ ಬಂದಾಗ ಬುದ್ಧನಾಗಿದ್ದ.

ನಿದ್ರೆ ಬರದವರಿಗೆಲ್ಲ ಇದೆ ಸರಿಯಾದ ದಾರಿ ಎಂದು ವೈಎನ್ಕೆ ವಿನಮ್ರರಾಗಿ ಶುದ್ಧೋದನನ ಮಗ ರಾತ್ರೋರಾತ್ರಿ ಎದ್ಹೋದನ ಎಂಬ ಪದ್ಯ ಸಾಲಿನಲ್ಲಿ ಹೇಳಿದ್ದರು.

ನಿದ್ದೆ ಕೂಡಾ ಪ್ರಕೃತಿಧರ್ಮ. "ಆಹಾರ ನಿದ್ರಾ ಭಯ ಮೈಥುನಂಚ...’ ಎಂಬ ಸೂಕ್ತಿ ಸಾಲು ಇಲ್ಲಿ ಉದ್ಧರಣೀಯ.

ಋಗ್ವೇದದಲ್ಲಿ "....ನಿ ಗ್ರಾಮಸೋ ಅವಿಕ್ಷತನಿ ಪದ್ವಂತೋನಿ ಪಕ್ಷಿಣ ಃ’ ಎಂಬ ಸಾಲುಗಳಿವೆ.

ರಾತ್ರಿ ಬಂದಿದೆ, ಗ್ರಾಮದ ಜನರು, ಕುದುರೆ, ಹಸು, ಪಕ್ಷಿಗಳು, ಗಿಡುಗ, ಹದ್ದು ಸಹಿತ ಎಲ್ಲರೂ ನಿದ್ದೆ ಹೋಗುತ್ತಾರೆ. ದೇವನೇ ಈ ಎಲ್ಲರನ್ನೂ ನೀನು ರಕ್ಷಿಸಬೇಕು’ ಎಂಬ ಮೊರೆ

.ಇಂಥ ನಿದ್ದೆಯಲ್ಲೇ ಮನುಷ್ಯ ತನ್ನ ಜೀವಿತಾರ್ಧ ಕಾಲ ಕಳೆಯುತ್ತಾನೆ.

ಮನುಷ್ಯನೇನು, ದೇವರೂ ಕೂಡಾ ನಿದ್ರಿಸುತ್ತಾನೆ ಎಂದು ತಾನೇ ಬೆಳ್ಳಂಬೆಳಗ್ಗೆ ನಾವು ಉತ್ತಿಷ್ಠೋತ್ತಿಷ್ಠ ಗೋವಿಂದ.... ಎಂದು ಸುಬ್ಬುಲಕ್ಷ್ಮಿ ಸುಪ್ರಭಾತ ಹಾಕೋದು.

. ..ಮಹಾವಿಷ್ಣುವಿನ ನಿದ್ದೆಯನ್ನು "ಶೃಂಗಾರ ನಿದ್ದೆ ಸಾಕು ಸಾಕೆಂದು’ ಮಹಾಲಕ್ಷ್ಮಿ ಬಂದೆಬ್ಬಿಸಿದ ಬಗ್ಗೆ ಹಾಡುಗಳಲ್ಲಿ ಉಲ್ಲೇಖವಿದೆ.

ನಿದ್ದೆಗೂ ಶೃಂಗಾರವೇ ಎನ್ನಬಹುದು.

ಸಿಹಿ ನಿದ್ದೆ, ಸಕ್ಕರೆ ನಿದ್ದೆಗಳಿದ್ದಂತೆ ಆಸ್ಪತ್ರೆಗಳಲ್ಲಿ ಕಾಯಿಲೆ ಬಿದ್ದವರದ್ದು ಕಹಿಕಹಿ ನಿದ್ದೆ ಎಂದು ಹೇಳಬಹುದೇನೋ ?

ಹಾಗೇ ಪ್ರೇಮಿಗಳ ನಿದ್ದೆ ಕಂಡು ಸೂರ್ಯ ಕೂಡಾ ನಾಚಿಕೊಂಡ ಎಂದರೆ ಅದು ಶೃಂಗಾರ ನಿದ್ದೆಗೆ ಸರಿಗಟ್ಟಬಹುದು.

ನಿದ್ದೆ ಎಂದರೆ ಮಾಯೆಯ ಆಲಿಂಗನ ಎಂದು ಯಾರೋ ಹೇಳಿದಾಗ, ನಿದ್ದೆಗೂ ಮುನ್ನ ಮಾಯಾಂಗನೆಯ ಆಲಿಂಗನ ಬಗ್ಗೆ ಹೇಳಿ ಎಂದು ರಸಿಕ ಶಿಖಾಮಣಿ ಅಲವತ್ತುಕೊಂಡನಂತೆ.

ನಿದ್ರೆಯ ವಿರೋಧ ಪದ ಅವನಿದ್ರೆ ! ಎಂದು ಹನಿಗವಿ ಹೇಳಿದ್ದು ಇಲ್ಲಿ ಕೋಟ್ ಮಾಡಬಹುದು.

ನಿದ್ದೆಗೆಟ್ಟು ಕಾವ್ಯ ಸೃಷ್ಟಿ ಮಾಡಿದಂತೆ, ಕಾವ್ಯ ಕೆಟ್ಟು ನಿದ್ದೆ ಸೃಷ್ಟಿಯಾಗಬಹುದು.

ರಾತ್ರಿಯೆಲ್ಲಾ ಬರದಿದ್ದರೆನಿದ್ದೆ,

ಈ ಕವಿಯ ಕಾವ್ಯ ಪಠಣ

ದಿಢೀರ್ ಮುದ್ದೆ !

ಎಂದಿದ್ದರು ವೈಎನ್ಕೆ...

ಈ ದೇಹ ನಾನಲ್ಲ.


ನೋಡುವಾಗಲೇ ಹಣ್ಣು ಹಣ್ಣು ಮುದುಕ.

ಆವರ ಬಗ್ಗೆ ತುಂಬಾ ಜನ ಮಾತನಾಡುತ್ತಿದ್ದರು.

ಅರ್ಥವೇ ಆಗಲ್ಲ -ಎಂಬುದು ಆ ಮಾತುಗಳಲ್ಲಿ ನನಗೆ ಅತ್ಯಂತ ಆಪ್ಯಾಯಮಾನವಾಗಿತ್ತು.

ನನಗೂ ಅದೇ ಬೇಕಾಗಿತ್ತು.

ಅರ್ಥವಾಗೋರಲ್ಲಿ ಏನು ಸ್ವಾರಸ್ಯ ಇರಲ್ಲ.

ಆಗದೇ ಇರೋರು ತುಂಬಾ ಹುಡುಕಾಟಕ್ಕೆ ಅವಕಾಶ ಮಾಡುತ್ತಾರೆ.

ಅಜ್ಜನ ಬಗ್ಗೆ ನನಗೆ ಆಸಕ್ತಿ ಮೂಡಿದ್ದು ಹಾಗೆ.ಆದರೆ ಏಕೋ ಅವರ ಸುತ್ತಾ ಬರೀ ಎಡಬಿಡಂಗಿಗಳನ್ನು ಕಂಡ ಹಾಗಾಗಿ ಮೊದಲ ಭೇಟಿಯಲ್ಲೇ ಆಸಕ್ತಿ ಕಳೆದುಕೊಂಡೆ.

ಎರಡನೇ ಭಾರಿ ನೋಡಿದ್ದು ಅವರ ಆಶ್ರಮದಲ್ಲಿ.ಸ್ವಾತಂತ್ರ್ಯದಿನಾಚರಣೆ ದಿನ.ಯಾವುದೋ ಭಾಷಣ ಮಾಡಿದ್ದೆ.ಅಲ್ಲಿ ಸೇರಿದ್ದವರೆಲ್ಲಾ ತೀರಾ ಕನ್‌ಪ್ಯೂಸ್ಡ್ ಅಂತ ಗೊತ್ತಿತ್ತು.ಅವರನ್ನು ಮತ್ತಷ್ಟು ಕನ್‌ಪ್ಯೂಸ್ ಮಾಡಿ ಹಾಕಿದ್ದೆ.ಅನೇಕರು ಈಗಲೂ ಕಂಡಾಗ ಅದನ್ನು ನೆನಪಿಸುತ್ತಾರೆ.

ಮೂರನೇ ಭಾರಿ ಕಂಡಾಗ ಅಜ್ಜನ ಆಶ್ರಮ ತುಂಬಾ ಎಂಥ ಎಂಥದೋ ಆಗಿತ್ತು.ನನಗೆ ಇಷ್ಟವಾಗಲಿಲ್ಲ. ಹೊರಟು ಬಂದೆ.

ಈಗ ಅಜ್ಜ ದೇಹತ್ಯಾಗ ಮಾಡಿದ್ದಾರೆ.

ಮೊನ್ನೆ ಮಧ್ಯರಾತ್ರಿ ಕಳೆದ ಕೆಲ ಹೊತ್ತಿನಲ್ಲೇ "ಈ ದೇಹ ನಾನಲ್ಲ’ ಎಂಬ ವಿಶಿಷ್ಟ ಸಿದ್ಧಾಂತದ ಪ್ರತಿಪಾದಕ ನಿರ್ಗಮಿಸಿದರು.

ಯಾರು ಈ ಅಜ್ಜ??

ಪಕ್ಕಾ ಬೆಳ್ಳಾರೆ ಕಡೆಯ ಹವ್ಯಕ ಬ್ರಾಹ್ಮಣ.ಎಲ್ಲಾ ಹವ್ಯಕ ಬ್ರಾಹ್ಮಣರಂತೆ ಬದುಕಿದವರು.ಅದೇ ತೋಟ,ಅದೇ ಮನೆ ..ಶುದ್ಧ ಮುದ್ರಿಕೆ ಆಚಾರ ವಿಚಾರ॒

ಅಪ್ ಟು ೩೬ ತನಕ.

೧೯೫೨ ರಲ್ಲಿ ಅಜ್ಜ ತಮ್ಮ ದೇಹವನ್ನು ಬಿಟ್ಟು ಹೊರಟರು.ಎಲ್ಲಾ ಶುರುವಾಗೋದೇ ಅಲ್ಲಿಂದ.

ಎಲ್ಲಾ ಭಟ್ರುಗಳಂತೆ ಕೃಷಿಕರಾಗಿ ತೋಟ-ಹೊಲ ಗದ್ದೆ ಎಂದು ಮಣ್ಣಿನ ಕೆಲಸದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದವರು ಆಗ ಬಂದ ಎದೆ ನೋವಿನಿಂದ ಮಲಗಿದರು. ಯಾವ ಔಷಧಿಯಲ್ಲೂ ಗುಣವಾಗದ ನೋವು ಪದೇ ಪದೇ ಕಾಡುತ್ತಿದ್ದಂತೆ,...

ಆ ನೋವಿಗೇ ತಮ್ಮ ಮನಸ್ಸನ್ನು ತೊಡಗಿಸಿಕೊಳ್ಳುವ ಮೂಲಕ

"ಸ್ವೀಕಾರವೇ ದಾಟುವ ದಾರಿ’ ಎಂಬ ಸ್ವಯಂ ಸಿದ್ಧಾಂತವನ್ನು ಅನ್ವೇಷಿಸಿದರು. ನೋವಿನ ರಹಸ್ಯ ಗೊತ್ತಾದಾಗ, ಮನಸ್ಸಿನ ರಹಸ್ಯವೂ ತಿಳಿಯಿತು. ನೋಡ ನೋಡುತ್ತಿದ್ದಂತೆ ನೋವು ಮಾಯವಾಯಿತು.

ರಾಮಚಂದ್ರ ಭಟ್ಟರು ಬದಲಾದರು.

ಆ ವಿಸ್ಮಯವನ್ನೇ ಅವರು ಶೋಧಿಸಲಾರಂಬಿಸಿದರು. "ಈ ದೇಹ ನಾನಲ್ಲ’ ಎಂದ ಅವರನ್ನು ಹುಚ್ಚ ಎಂದೇ ಜನ ಗೇಲಿಯಾಡಿದರು.

ಅವರು ಆ ಬಳಿಕ ೧೮ ವರ್ಷಗಳ ಕಾಲ ಯಾರ ಸಂಪರ್ಕಕ್ಕೂ ಬಾರದೇ ಏಕಾಂತದಲ್ಲಿ ಕಳೆದರು.

ಆ ವೇಳೆಗೆ ಅವರಿಗೆ "ನಾವು ಈ ತನಕ ತಿಳಿದುಕೊಂಡಿದ್ದು ಸತ್ಯವಲ್ಲ ಎಂಬುದನ್ನು ತಿಳಿಯುವುದೇ ಸತ್ಯ’ ಎಂಬ ಅನುಭವ ಸಾಕ್ಷಾತ್ಕಾರವಾಗಿತ್ತು.

ಬದಲಾವಣೆಯ ಬಳಿಕ ಕೊನೆ ಉಸಿರಿನವರೆಗೂ ತಾನು ತಾನಲ್ಲ ಎಂಬ "ನೇತಿ’ ಸಿದ್ಧಾಂತವನ್ನು ಪ್ರತಿಪಾದಿಸಿದ್ದರು.

ತಾನು ನಂಬಿದ್ದು ಸತ್ಯ ಅಲ್ಲ ಎಂಬ ಜಗತ್ತು ಒಪ್ಪಿಕೊಳ್ಳದ ಆದರೆ ಒಪ್ಪಲೇ ಬೇಕಾದ ಸಿದ್ಧಾಂತವನ್ನು ಅಜ್ಜ ಪ್ರತಿಪಾದಿಸಿದರು.

ಆ ಸತ್ಯವೂ ಅವರೊಳಗೆ ಅನಾವರಣಗೊಂಡಿತ್ತು.

ಸಾವು ನಮ್ಮ ಸಖ, ಬದುಕುವುದನ್ನು ಕಲಿಯುದಕ್ಕೂ ಮೊದಲು ಸಾಯುವುದನ್ನು ಕಲಿಯಿರಿ. ಸಾಯುವುದನ್ನು ಕಲಿಯದೇ ಬದುಕುವುದು ಹೇಗೆಂದು ಗೊತ್ತಾಗಲಾರದು ಎಂದಿದ್ದರು ಅಜ್ಜ.

ಈ ದೇಹದಲ್ಲಿ ತಾನು ಹೇಗಿದ್ದೇನೆಂದರೆ ಸೂಜಿಯ ಮೇಲೆ ಆನೆ ನಿಂತ ಹಾಗೆ ಎಂದಿದ್ದ ಅಜ್ಜ ಸಾವಿನ ಅನುಭವವನ್ನು ನಿರಂತರ ಪಡೆಯುತ್ತಿದ್ದರು.

ದೇಹದ ಸಾಧ್ಯತೆಗಳು ಪ್ರಚಂಡ ಎಂದಿದ್ದ ಅಜ್ಜ, ಆತ್ಮಕ್ಕೆ ಹೇಗೆ ಸಾವಿಲ್ಲವೋ, ದೇಹಕ್ಕೂ ಸಾವಿಲ್ಲ ಎಂದು ಹೇಳಿದ್ದರು. ಮಣ್ಣಿನಿಂದ ತಯಾರಿಸಿದ ಮಡಕೆ ಒಡೆಯಬಹುದು, ಆದರೆ ಮಡಕೆಯಲ್ಲಿರುವ ಮಣ್ಣು ನಾಶವಾಗುವುದಿಲ್ಲ ಎಂದು ದೇಹದ ಅಮರತ್ವವನ್ನು ವ್ಯಾಖ್ಯಾನಿಸಿದ್ದರು.

ಅಜ್ಜ ಮಸಾಲೆ ದೋಸೆ ತಿನ್ನುತ್ತಿದ್ದರು. ಕಾಫಿ ಕುದಿಯುತ್ತಿದ್ದರೋ ಗೊತ್ತಿಲ್ಲ.

ಒಂದೆಡೆ ನೇತಿ ಸಿದ್ಧಾಂತ,ಇನ್ನೊಂದೆಡೆ ರವಾ ಮಸಾಲೆ ದೋಸೆ.

ಗುಡ್.

ಅಜ್ಜ ವೆಬ್ ಸೈಟ್ ಪಾಲಾದ ಮೇಲಂತೂ ಬಿಳಿ ತೊಗಲಿನವರು ಅವರ ಸುತ್ತಾ ಸುತ್ತಲಾರಂಭಿಸಿದರು.ನಿದ್ದೆ ಬಾರದೋರು,ಮಗಳು ಓಡಿಹೋದೋರು, ವ್ಯಾಪಾರಲ್ಲಿ ಲಾಸ್ ಆದೋರು,ಹೆಂಡತಿ ಬಿಟ್ಟೋರು , ಗಂಡನಿಂದ ಧೋಖಾ ಆದೋರು, ವೆನಿಲ್ಲಾ ನೆಟ್ಟು ಸೋತೋರು,ಫೈನಾನ್ಸ್ ನಲ್ಲಿ ಹನ ಹಾಕಿ ನಾಮಧಾರಿಗಳಾದೋರು...ಹೀ॒ಗೆ ಎಂಥೆಂಥ ಮಮದಿ ಅಜ್ಜನನ್ನು ಸುತ್ತಿಕೊಂಡರು.

....ಅಜ್ಜ ಮಾತ್ರ ತನ್ನ ಮೆಲು ಮಾತು, ಅರ್ಥವಾಗದ ರೀತಿಯಿಂದ ಕೊನೆ ತನಕ ತನ್ನ ರಹಸ್ಯ ಕಾಪಾಡಿಕೊಂಡರು.

ಅಪ್ ಟು ೫೫ ವರ್ಷ..!!

20070414

ಈ ಪ್ರೀತಿ ಒಂಥರಾ


ಪ್ರೀತಿಗೊಂದು ಆ-ಹಾರ ಎಂಬುದಿದೆಯಾ?

"ಜೊತೆಯಾಗಿ ಊಟ ಮಾಡೋಣ ಕಾಯ್ತಿರ್‍ತಿನೆ ’.... ಎಂಬೊಂದು ಸಾಲಿನ ಸಂದೇಶ ಎಸೆಯುವುದರಲ್ಲಿ ಏನಿರುತ್ತೆ ?

ಹಸಿವು ?

ತನ್ಮಯತೆ ?

ಪಾಲುದಾರಿಕೆ ?

ಸಮಾನತೆ ?

ಪ್ರತೀಕ್ಷೆ ?

ಅಥವಾ ಒಂದದ್ಭುತ ಪ್ರೀತಿ ?

ಎದುರಾ ಬದುರಾ ಕೂಲಿತು ಎರಡು ತಟ್ಟೆ ಮಡಗಿ ತಾಲಿಮೀಲು ಹಂಚಿಕೊಳ್ಳುವ ಗೆಳೆಯ-ಗೆಳತಿ ನಡುವೆ ಕಣ್‌ಭಾಷೆ, ಮಾತಿನ ಜೋಶ್, ಪ್ರೀತಿಯ ಪಟ್ಟು ಮಾತ್ರಾ ಇರುತ್ತದಾ ಅಥವಾ ಆ ಊಟವೇ ಇದನ್ನೆಲ್ಲಾ ಮಾಡಿಡುತ್ತದಾ ?ಈ ಊಟಕ್ಕೂ, ಈ ಹಂಚಿಕೊಳ್ಳೋದಕ್ಕೂ, ಈ ಪ್ರೀತಿಯ ಪಟ್ಟುಗಳಿಗೂ ಏನು ಸಮರಸವಿದೆ ?

ಏನು ಸಂಬಂಧದ ಜರೂರಿಗಳಿವೆ ?

ತಾಲಿಮೀಲ್ ನಡುವೆ ಏನು ತಾಳಮೇಳ ಇರುತ್ತದೆ ?

ಹುಡುಕುತ್ತಾ ಹುಡುಕುತ್ತಾ ಹೋದರೆ ಉಳಿಯೋದು ಖಾಲಿ ತಟ್ಟೆ.

ಆಹಾರ ಉಂಟು ಮಾಡುವ ಚೈತನ್ಯವೇ ಅಂಥದ್ದು.

ತುಂಬಾ ಹಸಿದಾಗ ಉಂಡೆದ್ದವನಲ್ಲಿ ಅದೆಂಥಾ ಶಕ್ತಿ ಧುಮುಕುತ್ತದೆ ಎಂಬುದನ್ನು ಒಂದು ಸಲವಾದರೂ ನಾವು ಅನುಭವಿಸಿರುತ್ತೇವೆ. ಅನುಭವಿಸಿದ ಆ ಕ್ಷಣಕ್ಕೊಮ್ಮೆ ಪಯಣಿಸೋಣ. ತೃಪ್ತಿ ಜೊತೆಗೆ ಉಂಟಾದ ನಿರುಮ್ಮಳ ಭಾವ, ಮರೆತು ಹೋದ ಮಾತು, ನೆನಪಿಗೆ ಬಾರದ ಘಟನೆ, ಒಡಲಾಳದಲ್ಲಿರುವ ಜೀವ ಜೊತೆ ಜೊತೆಯಾಗಿ ನೆಲೆಸಿದ ಅನುಭವವಾಗುತ್ತದೆ.

ಊಟದ ಎಲೆ ಎದುರು ಕುಳಿತು ಅನ್ನ ಸಾಂಬಾರು ಕಲಸಿದಾಗ, ಓಡಿ ಹೋದ ಮಗನ ನೆನಪಾಗಿ ಎಲೆ ಬಿಟ್ಟೇಳುವ ತಾಯಿಯನ್ನು ಚಿತ್ರಿಸಿಕೊಂಡರೆ ಇದು ಇನ್ನಷ್ಟು ಅರ್ಥವೇದ್ಯ.

ಶಾಪಿಂಗ್‌ಗೆ ಬಂದ ಗಂಡ ಹೆಂಡತಿ ಐಸ್‌ಕ್ರೀಂ ಮೆಲ್ಲಲು ಕುಳಿತರೆ ಆಕೆ, ಮನೆಯಲ್ಲಿರೋ ಮಗನಿಗೆ ಅಂತ ಒಂದು ಪ್ಯಾಕ್ ಕಟ್ಟಿಸಿಕೊಳ್ಳುವ ದೃಶ್ಯದಲ್ಲೇ ಈ ಆಹಾರ ಉಂಟು ಮಾಡುವ ಸಂಬಂಧ ವೇದ್ಯ ಲಭ್ಯ.

ಬೈಟು ಕಾಫಿಗೆ ಆರ್ಡರ್ ಮಾಡಿ ಗಂಟೆಗಟ್ಟಲೆ ಮಾತನಾಡುವ ಗೆಳೆಯರಿಗೆ ಕಾಫಿಗಿಂತ ಮುಖ್ಯವಾದದ್ದು ಮಾತು. ಆ ಮಾತಿಗೆ ಆ ಕೆಫೆ, ಕಾಫಿಯೇ ಬೇಕಾ ? ಎಂದರೆ ಉತ್ತರವಿಲ್ಲ. ಕಾಫಿ ಜೊತೆ ಎಂಥದ್ದೋ ಒಂದು ಹುಟ್ಟುವುದೇ ಎಂದು ಕೇಳಿ ನೋಡಿ ಮಾಡಿದರೆ ಉತ್ತರ ನಿರರ್ಥಕ.

ಮನೆಗೆ ಬಂದವರಿಗೆ ಬಾಯಾರಿಕೆ ತಗೊಳ್ಳಿ ಎಂದು ಮೊದಲಾಗಿ ಕೇಳುವುದರಲ್ಲಿ ಬಾಂಧವ್ಯ ಬೆಸೆಯುವ ಪಾನಕ ಕಾಣುತ್ತದೆ. ಗಂಡನ ತಟ್ಟೆಯಲ್ಲೇ ಊಟ ಮಾಡುವ ಹೆಂಡತಿಯಲ್ಲಿ ಅದೆಂಥ ದೈತ್ಯ ಹಂಬಲವಿದೆಯೋ ಗೊತ್ತಿಲ್ಲ, ಆದರೆ ಆ ಹಂಬಲಕ್ಕೆ ಎಂಜಲು ತಟ್ಟೆಯೇ ಮಾಧ್ಯಮವಾಗುತ್ತದೆ !

ಸೋದರ ವಾತ್ಸಲ್ಯ, ದೋಸ್ತಿ ಬಾಂಧವ್ಯಗಳಿಗೆಲ್ಲಾ "ಒಂದೇ ಬಟ್ಟಲಲ್ಲಿ ಉಂಡಿದ್ದೆವು’ ಎಂದು ಉದಾಹರಿಸೋದೊ ಇದೆ."

.....ಸಹನೌ ಭುನಕ್ತು’ ಎಂದುದರ ಹಿಂದೆ ಎಷ್ಟೊಂದು ಗಾಢ ಸಂದೇಶಗಳಿವೆಯೋ !

ಬಸ್ಸಿನಲ್ಲಿ ಜೊತೆಗಿದ್ದ ಗೆಳೆಯ ಇಡ್ಲಿ ತಿಂದು ಬಂದು ಕುಳಿತಾಗ ಪಕ್ಕದಲ್ಲಿದ್ದ ಗೆಳತಿ ತಣ್ಣಗೆ ಬುತ್ತಿ ಬಿಚ್ಚಿ "ನಿನಗಾಗಿ ಕಾಯ್ತಿದ್ದೆ, ಈ ದೋಸೆ ತಿನ್ನೋಕೆ’ ಎಂದು ಹೇಳಿದರೆ ಆ ಪ್ರೀತಿಗೆ ಇನ್ಯಾವುದು ಸಿಂಧು ?!!

ಎಲ್ಲಿ’ರುವೆ’


ಇರುವೆ ಸಂಗ್ರಹಕ್ಕೆ ಶುರು ಮಾಡಿದೆ.

ಸಾಲು ಸಾಲು ಇರುವೆ ಸಾಲು ಸಾಲು ಗಟ್ಟಿ ಮುಂದಿನ ಮಳೆಗಾಲಕ್ಕೆ ಭರಪೂರ ಸಿದ್ಧತೆ ಮಾಡುತ್ತಿವೆ.

ಭರ್ಜರಿ ಸ್ಟಾಕಿಂಗ್.

ರವೆ, ಅಕ್ಕಿಕಾಳು, ತೆಂಗಿನ ತುರಿ, ಲಡ್ಡಿನ ತುಂಡು, ಜಿಲೇಬಿ ಪಾಕ, ಸಕ್ಕರೆ ಕಾಳು.... ಮಿಡತೆಯ ರೆಕ್ಕೆ, ಹೋಂಟನ ಕಾಲು, ಜಿರಲೆಯ ಮೀಸೆ....

ಇರುವೆಯ ಆಹಾರ ಗೋದಾಮಿಗೆ ಫ್ಲಡ್ಡಿಂಗ್ ಶುರುವಾಗಿದೆ.

ಈ ಮಳೆಗಾಲಕ್ಕೆ ಗೋದಾಮು ತುಂಬಿಸಿಕೊಳ್ಳುವುದೇ ಇರುವೆಯ ಈ ವೈಶಾಖದ ಕಮಿಟ್‌ಮೆಂಟ್.

ಬಾಗಿಲ ಸಂದು, ಗೋಡೆಯ ಬಿರುಕು, ಮರದ ಪೊಟರೆ, ನೆಲದ ಕೊರಕಲು ಎಲ್ಲೆಂದರಲ್ಲಿ ಇರುವೆಯ ವರ್ಕ್‌ಶಾಪ್.


ನೆಲದ ಮೇಲೆ ಈ ಥರ ಗೋದಾಮು ತುಂಬಿಸಿಕೊಳ್ಳುವ ಜೀವಿ ಮನುಷ್ಯನನ್ನೂ ಬಿಟ್ಟರೆ ಇರುವೆ ಮಾತ್ರ ಇರುವುದಾ ? ಗೊತ್ತಿಲ್ಲ. ಮನುಷ್ಯ ? ಅವನಂತೂ ಪಕ್ಕಾ ಸೆಲ್ಪಿಶ್ಯು. ತಾನು, ತನ್ನ ಮನೆ, ಹೆಂಡತಿ ಮಕ್ಕಳಿಗಾಗಿ ಆಹಾರ ಹುಡುಕುತ್ತಾನೆ, ತರುತ್ತಾನೆ.ಇರುವೆ ಹಾಗಲ್ಲ. ಅದರದ್ದು ಸಮಾಜ ಸೇವೆ. ತಾನು ಕೂಡಾ ಈ ಸೊಸೈಟಿ ಮೆಂಬರು, ಸೊಸೈಟಿಗಾಗಿ ಎಷ್ಟು ಬೇಕು, ಅಷ್ಟು ಕೆಲಸ ಮಾಡಿಯೇ ಮಾಡುತ್ತೆ. ರೋಟಿ ಮತ್ತು ಮಕಾನ್‌ಗಾಗಿ ನಿರಂತರ ದುಡಿಯುತ್ತದೆ.

ಅದಕ್ಕಾಗಿ ಅಡ್ಡ ಬಂದವರನ್ನು ದಾಕ್ಷಿಣ್ಯವಿಲ್ಲದೆ ಮಟಾಶ್ ಮಾಡುತ್ತದೆ.

ನೋ ಕಾಂಪ್ರಮೈಸ್.

ಇರುವೆಗೆ ತಾನು ಮಾಡಿದ್ದು ತನಗೆ ಸಿಗುತ್ತದೆ ಎಂಬ ಭ್ರಮೆಯಾಗಲಿ, ಗ್ಯಾರಂಟಿಯಾಗಲಿ ಇಲ್ಲ. ಇಷ್ಟಕ್ಕೂ ಮಳೆಗಾಲದಲ್ಲಿ ಹೊರಗಿನ ಥಂಡಿಗೆ ಒಳಗೆ ಕುಳಿತು ಬೆಚ್ಚಗೆ ತಿನ್ನಲು ಬಹುತೇಕ ಇರುವೆಗಳು ಉಳಿಯೋದು ಇಲ್ಲ.

ಇಂಥದ್ದೊಂದು ಬೆಚ್ಚಗಿನ ತನ್ಮಯತೆ ನಮ್ಮಲ್ಲಿ ಯಾರಿಗಾದರೂ ಬಂದರೆ ಮನುಕುಲ ಮಗ್ಗಲು ಹೊರಳಿಸಿಕೊಂಡೀತು.

ಕೊನೆಗೂ ಕೂಡಿಟ್ಟದ್ದನ್ನು ಈ ಇರುವೆ ಸಮುದಾಯವೇ ಬಳಸುತ್ತದೆ ಎಂಬ ಗ್ಯಾರಂಟಿ ಏನು ?ಮರದ ಪೊಟರೆಗೆ ಮೂತಿ ಇಟ್ಟು ಹಕ್ಕಿಯೊಂದು ಇರುವೆಗಳನ್ನೆಲ್ಲಾ ಓಬವ್ವನ ಥರ ಹೊಡೆದು ಹಾಕಿ ಗುಳುಂ ಮಾಡಬಹುದು.

ಅಥವಾ ಒಂದು ಬರ್ರೋ ಎಂಬ ಮಳೆಗೆ ಇರುವೆಯ ಸುರಂಗ ಛಿದ್ರವಾಗ ಬಹುದು.

ಅವನೊಬ್ಬ ಮನುಷ್ಯ ವಿಷದ ಪುಡಿ ಕುಡುಗಿ ಗೋಡೆ ಸಂದಿನ ಸಂಸಾರವನ್ನು ಸಾಯಿಸಬಹುದು.

ಆಗ ಉಳಿಯುವುದು ಏನು ?

ಕೂಡಿಟ್ಟದ್ದು ಯಾರಿಗೆ ಸಲ್ಲಬೇಕು ? ಇದರಿಂದ ನಾವು ಕಲಿಯುವ ಪಾಠ ಏನು ?

ಕರ್ಮಣ್ಯೇವಾಧಿಕಾರಸ್ತೇ ಮಾ ಫಲೇಶು.. ವಿಗೆ ಇರುವೆಗಿಂತ ಮಿಗಿಲಾದ ಸೋದಾಹರಣ ಇನ್ನೊಂದು ಇರಲಿಕ್ಕಿಲ್ಲ.

ಬದುಕಿನ ಅರ್ಥಕ್ಕೂ, ಜೀವನದ ನಶ್ವರತೆಗೂ ಇರುವೆ ವೈಶಾಖದಲ್ಲಿ ವಿವರಣೆ ನೀಡುತ್ತಿದೆ.

..... ನಾವು ನೋಡುವುದು ಮಾತ್ರ ಬಾಕಿ!

ಮತ್ತೆ ಮಗು ಆಗುವೆ


ಮಗು ಆಗಬೇಕೂಂತ॒


ತುಂಬಾ ಮುಂದೆ ಬಂದಿದ್ದೇವೆ .

ಮಾತೆತ್ತಿದರೆ ಆ ವ್ಯವಹಾರ, ಈ ಕೆಲಸ ...

ಕೂತರೆ ಟೆನ್ಶನ್,ನಿಂತರೆ ತಲೆಬಿಸಿ..

ಏನೋ ಮಾಡಲು ಹೋಗಿ ಏನೋ ಆಗಿ

ಪತನ ಆದರೂ ಆಗಿಲ್ಲ ಎಂಬ ಶೋ..

ಬದುಕಿನ ತುಂಬಾ ಲಹರಿಗಳ ಭ್ರಮೆ ..

ಆ ಮನಸ್ಸು ಸದಾ ಹಿರೀಕನಾಗಿರಲೂ ,ಇಡಲೂ ಇನ್ನಿಲ್ಲದ ಚಿತಾವಣೆ.ದೊಡ್ಡೋನಾಗುವುದೇ ಅಂತಿಮ ಅಸೆ...

ಮಗುವಾಗಿ ಇರಬಾರದೇ ???ಎಟ್ಲೀಸ್ಟ್ ನಂ ಮನಸಾದರೂ?????

ಒಂದನೇ ಕ್ಲಾಸಿಗೆ ಸೇರಿಸಲು ಅಪ್ಪ ನನ್ನನ್ನು ಕರೆದುಕೊಂಡು ಹೋದ ದಿನ.ವಾರಕ್ಕೆ ಮೊದಲೇ ತಂದ ತಂಗೀಸು ಚೀಲ,ಕುಂಡೆಯಲ್ಲಿ ರಬ್ಬರು ಮಡಗಿಕೊಂಡ ಕೆಂಪು ಗೀಟಿನ ಪೆನ್ಸಿಲು,ಮರದ ಪಟ್ಟಿಯ ನಾಲ್ಕೂ ಮೈ ಒಳಗೆ ಇದ್ದ ಕಪ್ಪು ಸ್ಲೇಟು,ಬಣ್ಣದ ಉರುಟು ಹಿಡಿಕೆಯ ಕಪ್ಪು ಕೊಡೆಯನ್ನು ಸುರುಳಿ ಸುತ್ತಿ ದೊಣ್ಣೆ ಥರ ಮಾಡಿ ಇಟ್ಟ್ಟದ್ದು..

ಅಪ್ಪ ಶಾಲೆಯಲ್ಲಿ ಮೇಷ್ಟ್ರ ಜೊತೆ ಮಾತನಾಡಿದಾಗ ನಾನೂ ಅಲ್ಲಿ ನಿಂತು ಕಿವಿಗೊಟ್ಟದ್ದು

ನನ್ನ ಹೊಸ ಕಪ್ಪು ಚಡ್ಡಿಯನ್ನು ಕೆಂಪು ಅಂಗಿಯನ್ನೂ ನನಗೆ ನಾನೇ ನೋಡುತ್ತಾ ನಿಂತದ್ದು॒

ಮಕ್ಕಳಿಗೆ ಅಪ್ಪ ಬಿಸ್ಕಿಟ್ ಹಂಚಿದ್ದು....


ಮಿಗತೆ ಆದ ಬಿಸ್ಕಿಟ್‌ನ್ನು ತೊಟ್ಟೆ ಸಮೇತ ಮಾಷ್ಟ್ರಿಗೆ ಕೊಟ್ಟು ಮನೆಯಲ್ಲಿ ಮಕ್ಕ್ಳಿಗೆ ಕೊಡಿ’ ಎಂದದ್ದು

ಆ ಪ್ರೀತಿಗೆ’ ಮಾಸ್ಟ್ರು ನನ್ನನ್ನು ಎದುರಿನ ಬೆಂಚಲ್ಲಿ ಕೂರಿಸಿದ್ದು

ಸಂಜೆ ಆ ಗಾಳಿ ಮಳೆಯಲ್ಲಿ ಅಕ್ಕನ ಜೊತೆ ಮನೆಗೆ ಹೋದಗ ಅಮ್ಮ ಹಾಲುಪಾಯಸ ಕೊಟ್ಟದ್ದು..

ನಾನು ಯಾವಾಗ ಯಾಕೆ ಎಂದು ಕೇಳಿದರೆ,,

ಚಾಮಿಗೆ ಮಾಡಿದ್ದು’ಎಂದ ಅಮ್ಮನ ಉತ್ತರದಲ್ಲಿ ...

ಎಷ್ಟೊಂದು ಚಾಮಿಗಳು.!!

ಬಾಲ್ಯ ಇನ್ನೊಮ್ಮೆ ನನಗಂತೂ ಬರಲಾರದು ಅಲ್ವಾ??

20070413

ನೀನು ಬರಬಾರದಿತ್ತು


ಗೆಳತಿ..

ಅದೊಮ್ಮೆ ಆ ದಿನ ನೀನು ಬಾರದೇ ಇದ್ದರೆ.

..ಇಂದು ಈ ರೀತಿ ನಿನ್ನನ್ನು ನಾನು ,

ಕಳೆದುಕೊಳ್ಳುತ್ತಲೇ ಇರಲಿಲ್ಲ..

ಇಷ್ಟೊಂದು ಹುಡುಕುತ್ತಲೇ ಇರಲಿಲ್ಲ..


ಬಿಸಿಲಿಗೂ ಮಳೆಬಿಲ್ಲು ಬಾಗಿಸುತ್ತಿರಲಿಲ್ಲ..

ಆ ಛಳಿಯ ಬೆವರಿಗೆ ಬೆತ್ತಲಾಗುತ್ತಿರಲಿಲ್ಲ...

ಮಳೆಯ ಹಾಡಿನ ಹಿ೦ದೆ ಅಕ್ಷರಗಳ ಹುಡುಕುತ್ತಾ.

.ನಿನಗಾಗಿ ಈ

ಕಾಲದಲ್ಲಿ ಆಕಾಶಕ್ಕೆ

ಮುತ್ತು ಇಡುತ್ತಿರಲಿಲ್ಲ..!

ಮಿಸ್ ಮಾಡಿಕೊಂಡು


ಆ ಕಷ್ಟ..! ಆ ನಷ್ಟ !!

ತುಂಬಾ ಬೇಕಾದವರು..ಅವರೆಂದರೆ.. ಅವರೆಂದರೆ ..ನಿಮಗಿಷ್ಟ. .ಅಂತದ್ದೊಂದು ಜೀವವನ್ನು ನಾಳೆ ಕಾಣಬೇಕು ಎಂದುಕೊಂಡಿದ್ದೀರಿ. ಅಷ್ಟರಲ್ಲಿ ....

ನಿಮ್ಮ ಮನೆಯಲ್ಲಿ ಏನೋ ಎಡವಟ್ಟು. ನಾಳೆಯ ನಿಮ್ಮ ಭೇಟಿ ಢಮಾರ್


ಏನಂತಾರೆ ಇದನ್ನು.? ತೀರಾ ಭಾವುಕತೆಯಿಂದ ಕೇಳಿದರೆ, "ಮಿಸ್ ಮಾಡ್ಕೊಳ್ಳುವುದು’.

ಅಷ್ಟಕ್ಕೇ ಅದು ಮುಗಿಯುವುದಿಲ್ಲ.

ನಾಳೆ ನೀವು ಅವರನ್ನು ಭೇಟಿಯಾಗಲು ಸಾಧ್ಯವಾಗುವುದಿಲ್ಲ ಎಂದು ತಿಳಿಸಬೇಕು.

ಹೇಳಿ ಕೇಳಿ ನಿಮ್ಮ ಪ್ರೀತಿಯ ಜೀವ. ಆ ಜೀವ ನೊಂದುಕೊಳ್ಳದಂತೆ ನೋಡಬೇಕು.

ಅಂದರೆ, "ಯಾವ ಅಂಕೆ, ಶಂಕೆಗಳು ಇಲ್ಲಿ ಸಲ್ಲದು ಎಂಬಂತಿರಬೇಕು.

ನೀವು ಹೇಳಲಿಕ್ಕೆ ಸಾಧ್ಯವಾ ಅದೇನು ಉದ್ಯೋಗ ಕೇಳಿ ಬಂದವರಿಗೆ ಕೊಡುವ ಉತ್ತರವಾ ? ರೈಲ್ವೇ ಫ್ಲಾಟ್ ಫಾರಂನ ಎನ್ಂಕೈಯರಿ ಕೌಂಟರಾ ?ನಿಮ್ಮ ಸ್ನೇಹ, ಸಲುಗೆ, ಸಂಬಂಧದ ಒಂದಂಚುವಿನಲ್ಲೂ ಸಣ್ಣ ಸೆಲೆ ಮೂಡದಂತೆ ಎಚ್ಚರ ವಹಿಸಿ ಕೊನೆಗೂ ನೀವು ಹೇಳುತ್ತೀರಿ ಅಂದುಕೊಳ್ಳೋಣ.ಹಾಗೇ ಹೇಳಿದಲ್ಲಿ ನಿಮ್ಮ ಕೆಲಸ ಮುಗಿಯುತ್ತದಾ, ನಿಮ್ಮ ಮನಸ್ಸೆಂಬ ಕೊಳದಲ್ಲಿ ಆ ಕ್ಷಣಕ್ಕೆ ಹಬ್ಬುತ್ತದಲ್ಲಾ. ಭಾವನೆಗಳ ತರಂಗಗಳು, ಅವುಗಳನ್ನು ಲೆಕ್ಕ ಇಟ್ಟು ಎಷ್ಟೆಂದು ಕೂರಬಲ್ಲಿರಿ? ಕಾಯಬಲ್ಲಿರಿ ?

ಅವರಿಗೇನನ್ನಿಸಿತೋ ಎಂದು ನಿಮಗನ್ನಿಸುವ ರೀತಿಗಳಿವೆಯಲ್ಲ. ಅವುಗಳನ್ನು ಎಲ್ಲಿ ಎಂದು ಮಡಗುತ್ತೀರಿ ?

ಇದು ನೀವಾಯಿತು.

ಅವರು ? ನೀವು ಬರಲಿಕ್ಕಾಗದ್ದನ್ನು ಹೇಳಿಕೊಂಡಾಗ ಅವರಿಗೆ ಒಂದು ಕ್ಷಣಕ್ಕೆ ಕನ್ವಿನ್ಸ್ ಆಗಿ ಬಿಡಬಹುದು, ಕನ್%ಸ್ ಆಗಬಹುದು. ಮರುಕ್ಷಣದಲ್ಲಿ ಅವರಲ್ಲೂ ಅನುಮಾನದ ಕೋಟೆಗೆ ಇಟ್ಟಿಗೆ ಕಟ್ಟುವುದು ಶುರುವಾಗುತ್ತದೆ. ಆ ತನಕ ಅವರೊಳಗಿದ್ದ ಕಾತರವೆಂಬ ನಿಶೆ ಕರಗಿಹೋಗಿ ಉಂಟಾಗುವುದು ನೋವು ಹತಾಶೆಯ ಮುದ್ದೆ.

ಒಂದು ಭೇಟಿಯ ಸುತ್ತ ಎಷ್ಟೊಂದು ಸಂಕೀರ್ಣಗಳು ವ್ಯಾಪಿಸಿವೆ..!


ಮಿಸ್ ಮಾಡ್ಕೊಳ್ಳೋದು ಬರಿ ಒಂದು ಚೇಷ್ಟೆ ಅಲ್ಲ. ಅದು ಭಾವನೆಗಳ ಒತ್ತಡದ ಮುರಿತ. ಅಲ್ಲಿ ಬಿಟ್ಟು ಹೋದ ನೆನಪಿನ ಪದರುಗಳಲ್ಲಿ ಹಂಬಲವೆಂಬ ಸಕ್ಕರೆಯ ಲೇಪ ಮೆಲ್ಲಲೂ ಆಗದೆ ಉದುರಿ ಬೀಳುತ್ತದೆ.ಮಿಸ್ ಮಾಡಿಕೊಂಡರೆ ಅಷ್ಟೇ ಸಾಕಾಗುತ್ತದಾ.

ಮುಂದೊಂದು ದಿನ ಮತ್ತೆ ಸಿಗುತ್ತೇವೆ ಎಂಬ ಭರವಸೆಗಳ ಕುಟೀರ ಹೊಕ್ಕು ಬಿಡುತ್ತೇವೆ. ಅರೆ ಕ್ಷಣ ಭದ್ರಂ ಎಂದನಿಸುತ್ತದೆ

.ಯಾರು ಯಾರನ್ನೆಲ್ಲಾ ಮಿಸ್ ಮಾಡಿಕೊಂಡಿಲ್ಲ. ಯಶೋದೆ ಕೃಷ್ಣನನ್ನು, ಕೃಷ್ಣ ರಾಧೆಯನ್ನು, ರಾಮ ಸೀತೆಯನ್ನು, ಭಕ್ತ ದೇವರನ್ನು, ಗೆಳೆಯ ಗೆಳತಿಯನ್ನು, ಬಳ್ಳಿ ಹೂವನ್ನು, ಮರ ಹಣ್ಣನ್ನು, ಬಾನು ಮುಗಿಲನ್ನು......... ಹೀಗೆ ಒಬ್ಬರನ್ನೊಬ್ಬರು ಮಿಸ್ ಮಾಡಿಕೊಳ್ಳುತ್ತಾ ಸಾಗುತ್ತದೆ ಕಾಲ.

"ನೆನೆದಾಗ ಕಣ್ಣ ಮುಂದೆಲ್ಲಾ ಹುಣ್ಣಿಮೆಯೊಳಗೆ ಹೂಬಾಣ ನಿನ್ನ ಹೆಸರು’ ಮಿಸ್ ಮಾಡಿಕೊಂಡರೆ ಉಳಿಯುವುದು ಈ ಸಾಲು.ಹೆಸರು ಮಾತ್ರ ಉಳಿದುಕೊಳ್ಳುವ ಸ್ಥಿತಿಯಲ್ಲಿ, "ನೀನಿಲ್ಲದಾಗ ಮನದಲ್ಲೇ ಹೊಳೆಗಾಳಿಯಂತೆಲವ ಹೆಸರು’

ಮಿಸ್ ಮಾಡಿಕೊಂಡ ಬಳಿಕ ಉಳಿಯುವುದು ನಿರ್ವಾತ. ಆ ಶೂನ್ಯದಲ್ಲಿ ಭಾವನೆಗಳಿಗೆ ಚಂಡಮಾರುತದ ಸ್ವರೂಪ.

ಅಬ್ಬಾ ! ಒಂದು ಸಂಬಂಧ, ಮಿಗಿಲಾಗಿ ಅಲ್ಲಿ ಇಷ್ಟೊಂದು ಪ್ರೀತಿ ಅಂತ ರಾಶಿ ಇದ್ದರೆ ಈ ಮಿಸ್ ಮಾಡಿಕೊಳ್ಳುವುದು ಎಂತಹಾ ಕಷ್ಟ.

ಇದು ನಿಮ್ಮದೂ ಆಗಿರಬಹುದು,

ಒಂದಲ್ಲ ಒಂದು ದಿನ, ಕ್ಷಣ!!

ಬೆವರು

ಬೆವರು..
ಅದರ ಘಮ್ಮನೆ, ಬರೀ ಸುಮ್ಮನೆ.
ಬೆವರಿನ ವಾಸನೆಗೆ ಬೆದರಿ ಬೇರೆ ದಾರಿ ಹಿಡಿಯುವ ನಾಗರಿಕ ಜನ ಸಮೂಹ ಒಂದೆಡೆ,
ಬೆವರು ಸುರಿಸಿ ಬದುಕು ನಿರ್ಮಿಸಿಕೊಂಡೆ ಎಂದು ಹೇಳುವ ಅವರೇ ಮತ್ತೊಂದೆಡೆ.
ಗುರುತಿಸಲಾಗದು ; ಯಾರು ಬೆವರ ಪರ, ಬೆವರ ವಿರೋಧ.
"ಏಪ್ರಿಲ್ ತಿಂಗಳು ಅತ್ಯಂತ ಕ್ರೂರಿ’ ಎಂದಿದ್ದ ಎಲಿಯೆಟ್. ಯಾಕಂದನೋ, ಈ ಬೆವರ ಭರ್ತ್ಸನೆಗಾ ! ಅಥವಾ ಬೆವರಿನ ಮೂಲಕವೇ ರೂ[ಗೊಂಡ ಚೆಲುವೆಯ ವಿದೂರಕ್ಕಾ ?
ಎಲಿಯೆಟ್‌ನ ಈ ವಾಕ್ಯಕ್ಕಾಗಿ ನಾಲ್ಕುನೂರು [ಟ ವಿಮರ್ಶೆ ಬರೆದು ಕುಳಿತಿದ್ದ ವಿಮರ್ಶಕ ಶಿಖಾಮಣಿಗಳಿಗೂ ಏಪ್ರಿಲ್ ಏಕೆ ಅಷ್ಟೊಂದು ಕ್ರೂರ ಗೊತ್ತೆ ಆಗಲಿಲ್ಲ.
ಬೆವರಿನ ಬೆಲೆ ಗೊತ್ತಾಗೋದೇ ಏಪ್ರಿಲ್‌ನಲ್ಲಿ.
ಬಾರದ ಮಳೆ, ಬಿಡದ ಸೆಖೆ,
ನಮಗಂತೂ ಕೈಕೊಟ್ಟ ಕರೆಂಟು, ತಿರುಗದ ಗಿರುಗೀಟಿ.
ಇಂಥಾ ಸೆಖೆಯಲ್ಲಿ ತೊಟ್ಟಿಕ್ಕುವ ಬೆವರು, ಮೈಯ ಮಾಂಸಲಕ್ಕೆ ಅಂಟಿಕೊಳ್ಳುತ್ತಾ ಗಂಧ, ದುರ್ಗಂಧವಾಗಿ ಹರಡಿಕೊಳ್ಳುತ್ತದೆ.
ಬೆವರಿಗಾಗಿ ಕಿಸೆಯಲ್ಲಿ ಕರವಸ್ತ್ರ, ಪಾಕೀಟಿನಲ್ಲಿ ಗಂಧ, ಡಿಯೋಡ್ರೆಂಟು, ಪೌಡರು, ಕ್ರೀಮು...ಎಲ್ಲಾ ನಿಜ, ಬೆವರನ್ನು ಮಾತ್ರ ಬಾರದಂತೆ ಮಾಡಲಾಗುವುದಿಲ್ಲ
.ನಿಮಗೆ ಗೊತ್ತಾ, ಈ ಬೆವರಿಳಿಸಿಕೊಳ್ಳದಿದ್ದರೆ ಶರೀರ ಖಲು ಧರ್ಮ ಸಾಧನವಾಗುವುದಿಲ್ಲ. ಬೆವರಿಕೊಳ್ಳದ ಶರೀರ ನಿಧಾನವಾಗಿ ರೋಗದ ಗೂಡಾಗುತ್ತದೆ.
ಬೆವರೆಂದರೆ ಶಕ್ತಿ ಉತ್ಪಾತ, ಕರ್ಷಣಗಳ ಸಂಚಯನ. ಅದು ಸ್ವಸ್ಥದ ಸಂಕೇತ.
ಬೆಳುವಲದ ಮಡಿಲಲ್ಲಿ ಬೆವರ ಹನಿ ಬಿದ್ದಾಗ ಒಂದೊಂದು ಹನಿಯೂ ಮುತ್ತಾಯಿತೋ ಎಂದು ಹಳೆ ಸಿನಿಮಾದ ಜನಪ್ರಿಯ ಹಾಡು ಕೇಳಿದ್ದೇವೆ.
ರೈತರನ್ನೂ ಬೆವರನ್ನೂ ಗಂಟು ಹಾಕಿ ರಾಜಕಾರಣ ಮಾಡಿದವರು, ಕಾವ್ಯ ಕತೆ ಬರೆದವರು, ಭಾಷಣ ಬಿಗಿವವರಿಗೂ ಎಂದೂ ಕೊರತೆ ಇಲ್ಲ.
ಬೆದರಿಕೊಂಡಾಗ ಬೆವರುತ್ತದೆ ಎಂದು ಎಷ್ಟೊಂದು ಪ್ರಸಂಗಗಳಲ್ಲಿ ಓದಿದ್ದೇವೆ.
ಭೀಮನ ನಿಂದನೆಗೆ ಕೌರವ ವೈಶಂಪಾಯನ ಕೊಳದಲ್ಲಿ ಮುಳುಗಿ ಕುಳಿತಿದ್ದವನು ಆ ತಣ್ಣಗಿನ ನೀರೊಳಗಿದ್ದೂ ಬೆವರಿದನೆಂದು ರನ್ನನ ಗದಾಯುದ್ಧದಲ್ಲಿ ವರ್ಣಿಸಿರುವುದು ಮರೆಯುವಂತಿಲ್ಲ !
ಈಬೆವರಲ್ಲೂ ಒಂದು ಸೊಗಡಿರುತ್ತದಾ ?
ಉಲ್ಲಸಿತರಾಗಿರುವ ಪ್ರೇಮಿಗಳನ್ನು ಕೇಳಿನೋಡಿ, "ಯಸ್’ ಎಂದು ಹೇಳದಿದ್ದರೆ ಮತ್ತೆ ಹೇಳಿ.
ಬೆವರು ಪ್ರೇಮ ಸಾನ್ನಿಧ್ಯದಲ್ಲಿ ಪಡೆಯುವ ರೂಪ, ಆವಿಷ್ಕಾರ, ಮಹತ್ವ ಮತ್ತೆಲ್ಲೂ ಪಡೆಯದು. ಸ್ಪರ್ಶ, ಆಲಿಂಗನ, ಚುಂಬನಗಳ ಸಾನ್ನಿಧ್ಯದಲ್ಲಿ ದೇಹ ಮನಸ್ಸು ಬೆವರ ಹೊಳೆಯಾಗುತ್ತದೆ ಎಂಬುದನ್ನು ಎಲ್ಲಾ ಪ್ರೇಮಿಗಳೂ ಒ[ತ್ತಾರೆ.
ಗೆಳೆಯನ ಮೊದಲ ಮೆಸೇಜು ಓದಿದ ಹುಡುಗಿ ಅರೆಕಾಲ ಕಂಪಿಸಿ, ಬೆವರುತ್ತಾಳೆ.
ಆ ಬೆವರಲ್ಲಿ ಉಳಿಯುವುದು ಒಂದು ಅತೀತ ಪ್ರೇಮದ ವರಸೆ ಮಾತ್ರ.ದಂಡೆತ್ತಿ ಹೋಗಿ ಮರಳಿ ರಾಜ್ಯ ಪ್ರವೇಶಿಸುವ ಹೊತ್ತಿನಲ್ಲಿ ನೆ{ಲಿಯನ್ ತನ್ನ ಹೆಂಡತಿಯರಿಗೆ ಸ್ನಾನ ಮಾಡದಂತೆ ಸೇವಕರ ಮೂಲಕ ಹೇಳಿ ಕಳುಹಿಸುತ್ತಿದ್ದನಂತೆ ! ನೆ{ಲಿಯನ್‌ಗೆ ರಕ್ತದ ಪ್ರೀತಿಯಂತೆ ಬೆವರ ಆಹ್ಲಾದವೂ ಬೇಕಾಗಿತ್ತು !
ಬೆವರು ಕೂಡಾ ಕಾಲ, ಸಂದರ್ಭ, ವ್ಯಕ್ತಿ ವ್ಯಕ್ತ, ರೈತ, ಸೈನಿಕ, ನೃತ್ಯಗಾರ, ಲೇಖಕ, ಆಳು, ಕಾರ್ಮಿಕ ಹೀಗೆ ಒಂದೊಂದು ಆಕಾರ, ಆಯಾಮಗಳಲ್ಲಿ ಬೆವರು ಹನಿಗೆ ರೂಪ ವಿನ್ಯಾಸ ದೊರೆಯುತ್ತದೆ.
ಆದರೆ ಗೆಳತಿಯ ಬೆವರ ಹನಿಯನ್ನು ನೆನಪಿನ ತೋರಣದಲ್ಲಿ ಕಟ್ಟಿ ಒಯ್ಯುವ ಗೆಳೆಯ ಇರುತ್ತಾನಲ್ಲಾ, ಅವನ ಬೆವರಿನ ಪ್ರೀತಿ ನಿಜಕ್ಕೂ ಬೆರಗು, ಬೆಡಗು !
ಬೆವರು ಮುತ್ತಾಗುವಂತೆ, ಮುತ್ತಿನಲ್ಲಿ ಆಗೋ ಬೆವರು ಮುದ್ದಾಗುತ್ತದೆ ಎಂದರೆ ಇದುವೇ..!.

20070409

love and love

it is difficult to difine LOVE..old saying ??of course.
LOVE wont tell anything before its arrival..and it has no reason for its begining..
so when you RISE in (not FALL) LOVE love the LOVE un to the last..
love...ing someone is not the thing..being loved by someone is really GREAT..
but
when your love is loved by someone else..
that is
called
THE END.

20070402

ಮಳೆ ಹಕ್ಕಿ

ಗೆಳತೀ
ನೀನು ಮಳೆ ಹಕ್ಕಿ
ಹೇಳದೇ ಬಂದೆ..
ಕೇಳದೇ ಕುಳಿತೆ..
ಈಗ ಕಾರಣವೆ ಇಲ್ಲದೇ
ಮಳೆ ಹನಿಯುವ ಹೊತ್ತಲ್ಲೇ
ಹೊರಟೆ..
ನಾನು
ಈ ಮಳೆಯಲ್ಲಿ
ಒಂಟಿಯಾಗಲೇ??


20070401

SCRATCH

HEART IS LIKE A GLASS
SCRATCH ON ANY SIDE
WILL
REFLECT ON OTHERSIDE
TOO..!
so always handle
feelings carefully
AND
remember
SCRATCH CANNOT BE REMOVED..