20071231

ನೂರೆಂಬ ನಂಬರು


ಇದೇನಿದು ನೂರು ಎಂಬ ನಂಬರು !

ಅನಂತಾನಂತ ಸಂಖ್ಯಾ ಲೋಕದಲ್ಲಿ ಈ ನೂರು ಎಂಬವನಿಗಿರುವ ಗತ್ತು ಮತ್ತು ಗೈರತ್ತು ಇನ್ಯಾವ ನಂಬರಿಗೂ ಇಲ್ಲ.ಸೊನ್ನೆ ಎಂಬ ಆರಂಭಕ್ಕಾಗಲಿ,ನಾವೆಂದೂ ಕಾಣದ ಆ ಅಂತಿಮ ನಂಬರಿಗಾಗಲಿ ಈ ಬೆಲೆ ಮತ್ತು ನೆಲೆ ಸಿಗಲಿಕ್ಕಿಲ್ಲ.

ಸುಮ್ಮನೇ ಕುಳಿತು ಯೋಚಿಸಿ.ಒಂದು, ಎರಡು, ಮೂರು.. ಆಮೇಲೆ ಸಾವಿರ,ಲಕ್ಷ,ಮಿಲಿಯ ಬಿಲಿಯ ಏನೆಲ್ಲಾ ಇವೆ,ಎಷ್ಟೆಲ್ಲಾ ಇವೆ..

ಆದರೆ ಈ ನೂರರಲ್ಲಿ ಮಾತ್ರಾ ಅದೇನೋ ಮಕ್ತಾಯ..ಮತ್ತು..ಅದೇನೋ ನಿಲ್ದಾಣ.

ನೂರರ ನಂತರ ಮತ್ತೊಂದು ಪಯಣ.

ಮಗುವಿನಿಂದಲೇ ಆರಂಭಿಸಿ.ಒಂದು ಮಗು ಒಂದೋ ಎರಡೋ ಮೂರೋ ಎಂದು ಎಣಿಸುತಾ ಎಣಿಸುತ್ತಾ ಕೊನೆಗೊಮ್ಮೆ ನೂರೋ ಎಂದಾಗ ಅದರ ಸ್ವರ ಏನು ತಾರರಕ್ಕೇರುತ್ತದೆ,ಏನೋ ಒಂದು ಮುಗಿದಂತೆ ಅನಿಸುತ್ತದೆ.ಆಮೇಲೆ ಅದಕ್ಕೇ ಇರಬೇಕು ಅದರ ಅಮ್ಮ ನೂರು ಮಾರ್ಕು ಅಂತ ಆ ಮಗುವನ್ನು ಮೇಲೆ ಕೆಳಗೆ ಮಾಡುತ್ತದೆ. ನೂರು ಮಾರ್ಕು ಪಡೆದ ಮಗು ಜಂಭದ ಕೋಳಿಯಾಗುತ್ತದೆ,ಅದರ ಅಪ್ಪ ಅಮ್ಮ ಕೂಡಾ.

ಅದೇಕೆ ನೂರು? ಒಂದು ಕಡಿಮೆಯಾದರೆ ಏನಾಗುತ್ತದೆ ಎಂದರೆ ಯಾರೂ ಸಹಿಸರು.

ಎಲ್ಲರಿಗೂ ನೂರಕ್ಕೆ ನೂರು ಬರಬೇಕು.

ಅಂಗಡಿಗೆ ಹೋಗಿ ಒಂದು ಏನಾದರೂ ಕೋಳ್ಳೋಣ. ಏನು ಗ್ಯಾರಂಟೀ ಅಂತ ಕೇಳೋಣ. ಆತ ನೂಕ್ಕೆ ನೂರು ಗ್ಯಾರಂಟಿ ಎಂದರೆ ನಿಮ್ಮ ಖರೀದಿ. ಆದು ಬಿಟ್ಟು ನೂರರಿಂದ ಒಂದು ಕಡಿಮೆ ಮಾಡಿ ನೂರಕ್ಕೆ ನೂರು ಗ್ಯಾರಂಟಿ ಅಲ್ಲ,ತೊಂಭತೊಂಭತ್ತು ಖಂಡಿತ ಅಂತ ಸತ್ಯವನ್ನೇ ಹೇಳಿದರೂ ನೀವು ಅಲ್ಲಿಂದ ಹೊರಡೋದು ನಿಜ.

ಏನದು ಒಂದು ಕಡಿಮೆಯಾದರೆ ಏನೀಗ?

ನೂರರಲ್ಲೇನಿದೆ ಆ ಮಹತ್ವ?ಯಾವುದೇ ವ್ಯವಹಾರ,ಇನ್ಯಾವುದೋ ಬಂಡವಾಳ,ಒಂದು ಔಷಧಿ,ಇನ್ನೊಂದು ಅಪರೇಶನ್ನು,ಎಲ್ಲಾ ನೂರಕ್ಕೆ ನೂರು ಆಗಬೇಕು.

ಹಾಗಾದರೆ ಮಾತ್ರಾ ನಮಗೆ ನಂಬಿಕೆ.

ಯಾವುದಾರೂ ಟ್ಯಾಕ್ಸಿ ಚಾಲಕ ನನಗೆ ನೂರಕ್ಕೆ ನೂರು ಡ್ರೈವಿಂಗು ಗೊತ್ತಿಲ್ಲ ಎಂದರೆ ನೀವು ಆ ಗಾಡಿ ಮೇಲೆ ಹೋದರೆ ನನ್ನಾಣೆ.ಇಲ್ಲಾ ಸಾರೂ,ತೊಂಭತ್ತೊಂಭತ್ತು ಪಾಲು ಚೆನ್ನಾಗಿ ಗೊತ್ತಿದೆ ಎಂದರೂ ನೀವು ನಂಬರು. ಏಕೆಂದರೆ ನಿಮಗೆ ನೂರೇ ಎಂಬುದು ನಂಬರು.

ಆ ವ್ಯಕ್ತಿ ನೂರಕ್ಕೆ ನೂರು ಸರಿಯಿಲ್ಲ ಎಂದರೆ ಅವನು ಸಮಾಜದಲ್ಲಿ ಡೌನ್ ಆಂಡ್ ಔಟ್.ಅವನಿಗೆ ತೊಂಭತ್ತೊಂಭತ್ತು ಎಂದರೆ ಹುಚ್ಚು ಎಂದೇ ಕರಾವಳಿಯಲ್ಲಿ ಅರ್ಥ.ಇನ್ನು ಕ್ರಿಕೆಟ್ಟಿನಲ್ಲಂತೂ ನೂರು ರನ್ನು ಎಂದರೆ ಅದು ಅರಿಭಯಂಕರ.ನೂರು ಬಡಿದವನಿಗೆ ಇರೋ ಗ್ಲಾಮರ್ರು ಆಮೇಲೆ ಸಾವಿರ ಬಡಿದಾಗಲೂ ಇರಲಾರದು. ನೂರು ವರ್ಷ ಬದುಕಿದವನು ಒಂದು ವರ್ಷ ಹೆಚ್ಚು ಬದುಕಿದರೂ ಅದು ಅಂಥ ವಿಶೇಷವಲ್ಲ,ಇನ್ನು ನೂರು ತುಂಬುವ ಮೂರು ದಿನಕ್ಕೆ ಸತ್ತರೂ ಅದು ಅಂಥ ಆಕರ್ಷಣೀಯವಲ್ಲ.ಇನ್ನು ಸಾಹಸ ಮಾಡೋರೆಲ್ಲಾ ನೂರರವರೇ.ಬಾಹ್ಯಾಕಾಶದಲ್ಲಿ ತೇಲುವವರು,ನೀರಲ್ಲಿ ಮುಳುಗುವವರು,ಮಣ್ಣಿನಲ್ಲಿ ಹುದುಗುವವರು,ಮೀಸೆ,ಉಗುರು ಬೆಳೆಸುವವರು,ರೇಸು ಓಡುವವರು,ಎಲ್ಲಾ ನೂರು ದಿನ,ನೂರು ಗಂಟೆ,ನೂರು ಮಿನಿಟ್ಟು, ನೂರು ಫೀಟು,ನೂರು ಮೀಟರು,..

ಆಹಾ ಈ ನೂರೇ.

ಆ ಕೃಷ್ಣ ಪರಮಾತ್ಮ ಕೂಡಾ ಶಿಶುಪಾಲನಿಗೆ ತೊಂಭತ್ತೊಂಭತ್ತು ಬಾರಿ ಕ್ಷಮಿಸಿ,ನೂರು ತುಂಬಿದಾಗ ಕೊಂದೇ ಹಾಕಿದ್ದಾನೆ.ಪಾಪ ಕೂಪಕ್ಕೂ ನೂರೆಂಬ ನಂಬರಿನ ನಂಟು.ಕೃಷ್ಣ.. ಕೃಷ್ಣಾ..!

ಈ ನೂರೆಂಬುದು ಅದು ಏಕೆ ಮತ್ತು ಅದು ಹೇಗೆ ಪೂರ್ಣತ್ವದ ಸ್ಥಿತಿಯಾಗಿದೆ ಮತ್ತು ಆಗಬೇಕು? ಅದೇನು ಆ ರೀತಿ ಚಿರಯೌವನೆಯಾಗಬೇಕು?ನೂರು ಪರಿಪೂರ್ಣ ಎಂದಾದರೆ ನೂರಾಒಂದು ಏನು ಎಂದು ಕೇಳುತ್ತಾ ನನ್ನ ಬ್ಲಾಗಿನ ನೂರನೇ ಬರೆಹವಾಗಿ ಈ ನೂರೆಂಬ ನಂಬರಿಗೆ ಅನಂತ ಪ್ರಮಾಣಗಳನ್ನು ಸಲ್ಲಿಸುತ್ತೇನೆ.

20071230

ನಾಲ್ಕು ಸಾಲು-೨೭

೧.
ಸೂತ್ರ ಬಿಟ್ಟ
ಗಾಳಿಪಟ
ಆಕಾಶದ ತುಂಬಾ
ಭೂಮಿಯ ಸುದ್ದಿಗಳನ್ನು
ಬಿತ್ತಿತು.

೨.

ಕಾಣದ ಗಾಳಿಯಲ್ಲಿ
ಕೇಳದ ಮಾತುಗಳನ್ನು
ಉಸುರಿ
ಲೀನನಾಗುವೆ.

೩.

ದೇವರು
ಮುಂದಾಗಿ ನಿಂತು
ಅವಳಲ್ಲಿ
ಬಿತ್ತಿದ ಬಯಕೆ
ಅವನ
ಪ್ರೇಮದ ತವರಿನಲ್ಲಿ
ಹವಿಸ್ಸಾಯಿತು.

೪.

ಕಲ್ಲುಗಳೆಲ್ಲಾ
ದ್ರವವಾಗಿ
ಬಿಸಿಲಿನಿಂದ
ವಚನ ತೆಗೆದುಕೊಂಡು
ಹರಳುಗಟ್ಟಿದರೆ
ಅವಳು ಅವನನ್ನು ತಬ್ಬಿ ಅತ್ತಳು

ನಮ್ಮ ಸೋಲು- ೨೦೦೭


ಇದೊಂದು ಸಮೀಕ್ಷೆ ಯಾರಾದರೂ ಮಾಡಬಹುದು ಎಂದುಕೊಂಡಿದ್ದೆ. ಯಾರೂ ಮಾಡುವ ಹಾಗೆ ಕಾಣ್ತಾ ಇಲ್ಲ. ಆದ್ದರಿಂದ ನಾನೇ ಮಾಡಲು ಹೊರಟೆ,ನನ್ನಷ್ಟಕ್ಕೇ.
ನಾನು ಕರ್ನಾಟಕವನ್ನು ಮಾತ್ರಾ ಮುಂದಿಟ್ಟುಕೊಂಡಿದ್ದೇನೆ. ಕರ್ನಾಟಕದಲ್ಲಿ ಈ ವರ್ಷ ಏನೇನು ಆಗಿತ್ತು ಮತ್ತು ಏನೆಲ್ಲಾ ಇಲ್ಲಿ ಆಯಿತು ಎಂದು ಥೇಟ್ ಪತ್ರಕರ್ತನ ಶೈಲಿಯಲ್ಲಿ ವಿವರಿಸಲಾರೆ.

ಆದರೆ ಕರ್ನಾಟಕದ ಈ ವರ್ಷದ ಅತೀ ದೊಡ್ಡ ವೈಫಲ್ಯ ಮಾತ್ರಾ ಏನೆಂದು ನಾನು ಹೇಳಬಲ್ಲೆ,

ಅದು ರಸ್ತೆ.

ಕರ್ನಾಟಕದ ಒಂದಾದರೂ ರಸ್ತೆಯಲ್ಲಿ ನೀವು ನೆಟ್ಟಗೆ ನಡೆಯುವುದೂ ಸಾಧ್ಯವಿಲ್ಲ ಎಂದರೆ ಇಲ್ಲಿ ಆಡಳಿತ ಮಾಡಿದ ಮೂರ್ಖರನ್ನು ಏನೆಂದು ಹಳಿಯೋಣ ಅಥವಾ ಏನೆಂದು ಹೆಸರಿಸೋಣ?ಇವರು ವಚನ ಭ್ರಷ್ಠತೆಯ ಬಗ್ಗೆ ಮಾತಾಡುತ್ತಾ ಯಾರು ಯಾರಿಗೆ ಮಾತು ತಪ್ಪಿದರು ಎಂದು ಹೇಳುತ್ತಾ ಕಾಲಸಾಗಿಸುತ್ತಿದ್ದಾರೆ.ಆದರೆ ಒಂದು ರಸ್ತೆ ಕೂಡಾ ಚೊಕ್ಕವಾಗಿಡಲಾಗದ ಈ ಕರ್ನಾಟಕದ ಆಡಳಿತಾರೂಢರು ಇಷ್ಟೊಂದು ದಗಲ್ಬಾಜಿ ಮಾಡಿದರು ಎಂದು ನೋವಾಗುತ್ತದೆ.ಒಂದೇ ಒಂದು ರಸ್ತೆಯನ್ನು ನಮ್ಮ ರಾಜಕಾರಣಿಗಳು ನೆಟ್ಟಗೆ ರಿಪೇರಿ ಕೂಡಾ ಮಾಡಲಾರರು ಎಂದರೆ ಇಲ್ಲಿ ಹದಗೆಟ್ಟಿರುವುದಕ್ಕೆ ಇನ್ನೇನು ಉಳಿದಿದೆ ಎಂದು ಅಚ್ಚರಿಯಾಗುತ್ತದೆ.

ಹಿಂದೆಲ್ಲಾ ಹಾಗಿರಲಿಲ್ಲ.

ನಮ್ಮ ಹಳ್ಳಿಯಲ್ಲಿ ಇದ್ದಕ್ಕಿದ್ದಂತೆ ಡಾಂಬರು ಡಬ್ಬಿಗಳು ಬಂದು ಇಳಿಯುತ್ತಿದ್ದವು.ಜಲ್ಲಿ ರಾಶಿ ಬೀಳುತ್ತಿತ್ತು.ನೋಡ್ತಾ ನೋಡ್ತಾ ಡಾಂಬರು ಬಿಸಿ ಮಾಡಲು ಕಟ್ಟಿಗೆ,ಆಮೇಲೆ ದೊಡ್ಡ ರೋಲರು ಬಂದು ನಿಲ್ಲುತ್ತಿತ್ತು.ನಾವು ಹಳ್ಳಿ ಶಾಲೆಗೆ ಹೋಗುವಾಗ ಆ ಡಾಂಬರು ಡಬ್ಬಿಯಿಂದ ಕರಿ ಡಾಂಬರು ಕಿತ್ತು ಉಂಡೆ ಮಾಡಿ ಶಾಲೆಯ ಬೆಂಚಿನಲ್ಲಿ ಅಂಟಿಸಿ ಹುಡುಗಿಯರ ಲಂಗಕ್ಕೆ ಅಂಟಿದ್ದನ್ನು ಕಂಡು ಬಹು ಖುಶಿ ಪಡುತ್ತಿದ್ದೆವು.ಮನೆಗೆ ಬಂದರೆ ಅಪ್ಪ ಮತ್ತಿತರರು ಕಳೆದ ವರ್ಷ ಡಾಂಬರು ಹಾಕಿದರು ಈಗ ಮತ್ತೆ ಎಂಥಾ ಖರ್ಮಕ್ಕೆ ಹಾಕುತ್ತಿದ್ದಾರೆ ಎಂದು ಅಸಬಡಿಯುತ್ತಿದ್ದರು.ಆಮೇಲೆ ಆ ಡಾಂಬರು ಡಬ್ಬಿಗಳು ಬರುವುದು ಕಡಿಮೆಯಾಗುತ್ತಾ ಬಂತು.ಮುಂದೆ ರಸ್ತೆಗಳಲ್ಲಿ ಪ್ರತೀ ವರ್ಷ ದಸರೆ ರಜೆ ಮುಗಿದ ಮೇಲೆ ಹೊಂಡ ಮುಚ್ಚುವ ಗ್ಯಾಂಗು ಮೆನ್ನುಗಳು ಕಾಣುತ್ತಿದ್ದರು.ಅವರು ಒಂದು ಬಾಲ್ದಿಯಲ್ಲಿ ಡಾಂಬರು ಹಿಡಿದುಕೊಂಡು ರಸ್ತೆ ಬದಿ ಬಿದ್ದಿದ್ದ ಜಲ್ಲಿಯನ್ನು ಹಾರೆಯಲ್ಲಿ ಎತ್ತಿ ಹೊಂಡಕ್ಕೆ ಸುರಿದು ಡಾಂಬರು ಅಂಟಿಸುವರು.ಆ ಗ್ಯಾಂಗು ಮೆನ್ನುಗಳೂ ಆಮೇಲೆ ಕಣ್ಮರೆಯಾದರು.

ಹೇಗೆ ಕಾಲ ಬದಲಾದಂತೆ ಭ್ರಷ್ಠತೆ ಕೂಡಾ ಹೊಸರೂಪ ತಾಳುತ್ತಿದೆ ಎಂದರೆ ನಮ್ಮ ರಸ್ತೆಗಳಿಗಿಂತ ಬೇರೆ ಉದಾಹರಣೆ ಬೇಕಾಗಲಿಕ್ಕಿಲ್ಲ.ಈಗ ಪಿಡಬ್ಲ್ಯುಡಿ ಎಂಬ ಇಲಾಖೆ ಅದೆಷ್ಟು ಭ್ರಷ್ಠತೆಯಿಂದ ಬಡವಾಗಿದೆ ಎಂದರೆ ಈ ಇಲಾಖೆಯ ಕಚೇರಿಗೆ ಫೋನು ಕೂಡಾ ಇಲ್ಲ. ರಸ್ತೆ ರಿಪೇರಿ ಮಾಡಲು ಯಾವ ಗುತ್ತಿಗೆದಾರ ಕೂಡಾ ಸಿದ್ಧನಿಲ್ಲ.ಕಾರಣ ಅವನಿಗೆ ಕಳೆದ ಆರು ವರ್ಷಗಳಿಂದ ಸರಕಾರ ಒಂದು ಪೈಸೆ ಪಾವತಿ ಮಾಡಿಲ್ಲ.ಹೊಸ ರಸ್ತೆ ಮಾಡೋದು ಹಾಳಾಗಿ ಹೋಗಲಿ,ಹಳೆ ರಸ್ತೆಯನ್ನಾದರೂ ಚೆನ್ನಾಗಿಡಲು ನಮ್ಮ ರಾಜಕಾರಣಿಗಳಿಗೆ ಆಗಿಲ್ಲ ಎಂದರೆ ಇವರು ಎಷ್ಟೊಂದು ಗಬ್ಬೆದು ಹೋಗಿದ್ದಾರೆ ಎಂದು ಪ್ರತ್ಯೇಕ ಹೇಳಬೇಕಾಗಿಲ್ಲ. ಯಾವಾಗ ನಮ್ಮ ಕರ್ನಾಟಕವನ್ನು ಅದಿರು ಲಾಬಿ ಖರೀದಿಸಿತೋ ಅಲ್ಲಿಗೆ ಎಲ್ಲವೂ ಮುಗಿದಿದೆ. ಅದಿರು ಲಾಬಿಗೆ ಎಲ್ಲಾ ರಾಜಕೀಯ ಪಕ್ಷಗಳೂ ಮಾರಾಟವಾಗಿವೆ.

ಅದೆಲ್ಲಾ ಹೋಗಲಿ,ಒಂದು ಹೊಂಡ ಮುಚ್ಚುವ ಕೆಲಸ ಎಂದಾದರೂ ಆದೀತೆ ಮತ್ತು ಆದರೂ ಮತ್ತೊಂದು ಹೊಂಡ ನಮ್ಮ ರಸ್ತೆಯಲ್ಲಿ ಆಗದಂತೆ ಮಾಡುವುದನ್ನು ನಾವು ಮಾಡಲು ಶಕ್ತರೇ?

or,

the road to success is always under construction!!!!!!!??????????????

20071226

ಚಪ್ಪರದ ಮಲ್ಲಿಗೆ


ಇದು ತುಂಬಾ ಕಷ್ಟ ಎಂದ ಆ ಹುಡುಗ.

ಇದು ಎಲ್ಲರ ಕಷ್ಟ ಎಂದು ಮನಸ್ಸಲ್ಲೇ ಅವಳೂ ಗುಣುಗುಣಿಸಿದಳು.

"ನಾನು ಈ ತನಕ ನಿನ್ನನ್ನು ಪ್ರೀತಿಸಿದೆ,ಇನ್ನು ಇಲ್ಲ ಅಲ್ವಾ" ಎಂದ.

ಅವಳು ನಕ್ಕಳು.

ಏನಾಯಿತು ಎಂದು ಅವಳು ಕೇಳಲೇ ಇಲ್ಲ.ಏನು ಕೇಳುವುದು,ಎಲ್ಲಾ ಪ್ರೀತಿ ಕೊನೆಗೂ ಹೀಗೇ ಆಗುವುದೇ?! ಎಂದು ಎಂದೂ ಯಾರಿಂದಲೂ ಪ್ರೀತಿಸಲ್ಪಡದ ಮತ್ತು ಯಾರನ್ನೂ ಪ್ರೀತಿಸದ ಅವನು ತುಂಬಾ ಸಂಕಟಪಟ್ಟ.

ಅವನು ಅವಳನ್ನು ಪ್ರೀತಿಸಿದ್ದ.ಎಂಥಾ ಪ್ರೀತಿ ಎಂದರೆ ಅದು ಹುಟ್ಟಿದ್ದೇ ಒಟ್ಟಾಗಿ.ಎಲ್ಲಾ ಪ್ರೀತಿಲಿ ಯಾರೋ ಒಬ್ಬರು ಆರಂಭಿಸುತ್ತಾರೆ ಮತ್ತು ಇನ್ನೊಬ್ಬರು ಅದನ್ನು ಸ್ವೀಕರಿಸುತ್ತಾರೆ.ಆದರೆ ಇವರ ನಡುವೆ ಹಾಗಾಗಲಿಲ್ಲ.ಇಬ್ಬರೂ ಒಟ್ಟಾಗಿ ಒಂದೇ ಕ್ಷಣಕ್ಕೆ ಪ್ರೀತಿಸಲು ಆರಂಭಿಸಿಬಿಟ್ಟರು.ಅದು ಅವರ ಕರ್ಮ ಅಂತ ನಾನೂ ನಿಮ್ಮಂತೆ ಹೇಳಬಹುದು ಆದರೆ ಅಲ್ಲಿ ಇನ್ನೊಂದು ಅಣಿ ಬೇರೆಯೇ ಇದೆ.ಅದುವೇ ವಿಚಿತ್ರವಾದದ್ದು.

ಈ ಹುಡುಗಿ ಆ ಒಂದು ದಿನ ಇವನ ಬಳಿ ಬಂದಾಗ ಚಪ್ಪರದ ಮಲ್ಲಿಗೆಯ ಮಾಲೆ ಮುಡಿದಿದ್ದಳು.ಅದು ನೋಡಿ ಇವನು ಬೆರಗಾಗಿದ್ದ. ಇದೇನಿದು ಎಂದರೆ ಚಪ್ಪರದ ಮಲ್ಲಿಗೆ ಎಂದಳು.ಅವನು ಆಮೇಲೆ ಮಾತಾಡಲಿಲ್ಲ.ಮರುದಿನ ಆವಳು ಬಂದಾಗ ಇವನಿರಲಿಲ್ಲ. ತುರುಬಿನಲ್ಲಿ ಹೂದಂಡೆಯೂ ಇರಲಿಲ್ಲ. ಆದರೆ ಆ ದಿನ ಅವಳು ಆ ನೇರಳೆ ಉಡುಪಿನೊಂದಿಗೆ ಬಂದಿದ್ದಳು.ಅವನು ನೋಡುತ್ತಾನೆ ಎಂಬ ಸಂಭ್ರಮದಿಂದ.ಆದರೆ ಅವನು ನೋಡಲು ಬರಲಿಲ್ಲ.ಮತ್ತೆ ಹಲವಾರು ಬಾರಿ ಆಕೆ ಆ ನೇರಳೆ ಉಡುಪಿನೊಂದಿಗೆ ಬಂದಾಗ ಆವನಿರಲಿಲ್ಲ.

ಆಮೇಲೆಂದೂ ಆಕೆ ಚಪ್ಪರದ ಮಲ್ಲಿಗೆ ಮುಡಿಯಲಿಲ್ಲ.

ಅದೊಂದು ದಿನ ಆತ ಕುಳಿತಲ್ಲೇ ಕನಸು ಕಂಡ.ಕನಸಲ್ಲಿ ತುಂಬಾ ಆಕೆ ಅಲ್ಲದೇ ಇನ್ಯಾರು ಬರಲು ಸಾಧ್ಯ.ಆ ಕನಸಿನಲ್ಲಿ ಆತ ಚಪ್ಪರದ ಮಲ್ಲಿಗೆ ಎಂದು ಬಿಟ್ಟ.ಅದು ಅಲ್ಲಿ ಆ ದಿನ ಆ ಹೊತ್ತಿಗೆ ಆ ಚಪ್ಪರದ ಮಲ್ಲಿಗೆಯನ್ನು ಕೊಯ್ಯುತ್ತಿದ್ದ ಆಕೆಗೆ ಮುಟ್ಟಿತು.ಆ ಮೇಲೆ ಆವಳೇ ಅವನನ್ನು ಕಂಡಾಗ ನಕ್ಕಳು."ಚಪ್ಪರದ ಮಲ್ಲಿಗೆ" ಎಂದಳು.

ಅವರಿಬ್ಬರೂ ಪ್ರೀತಿಸಿದರು.

ಆ ಕಾಡು ಆ ನೆಲ ಆ ಹಸಿರು ಆ ಗಿಡ ಆ ದಾರಿ ಆ ಘಾಟಿ ಆ ಸಂಜೆ ಆ ಹಗಲು ಆ ಕಾರು ಎಲ್ಲಾ ಅವರ ಆ ಪ್ರೀತಿಗೆ ಸಾಕ್ಷಿಯಾಗಿ ನಿಂತವು.

ಅವರು ಪ್ರೀತಿಸಿದರು.ಅವರು ತಬ್ಬಿಕೊಂಡರು.ಅವರು ಮುತ್ತಿನಮಾಲೆ ಪೋಣಿಸಿದರು.

ಅವರು ಬೆತ್ತಲಾದರು.

ಅವರು ಒಬ್ಬರನ್ನೊಬ್ಬರು ನೋಡಿದರು.ಅವರು ಒಬ್ಬರಲ್ಲಿ ಒಬ್ಬರನ್ನು ಹುಡುಕಿದರು.ಅವಳಲ್ಲಿ ಅವಳು ಕಾಣದ್ದನ್ನು ಅವನು ಕಂಡ.ಅವನಲ್ಲಿ ಅವನು ನೋಡಲಾರದ್ದನ್ನು ಅವಳು ನೋಡಿದಳು.ಹಾಗೆಲ್ಲಾ ಅವರು ಪ್ರೀತಿಸುತ್ತಿದ್ದರೆ ಯಾವ ದೇವರೂ ಮಾತೆತ್ತಲಿಲ್ಲ.ಅವರನ್ನು ಎಲ್ಲ ದೇವರೂ ಕೊಂಡಾಡಿದರು.ಆ ಹುಡುಗ ಆ ಜಗತ್ತಿಗೆ ಒಬ್ಬನೇ ಆಗಿದ್ದ.ಆದರೆ ಆ ಹುಡುಗಿಗೆ ಆತ ಇಡೀ ಜಗತ್ತೇ ಆಗಿಬಿಟ್ಟ.ಅವಳೆಂದಳು,"ಪ್ರೀತಿ ಕುರುಡಲ್ಲ."ಅವನು ಅದನ್ನು ಮುಂದುವರಿಸಿದ,"ನಿಜ ಪ್ರೀತಿ ತುಂಬಾ ನೋಡುತ್ತದೆ.ಅದು ತುಂಬಾ ನೋಡೋದರಿಂದ ಅದಕ್ಕೆ ಸಣ್ಣದು ಕಾಣೋದಿಲ್ಲ."

ಆಮೇಲೆ ಒಂದು ದಿನ ಅವನಿಗೆ ಅವಳು ಅವನದ್ದೇ ಆದಳು.ಅವಳನ್ನು ಬಿಟ್ಟು ಇರಲಾಗದು ಎಂದೆನಿಸಿತು.ಅವಳೇ ಅವನ ಸರ್ವಸ್ವ ಎಂದು ಖಚಿತವಾಯಿತು.ಅವನ ನೆನಪಿನ ತುಂಬಾ ಅವಳೇ ನಿಜವಾದ ಸಂಚಿಕೆಗಳಾಗತೊಡಗಿದಳು.

ಆಗಲೇ ಅವಳು ಕೇಳಿದ್ದು,"ನೀನು ನನ್ನನ್ನು ಮದುವೆಯಾಗುತ್ತೀಯಾ?"

ಅವನು ಕುಸಿದುಬಿದ್ದ.

ಆಮೇಲೆ ಅವಳು ಯಾರನ್ನೋ ಪ್ರೀತಿಸಲೇ ಎಂದು ಕೇಳಿದಳು.ಆಗ ಅವನಿಗೆ ಗೊತ್ತಾಯಿತು,ಈ ಪ್ರೀತಿ ನದಿಯಂತೆ,ಅಡ್ಡಗಟ್ಟಿದರೆ ಬೇರೆಡೆಗೆ ಹರಿಯುತ್ತದೆ ಎಂದು.ಅವನು ಮಾತಾಡಲಿಲ್ಲ.ಅವಳೂ ಮಾತಾಡಲಿಲ್ಲ.ಇಬ್ಬರೂ ಆಮೇಲೆ ಸುಮ್ಮನಾದರು.

ಅವನಿಗೆ ಆಮೇಲೆ ಪ್ರೀತಿಸಿದವಳನ್ನು ಮರೆಯುವುದು ಅನಿವಾರ್ಯವಾಗತೊಡಗಿತು.ಪ್ರೀತಿಸಿದವಳನ್ನು ಮರೆಯುವುದು ಎಂದರೆ ಅದು ಎಂದೂ ಕಾಣದವರನ್ನು ನೆನಪಿಸಿಕೊಂಡ ಹಾಗೇ ಎಂದು ಅವನಿಗೆ ಅನಿಸುತ್ತಿದ್ದರೆ,ಅವಳಿಗೆ ಒಡೆದ ಕನ್ನಡಿಯನ್ನು ಜೋಡಿಸಲು ಹೋಗಿ ಗಾಯ ಮಾಡಿಕೊಳ್ಳುವುದು ಬೇಡ ಅನಿಸಿತು.

ಒಂದು ದಿನ ಅವಳು ಅವನಲ್ಲಿ ಕೇಳಿದಳು,"ಒಂದೇ ಒಂದು ಸಲ ನನ್ನನ್ನು ತಬ್ಬಿಕೋ".

ಅವನು ಅವಳನ್ನು ಅಪ್ಪಿಕೊಂಡ.

ಆ ಬಂಧದಲ್ಲಿ ಅವಳಿಗೆ ಹಿತವೆನಿಸಿತು.ಅವಳೆಂದಳು,"ಏನೇ ಆದರೂ ಪ್ರೀತಿಸೋದು ಮತ್ತು ಪ್ರೀತಿಸಲ್ಪಡೋದು ಒಂದೇ ಒಂದು ಸಲ ಕಣೋ."

ಆಮೇಲೆ ಅವನು ಅವರಿಬ್ಬರ ಬದುಕಿಗೆ ಶುಭ ಹಾರೈಸಿದ.

ಆ ಕಾಡು ಆ ನೆಲ ಆ ಹಸಿರು ಆ ಗಿಡ ಆ ದಾರಿ ಆ ಘಾಟಿ ಆ ಸಂಜೆ ಆ ಹಗಲು ಆ ಕಾರು ಎಲ್ಲಾ ಅವನ ಹಾರೈಕೆಗೆ ಸಾಕ್ಷಿಯಾಗಲಾರೆವು ಎಂದವು.

20071225

ಬೇಡಾ ಎಂದರೂ..


ಎಂಥಾ ಜನರೋ ಎಂಥಾ ಮಾತೋ?

ಅನೇಕ ಬಾರಿ ನಮ್ಮ ಮಾತುಗಳಿಗೆ ಅರ್ಥವೇ ಇರುವುದಿಲ್ಲ.ಆದರೂ ಮಾತಾಡುತ್ತೇವೆ,ಯಾಕೆಂದರೆ ನಾವು ಮಾತಾಡಬೇಕು ಅಷ್ಟೇ.

ನೀವು ಯಾವುದಾದರೂ ಬೀದಿಯಲ್ಲಿ ಹೋಗುತ್ತಾ ಸುಮ್ಮನೇ ಇಂತಿಂಥಾ ಹೋಟೇಲೋ ಊರೋ ಅಥವಾ ಕಾಂಪ್ಲೆಕ್ಸೋ ಎಲ್ಲಿದೆ ಎಂದು ಕೇಳಿ ನೋಡಿ; ಆಗ ನಿಮ್ಮ ಮಾರ್ಗದರ್ಶಿ ಶುರುಮಾಡೋದು ಹೀಗೆ, "ನೀವು ಒಂದು ಕೆಲಸ ಮಾಡಿ,ಈ ರೋಡಲ್ಲೇ ಲೆಫ್ಟು ತೆಗಳ್ಳಿ.."

ಸರಿಯಪ್ಪಾ ಅದಕ್ಕೆ ಒಂದು ಕೆಲಸ ಏನು ಮಾಡೋದು ಎಂದು ನೀವು ನಿಮ್ಮೊಳಗೇ ಕೇಳಿಕೊಳ್ಳಬಹುದು.

ದಾರಿ ಹೇಳೊದಕ್ಕೂ ಒಂದು ಕೆಲಸ ಮಾಡೋದಕ್ಕೂ ಏನಪ ಸಂಬಂಧ..

ನಮ್ಮ ಊರಲ್ಲಿ ಒಬ್ಬ ಶಾಸಕರಿದ್ದರು.ಅವರೀಗ ದೊಡ್ಡ ಪಕ್ಷದ ದೊಡ್ಡ ಜನ.ಅವರು ತಮ್ಮ ಭಾಷಣದಲ್ಲಿ, "ಈ ದೇಶದ,," ಅಂತ ಹತ್ತು ಬಾರಿಯಾದರೂ ಹೇಳುವರು.ಪ್ರತಿಯೊಂದಕ್ಕೂ "ಈ ದೇಶದ ಈ ದೇಶದ.."

ಮತ್ತೊಬ್ಬರಿದ್ದರು,ಅವರು ಈಗ ಮಾಜಿಗಳು.ಅವರು "ಮಟ್ಟಿಗೆ"ಎನ್ನದೇ ಒಂದಾದರೂ ಭಾಷಣ ಮಾಡಿದ್ದು ಇರಲಿಕ್ಕಿಲ್ಲ.ಧಾರವಾಡದ ಕಡೆಯ ವಿಮರ್ಶಕರೊಬ್ಬರಿದ್ದಾರೆ.ಅವರು "ಅಂತ ಹೇಳ್ಬುಟ್ಟು"ಎನ್ನದೇ ಒಂದಾದರೂ ಉಪನ್ಯಾಸ ನೀಡಿದ್ದೇ ಇರಲಿಕ್ಕಿಲ್ಲ."ಹಾಗಂತ ಹೇಳ್ಬುಟ್ಟು" ಎಂದೇ ಅವರ ಪ್ರತೀವಾಕ್ಯ ಮುಕ್ತಾಯವಾಗುವುದು.

ತುಳುನಾಡಿನ ಹಳ್ಳಿಗಳಲ್ಲಿ ನೀವು ನಡೆದುಕೊಂಡು ಹೋಗುತ್ತಿದ್ದರೆ,ಪ್ರತೀ ಮನೆಯ ಎದುರು ಒಂದು ಅಜ್ಜಿ ಅಥವಾ ಅಜ್ಜ ಕುಳಿತಿರುತ್ತದೆ.ನೀವು ಅದನ್ನು ನೋಡಿದರೆ ಸಾಕು ಅದು "ಏನೂ ಮಾಡಲು ಆಗುತ್ತಾ ಇಲ್ಲ ಹಾಗೇ ಕುಳಿತದ್ದು" ಎನ್ನುತ್ತದೆ.ಅದಕ್ಕೆ ಏನೀಗ ನಾನು ಏನಾದರೂ ಕೇಳಿದೆನಾ ಎಂದು ನೀವು ಕನಲಬೇಕು.

ಪೇಟೆಗೆ ಬಂದು ನೋಡಿ.ನಿಮ್ಮ ಪಕ್ಕದ ಮನೆಯವನೂ ನಿಮ್ಮಂತೆ ಬಂದವನೇ "ಏನೂ ಪೇಟೆಗೆ ಬಂದಿರೋ" ಎಂದು ವಿಚಾರಿಸುತ್ತಾನೆ.ಹೌದೂ ಪೇಟೆಗೆ ಅಲ್ಲದೇ ನಾನೇನು ಕಾಡಿಗೆ ಬಂದ ಹಾಗೇ ಕಾಣಿಸುತ್ತದಾ ನಿನಗೆ ಎಂದು ನೀವು ಛೇಡಿಸಬೇಕು,ನಿಮ್ಮೊಳಗೆ.

ಹಿಂದೆ ನಮ್ಮ ರೇಡಿಯೋಗಳಿದ್ದವಲ್ಲ.ಅದರಲ್ಲಿ ವಾರ್ತೆ ಅಥವಾ ಪ್ರದೇಶ ಸಮಾಚಾರ ಅಂತ ಸುದ್ದಿ ಬಿತ್ತರವಾಗುತ್ತಿತ್ತು.ಅರ್ಧಕ್ಕೆ ಬಂದೊಡನೇ, "ಈ ವಾರ್ತೆಗಳನ್ನು ಆಕಾಶವಾಣಿಯಿಂದ ಕೇಳುತ್ತಿದ್ದೀರಿ" ಎನ್ನೋರು.ಯಲಾ ಆಕಾಶವಾಣಿಯಿಂದ ಅಲ್ಲದೇ ಇನ್ನೇನದರಿಂದ ಕೇಳುತ್ತಿರಲು ಸಾಧ್ಯ ಎಂದು ನಾನು ಚಿಕ್ಕವನಾಗಿದ್ದಾಗ ಅಕ್ಕಂದಿರ ಬಳಿ ಕೇಳಿ ಅವರನ್ನೂ ಕನ್ಪ್ಯೂಸ್ ಮಾಡಿ ಹಾಕಿದ್ದೆ.ಇನ್ನು ಪ್ರದೇಶ ಸಮಾಚಾರದಲ್ಲಂತೂ "ಪ್ರದೇಶ ಸಮಾಚಾರ ಕೇಳುತ್ತಿದ್ದೀರಿ"ಎನ್ನೋರು.ಅಲ್ಲಾ ಚಿತ್ರಗೀತೆ ಆಲಿಸುತ್ತಿದ್ದೇವೆ ಎಂದು ನಾನೇ ದೊಡ್ದದಾಗಿ ರೇಗುತ್ತಿದ್ದೆ.ಅನೇಕರು ಇರುತ್ತಾರೆ,ಕಂಡೊಡನೇ "ಆರೋಗ್ಯವಾ" ಎಂದು ಕೇಳುತ್ತಾರೆ.ಇದು ಯಾಕೆ ನಮ್ಮ ಆರೋಗ್ಯದ ಬಗ್ಗೆ ಇವರಿಗೆ ಈ ಘನವಾದ ಕಾಳಜಿ ಎಂದು ತಬ್ಬಿಬ್ಬು ಆಗುವುದೇ ಬಾಕಿ."ಆರಾಮಾನಾ" ಎನ್ನುತ್ತಾರೆ,ಆಗಲೂ ಇದೇನು ನಾವು ಆರಾಮವಾಗಿರೋದು ಇವರಿಗೆ ಲಾಭವಾ ನಷ್ಟವಾ ಎಂದು ತಲೆ ಹಾಳು ಮಾಡಿಕೊಳ್ಳುತ್ತೇವೆ."ಊಟ ಆಯಿತಾ ತಿಂಡಿ ತಿಂದಿರಾ" ಎನ್ನುವುದೂ ಇದೇ ಸಾಲಿನದ್ದು.

ಈ ಮೊಬೈಲ್ ಬಂದ ನಂತರವಂತೂ ಈ ಸಾಲಿಗೆ ಇನ್ನೊಂದು ಸೇರಿದೆ,ಮೊಬೈಲ್ ಕಿವಿಗೆ ಇಟ್ಟರೆ ಸಾಕು, "ಎಲ್ಲಿದ್ದೀರಿ?".ನಾನು ಎಲ್ಲೇ ಇದ್ದರೆ ನಿನಗೇನಪ್ಪಾ ಕಷ್ಟ?ನಿನಗೇನು ಹೇಳೋದಿದೆ ಹೇಳಪ್ಪಾ ಅಂತ ನಾವು ಮನಸಲ್ಲೇ ಶಾಪ ಹಾಕಬೇಕು.

ಹೀಗೆ ಎಷ್ಟೊಂದು ಮಾತೇ ಅಲ್ಲದ ಮಾತುಗಳು..! ನಾವು ಬೇಡ ಎಂದರೂ ನಮ್ಮನ್ನು ಹಿಂಬಾಲಿಸುತ್ತವೆ,ಅಥವಾ ನಾವೂ ಹೀಗೇ ಮಾತಾಡುತ್ತೇವೆ ಅಲ್ಲವಾ ?ನಿಮ್ಮ ಬಳಿ ಇಂಥ ಕಲೆಕ್ಷನ್ಸ್ ಇದ್ದರೆ ತಿಳಿಸಿ.

20071217

ನಾಲ್ಕು ಸಾಲು-೨೬


೧.ಸಮುದ್ರದ ಮೇಲೆ

ನಡೆಯುವ ಆಸೆ ಬಂದು

ಮರಳಿನ ಮೇಲೆ ನಿಂತೆ

ತೆರೆ ಬಂದು ಪಾದಗಳನ್ನು

ಮುಟ್ಟಿ ಬಾಜಿ ಕಟ್ಟಿತು.೨.ಚಂದಿರನ

ತುಂಬುತನಕ್ಕೆ

ಎದ್ದೇಳುವ ಸಾಗರ

ನಮ್ಮ ಪ್ರೀತಿಯನ್ನುಅಣಕಿಸುವುದು.೩.ನಾವಿಕನಿಲ್ಲದ

ದೋಣಿಯಲ್ಲಿ

ಸಾಗರವನ್ನು ಶೋಧಿಸಲು ಹೊರಟ

ಸಾಹಸಿಯನ್ನು

ಪರ್ವತಗಳು ಎತ್ತರದಿಂದ ನೋಡಿದವು.೪.ಒಂದು ತೆರೆಯನ್ನೂ

ಹಿಡಿದಿಡಲಾಗದ ಮಾನವ

ಸಮುದ್ರದೆದುರು

ಸೋಲನ್ನೊಪ್ಪಿರುವುದನ್ನು

ನದಿಗಳು

ಬಂದು

ತಿಳಿಸಿದವು.

20071211

ನಾಲ್ಕು ಸಾಲು-೨೪


೧.ಹಾಡನ್ನು

ಕಟ್ಟಿಕೊಳ್ಳಲು

ಬೊಗಸೆ ಎತ್ತಿದರೆ

ಹೃದಯ ಬಿಟ್ಟುಕೊಡೆನೆಂದು

ಮುಚ್ಚಿಕೊಂಡಿತು.

೨.ಬಣ್ಣಗಳೆಲ್ಲಾ ಒಂದೆಡೆ

ಕುಳಿತು

ಕಪ್ಪು ಮತ್ತು ಬಿಳಿ

ಬಣ್ಣಗಳನ್ನು

ಗೇಲಿ ಮಾಡಿದವು.೩.ಪ್ರೀತಿಯ ಆತುರಕ್ಕೆ

ರತಿ

ನಾಚಿ

ದೇವರು

ಹೃದಯದೊಳಗೆ ಬಂಧಿಯಾಗುವನು.೪.ಸೋಲನ್ನು ಒಪ್ಪಿಕೊಂಡ

ಕ್ರೀಡಾಳು

ಅಖಾಡದಿಂದ

ಗೆಲುವನ್ನು ಹುಡುಕುತ್ತಾ

ಶೂನ್ಯಕ್ಕೆ ಸಾಗುವುದು

ಯಾರೂ ಕಾಣರು.

20071210

ಕೊಲೆಗಾರ ಗಂಗಣ್ಣ


ಗಂಗಣ್ಣನ ತಲೆಗೆ ಅದು ಹೇಗೆ ಹೊಳೆಯಿತೋ ಗೊತ್ತಿಲ್ಲ.

ಇದ್ದಕ್ಕಿದ್ದಂತೆ ಅವನಿಗೆ ಒಂದು ಕೊಲೆ ಮಾಡಬೇಕು ಎಂದು ಸಿಕ್ಕಾಪಟ್ಟೆ ಅನ್ನಿಸಿದೆ.ಯಾರನ್ನು ಹೇಗೆ ಕೊಲೆ ಮಾಡೋಣ ಅಂತ ಅವನು ತುಂಬಾ ಯೋಚಿಸುತ್ತಿದ್ದಾನೆ.ಗಂಗಣ್ಣ ಇಂಥಾ ಒಂದು ಕೊಲೆಯನ್ನು ಇಂಥಾ ಒಂದು ಮಾದರಿಯಲ್ಲಿ ಮಾಡಬೇಕು ಎಂದು ನಿರ್ಧರಿಸಲು ತುಂಬಾ ದಿನಗಳಿಂದ ಹೆಣಗಾಡುತ್ತಿದ್ದಾನೆ.

ಕೊಲೆ ಮಾಡೋದು ಎಂದರೆ ಅದೇನು ಸಣ್ಣ ಸಂಗತಿಯಾ?ಯಾರನ್ನು ಕೊಲೆ ಮಾಡಬೇಕು ಅಂತ ಮೊದಲಾಗಿ ನಿರ್ಧರಿಸಬೇಕು.ಆಮೇಲೆ ಅವರನ್ನು ಯಾಕಾದರೂ ಕೊಲೆ ಮಾಡಬೇಕು ಅಂತ ಒಂದು ಸ್ವಂತ ನಿಯಮಾವಳಿಯನ್ನು ಜ್ಯಾರಿ ಮಾಡಬೇಕು.ಇಷ್ಟಾದಮೇಲೆ ಹೇಗೆ ಕೊಲೆ ಮಾಡೋದು ಅಂತ ಆಗಬೇಕು.ಅಲ್ಲಿಗೂ ಮುಗಿಯುತ್ತದಾ?ಯಾವಾಗ ಕೊಲೆ ಮಾಡೋದು ಎಂದು ಮುಹೂರ್ತ ಇಡಬೇಕು.ಒಂದು ವೇಳೆ ಮುಹೂರ್ತ ತಪ್ಪಿದರೆ ಏನು ಮಾಡಬೇಕು ಎಂದು ಉತ್ತರ ಭಾಗವನ್ನು ಈಗಲೇ ನಿರ್ಧರಿಸಬೇಕು.ಎಲ್ಲಾ ಸರಿಯಾಗಿಯೇ ಮತ್ತು ಗಂಗಣ್ಣನ ಆಶಯಗಳಂತೇ ಆಯಿತು ಎಂದಿಟ್ಟುಕೊಳ್ಳೋಣ,ಕೊಲೆ ಮಾಡಿದ ಮೇಲೆ ತಪ್ಪಿಸಿಕೊಳ್ಳುವುದಾ ಅಥವಾ ಸಿಕ್ಕಿಬೀಳೋದಾ ಎಂದೂ ಆಗಬೇಕು.ಒಂದು ವೇಳೆ ತಪ್ಪಿಸಿಕೊಳ್ಳೋದೇ ಆದರೆ ಹೇಗೆ ಮತ್ತು ಎಲ್ಲಿಗೆ ಎಷ್ಟು ದಿನ ತಪ್ಪಿಸಿಕೊಳ್ಳೋದು ಮತ್ತು ಹಾಗೇ ತಪ್ಪಿಸಿಕೊಳ್ಳುವಾಗ ಒಂದೊಮ್ಮೆ ಸಿಕ್ಕಿಬಿದ್ದರೆ ಏನು ಮಾಡೋದು ಎಂದೂ ಯೋಚಿಸಲೇಬೇಕಲ್ಲ.

ಗಂಗಣ್ಣ ಅದನ್ನೆಲ್ಲಾ ಪ್ರತೀ ರಾತ್ರಿ ಮಲಗಿದಾಗ ಯೋಚಿಸುತ್ತಿದ್ದಾನೆ.ತಪ್ಪಿಸಿಕೊಳ್ಳುವುದೇ ಆದರೆ ತುಂಬಾ ಖರ್ಚು ಬೀಳುತ್ತದೆ.ದುಡಿಮೆ ಕೂಡಾ ಇಲ್ಲದೇ ಅಲ್ಲಿ ಇಲ್ಲಿ ತಪ್ಪಿಸಿಕೊಳ್ಳುತ್ತಾ ಸಾಗುವಾಗ ಬಸ್ಸು ,ಕಾರು ಅಂತ ಬರೀ ಓಡಾಟಕ್ಕೇ ದಿನಕ್ಕೆ ನೂರಿನ್ನೂರು ರೂಪಾಯಿ ಬೇಕಾಗಬಹುದು ಎಂದು ಚಿಂತಿಸಿ ಬೆಚ್ಚಿಬೀಳುತ್ತಾನೆ.ಅಷ್ಟೊಂದು ಹಣ ತುಂಬಿಸಿಕೊಳ್ಳಲು ಸಾಲಗೀಲಾ ಅಂತ ಮಾಡಬೇಕು ,ಅದೂ ದುಬಾರಿಯೇ ಅಂತ ದುಃಖಪಡುತ್ತಾನೆ.ಸಿಕ್ಕಿಬೀಳುವುದು ಎಂದು ಮಾಡಿದರೂ ಪೊಲೀಸರಿಗೆ ವಕೀಲರಿಗೆ ರುಸ್ತುಮು ಅಂತ ತುಂಬಾ ಹಣ ಬೇಕಲ್ಲ ಎಂದೂ ಚಕಿತನಾಗುತ್ತಾನೆ.ರಾತ್ರಿ ಹೀಗೆ ಚಿಂತನೆ ಮಾಡುತ್ತಾ ಗಂಗಣ್ಣ ನಿದ್ದೆ ಹೋಗುತ್ತಾನೆ.

ನಸುಕಿನಲ್ಲಿ ಎಚ್ಚರವಾದೊಡನೇ ಯಾರನ್ನು ಕೊಲೆ ಮಾಡೋದು ಎಂಬ ಚಿಂತೆ ಶುರುವಾಗುತ್ತದೆ,ಏನೇ ಆದರೂ ಕೊಲೆ ಮಾಡೋದು ಮಾಡೋದೇ ಎಂದು ಮಧ್ಯಾಹ್ನದ ಹೊತ್ತಿಗೆ ಮತ್ತೊಮ್ಮೆ ತನ್ನೊಳಗೆ ಖಚಿತನಾಗುತ್ತಾನೆ.ಸಂಜೆಯಾಗುತ್ತಲೇ ಹೇಗೆ ಕೊಲೆ ಮಾಡೋಣ,ಚೂರಿಯಿಂದಲಾ,ತಲವಾರದಿಂದಲಾ ಗುಂಡಿನಿಂದಲಾ ಎಂದು ಮತ್ತೊಮ್ಮೆ ಚಿಂತೆ ಶುರುವಾಗುತ್ತದೆ.

ಗಂಡಸನ್ನೇ ಕೊಲ್ಲಬಹುದು ಆದರೆ ಯಾವ ಗಂಡಸು,ಎಷ್ಟು ಪ್ರಾಯದ್ದು ಎಂಬ ಸಮಸ್ಯೆಯೂ ಅವನನ್ನು ಕಾಡುತ್ತದೆ.ಹಾಗೊಮ್ಮೆ ಕೊಲೆ ಮಾಡಿದಾಗ ಅವನಿಗೆ ಸಣ್ಣ ಮಕ್ಕಳೋ ಇದ್ದರೆ ಅವು ಅನಾಥವಾಗುತ್ತವಲ್ಲಾ ಎಂಬ ಕರುಣೆ ಮೂಡುತ್ತದೆ.ಯುವಕನೇ ಆಗಿದ್ದರೆ ಅವನನ್ನೇ ನಂಬಿದ ಅವನ ಅಪ್ಪ ಅಮ್ಮ ಪಾಪ ಎಂದು ಬೇಜಾರಾಗುತ್ತದೆ.ಮುದುಕನನ್ನೇ ಕೊಂದು ಹಾಕಿದರೆ ತನ್ನ ತಾಖತ್ತಿಗೆ ಅದು ತುಂಬಾ ಸಣ್ಣದಾಗಿಬಿಡುತ್ತದೆ.

ಹೆಣ್ಣನ್ನೇ ಕೊಲ್ಲಬಹುದು ಆದರೆ ಅವಳಿಗೆ ಮದುವೆ ಆಗಿದ್ದರೆ ಮತ್ತೆ ಅದೇ ಅವಳನ್ನೇ ನಂಬಿದ ಅವಳ ಗಂಡ,ಮಕ್ಕಳ ಸ್ಥಿತಿ ನೆನಪಿಗೆ ಬರುತ್ತದೆ.ಮದುವೆ ಆಗಿರದಿದ್ದರೆ ಪಾಪ ಒಂದು ಹುಡುಗನಿಗೆ ಒಂದು ಹುಡುಗಿ ಇಲ್ಲದಂತಾಗುತ್ತದಲ್ಲಾ ಎಂದು ಖೇದವಾಗುತ್ತದೆ.

ಗಂಗಣ್ಣ ಹಣ್ಣುಹಣ್ಣಾಗಿದ್ದಾನೆ.

ಅವನು ಕೊಲೆ ಮಾಡೋದು ಎಂದು ತೀರ್ಮಾನಿಸಿದ್ದಾಗಿದೆ.ಅದನ್ನು ತುಂಬಾ ಪ್ರೀತಿಯಿಂದ ಮಾಡಬೇಕು ಎಂದು ಅವನು ನಿರ್ಧರಿಸಿದ್ದೂ ಆಗಿದೆ.ಆದರೆ ಉಳಿದ ಈ ವಿಚಾರಗಳು ಅವನನ್ನು ಹಗಲೂ ಇರುಳೂ ಕಾಡುತ್ತಲೇ ಇವೆ.


೨.

ಈ ಎಲ್ಲಾ ಹಿನ್ನೆಲೆಯಲ್ಲೇ ಗಂಗಣ್ಣ ಆ ಊರಿನ ಮಹಾನ್ ಚಿಂತಕ ಕಂಕಡಿಯನ್ನು ಭೇಟಿಯಾಗಿದ್ದಾನೆ.ಕಂಕಡಿ ಬಾವಿಕಟ್ಟೆಯಲ್ಲಿ ಕುಳಿತು ತುಂಬಾ ಗಂಭೀರವದನನಾಗಿ ಗಂಗಣ್ಣನ ಸಮಸ್ಯೆಯನ್ನು ಆಲಿಸುತ್ತಿದ್ದಾನೆ.ಒಂದು ಬಾರಿ ಕೊಲೆ ಮಾಡದೇ ಇರುವ ನಿರ್ಧಾರ ತೆಗೆದುಕೊಳ್ಳುವಂತೆ ಸಲಹೆ ನೀಡೋಣವೇ ಎಂದು ಕಂಕಡಿ ಆಲೋಚಿಸುತ್ತಾನೆ.ಆದರೆ ಅದರಿಂದ ತಾನೊಬ್ಬ ಚಿಂತಕನೆಂಬ ಹೆಸರಿಗೇ ಧಕ್ಕೆ ಆಗಬಹುದು ಮಾತ್ರವಲ್ಲ,ಯಾವತ್ತೂ ಗಂಗಣ್ಣನ ಮುಂದೆ ತನ್ನ ಇಮೇಜು ಹಾಳಾಗಬಹುದು ಎಂಬ ಮುಂದಾದ ಭಯ ಅವನನ್ನು ಆವರಿಸುತ್ತದೆ.ಏನೇ ಆದರೂ ಗಂಗಣ್ಣ ಕೊಲೆ ಮಾಡಲೇ ಬೇಕು ಎಂದು ಕಂಕಡಿ ತೀರ್ಮಾನಿಸುತ್ತಾ ಆ ವಿಚಾರವನ್ನು ಅವನಿಗೆ ತಿಳಿಸುತ್ತಾನೆ.

ಆಗ ಗಂಗಣ್ಣ "ಅದು ನನಗೂ ಗೊತ್ತಿದೆ.ಆದರೆ ಯಾರನ್ನು ಮತ್ತು ಹೇಗೆ ಮತ್ತು ಎಲ್ಲಿ ಕೊಲೆ ಮಾಡುವುದು" ಅಂತ ಹೇಳಿದರೆ ಸಾಕುಎಂದು ಗೋಗರೆಯುತ್ತಾನೆ.ಕಂಕಡಿ ತನ್ನ ಜೋಳಿಗೆ ಚೀಲಕ್ಕೆ ಬೇಡದಿದ್ದರೂ ಇಣುಕುತ್ತಾನೆ.ಅವನಿಗೆ ಆಗಾಗ ಆ ರೀತಿ ತನ್ನ ಜೋಳಿಗೆ ಚೀಲದಲ್ಲಿ ಗಾಢ ಚಿಂತನೆಯನ್ನು ಹುಡುಕುವ ಚಾಳಿ.ಅದು ಅವನ ಮಟ್ಟಿಗೆ ತುಂಬಾ ಉಪಕಾರಿ.ಏಕೆಂದರೆ ಒಮ್ಮೆ ಅವನನ್ನು ಫೈನಾನ್ಸಿನವರು ದಾರಿ ಮಧ್ಯೆ ಹಿಡಿದು ಸಾಲ ಕೊಡದಿದ್ದರೆ ಕಾಲು ಮುರಿಯುವುದಾಗಿ ಧಮಕಿ ಹಾಕಿದಾಗ ಕಂಕಡಿ ಜೋಳಿಗೆ ಚೀಲಕ್ಕೆ ಹೀಗೆ ಇಣುಕಿ ಗೋಳೋ ಎಂದು ಅತ್ತು ಫೈನಾನ್ಸಿನವರನ್ನೇ ಯಾಮಾರಿಸಿದ್ದ.ಅಂತಿರುವಾಗ ಇಂಥಾ ಸಮಸ್ಯೆಗೆ ಚೀಲಕ್ಕೆ ಇಣುಕಿದರೆ ಪರಿಹಾರ ಸಿಗುತ್ತದೆ ಎಂದು ಅವನು ಇಣುಕಿದ.

ಕಂಕಡಿ ಅಗತ್ಯಕ್ಕಿಂತ ಹೆಚ್ಚು ಸೀನ್ ಕ್ರಿಯೇಟ್ ಮಾಡುವುದನ್ನು ಕಂಡು ಗಂಗಣ್ಣ ರೋಸಿಹೋದ.ಆದರೆ ಕಂಕಡಿಯ ಅದೃಷ್ಟವೋ ಏನೋ ಅವನನ್ನೇ ಕೊಲೆ ಮಾಡುವ ಸಿಟ್ಟಾಗಲಿ, ಐಡಿಯಾವಾಗಲಿ ಗಂಗಣ್ಣನಿಗೆ ಹೊಳೆಯಲಿಲ್ಲ.

"ಏನಾದರೂ ಹೇಳಿ"ಎಂದ ಗಂಗಣ್ಣ.ಕಂಕಡಿ ಏನನ್ನೂ ಹೇಳಲಾರದೇ "ನೀನು ಕೊಲೆ ಮಾಡಲೇ ಬೇಕು.ಅದರಲ್ಲಿ ಯಾವ ಚೇಂಜೂ ಇಲ್ಲ.ಆದರೆ ಯಾರನ್ನು ಅಂತ ಮೊದಲು ನೋಡಿದರಾಯಿತು. ಆಮೇಲೆ ಅವನ ಕೆಪಾಸಿಟಿಗೆ ಬೇಕಾದ ಹಾಗೇ ಕೊಂದರಾಯಿತು"ಎಂದು ಭಯಂಕರ ಮಾದರಿಯಲ್ಲಿ ಪರಿಹಾರ ನೀಡಿದ.

ಗಂಗಣ್ಣನಿಗೂ ಇದು ಮಾತು ಎಂದನಿಸಿತು.

ಯಾವುದಕ್ಕೂ ಮೊದಲು ಜನ ಫಿಕ್ಸ್ ಆಗಲಿ.ಆಮೇಲೆ ನೋಡಿದರಾಯಿತು.ಬಡವ ಅಂತಾದರೆ ಕತ್ತಿಯಲ್ಲಿ.ಶ್ರೀಮಂತ ಆದರೆ ಬುಲ್ಲೆಟ್ಟಿನಲ್ಲಿ.ಹುಡುಗಿ ಆದರೆ ಹಾಡಾ ಹಗಲು.ಬಿಸಿನೆಸ್‌ಮ್ಯಾನ್ ಆದರೆ ಅಂಗಡಿ ಪ್ರಿಮಿಸಿಸ್ಸಲ್ಲಿ.ರೈತನಾದರೆ ಹೊಲದಲ್ಲಿ,ರಾಜಕಾರಣಿಯಾದರೆ ಒಂದು ದೊಡ್ಡ ಸಭೆಯ ನಡುವೆ ಹೀಗೆ ಅವರವರ ಅಂತಸ್ತಿಗೆ ತಕ್ಕ ಹಾಗೇ ಕೊಂದುಬಿಡೋಣ ಎಂದು ಅವನು ಬಹಳ ಜಲ್ದಿ ನಿರ್ಧರಿಸಿದ.ಮತ್ತು ಅದನ್ನು ಕಂಕಡಿಯ ಬಳಿ ಹೇಳಿದ.

ಆಮೇಲೆ ಅವನಿಗೆ ಯಾರನ್ನು ಕೊಲ್ಲುವುದು ಎಂಬ ವಿಚಾರಕ್ಕೆ ಕಂಕಡಿಯೇ ಸಹಾಯ ಮಾಡುವುದಾಗಿ ಹೇಳಿದ.


೩.

ಹಾಗೇ ಅವರು ಸೀದಾ ಬಂದದ್ದು ಜೈಲಿಗೆ.ಜೈಲಲ್ಲಿ ದೊಡ್ಡದೊಡ್ಡ ಕೊಲೆಗಾರಿರುತ್ತಾರೆ ಎಂದು ಆಸೆ ಹುಟ್ಟಿಸಿದವನೇ ಕಂಕಡಿ.ಅವರಲ್ಲಿ ಮೂರ್‍ನಾಲ್ಕು ಜನರನ್ನು ಮೀಟ್ ಆದರೆ ಕೊಲೆಯ ಡಿಟೈಲು ಸಿಗುತ್ತದೆ ಮತ್ತು ಆ ಮೂಲಕ ಗಂಗಣ್ಣ ತುಂಬಾ ವೈಭವದ ಕೊಲೆ ಮಾಡಿ ಯಶಸ್ಸು ಗಳಿಸಬಹುದು ಎಂದು ಕಂಕಡಿ ಶಿಫಾರಸ್ಸು ಮಾಡಿದ್ದ ಮತ್ತು ಅದಕ್ಕಾಗಿಯೇ ಜೈಲಿಗೆ ಗಂಗಣ್ಣನ್ನು ಕರೆ ತಂದಿದ್ದ.ಜೈಲಲ್ಲಿ ಅವರಿಬ್ಬರೂ ತುಂಬಾ ಕ್ರಿಮಿನಲ್ಲುಗಳನ್ನು ಭೇಟಿಯಾದರು.ಆದರೆ ಯಾವನೊಬ್ಬನೂ ತಾನು ಒಂದು ,ಒಂದೇ ಒಂದು ಕೊಲೆ ಮಾಡಿದೆ ಎಂದು ಒಪ್ಪಿಕೊಳ್ಳಲೇ ಇಲ್ಲ.ತನ್ನನ್ನು ಅನ್ಯಾಯವಾಗಿ ಜೈಲಿಗೆ ತಳ್ಳಲಾಗಿದೆ ಎಂದೂ ಪ್ರತಿಯೊಬ್ಬರೂ ಹೇಳಿದರು.ಆದ್ದರಿಂದ ಗಂಗಣ್ಣನಿಗೆ ಅಲ್ಲಿ ಒಂದೇ ಒಂದು ಐಡಿಯಾ ಸಿಗಲೇ ಇಲ್ಲ.

ಕಂಕಡಿ ಹೇಳಿದ "ನಾವು ಕೊಲೆಯಾದವರ ಮನೆಗೆ ಹೋಗುವಾ.ಅಲ್ಲಿ ಸತ್ತವನ ಮನೆ ಮಂದಿ ಕೊಲೆಯ ಬಗ್ಗೆ ಹೇಳುವ ಕ್ರೈಂಸ್ಟೋರಿ ನಿನಗೆ ಸಖತ್ ಇಂಪ್ರೆಸ್ ಮಾಡಬಹುದು." ಗಂಗಣ್ಣ ತಲೆಯಾಡಿಸಿದ.

ಇಬ್ಬರೂ ಒಂದು ಭಾರೀ ದೊಡ್ಡ ಸಾಹಿತಿಯ ಮನೆಗೆ ಹೋದರು.ಆ ಸಾಹಿತಿಯನ್ನು ಯಾರೋ ದಾರಿ ಮಧ್ಯೆ ಬರುತ್ತಿರುವಾಗ ಇನ್ನೂ ಗೊತ್ತೇ ಇಲ್ಲದ ಕಾರಣಕ್ಕಾಗಿ ಕೊಂದು ಹಾಕಿದ್ದರು.ಸಾಹಿತಿಯ ಮಡದಿಯನ್ನು ಗಂಗಣ್ಣ ಹಾಗೂ ಕಂಕಡಿ ಅವರ ಮನೆಯಲ್ಲೇ ಭೇಟಿಯಾದರು. ಆದರೆ "ಅವರೆಲ್ಲಿ ಸತ್ತಿದ್ದಾರೆ.ನೋಡಿ ಇಲ್ಲಿ.ಈ ಕೃತಿಯಲ್ಲಿ ಅವರು ಹೇಗೆ ಜೀವಂತವಾಗಿದ್ದಾರೆ "ಎಂದು ಆಯಮ್ಮ ಹೇಳುವುದಾ!

"ಸಾಹಿತಿಗಳೆಲ್ಲಾ ಹೀಗೆ .ತಾನು ಸಾಯುವ ತನಕ ಪಕ್ಕಾ ಹುಚ್ಚನಾಗಿರುವುದಲ್ಲದೇ ಸತ್ತ ಮೇಲೆ ತನ್ನ ಮನೆಯವರೆಲ್ಲಾ ಹುಚ್ಚರಾಗಿರುವಂತೆ ನೋಡಿಕೊಳ್ಳುತ್ತಾರೆ" ಎಂದು ಕಂಕಡಿಗೂ ಮೊದಲೇ ಗಂಗಣ್ಣ ಹೇಳಿದ.

ಹೀಗಾದ ಮೇಲಾದರೂ ಗಂಗಣ್ಣನ ಮನಸ್ಸು ಬದಲಿರಬಹುದೆಂದು ಕಂಕಡಿ ಊಹಿಸಿದ್ದು ತೀರಾ ತಪ್ಪಾಗಿತ್ತು. ಏಕೆಂದರೆ ಗಂಗಣ್ಣ ತುಂಬಾ ಸ್ಟ್ರಾಂಗ್ ಆಗಿದ್ದ.ಏನೇ ಆದರೂ ಕೊಲೆ ಮಾಡುವ ಬಗ್ಗೆ ತನಗೆ ವಿಪರೀತ ಹುಕ್ಕಿ ಬಂದಿದೆ ಎಂದು ಅವನು ಉಲ್ಲಾಸತನದಲ್ಲಿ ಉವಾಚಿಸಿದ.

ಅವರು ಬೆಂಗಳೂರಿನ ದೊಡ್ಡ ದಿವಂಗತ ರೌಡಿಯ ಅಡ್ಡೆಗೆ ಹೋಗುವುದು ಎಂದು ನಿರ್ಧರಿಸಿ ಹಾಗೇ ಮಾಡಿದರು.ಅಲ್ಲಿ ಕುಳಿತಿದ್ದ ಆ ರೌಡಿಯ ತಮ್ಮಂದಿರು,"ಅಣ್ಣಾ ಎಂದೂ ಸತ್ತೇ ಇಲ್ಲವೆಂದೂ,ಯಾರೇ ಆಗಲಿ ಅಣ್ಣನನ್ನು ಕೊಲ್ಲಲಾರರೆಂದೂ,ಅಣ್ಣಾ ಚಿರಂಜೀವಿಯೆಂದೂ ಹೇಳಿ ಗಂಗಣ್ಣನ್ನು ತುಂಬಾ ನಿರಾಶೆಗೊಳಿಸಿದರು.

ಅಲ್ಲಿಗೆ ಗಂಗಣ್ಣ ಕಂಕಡಿಯ ಸಹವಾಸವನ್ನೇ ಬಿಟ್ಟ.


೪.

ಊರಿಗೆ ಮರಳಿದ ಮೇಲೆ ಗಂಗಣ್ಣನಿಗೆ ತನ್ನ ಗುರಿ ಮುಟ್ಟಲು ತುಂಬಾ ಪ್ರಯತ್ನ ಅಗತ್ಯವೆಂದು ಅನಿಸಿತು.ತನಗೆ ಒಬ್ಬ ನಿಜವಾದ ಗೈಡಿನ ಅಗತ್ಯವಿದೆ ಎಂದು ಅವನು ಭಾವಿಸಿದ.ಆ ವೇಳೆಗೆ ಅವನಿಗೆ ಶಿರಾಡಿ ಕಾಡಿನ ಆ ಗುಡ್ಡದಲ್ಲಿರುವ ಗುಹೆಯಲ್ಲಿ ಕುಳಿತ ಆ ಮೌನಿ ಅವಧೂತನ ನೆನಪಾದದ್ದು.ಆತ ಮುಂದಿನ ಹುಣ್ಣಿಮೆಗೆ ಎಲ್ಲರ ಒತೆ ಮಾತನಾಡುವವನಿದ್ದಾನೆ ಎಂದು ಪೇಪರಲ್ಲಿ ಓದಿದ ಗಂಗಣ್ಣ ತಪ್ಪದೇ ಆ ದಿನ ಎಲ್ಲರಿಗಿಂತಲೂ ಮೊದಲಾಗಿ ಶಿರಾಡಿ ಗುಡ್ಡದ ಅವಧೂತನನ್ನು ಭೇಟಿಯಾದ.

ಇವನ ಬಯಕೆಯನ್ನು ಶಾಂತ ಚಿತ್ತನಾಗಿ ಆಲಿಸಿದ ಅವಧೂತ ಒಂದು ಕಲ್ಲನ್ನು ಎತ್ತಿ ಗಂಗಣ್ಣನ ಕೈಗಿತ್ತು ಈ ಕಲ್ಲು ಕರಗಿದ ದಿನ ಮೊದಲಾಗಿ ಯಾರು ಕಾಣುತ್ತಾರೆಯೋ ಅವರನ್ನು ಕೈಗೆ ಏನು ಸಿಗುತ್ತದೆಯೋ ಆದರಿಂದ ಬೇಕು ಬೇಕಾದ ರೀತಿಯಲ್ಲಿ ಕೊಂದು ಹಾಕುವಂತೆಯೂ ಸೂಚಿಸಿ,ಎಲ್ಲಾ ಭೇಟಿಗಳನ್ನು ರದ್ದು ಮಾಡಿ ಗುಹೆಯೊಳಗೆ ಸೇರಿಕೊಂಡ.

ಗಂಗಣ್ಣ ಕಲ್ಲು ಕೈಯಲ್ಲಿಟ್ಟುಕೊಂಡೇ ಆ ರಾತ್ರಿ ಮಲಗಿದ.

ಏನಾಶ್ಚರ್ಯ! ಬೆಳಗಾಗುತ್ತಲೇ ಕಲ್ಲು ಕರಗಿ ಕೈತುಂಬ ನೀರು ಸೋರುತ್ತಿತ್ತು.

ಕೊನೆಗೂ ತನ್ನ ಮನದಾಸೆಯನ್ನು ಈಡೇರಿಸಿದ ಆ ಶಿರಾಡಿ ಕಾಡಿನ ಅವಧೂತನಿಗೆ ನೂರು ಬಾರಿ ನಮಿಸಿದ.

ಮೊದಲು ಕಣ್ಣಿಗೆ ಯಾರು ಬೀಳುತ್ತಾರೆ ಎಂದು ಸೀದಾ ಬಾಗಿಲು ತೆರೆದ.ದಿನಾ ಬರಬೇಕಾಗಿದ್ದ ಹಾಲಿನವನು ಬರಬಹುದು ಅಥವಾ ಪೇಪರಿನ ಹುಡುಗ ಸಿಗಬಹುದು ಎಂದು ಕಾದ.ಅವರು ಬರಲಿಲ್ಲ. ಅಂಗಳಕ್ಕಿಳಿದ.ಯಾರೂ ಕಾಣಲಿಲ್ಲ.

ಬೀದಿಗೆ ಬಂದ.ಯಾರೂ ಕಣ್ಣಿಗೆ ಬೀಳಲಿಲ್ಲ.ಕೇರಿ ಪೂರಾ ಸುತ್ತಿದ.ಯಾರೂ ತೋರಲಿಲ್ಲ.

ಪಟ್ಟಣವನ್ನೆಲ್ಲಾ ಅಲೆದಾಡಿದ.ಯಾರೂ ಇಲ್ಲ.

ಅರೆ ಅರೆ ಏನಾಗಿದೆ ಈ ಜನರಿಗೆ ಎಲ್ಲಿಗೆ ಹೋದರು ಇವರು ಎಂದು ಸಖೇದಾಶ್ಚರ್ಯಗೊಂಡು ಕಂಗಾಲಾದ.ಏನು ಮಾಡುವುದು ಎಂದು ಸಂಜೆ ತನಕ ಎಲ್ಲೆಂದರಲ್ಲಿ ಅಲೆದಾಡಿ ಸುತ್ತಾಡಿ ಸೋತು ಒಂದು ಮರದಡಿ ಕುಳಿತ. ಯಾರೂ ಅತ್ತಿತ್ತ ಹೋಗುತ್ತಲೂ ಇರಲಿಲ್ಲ.

ದಿಕ್ಕೆಟ್ಟ ಗಂಗಣ್ಣ ಅದೇ ರಾತ್ರಿ ಸೀದಾ ಶಿರಾಡಿ ಕಾಡಿನ ಆ ಗುಹೆಯಲ್ಲಿರುವ ಆ ಅವಧೂತನನ್ನು ಕಂಡು ತನ್ನ ಅವಸ್ಥೆಯನ್ನು ನಿವೇದಿಸಿಕೊಳ್ಳಲು ನಿರ್ಧರಿಸಿದ.

ಇನ್ನೇನು ಗುಹೆ ಹೊಕ್ಕುವುದು ಬಾಕಿ ಎಂದಾಗ ಗಂಗಣ್ಣನಿಗೆ ಫಳ್ಳನೇ ಹೊಳೆದದ್ದು ಇದು.

"ಹೌದಲ್ಲಾ ಈಗ ತಾನು ಮೊದಲಾಗಿ ಕಾಣುತ್ತಿರುವುದು ಅವಧೂತನನ್ನೇ ತಾನೇ.ಅಂದಮೇಲೆ ಅವನನ್ನು ಕೊಲ್ಲಲೇ ಬೇಕಲ್ಲ!"

ಗಂಗಣ್ಣನಿಗೆ ಸಂದಿಗ್ಧವೇ ಮಾಯವಾಯಿತು.ಅವಧೂತನನ್ನು ಕೊಲ್ಲುವುದರ ಮೂಲಕ ಅವಧೂತನ ಮಾತಿಗೂ ತನ್ನ ಘನ ಉದ್ದೇಶಕ್ಕೂ ಒಂದೇ ಸಾಲಿನಲ್ಲಿ ಅರ್ಥ ದೊರಕುತ್ತದೆ ಎಂದು ಸಂತೋಷವಾಯಿತು.

ಸೀದಾ ಹೋಗಿ ಅವಧೂತನ ಮೇಲೆ ಬೀಳಲು ನಿರ್ಧರಿಸಿದ ಗಂಗಣ್ಣ ವೇಗವಾಗಿ ಗುಹೆಗೆ ನುಗ್ಗಿದ.

ಆದರೆ ಏನು ಮಾಡೋಣ ಅಲ್ಲಿ ಆ ಅವಧೂತನೇ ಇರಲಿಲ್ಲ.

ಹಾಗೇ ಗುಹೆ ಒಳಗೆ ಹೋದ ಗಂಗಣ್ಣ ಇಂದಿನ ತನಕ ಯಾರಿಗೂ ಕಾಣಲು ಸಿಕ್ಕಿಲ್ಲ.

20071128

ನಾಲ್ಕು ಸಾಲು-೨೩


೧.

ಹುಟ್ಟು ಸಾವಿನ

ತತ್ವಜ್ಞಾನ ಗೊತ್ತಿಲ್ಲದ

ಜಿಂಕೆಗೆ

ಹುಲಿಯ ಆಕ್ರಮಣ ಕೂಡಾ

ಅನಿರ್ವಚನೀಯ ಅನಿಸುವುದು.


೨.


ಇರುವೆಯ

ಓಡಾಟ

ಮತ್ತು

ಚಿರತೆಯ

ತಾಳ್ಮೆ

ನಮ್ಮ ರಾಜಕಾರಣಿಗಳನ್ನು

ಹಂಗಿಸುವುದಾದರೆ

ದೇಶ ಸುಭಿಕ್ಷವಾಗುವುದು.


೩.


ಪ್ರೀತಿಗಾಗಿ

ಕಾದವಳು

ಕೊನೆಗೊಮ್ಮೆ ಪ್ರೀತಿ ಸಿಕ್ಕಾಗ

ನಿರುತ್ತರಳಾಗಿ

ಅವನನ್ನು ತಬ್ಬಿಕೊಳ್ಳುವಳು.

ಅಸಹಾಯಕತೆ ಎಂದರೆ ಅದುವೇ.

೪.


ಜ್ಞಾನ ಹೆಚ್ಚಿಸಬೇಕೆಂದು

ಗ್ರಂಥವನ್ನು ಬಿಡಿಸಿಟ್ಟವನಿಗೆ

ಅಕ್ಷರಗಳ ಸರಮಾಲೆಯಲ್ಲಿ

ಕಂಡದ್ದು

ಜೀವನದ ಸುಳ್ಳುಗಳು.

20071125

ನಾಲ್ಕು ಸಾಲು-೨೨


೧.ಯಾವ ಬೆಟ್ಟವೂ

ಕೊನೆಯದಲ್ಲ

ಎಂಬ ಅಚ್ಚರಿಯಲ್ಲಿದ್ದವನು

ಮೊದಲಿನ ಬಯಲು ಯಾವುದು

ಎಂದು ಸೋಜಿಗದಿಂದ ನೋಡಿದ.೨.ಎಲೆಯಲ್ಲಿ

ಅಡಗಿದ್ದ ರಾತ್ರಿಯ ಇಬ್ಬನಿ

ಕತ್ತಲಿನ ಅಚ್ಚರಿಗಳನ್ನು

ಹಗಲಿಗೆ ಹೇಳದೇ

ಆರಿಹೋಯಿತು.೩.ಮದುವೆಯಾಗಬೇಕು

ಎಂದು ಹೊರಟ

ಹುಡುಗಿಯಲ್ಲಿ

ಪ್ರೀತಿ ಅಥವಾ ಕಾಮಕ್ಕಿಂತ

ಒಂದು ಗಟ್ಟಿ ತಬ್ಬುಗೆಯ ಆಸೆ

ಕಾರಣವಾಗಿರುವುದು.೪.ದೇವರು ಕೂಡಾ

ಅರ್ಥ ಕಳೆದುಕೊಳ್ಳುವ

ರತಿಯಲ್ಲಿ

ಉತ್ತುಂಗ ಧ್ಯಾನ

ಗೊತ್ತಾದವನು

ನಿಜವಾದ ಆಸ್ತಿಕ.

20071122

ನಾಲ್ಕು ಸಾಲು-೨೧


೧.

ಸತ್ಯದ ಮುಖ

ಕಾಣಲು

ಸುಳ್ಳಿನ ಕನ್ನಡಿ ಹಿಡಿದೆ,

ತಲೆಕೆಳಗಾಗಿತ್ತು

ಪ್ರತಿಬಿಂಬ.೨.ಇನ್ನೆಂದೂ ಸುಳ್ಳು ಹೇಳಲಾರೆ

ಎಂದು

ಮುಂಜಾನೆ ಎದ್ದು ಶಪಥ ಮಾಡಿದವನಿಗೆ

ಬಾನಿನಲ್ಲಿ ಕಂಡದ್ದು

ಕಾಮನಬಿಲ್ಲು.೩.ಸತ್ಯವೇ ಶಾಶ್ವತ ಎಂದ

ತತ್ವಜ್ಞಾನಿ

ಬದುಕಿನ ಸುಳ್ಳಿನ ಬಗ್ಗೆ

ತಿಳಿದೂ ಮೌನಿ.೪.ಒಂದು ಕ್ಷಣದ

ಸತ್ಯಕ್ಕಾಗಿ

ಹಂಬಲಿಸಿದವಳು

ಆಮೇಲೆ ಅವನ

ಅಂತರಂಗದ ಸುಳ್ಳುಗಳಲ್ಲಿ

ಮೈ ಮರೆತಳು.

ಬ್ಲಾಗ್ ಮಂದಿಗೆ ಬಾಗಿನ


ಬ್ಲಾಗಿಗಳನ್ನೆಲ್ಲಾ ಒಟ್ಟು ಮಾಡಲು ಜೋಗಿಮನೆಯಲ್ಲಿ ಕೆಲಸ ಆರಂಭವಾಗಿದೆ.

ಈ ಕನ್ನಡವನ್ನು ಇ-ಲೋಕಕ್ಕೆ ಸವಿಯಾಗಿ ಹಂಚುತ್ತಿರುವ ಕನ್ನಡದ ಜಾಣಜಾಣೆಯರನ್ನು ಒಂದು ಊರಲ್ಲಿ ಒಂದು ಬಾರಿ ಒಟ್ಟು ಮಾಡಿ ಒಂದು ಊಟ ಮಾಡುವ ಯೋಚನೆಯೊಂದು ಜೋಗಿಮನೆಯವರಿಗೆ ಬಂದಿದೆ.

ನಾವು ಇ-ಲೋಕದಲ್ಲಿ ಎಷ್ಟೊಂದು ಗೆಳೆಯ ಗೆಳತಿಯರಾಗಿದ್ದೇವೆ,ಎಷ್ಟೊಂದು ಬರೆಯುತ್ತಿದ್ದೇವೆ,ಎಷ್ಟೊಂದು ಓದುತ್ತಿದ್ದೇವೆ!ಇದೊಂದು ಮನೆ ಮನೆ ಸ್ನೇಹದ ಥರ.

ಒಂದೇ ಬೆಂಚಲ್ಲಿ ಕುಳಿತ ಶಾಲೆ ಮಕ್ಕಳ ಥರ.

ಆದರೆ,

ನಾವ್ಯಾರೂ ಯಾರೂ ಯಾರನ್ನೂ ನೋಡಿಲ್ಲ,ಕಂಡಿಲ್ಲ.ಮಾತಾಡಿಲ್ಲ.

ಹಾಗಿದ್ದರೆ ಹೇಗೆ?

ಒಮ್ಮೆ ಎಲ್ಲರೂ ಒಟ್ಟಾದರೆ ಹೇಗಿರುತ್ತದೆ?

ಸಿಂಪ್ಲೀ ವಂಡರ್‌ಫುಲ್!

ವಾವ್!

ಜೋಗಿಮನೆ ಈ ಆತಿಥ್ಯಕ್ಕೆ ಸಜ್ಜಾಗುತ್ತಿದೆ.

ಬೆಂಗಳೂರಲ್ಲಿ ಒಂದು ಇ-ಜನ,ಇ-ಮನದ ಸಮ್ಮಿಲನಕ್ಕೆ ನಾವೆಲ್ಲಾ ಹೋಗಬೇಕು ಅಲ್ಲವಾ?

20071117

ಮಂಗ(ಳ)ವಾದ


"ಮಂಗನಿಂದ ಮಾನವ’ ಎಂದಾದರೆ ಈ ಮಂಗಗಳೇಕೆ ಇಲ್ಲಿ ಬಾಕಿಯಾದವು?

ಈ ಮಾತನ್ನು ಗಂಭೀರವಾಗಿ ಪರಿಗಣಿಸಿ ಯಾರಾದರೂ ಉತ್ತರ ತಿಳಿಸುವಿರಾ?

ಅದೇ ಪ್ರಶ್ನೆಯ ಬೆನ್ನು ಹತ್ತಿ ಹೋಗುತ್ತಿದ್ದರೆ ಕೊನೆಗೆ ಉಳಿಯುವುದು ಅಯೋಮಯ.

ಅದೇ ನಶ್ವರ ಸ್ಥಿತಿಯ ಲಹರಿ.

ಅದೇ ನಿರ್ಭಾವದ ಬಿಂದು.

ವಿಕಾಸವಾದ ಎಂಬುದು ನಾವು ರೂಪಿಸಿದ್ದೂ ಅಲ್ಲ, ಊಹಿಸಿದಂತೂ ಇಲ್ಲ ಎನ್ನುವುದಕ್ಕೆ ಮಂಗ-ಮಾನವ ಪ್ರಶ್ನೆಯೊಂದೇ ಸಾಕು. ಮಂಗನಿಗಿಂತಲೂ ಮೊದಲು ಅದರ ಮುತ್ತಾತನ ಮುತ್ತಾತನ ಚಿತ್ರಗಳನ್ನು ಇಸ್ಕೂಲಲ್ಲಿ ಮೇಸ್ತರರು ತೋರಿಸಿ, ಹೀಗೆ ಬದಲಾಗುತ್ತಾ ಆಗುತ್ತಾ ಮನುಷ್ಯರ ಉಗಮವಾಯಿತು ಎಂದು ಕಲಿಸಿದ್ದಾರೆ. ನಾವೋ ಪೆದ್ದು ಪೆದ್ದಾಗಿ ಅದನ್ನು ನಂಬಿದ್ದೂ ಆಯಿತು. ಹಾಗೇ ಬದಲಾಗುವ ಆ ಘಳಿಗೆ ಮಂಗನಿಗೆ ಮಾತ್ರ ಏಕೆ ರಿಯಾಯಿತಿ ಕೊಟ್ಟಿದೆ ?

ಮಂಗನಿಂದ ವಿಕಾಸಗೊಂಡು ಮನುಷ್ಯ ರೂಪುಗೊಂಡಿದ್ದಾದರೆ ಮಂಗ ಎಂಬ ಒಂದು ವರ್ಗ ಉಳಿಯಿತೇಕೆ ?

ಆಯ್ಕೆಯ ಮುಕ್ತತೆಯಲ್ಲಿ ಇದೆಲ್ಲಾ ನಿಲ್ಲುವುದೇ ಇಲ್ಲ. ನಾವು ದಾರಿಗಳ ಕೂಟ ಸ್ಥಾನಕ್ಕೆ ಬರುವ ಮೊದಲೇ ನಮ್ಮನ್ನು ಪಥಿಕರನ್ನಾಗಿ ಸ್ವೀಕರಿಸಿದ ದಾರಿ ನಮ್ಮ ಬರವಿಗೆ ಕಾಯುತ್ತಿರುತ್ತದೆ.... ಎಂದು ಚಿತ್ತಾಲರ ಕಾದಂಬರಿಯೊಂದರಲ್ಲಿ ಓದಿದ ನೆನಪು.

ನೀವಾಗಿ ನಿಂತು ಯೋಚಿಸಿ.

ನೀವು ನೀವಾಗಿ ಇಲ್ಲದಿರುತ್ತಿದ್ದರೆ, ನೀವಿರುವ ಊರಲ್ಲಿಲ್ಲದೆ ಇನ್ನೊಂದು ಊರಲ್ಲಿ, ದೇಶದಲ್ಲಿ ಹುಟ್ಟಿರುತ್ತಿದ್ದರೆ ? ನೀವಿರುವ ಉದ್ಯೋಗದಲ್ಲಿಲ್ಲದೆ ಮತ್ತೊಂದು ಉದ್ಯೋಗದಲ್ಲಿರುತ್ತಿದ್ದರೆ ? ಅಷ್ಟೇ ಏಕೆ ನಿಮ್ಮ ಅಪ್ಪ - ಅಮ್ಮ ಮದುವೆಯೇ ಆಗದಿದ್ದಿದ್ದರೆ ? ಕತೆಯೊಂದರಲ್ಲಿ ನಾಯಕನೊಬ್ಬ ಹೀಗೆ ಚಿಂತಿಸುತ್ತಾ, ತನ್ನ ಅಪ್ಪನಿಗೆ ಬೇರೆ ಹೆಣ್ಣು ಹೆಂಡತಿಯಾಗಿರುತ್ತಿದ್ದರೆ.... ಏನಾಗುತ್ತಿತ್ತು ಎಂದು ಯೋಚಿಸುತ್ತಾನೆ. "ಅಷ್ಟೇ ಏಕೆ, ನನ್ನ ಹುಟ್ಟಿಗೆ ಕಾರಣವಾದ ಕ್ಷಣ ಕೂಡಾ ಒಂದು ತಪ್ಪಿ ಇನ್ನೊಂದಾಗಿದ್ದರೆ ನನ್ನ ಬದಲು ಬೇರೆಯೇ ಒಂದು ಜೀವ ಹುಟ್ಟಬಹುದಿತ್ತಲ್ಲ !’ ಎಂದು ಬೆಚ್ಚಿ ಬೀಳುತ್ತಾನೆ.

ಇದನ್ನೇ ಕವಿಯೊಬ್ಬರು ""ಅಶರೀರ ಭಾವಕ್ಕೆ ಇಷ್ಟ ರೂಪವ ತೊಡಿಸಿ, ಕಳಿಸಿ ಕೊಡಲಾದೀತೆ ನಾಳೆಯೊಳಗೆ ?” ಎಂದು ಕೇಳುತ್ತಾರೆ.

ಅಷ್ಟನ್ನು ಓದಿ ಕುಳಿತರೆ ತಣ್ಣಗಾಗುತ್ತೇವೆ.

ಆಯ್ಕೆಯ ಈ ಹಾದಿಯಲ್ಲಿ ಕೊನೆಗೂ ನಮ್ಮ ಆಯ್ಕೆಗಳಿಗೆ ಅವಕಾಶವೇ ಇಲ್ಲ.

""...ಡೊರಿಯನ್ ಗ್ರೇ”ಕಾದಂಬರಿಯ ಸುಂದರ ಯುವಕ ತನ್ನ ಫೋಟೋ ನೋಡಿ ಅಸೂಯೆ ಪಡುತ್ತಾ, ತಾನೊಂದು ದಿನ ಮುದುಕನಾಗುತ್ತೇನಲ್ಲಾ ಎಂದು ಹಳಹಳಿಸಿ, ತನ್ನ ಬದಲು ಈ ಫೋಟೊ ಮುದುಕನಾಗುವ ವರವನ್ನು ಪಡೆಯುತ್ತಾನೆ. ಅದರಂತೆ ಫೋಟೊ ದಿನಗಳೆದಂತೆ ಮುದುಕನಾಗುತ್ತದೆ. ಯುವಕ ಹಾಗೆ ಉಳಿಯುತ್ತಾನೆ. ಆದರೆ ಆ ಫೋಟೊ ಆತನ ಅಂತರಂಗದ ಪ್ರತಿ ಬಿಂಬವಾಗಿ, ಘೋರ ದೃಶ್ಯವಾಗಿ ದಿನೇ ದಿನೇ ಕಾಣುತ್ತದೆ ಎಂದು ವೈಎನ್ಕೆ ಗುಂಡುಶಾಲೆಯಲ್ಲಿ ಹೇಳುತ್ತಿದ ಕಥೆ ಇಲ್ಲಿ ನೆನಪಾಗುತ್ತದೆ.

ಕಾಲದ ಅನಂತತೆಯಲ್ಲಿ ಇಂಥ ಚಿತ್ರಣಗಳು ನಿರಂತರ.

ಕೊನೆಗೂ ಎಲ್ಲಿ ಯಾವಾಗ ಏನಾಗಬೇಕೆಂಬುದನ್ನು ನಿರ್ಧರಿಸುವುದು ನಿಸರ್ಗವೇ.
"...........The surest way to make a monkey of a man is to quote him

20071116

ನಾಲ್ಕು ಸಾಲು-೨೧


೧.


ಗಿಳಿಗೆ

ಪಂಜರ ಬೇಡ

ಪಂಜರಕ್ಕಾದರೂ

ಗಿಳಿ ಏಕೆ ಬೇಕು

ಹಾಗಾದರೆ

ನಾವೇಕೆ ಪಂಜರದಲ್ಲಿ ಗಿಳಿಯ

ಮಡಗುವೆವು?


೨.


ಒಂದು ಹನಿ

ಜೇನಿನಲ್ಲಿ

ಜೇನ್ನೊಣದ

ನೂರು ಮೈಲಿ ಪಯಣ

ಮತ್ತು

ಛಲವನ್ನು ಕಂಡು

ವಿಜ್ಞಾನಿಗಳನ್ನು ಖಂಡಿಸಿದೆ.


೩.


ಹುಲಿಯ ಹಸಿವು

ಮತ್ತು

ಹುಲ್ಲಿನ ಹಸಿರು

ಎರಡಕ್ಕೂ ಶಾಸ್ತ್ರಗಳಲ್ಲಿ

ಕಾರಣಗಳನ್ನು

ಕಾಣಲಾಗದೇ ಅಚ್ಚರಿಪಡುವೆ.


೪.


ಮೈಥುನದ ಕೊನೆಯಲ್ಲಿ

ಅವಳ ಬಳಿ

ಉಳಿದದ್ದು

ಅವನ

ಗಾಢ ವಿಸ್ಮಯ ಮಾತ್ರಾ.

20071115

ಮೌನ ವ್ಯಾಖ್ಯಾನವು...


don't speak unless you can improve your SILENCE.......


ಮೌನಂ ಶರಣಂ ಗಚ್ಛಾಮಿ..


ಎಂದಾದರೊಮ್ಮೆ ಆಗಿ ನೋಡಿ. ಆಗಲೇ ಗೊತ್ತಾಗೋದು ಮಾತಿನ ಬೆಲೆ,ನೆಲೆ.

ಎಷ್ಟೊಂದು ಮಾತಾಡುತ್ತೇವೆ ನಾವು.ಒಂದಕ್ಕೂ ಅರ್ಥವಿರೋಲ್ಲ.ಇಷ್ಟಕ್ಕೂ ನಾವೂ ಮಾತಾಡದೇ ಬದುಕಬಲ್ಲೆವು ಅಂತ ಮೌನದೊಳಗೆ ಹೊಕ್ಕು ಕುಳಿತಾಗ ವೇದ್ಯವಾಗುತ್ತದೆ.

ಮಾತೇ ಆಡದೇ ಏನೂ ಮಾಡಲು ಸಾಧ್ಯವಿಲ್ಲ ಅಂತ ನಾವು ಈ ಆಧುನಿಕ ಜಗತ್ತಿನಲ್ಲಿ ಭಾವಿಸಿದ್ದೇವಲ್ಲಾ ಆದು ಬರೀ ಭ್ರಮೆ.

ಮಾತು ನಮ್ಮ ಅಗತ್ಯವೇ ಅಲ್ಲ.

ಮಾತನ್ನಾಡದೇ ಗಿಡ ಮರಗಳು ಬದುಕಿವೆ. ನಕ್ಷತ್ರಗಳು ಮಿನುಗುವಾಗ ಏನಾದರೂ ಮಾತಾಡಿದವಾ?ಸೂರ್ಯ ಎಂದೂ ಮಾತೆತ್ತಿದವನಲ್ಲ.ಚಂದಿರನ ತಂಬೆಳಕು ಮೌನವಾಗಿ ಅದೆಷ್ಟು ಯುಗಯುಗಾಂತರಗಳಿಂದ ಸುರಿಯುತ್ತಿದೆ.ಹರಿವ ನದಿ ಎಂದಾದರೂ ಮಾತಾಡಿದ್ದನ್ನು ನೋಡಿದಿರಾ?ಒಂದು ಮೊಗ್ಗು ಹೂವಾಗಿ ಅರಳಿದಾಗ ಅಲ್ಲಿ ಮೌನದ್ದೇ ಹರಹು.ಗಾಳಿಯ ಬೀಸಿನಲ್ಲೂ ಮಾತಿಲ್ಲ ಕತೆಯಿಲ್ಲ.

ಇದೆಲ್ಲಾ ಅಮೂರ್ತಕಾರಿಯಾಯಿತು ಎಂದು ನೀವು ಹೇಳಬಹುದು.

ಮನುಷ್ಯನನ್ನೇ ಮುಂದಿಡೋಣ.

ಅವನಿಗೂ ಮಾತು ಅಗತ್ಯವೇ ಅಲ್ಲ.

ಪ್ರೀತಿ ಎಂದಾದರೂ ಮಾತಿನಿಂದ ಹುಟ್ಟಿರಲಿಲ್ಲ ಮತ್ತು ಹುಟ್ಟುವುದೂ ಇಲ್ಲ. ಪ್ರೀತಿಯ ಸಾನ್ನಿಧ್ಯದಲ್ಲಿ ಮಾತು ನಿನ್ನೆಯ ದಿನದಷ್ಟೇ ಅಪ್ರಸ್ತುತ.ಊಟ ಮಾಡುವಾಗ ಮಾತೇ ಆಡಬಾರದು ಎಂದು ಶಾಸ್ತ್ರಗಳು ಹೇಳುತ್ತವೆ. ಧ್ಯಾನಕ್ಕೆ ಕುಳಿತಾಗಲಂತೂ ಮೌನ ಹರಡಬೇಕು. ನಿದ್ದೆಯಲ್ಲಿ ಮಾತು ಮುಕ್ತಾಯ.ಕನಸಿನಲ್ಲಿ ಮಾತಾಡಿದರೆ ಅನಾರೋಗ್ಯ.ಓದಿಗಾಗಲಿ ಬರವಣಿಗೆಗಾಗಲಿ ಮಾತು ನಿಷಿದ್ಧ.ಸೆಕ್ಸ್ ಮಾಡುತ್ತಿರುವಾಗ ಮಾತನಾಡಲು ಸಾಧ್ಯವೇ ಇಲ್ಲ ಅಥವಾ ಮಾತಾಡಿದರೆ ಆ ರುಚಿ ಇರಲ್ಲ.ಹುಟ್ಟಿನಲ್ಲೂ ಸಾವಿನಲ್ಲೂ ಮಾತು ಹುಟ್ಟುವುದಿಲ್ಲ.

ಹಾಗಾದರೆ ಎಲ್ಲಿ ಮಾತನಾಡುವುದು ಏಕೆ ಮಾತನಾಡುವುದು?ಕಛೇರಿಯಲ್ಲಿ ಮಾತಾಡಿದರೆ ಬಾಸ್ ಮೈಂಡ್ ಯುವರ್ ಬಿಸಿನೆಸ್ ಅನ್ತಾನೆ,ಶಾಲೇಲಿ ಮಾತಾಡಿದರೆ ಪನಿಶ್ಮೆಂಟ್ ಕೊಡ್ತಾರೆ.ಡ್ರೈವಿಂಗ್ ಮಾಡ್ತಾ ಮಾತ್ನಾಡಿದರೆ ಆಕ್ಸಿಡೆಂಟ್ ಆಗುತ್ತೆ.ಸಭೆಗಳಲ್ಲಿ ಮಾತನಾಡಿದರೆ ಡೀಸೆನ್ಸಿ ಹೋಗುತ್ತೆ.ಆದ್ದರಿಂದ ಮಾತನಾಡುವುದೇ ಬೇಡ ಅಂತ ಇದ್ದರೆ ಹೇಗೆ?

silence is the true friend that never betrays ಎಂದಿದ್ದ ಕನ್ಫ್ಯೂಶಿಯಸ್.ಅವನ ಈ ಬೆಳ್ಳಿಯಂಥಾ ಮಾತಿಗೆ ಬಂಗಾರದ ಬೆಲೆ ಈಗಲೂ.

ಮಾತು ಎಂದಾದರೂ ನಿಮ್ಮ ಭಾವನೆಗಳನ್ನು ಘಾಸಿ ಮಾಡೀತು ಆದರೆ ಮೌನ ಹೃದಯವನ್ನೇ ಹರಿದು ಹಾಕಬಹುದು.ನಿಮ್ಮ ವೈರಿಯ ಮಾತಿಗಿಂತಲೂ ನಿಮ್ಮ ಗೆಳೆಯನ ಮೌನ ನಿಮಗೆ ನೆನಪಲ್ಲಿ ಉಳಿಯುತ್ತದೆ.ಏಕೆಂದರೆ ಮೌನದಲ್ಲೇ ದೊಡ್ಡ ಮಾತಿದೆ ಎಂದೂ ಎಂದೆಂದೂ.

ಆದ್ದರಿಂದ ಮಾತನಾಡದೇ ಇರಲು ನೋಡಿ.ಮೊದಮೊದಲಲ್ಲಿ ಒಂದೆರಡು ಗಂಟೆ ಆಮೇಲೆ ಒಂದೆರಡು ದಿನ ಆಮೇಲೆ ಒಂದೆರಡು ವಾರ ಮತ್ತೆ ಮತ್ತೆ ಒಂದೆರಡು ತಿಂಗಳು..ಹೀಗೆ.

ಏನೂ ಹೇಳದೇ ಇರೋದು ಅನೇಕ ಬಾರಿ ತುಂಬಾ ಹೇಳುತ್ತದೆ ಎಂದು ಆಗ ನಿಮಗೆ ಗೊತ್ತಾಗುತ್ತದೆ.

ಇಷ್ಟಕ್ಕೂ ಮಾತಿಗೊಂದು ಕಾರಣ ಬೇಕು ಆದರೆ ಮೌನಕ್ಕೆ ಕಾರಣ ಏಕಾದರೂ ಬೇಕು?

20071110

ನಾಲ್ಕು ಸಾಲು-೨೦


೧.ಎರಡು ದೀಪಗಳನ್ನು ಹಚ್ಚಿ

ಕತ್ತಲನ್ನು

ನೋಡಿದೆ.

ಎರಡು ಬೆಳಕಿರಲಿಲ್ಲ.೨.ಹಣತೆ ಎದುರು ಕುಳಿತು

ಬೆಳಕನ್ನು

ಕೇಳಿದೆ

ನೀನೆಲ್ಲಿಂದ ಬಂದೆ?

ಎಲ್ಲಿತ್ತೋ ಗಾಳಿ

ಬೆಳಕನ್ನು ಎತ್ತಿ ಒಯ್ಯಿತು

ಅದು ಬಂದಲ್ಲಿಗೆ.೩.ದೀಪದೆದುರು

ನಿಂತಿದ್ದ

ಕತ್ತಲೆ

ಬೆಳಕಿಗೆ ಹೇಳಿತು

"ಎಣ್ಣೆ ಆರಿದ ಮೇಲೆ,

ನಾನು ಬರಲೇ ಬೇಕು,

ಬೆಳಕು ಲಾಸ್ಯವಾಡಿತು.೪.ಸೂರ್ಯ ಕಂತಿದ ಮೇಲೆ

ಒಳಗಿನ ಮನೆಯಲ್ಲಿ

ಹುಟ್ಟಿದ ಬೆಳಕು

ಕರೆದೊಯ್ದರೆ

ಜಗವನ್ನೇಬೆಳಗುವ

ಬಿಗುಮಾನದಲ್ಲಿ ಸಂಭ್ರಮಿಸಿತು.

20071107

ಕತ್ತಲನ್ನು ಛೇದಿಸುತ್ತಾ..ಬೆಳಕನ್ನು ಹುಡುಕುತ್ತಾ..ತ್ತಲುಗಳ ದಾಟಿ ದಾಟಿ

ಬೆಳಕು ಬೆಳಕು ಎಂದೆನು

ಸಾವು ಸಾಸಿರಗಳ ಸಾರಿ

ಅಮೃತ ಎನುತ ಬಂದೆನು- ಬೇಂದ್ರೆ


ದೀಪಾವಳಿ ಎಂಬ ಈ ಬೆಳಕಿನ ಹುಡುಕಾಟ ನಮ್ಮಲ್ಲಿ ಮಾತ್ರ ಸಾಧ್ಯ. ಏಕೆಂದರೆ ನಾವು ಮಾತ್ರ ಕತ್ತಲಿನಿಂದ ಬೆಳಕಿನತ್ತ ಹೋಗಬೇಕೆಂಬ ತವಕ ಹೊಂದಿದವರು.

ಕತ್ತಲಿನ ತಲ್ಲಣ, ಬೆಳಕಿನ ಜೀವನ ಎರಡನ್ನು ಒಟ್ಟಾಗಿ ಕಂಡವರು.

ಆದ್ದರಿಂದಲೇ ಈ ಬೆಳಕಿನ ಹಬ್ಬವನ್ನು ಇಷ್ಟೊಂದು ಸಂಭ್ರಮದಲ್ಲಿ ಆಚರಿಸಲು ನಮಗೆ ಯಾವಜ್ಜೀವ ಕಾಡಿದ ಕತ್ತಲೆಯೇ ಕಾರಣವಾಯಿತೋ?

ದೀಪಾವಳಿ ಎಂಬ ಕತ್ತಲನ್ನು ಕತ್ತರಿಸುವ, ಕತ್ತರಿಸುತ್ತಾ ಸಂಭ್ರಮಿಸುವ, ಸಂಭ್ರಮಿಸುತ್ತಾ ಸಂಭ್ರಮಿಸುತ್ತಾ ಮತ್ತೆ ಕತ್ತಲನ್ನು ದಾಟಿ ಸಾಗುತ್ತಾ ಬೆಳಕಿನ ಕಿಂಡಿಯನ್ನು ಹುಡುಕುವ ಹಬ್ಬ.

ಒಂದು ಹಬ್ಬ ಮಾತ್ರ ಆಗಿ ಉಳಿದರೆ ಅದರಲ್ಲೇನು ಹುಡುಕಾಟವಿದೆ? ಅದರಲ್ಲೇನು ಒಳನೋಟವಿದೆ?

ಈ ಬೆಳಕಿನ ಚಿತ್ತಾರದಲ್ಲಿ ಕಣ್ಮುಚ್ಚಿ ಕುಳಿತು ಧೇನಿಸುತ್ತಿದ್ದರೆ ಇದು ಎಷ್ಟೊಂದು ಸಂಭ್ರಮದ, ಅರ್ಥವಂತಿಕೆಯ, ಸೊಗಸಿನ, ಸೊಗಡಿನ, ತನ್ಮಯದ, ತಳಿರಿನ, ಉದಾತ್ತತೆಯ ಪ್ರತೀಕ ಎಂದು ಒಳಗೊಳಗೆ ಅರ್ಥವಿಸ್ತಾರಗಳು ಹೊರಹೊಮ್ಮುತ್ತವೆ.

ಅದು ದೀಪಾವಳಿ.

ಬದುಕಿನ ನಿರ್ವಿಕಲ್ಪ, ನಿರಾಕಾರ ಸ್ಥಿತಿಗೆ ಭೋಗ, ವೈಭೋಗಗಳನ್ನು ಹದವಾಗಿ ಬೆರೆಸಿ ಕೊನೆಗೂ ಈ ಜನ್ಮ ದೊಡ್ಡದು ಮತ್ತು ಇದೊಂದು ಜನ್ಮವೇ ದೊಡ್ಡದು ಎಂದು ಸಾರುವ ಸಂಕೇತಗಳು ಬಿಚ್ಚಿಕೊಳ್ಳುತ್ತಿವೆ. ಇಲ್ಲಿ ಕೊನೆಗೂ ಕತ್ತಲನ್ನು ಬೆಳಕೇ ಗೆಲ್ಲುತ್ತದೆ ಎನ್ನುವ ಅನನ್ಯ ಸಂದೇಶವೊಂದು ಹರಿದಾಡುತ್ತವೆ.

ಹಾಗೆಯೇ,

ಬೆಳಕಿನ ಇರುವಿಕೆಗೂ ಅದರ ಗೆಲುವಿಗೂ ಕತ್ತಲು ಅನಿವಾರ್ಯ ಮತ್ತು ಕತ್ತಲಿಲ್ಲದ ಬೆಳಕು ಬೆಳಕೇ ಅಲ್ಲ ಎನ್ನುವ ವಿಚಿತ್ರ ನಿರೂಪಣೆಯೊಂದು ಹೊರಹೊಮ್ಮುತ್ತವೆ.

ಕತ್ತಲು ಬೆಳಕುಗಳ ಈ ಛೇದನ ಪ್ರಕ್ರಿಯೆಯೇ ದೀಪಾವಳಿ.

ಸಾಮಾಜಿಕವಾಗಿ ಇದೊಂದು ಕೌಟುಂಬಿಕ ರೀತಿಯ ಹಬ್ಬ. ಬಂಧುಗಳ, ಬಂಧಗಳ ಬೆಸುಗೆ. ಸಾಂಸ್ಕೃತಿಕವಾಗಿ ಇದೊಂದು ನೆನಪಿನ ಒಸಗೆ. ಐತಿಹಾಸಿಕವಾಗಿ, ಪೌರಾಣಿಕವಾಗಿ ಇದು ನಾವು ನಂಬಿದ ಪರಂಪರೆಯ ಮೇಲಿನ ಪ್ರೀತಿಯ ಅಭಿವ್ಯಕ್ತಿ.

ಹೊಸ ಬಟ್ಟೆ, ಹೊಸ ಅಳಿಯ, ಹೊಸ ಸೊಸೆ, ಬೆಲ್ಲದ ಕಜ್ಜಾಯ, ಗದ್ದೆಯಿಂದ ಕೆಲಸ ಮುಗಿಸಿ ಬಂದ ಎತ್ತುಗಳು, ಹಾಲು ಕೊಡುವ ಹಸುಗಳ ಪೂಜೆ, ಎಣ್ಣೆ ಸ್ನಾನ ಹೀಗೆ ದೀಪಾವಳಿ ತುಂಬ ಬಾಂಧವ್ಯ, ಋಣ, ಪ್ರೀತಿ, ವೀರತ್ವ, ಕೃತಜ್ಞತೆ ಪರಿಪರಿಯಾಗಿ ಹರಡಿಕೊಳ್ಳುತ್ತದೆ.ಇಂತಹ ದೀಪಾವಳಿಯಲ್ಲಿ ಬೆಳಕಿನೆಡೆಗೆ ಸಾಗುವ ಸಂದೇಶ ಪಟಾಕಿ, ಮತಾಪು, ಗಿರಗಿಟಿ, ಸುರುಸುರು ಬತ್ತಿಗಳಲ್ಲಿ ತುಂಬಿಕೊಂಡಿದೆ.

ಜೀವನ ಎಂದರೆ ನೆರಳು-ಬೆಳಕಿನ ಆಟ. ಅದು ಆಸಕ್ತಿ- ವಿರಕ್ತಿಗಳ ಸಂಗಮ.

ಗುಂಡಪ್ಪನವರು ಇದನ್ನು ಲಿಂಬೆ ಪಾನಕಕ್ಕೆ ಹೋಲಿಸಿದ್ದರು. ಕತ್ತಲು ಬೆಳಕುಗಳು ಸೇರಿ ಬದುಕು ಸಿಹಿ-ಹುಳಿಗಳ ಹದ ಪಾನಕದಂತೆ ಮಧುಕರ ಎಂದಿದ್ದರು ಗುಂಡಪ್ಪ.ಪ್ರೇಮದ ಕವಿ ಉಮರ್ ಖಯಾಮ್ ಇರುಳು-ಹಗಲುಗಳೆಂಬ ಎರಡು ಬಾಗಿಲುಗಳ ಪುರಾತನ ಜೀರ್ಣ ಧರ್ಮ ಶಾಲೆ ಈ ಜೀವನ ಎಂದಿದ್ದ . ಇಲ್ಲಿ ಯಾರೂ ನೆಲೆಯಾಗುವುದಿಲ್ಲ. ಬಂದು ಹೋಗುತ್ತಾರೆ ಎಂದು ಹೇಳಿದ್ದ ಉಮರ್ ನಲ್ಗಾವ್ಯ, ರೊಟ್ಟಿ, ಮಧು, ಮುಗುದೆ ಜತೆ ಬದುಕನ್ನು ತೇಲಿ ಬಿಟ್ಟಿದ್ದ. ದೈವ ನಿರ್ಮಿತವಾದ ಈ ಭೋಗವನ್ನು ಅನುಭೋಗಿಸುವುದರಲ್ಲಿ ಯಾವತ್ತೂ ಯಾವ ತಪ್ಪೂ ಇಲ್ಲ ಎಂದು ಉಮರ್ ವಾಖ್ಯಾನಿಸಿದ್ದ ಮೀಮಾಂಸೆಗೆ ಈ ತನಕ ಯಾರೂ ಯಾವ ಪ್ರಶ್ನೆಗಳನ್ನೂ ಇಟ್ಟಿಲ್ಲ.

ಭೋಗವನ್ನು ತ್ಯಾಗದಿಂದ ಸಂಪಾದಿಸಬೇಕು ಎಂದು ಶಾಸ್ತ್ರಗಳು ಹೇಳಿವೆ. ದೀಪಾವಳಿ ಕೂಡಾ ಇದನ್ನೇ ಹೇಳುತ್ತದೆ. ಎಣ್ಣೆ ಸ್ನಾನ, ಭರ್ಜರಿ ಊಟ, ಅಳಿಯ ಮಗಳು, ಉಡುಗೊರೆ, ದೀಪಾರಾಧನೆ, ಪಟಾಕಿ ಮತಾಪು ಎಲ್ಲವೂ ಈ ಭೋಗ -ತ್ಯಾಗಗಳ ಅರ್ಥ ಸಂಕೇತ.ಜೀವ ಪುಟಕ್ಕೆ ಬೇಕಾದದ್ದೆಲ್ಲ ಈ ದೀಪಾವಳಿಯಲ್ಲಿದೆ. ಬದುಕಿನ ಅಂಧಕಾರ, ಮನಸ್ಸಿನ ಅಂಧಕಾರ, ಮನುಕುಲದ ಅಂಧಕಾರಗಳ ನಿರಾಕರಣ ಬೆಳಕು.

ಒಳಗಿನ ಬೆಳಕು ಹಚ್ಚುತ್ತಾ ಹೊರಗಿನ ಬೆಳಕು ಹಚ್ಚುವುದಕ್ಕೂ ಅರ್ಥ ಬರುತ್ತದೆ.

ಜಾಣ ಮಂದಿ ಜಾಗರೂಕತೆಯಿಂದ ತಮ್ಮ ಮೈ ಕೈ ಸುಟ್ಟುಕೊಳ್ಳದೆ ಪಟಾಕಿ ಹಚ್ಚುತ್ತಾರೆ. ಪಟಾಕಿ ಹಚ್ಚುತ್ತಾ ಅದು ಸುಡುವ, ಸಿಡಿಸುವ ಸಂತೋಷವನ್ನು ಅನುಭವಿಸುತ್ತಾರೆ. ದಡ್ಡರು ಕೈಯಲ್ಲೆ ನೆಲಗುಮ್ಮ ಸಿಡಿಸಿಕೊಂಡು ಆಸ್ಪತ್ರೆ ಸೇರುತ್ತಾರೆ. ಒಳಗಿನ ಅಂಧಕಾರವನ್ನು ಜಾಗರೂಕತೆಯಿಂದ ಸುಟ್ಟ ಜಾಣರು ಹೊರಗಿನ ಬೆಳಕನ್ನು ಕಾಣುತ್ತಾರೆ.

ಆತ್ಮಕ್ಕೆ ಅಪಾಯ ತಟ್ಟದಂತೆ ಭೋಗ ಜೀವನದಲ್ಲಿ ಬದುಕುವುದು ದೀಪಾವಳಿ ಹಬ್ಬದ ಪಟಾಕಿ ಸಾರುವ ಸಂದೇಶ.

ಆ ಕತ್ತಲು, ಅದನ್ನು ಸೀಳುವ ದೀಪ, ಆ ಪಟಾಕಿ, ಅದು ಸಿಡಿಸುವ ಶಬ್ಧ, ಆ ಹಬ್ಬ , ಅದರಲ್ಲಿ ಸಿಗುವ ಸವಿಯೂಟ ಆ ಬಂಧುಗಳು ಮತ್ತು ಅವರೆಲ್ಲರ ಜತೆ ಆ ಮಾತು, ಆ ಹಿತ ಮತ್ತು ಆ ಸಂತೋಷ ಅವುಗಳನ್ನೆಲ್ಲ ಬಿಟ್ಟು ನಾವು ನಡೆಯುದಾದರೂ ಎಲ್ಲಿಗೆ ?

20071103

ಸಲಹೆ ಎಂಬ ವೃಥಾ ವೆಚ್ಚ


"...they'll take SUGGESTIONS as a cat laps milk"-shakespeare


ಯಾರಿಗೂ, ಯಾವತ್ತೂ, ಯಾವುದೇ ಕಾರಣಕ್ಕೂ, ಯಾವಾಗಲೂ, ಯಾವುದೇ ಸಲಹೆ ನೀಡಬಾರದು.

ಸಲಹೆ ಎನ್ನೋದು ಅತ್ಯಂತ ಅಗ್ಗ ಮತ್ತು ಅನಾಹುತಕಾರಿ.

ಜನ ಏಕೆ ಸಲಹೆ ಕೇಳುತ್ತಾರೆ ಎಂದರೆ ಅದೂ ಕೂಡಾ ಅವರಿಗೆ ಒಂದು ಪಲಾಯನವಾಗಿರುತ್ತದೆ.

ಒಂದು ಸಮಸ್ಯೆ ಬಂದಾಗ ನಿಮ್ಮ ಬಳಿ ಬಂದು ಏನು ಮಾಡೋಣ ಎಂದು ಕೇಳುತ್ತಾರಲ್ಲ;ಅವರಿಗೆ ನಿಮ್ಮ ಉತ್ತರ ಆ ಕ್ಷಣಕ್ಕೆ ಪಲಾಯನಕ್ಕೆ ಒಂದು ದಾರಿ ಅಷ್ಟೇ.

ನಿಜವಾಗಿಯೂ ಯಾರೂ ಯಾರಿಂದಲೂ ಯಾವುದೇ ಸಲಹೆ ಬಯಸೋದಿಲ್ಲ.

ಕಾರಣ ಎಲ್ಲರೂ ಸೆಲ್ಫ್‌ಮೇಡ್ ಆಗಿಯೇ ಇದ್ದಾರೆ.

ಸಲಹೆ ಬೇಕಾದವರು ಅದನ್ನು ಪಾಲಿಸಲೆಂದು ನಿಮ್ಮಿಂದ ಅಪೇಕ್ಷಿಸಿದ್ದಾರೆ ಎಂದು ನೀವು ಭ್ರಮಿಸುತ್ತೀರಿ.ಹಾಗಾಗಿ ಪುಂಖಾನುಪುಂಖವಾಗಿ ಸಲಹೆ ನೀಡಲಾರಂಭಿಸುತ್ತೀರಿ.ನೋಡುತ್ತಾ ನೋಡುತ್ತಾ ಆತ ನಿಮ್ಮ ದಾಸಾನುದಾಸ ಆಗುತ್ತಿದ್ದಾನೆಂದು ನೀವು ಅಂದುಕೊಳ್ಳುತ್ತೀರಿ.

ಆದರೆ ಅಸಲಿಗೆ ಆತನ ಮನಸ್ಸ್ಸು ನಿಮ್ಮ ಉಚಿತ ಸಲಹೆಯ ಸಾಧ್ಯಾಸಾಧ್ಯತೆಯ ಅಥವಾ ಅದರ ಸತ್ಯಾಸತ್ಯತೆಯ ಮೌಲ್ಯಮಾಪನ ಮಾಡುತ್ತಾ ಹೋಗುತ್ತಿರುತ್ತದೆ.ನಿಮ್ಮಿಂದ ಸಲಹೆ ಪಡೆಯಲಾರಂಭಿಸುತ್ತಿರುವಾಗಲೇ ಆತ ತನಗೆ ಎಷ್ಟು ಬೇಕು ಎಂಬುದನ್ನು ನಿರ್ಧರಿಸಿದ್ದಾಗಿದೆ.ಪಾಪ ನಿಮಗೆ ಅದು ಎಲ್ಲಿ ತಾನೆ ಗೊತ್ತಾಗಬೇಕು!

ಇಷ್ಟಕ್ಕೂ ಅವರೇಕೆ ನಿಮ್ಮ ಬಳಿ ಸಲಹೆ ಕೇಳುತ್ತಾರೆ ಎಂದರೆ ಅದು ಅವರಿಗೆ ಒಂದೇ ಒಂದು ಬಾರಿಯ ನಿರಾಕರಣ ಅಥವಾ ಭಾವಶುದ್ಧೀಕರಣ ಅಷ್ಟೇ.

ಸಮಸ್ಯೆ ಜಾಗೃತವಾಗುತ್ತಿದ್ದಂತೆ ಅವರಿಗೆ ಅಂಥದೊಂದು ಅಗತ್ಯ ಇರುತ್ತದೆ ಮತ್ತು ಆ ಮೂಲಕ ಅವರು ಸಮಾಧಾನಗೊಳ್ಳಲು ಸಾಧ್ಯ.

ಸಲಹೆ ಕೇಳಲು ಬಂದು ಕುಳಿತ ವ್ಯಕ್ತಿ ತನಗರಿವಿಲ್ಲದಂತೆ ಅವನನ್ನು ನಿಮ್ಮ ಜೊತೆ ಎಕ್ಸ್‌ಚೇಂಜ್ ಮಾಡುತ್ತಾನೆ.

ನನ್ನ ಸ್ಥಾನದಲ್ಲಿ ಇವನಿದ್ದರೆ ಏನು ಮಾಡುತ್ತಿದ್ದನೋ ಎಂದು ಪರಿಶೀಲಿಸುತ್ತಾನೆ ಮತ್ತು ಆ ಮೂಲಕ ತನ್ನೊಳಗಿನ ತನ್ನನ್ನು ಸಿದ್ಧಪಡಿಸುತ್ತಾನೆ.ಸಲಹೆ ಕೇಳುವುದರಲ್ಲಿ ಯಾರೂ ಹಿಂದೆ ಬಿದ್ದಿಲ್ಲ.ದೇವಾನುದೇವತೆಗಳೇ ಋಷಿಮುನಿಗಳಿಂದ ಸಲಹೆ ಕೇಳಿದ್ದು, ರಾಜಮಹಾರಾಜರು ಮಂತ್ರಿಗಳಿಂದ ಸಲಹೆ ಅಪೇಕ್ಷಿಸಿದ್ದು ಸದಾ ನಮ್ಮ ಕಥೆ ಪುಸ್ತಕಗಳಲ್ಲಿವೆ.ಆದರೆ ಯಾವ ಹೆಣ್ಣೂ ಕೂಡಾ ವಾದ ಮಾಡದೇ ಸಲಹೆ ಕೇಳಲ್ಲ, ರಿಸೀವ್ ಮಾಡಲ್ಲ ಎಂಬುದು ಸಲಹೆ ಕೊಡಲು ಹೋಗಿ ಹೆಡ್ಡಾದ ಗಂಡಸರ ಮಾತು.ನಿಜವೇ ಇರಬಹುದು;ನಿಮ್ಮ ಗೆಳತಿ ಅಥವಾ ಹೆಂಡತಿಗೆ ಸಲಹೆ ನೀಡಲು ಹೋಗಿ ಈ ಮಾತು ನಿಜವೇ ಎಂದು ಪಕ್ಕಾ ಮಾಡಿಕೊಳ್ಳಿ.

ಸಲಹೆ ನಮ್ಮದಾಗಿದ್ದರೆ ಸಾಕು ಮತ್ತು ನಮಗೆ ಮಾತ್ರಾ ಇದ್ದರೆ ಸಾಕು.

self suggestion makes you master of yourself..ಎಂಬ ಮಾತು ನನ್ನ ಸಲಹೆ ಏನಲ್ಲ.

20071102

ನಾಲ್ಕು ಸಾಲು-19


೧.

ಹುಟ್ಟಿನ ಉದ್ಯಾಪನೆ

ಸಾವಿನ ಆವಾಹನೆ

ಎರಡರಲ್ಲೂ

ಒಣಹುಲ್ಲಿನ ಚೈತನ್ಯ ಕಂಡವನು ಮಾತ್ರಾ

ಬದುಕಿನ ಹಸಿರನ್ನು ನೋಡುವನು.೨.ಬದುಕಿನಲ್ಲಿ

ಹುಟ್ಟಿಗಿಂತ ಸಾವನ್ನೇ

ನೆನೆಯುವ ನಾವು

ಮರುಸೃಷ್ಟಿಯ ಮೂಲಕ

ಭದ್ರರಾಗುವೆವು.೩.ಸಾವು ಆಕಸ್ಮಿಕ

ಆದರೆ

ಹುಟ್ಟು ಅದು ಹೇಗೆ

ನಿರ್ಣಾಯಕ ಆಗುತ್ತದೆ ಎಂದು

ಹುಂಬನಂತೆ ಯೋಚಿಸಿದೆ.೪.ಸಾವಿನಿಂದ ಕಳೆದುಕೊಂಡದ್ದನ್ನು

ಹುಟ್ಟಿನಿಂದ

ಪಡೆದುಕೊಳ್ಳಲಾರೆವೆಂಬುದೇ

ಸಾವಿನ ಹೆಗ್ಗಳಿಕೆ

ಅಥವಾ

ಹುಟ್ಟಿನ ನಶ್ವರತೆ.

20071027

ನಾಲ್ಕು ಸಾಲು-18


೧.ಕಾಯುತ್ತಾ ಕುಳಿತಿದ್ದ

ಅವನು

ಆಮೇಲೆ ತಾನು ಕಳೆದುಕೊಂಡದ್ದನ್ನು

ಹುಡುಕಾಡಿದ,

ಸಿಗಲಿಲ್ಲ.

ಮತ್ತೆ

ಕಾಯುತ್ತಾ ಕುಳಿತ

ಕಳೆದುಹೋದದ್ದು ಬರುತ್ತದೆ ಎಂದು.

೨.ಮೌನದಲ್ಲಿ

ಏನನ್ನೋ ಬಯಸಿದ

ಅವಳು

ಆಮೇಲೆ ಮಾತಿಗಾಗಿ ಚಡಪಡಿಸಿದಳು.೩.ನೂರಾರು ವರ್ಷಗಳ ಹಿಂದೆ

ರಾಜ್ಯ ಕಟ್ಟಿದ

ಅರಸ

ತನ್ನ ಸೈನಿಕರ ನೆನಪಿಗೆ

ಒಂದೂ ಶಾಸನ ಬರೆಸಲಿಲ್ಲ

ನೆಲವೇ ಇತಿಹಾಸವನ್ನು ಕಾಲಕ್ಕೆ

ಒಪ್ಪಿಸಿತು.೪.ಆಕಾಶದ ಮೇಲೆಲ್ಲಾ

ಮೋಡಗಳು

ಬರೆದ ಸುಂದರ ಹಾಡನ್ನು

ಓದುತ್ತಿದ್ದೆ.

ಮಳೆ ಸಂಗೀತ ಹೊಂದಿಸಲು ಮುಂದಾಗಿ

ಹಾಡನ್ನೆಲ್ಲಾ ಅಳಿಸಿಹಾಕಿತು.

20071024

ಬರಲಿದೆ ಮೂರನೇ ಮಹಾಯುದ್ಧ:ನೀವೂ ನಂಬುವುದಾದರೆ..ನಾಸ್ಟ್ರಡಾಮಸ್ ಮರಳಿ ಬಂದಿದ್ದಾನೆ.

ಅನಾಹುತದ ಮುನ್ನೆಚ್ಚರಿಕೆ ನೀಡಿದ್ದಾನೆ.

ನಾಸ್ಟ್ರಡಾಮಸ್ ಭವಿಷ್ಯದ ಬಗ್ಗೆ ಜಗತ್ತಿನಲ್ಲಿ ಜನರಿಗೆ ಎಲ್ಲಿಲ್ಲದ ನಂಬಿಕೆ. ಸ್ವತಃ ಭಗವಂತ ಸಂಭವಾಮಿ ಯುಗೇ ಯುಗೇ ಎಂದರೆ ಯಾರೂ ನಂಬರು,ಆದರೆ ಈ ೧೫ನೇ ಶತಮಾನದ ಅಜ್ಜ ಹೇಳಿದ್ದನ್ನಂತೂ ಕಾಯೇನ ವಾಚಾ ಮನಸಾ ನಂಬುವರು.ಅದೇನೊಂದು ಮೋಡಿ ಈ ಜನರಿಗೆ ಮಾಡಿದನೋ ಆ ಅಜ್ಜ ಮಹರಾಯ.!

ನಾಸ್ಟ್ರಡಾಮಸ್ ಕೋಡ್ ವರ್ಲ್ಡ್‌ವಾರ್-೩ ಎಂಬ ಹೊಸಾ ಬುಕ್ಕೊಂದು ಈಗ ಸುದ್ದಿಯಲ್ಲಿದೆ.ಎಂಟು ಅಧ್ಯಾಯಗಳ ಈ ಕಿತಾಬು ಮಾಡುತ್ತಿರುವ ಕಿತಾಪತಿಯೇ ಈಗ ಜಗದಗಲ ಸುದ್ದಿ.

ನಾಸ್ಟ್ರಡಾಮಸ್ ಹೇಳಿದ್ದಾನೆ,೨೦೦೮ ರಲ್ಲಿ ಮೂರನೇ ಜಾಗತಿಕ ಯುದ್ಧ ಆರಂಭವಾಗುತ್ತದೆ ಎಂದು.ಅಂದರೆ ಇನ್ನೇನು ನೂರೇ ನೂರು ದಿನಗಳಲ್ಲಿ ನಾವೆಲ್ಲಾ ಯುದ್ಧಕ್ಕೆ ತಯಾರಾಗಬೇಕು.

ನಾಸ್ಟಡಾಮಸ್‌ನ ಭವಿಷ್ಯದ ಸಾರಾಂಶ ಇಂತಿದೆ.

ಅಮೇರಿಕಾ -ಇರಾನ್ ಕದನ,ಅಮೇರಿಕಾ ಮೇಲೆ ಉಗ್ರರ ಭೀಕರ ಧಾಳಿ,ಒಸಾಮಾಬಿನ್‌ಲಾಡೆನ್ ಅಟ್ಟಹಾಸ ಮತ್ತು ರೋಮ್ ಮೇಲೆ ನ್ಯೂಕ್ಲಿಯರ್ ಬಾಂಬು.

೨೦೦೮-೨೦೧೨ ಮೂರನೇ ಮಹಾಯುದ್ದದ ಕಾಲ.

ಅದು ಹೇಗೆ ಆರಂಭವಾಗಲಿದೆ ಎಂದರೆ ..

ಮಧ್ಯಪೂರ್ವ ದೇಶದಲ್ಲೊಬ್ಬ ನಾಯಕ. ಆತನಿಗೆ ಯುದ್ಧದ ಹುಚ್ಚು.ಯಾರ ಮೇಲಾದರೂ ದಂಡೆತ್ತಿ ಹೋಗದಿದ್ದರೆ ನಿದ್ದೆ ಹತ್ತಲ್ಲ ಆ ನರರಾಕ್ಷಸನಿಗೆ.ಸಣ್ಣ ಸಂಗತಿಯೂ ಸಾಕು ದೊಡ್ಡದು ಮಾಡಿದ ಎಂದೇ ಲೆಕ್ಕ. ಈತನ ದೇಶ ಮೆಡಿಟರೇನಿಯನ್ ಕರಾವಳಿಯಲ್ಲಿದೆ.ಇವನೇ ಮೊದಲ ಬಾರಿಗೆ ನ್ಯೂಕ್ಲಿಯರ್ ಬಾಂಬು ಎಸೆಯುವ ಅಸಾಮಿ.ಇವನು ಹಾಕೋ ಮೊದಲ ನ್ಯೂಕ್ಲಿಯರ್ ಬಾಂಬು ಆಯ ತಪ್ಪಿ ಮೆಡಿಟರೇನಿಯನ್ ಸಮುದ್ರಕ್ಕೆ ಬೀಳುತ್ತದೆ.ಆಗ ಎಲ್ಲಾ ಜಲಚರಗಳ ನಾಶವಾಗುತ್ತದೆ.ಪರಿಣಾಮ ಮೆಡಿಟರೇನಿಯನ್ ಸುಪರ್ದಿಯ ದೇಶಗಳಲ್ಲಿ ಹಾಹಾಕಾರ. ಜನ ಜೀವನ ಅಸ್ತವ್ಯಸ್ತ.ತಿನ್ನೋದಕ್ಕೆ ಮೀನೂ ಕೂಡಾ ಇಲ್ಲದೇ ಜನ ಕಂಗಾಲು.ಹೀಗೆ ಆರಂಭವಾಗುವ ಯುದ್ಧ ಎಲ್ಲವನ್ನೂ ನುಂಗುತ್ತಾ ಹೋಗುತ್ತದೆ.ಯುರೋಪ್ ದೇಶಗಳಿಗೆ ಪೆಟ್ರೋಲ್ ತತ್ವಾರ ಆಗುತ್ತದೆ.ಈ ಅನಾಹುತಗಳ ಮಧ್ಯೆ ಐರೋಪ್ಯ ದೇಶಗಳೇನು ಕಡಲೆಕಾಯಿತಿನ್ನುತ್ತಾ ಕೂರುತ್ತಾವಾ?ಅವುಗಳೆಲ್ಲಾ ಒಂದಾಗಿ ಸಮರಾಂಗಣಕ್ಕೆ ಬರುತ್ತವೆ.ಆಗ ಈ ಕೆರಳಿದ ಖದೀಮ ಅವುಗಳತ್ತ ಬಾಂಬು ಎಸೆಯುತ್ತಾನೆ.ಮೊದಲ ಕಂತಿನ ಯುದ್ಧದ ಬಳಿಕ ಇಟಲಿ ಮತ್ತು ಫ್ರಾನ್ಸ್‌ಗಳಲ್ಲಿ ಜನರೇ ಇಲ್ಲದ ಸ್ಥಿತಿ ಬರಲಿದೆ.ಇಟಲಿಯಂತೂ ಕರಟಿ ಇದ್ದಿಲಾಗಲಿದೆ.ಎರಡನೆಯದ್ದು ಪ್ರಾಕೃತಿಕ ಉತ್ಪಾತ.ಜಗತ್ತಿನಾದ್ಯಂತ ಬರಗಾಲ,ಬಿರುಗಾಳಿ ಅಥವಾ ಜಲಪ್ರಳಯ ಜೊತೆ ಜೊತೆಗೆ ಭೂಕಂಪ,ಜ್ವಾಲಾಮುಖಿ.ಪ್ರಕೃತಿಯ ಈ ಕೋಪಕ್ಕೆ ಅರಿಭಯಂಕರ ದೇಶಗಳೇ ತತ್ತರ ನಡುಗುವುವು.ದೈತ್ಯ ದೇಶಗಳ ರಾಜಕಾರಣ ವ್ಯವಸ್ಥೆ ಕುಸಿಯುವುದು.ಅಮೇರಿಕಾವಂತೂ ಯುದ್ಧ, ಭೂಕಂಪ,ಜಲಪ್ರಳಯದಂಥ ದಾಳಿಗಳಿಂದ ಗಬ್ಬೆದ್ದು ಕೊನೆಗೊಮ್ಮೆ ದಿವಾಳಿಯೇ ಆಗುವುದು.

ಈ ಹೊತ್ತಿಗೆ ಕ್ರೈಸ್ತವಿರೋಧಿ ವರ್ಗ ತನ್ನ ಪ್ರಾಬಲ್ಯ ಪಡೆಯುತ್ತದೆ.ತತ್ತರಿಸಿದ ದೇಶಗಳಿಗೆ ನೆರವಿನ ಅಭಯ ಹಸ್ತ ಚಾಚುವ ನೆಪದಲ್ಲಿ ಈ ಜನಾಂಗ ಈ ದೇಶಗಳಿಗೆ ಲಗ್ಗೆ ಹಾಕಿ ಆಕ್ರಮಿಸುವುದು.ಇಷ್ಟೆಲ್ಲಾ ಆಗುತ್ತಿರುವಾಗ ತೃತೀಯ ದೇಶವೊಂದರಲ್ಲಿ ಕಡುಗಪ್ಪು ಕರಿಯ ಯುವ ನಾಯಕನೊಬ್ಬ ಉದಯಿಸುವನು.ಆತ ನೋಡುನೋಡುತ್ತಾ ಇದ್ದ ಹಾಗೇ ತೃತೀಯ ಜಗತ್ತನ್ನು ಒಗ್ಗೂಡಿಸುವನು.ಅವನೇ ಆ ಸಂಘಟನೆಯ ಮೂಲಕ ಸೂಪರ್ ಪವರ್ ಜೊತೆ ಮುಖಾಬಿಲ್ಲೆ ಆಗುವನು.ಇಡೀ ಜಗತ್ತು ಯುದ್ಧದಲ್ಲಿ ಮುಳುಗುವುದು.ಆದರೆ ಈ ಯುದ್ಧದಲ್ಲೂ ಎಲ್ಲಾ ಯುದ್ಧಗಳಲ್ಲೂ ಆಗುವಂತೆ ಕೊನೆಗೂ ಯಾರೂ ಗೆಲ್ಲುವುದಿಲ್ಲ.

ಇದು ನಾಸ್ಟ್ರಡಾಮಸ್ ಉವಾಚ.ಅಥವಾ ಅವನ ಸಂಕೇತ ವಾಕ್ಯಗಳಿಗೆ ಬರೆಯಲಾದ ಭಾಷ್ಯ,ಐ ಮೀನ್ ಭವಿಷ್ಯ.

ನಾಸ್ಟ್ರಡಾಮಸ್ ಕುರಿತ ಈ ಮಾಹಿತಿ ಈಗ ಪುಸ್ತಕ ರೂಪದಲ್ಲಿ ಲಭ್ಯ.ಹರೋಹರ ಆಗುವ ಮುನ್ನ ಓದಿ ಸಂತೋಷಿಸಿ.


ಒಂದು ಟಿಪ್ಪಣಿ:

ನಾಸ್ಟ್ರಡಾಮಸ್!ಈತ ಒಬ್ಬ ಜ್ಯೋತಿಷಿ.ಅಥವಾ ಆ ಕಾಲದಲ್ಲಿ ಕರೆಯುತ್ತಿದ್ದ ಹಾಗೇ ಜಾದೂಗಾರ.೧೬ನೇ ಶತಮಾನದಲ್ಲಿ ಪ್ಲೇಗ್ ಪೀಡೆ ಮುತ್ತಿಕೊಂಡಿದ್ದಾಗ ಈತ ಶುಶ್ರೂಷಕನಾಗಿ ಫ್ರಾನ್ಸ್‌ನಲ್ಲಿ ಕೆಲಸ ಮಾಡಿಕೊಂಡಿದ್ದ.ಅದು ಬೇಜಾರೆನಿಸಿ ಕೆಲಸ ಬಿಟ್ಟು ತನ್ನದೇ ಒಂದು ಬಲ್ಮೆ ಅಂಗಡಿ ಹಾಕಿಕೊಂಡ.ಅವನ ಭವಿಷ್ಯವಾಣಿಗೆ ಜನ ಮುಗಿಬೀಳುತ್ತಿದ್ದರು.ಏಕ್ ದಂ ಸಾಯುವುದು,ಅನಾಹುತವಾಗೋದರ ಬಗ್ಗೇ ನಾಸ್ಟ್ರಡಾಮಸ್ ಮಾತನಾಡುತ್ತಿದ್ದ. ತನ್ನ ಅಂಗಡಿಯಲ್ಲಿ ಕುಳಿತು ದೊಡ್ಡದೊಡ್ಡ ದೇಶಗಳ ನಾಯಕರಿಗೆ ಮುಂಬರಲಿರುವ ಅನಾಹುತಗಳ ಕುರಿತು ಉದ್ದುದ್ದ ಕಾಗದ ಬರೆಯುತ್ತಿದ್ದ. ಈ ಜೋಯಿಸನ ಭಯಂಕರ ಭವಿಷ್ಯದ ಕಾಟ ತಾಳಲಾರದೇ ವ್ಯಾಟಿಕನ್, ಜಗತ್ತಿನ ಜೋಯಿಸರೆಲ್ಲಾ ಪಿಶಾಚಿಗಳು ಎಂದು ಘೋಷಿಸಿ ಕುಳಿತಿತು.

ನಾಸ್ಟ್ರಡಾಮಸ್ ನಾಲ್ಕು ಸಾಲುಗಳ ಸಣ್ಣ ಸಣ್ಣ ಪದ್ಯಗಳ ಮೂಲಕ ತನ್ನ ಭವಿಷ್ಯವಾಣಿ ಬರೆದಿದ್ದಾನೆ.ಈ ಚೌಪದಿಗಳನ್ನು ಅವನೇ ತಲಾ ನೂರರ ಕಟ್ಟು ಮಾಡಿ ಶತಕಗಳು ಅಂತ ಕರೆದಿದ್ದಾನೆ.ಇಂಥ ೪೬ ಶತಕಗಳಲ್ಲಿ ೯೪೨ ಚೌಪದಿಗಳಿವೆ. ಆಗಿನ ಕಾಲದ ಬಗೆ ಬಗೆಯ ಆತಂಕಗಳಿಂದಾಗಿ ನಾಸ್ಟ್ರಡಾಮಸ್ ತನ್ನ ಭವಿಷ್ಯವಾಣಿಯನ್ನು ಸಂಕೇತಗಳೇ ಮುಖ್ಯವಾಗುವ ಪದಗಳ ಮೂಲಕ ಬರೆದಿಟ್ಟಿದ್ದಾನೆ.ಅವನ ಕಾಲಜ್ಞಾನಕ್ಕೆ ಕಾಲಮಿತಿಯಿಲ್ಲ.ಅದು ಆಯಾಯಾ ಕಾಲದ ತರ್ಕಗಳಿಗೆ ಅನುಸರಣೆಯಾಗುವಂತೆ ಆತ ಅದನ್ನು ನಿರೂಪಿಸಿದ್ದಾನೆ.

ನಾಸ್ಟ್ರಡಾಮಸ್ ಫ್ರೆಂಚ್ ಕ್ರಾಂತಿ ಬಗ್ಗೆ ಹೇಳಿದ್ದು ನಿಜವಾಗಿದೆ.ಹಾಗೇ ಹಿಟ್ಲರನ ಅವತಾರ ಮತ್ತು ಅವಸಾನದ ಕುರಿತೂ ಆತ ನಿಖರವಾಗಿ ಹೇಳಿದ್ದ.ಕೆನಡಿಯ ಹತ್ಯೆ ಇಂಥಾ ದಿನ ಹೀಗೇ ಆಗುತ್ತದೆ ಎಂದಿದ್ದ.೧೬೬೬ ರ ಲಂಡನ್ ಅಗ್ನಿ ಅನಾಹುತದ ಬಗೆಗೂ ತಿಳಿಸಿದ್ದ.ನೆಪೋಲಿಯನ್ನನ ದೇಶಾಂತರದ ಕುರಿತೂ ಬರೆದಿದ್ದ.

ತೀರಾ ಈ ಕಾಲದ ಕುರಿತೂ ಆತ ಹೇಳಿದ್ದು ನಿಜವಾಗಿದೆ ಎಂದು ಅವನ ಕಿತಾಬು ಓದಿದವರು ಹೇಳುತ್ತಾರೆ.ಲೇಡಿ ಡಯಾನಳ ಸಾವಿನ ಕುರಿತು ಆತ ಶತಕದಲ್ಲಿ ದಾಖಲಿಸಿದ್ದ.

೯/೧೧ ಅವನ ಕಾಲವಾಣಿಯಲ್ಲಿತ್ತು.

ಚಾಲೆಂಜರ್ ಸ್ಪೇಸ್ ಶಟಲ್ ಉರಿದು ಬೀಳುವ ಅವನ ಹೇಳಿಕೆಯೂ ನಿಜವಾಯಿತು.

20071022

ವಾರವಾರ-೩


ಯಾವತ್ತೂ ನಮಗೆ ಪಾಕಿಸ್ತಾನದ ಬಗ್ಗೆ ಪ್ರೀತಿ ಹುಟ್ಟುವುದು ಸಾಧ್ಯವಿಲ್ಲ.ಕಾರಣ ಪಾಕಿಸ್ತಾನ ಹುಟ್ಟಿದೇ ನಮ್ಮ ಮೇಲಿನ ದ್ವೇಷದಿಂದ ಅಥವಾ ದ್ವೇಷಕ್ಕಾಗಿ.

ಪಾಕ್ ಎಂದೂ ಭಾರತದ ಮೇಲಿನಪ್ರೀತಿಗೆ ಪಾತ್ರವಾಗುವಂತೆ ನಡೆದುಕೊಂಡಿಲ್ಲ.ಅಷ್ಟೇ ಆಗಿದ್ದರೆ ಅಡ್ಡಿಯೇನಿರಲಿಲ್ಲ. ಅದು ಭಾರತಕ್ಕೆ ಪ್ರತೀ ಕ್ಷಣವೂ ವಿರುದ್ಧವಾಗಿಯೇ ತನ್ನ ವರ್ತನೆಯನ್ನು ತೋರಿಸಿದೆ.ನಮ್ಮ ನೆಲವನ್ನೂ ಗೀಚಿದೆ.

ನೆಲದ ವಿಚಾರ ನಮ್ಮನ್ನು ಯಾವುದಕ್ಕಿಂತಲೂ ಹೆಚ್ಚು ಕಾಡುತ್ತದೆ.ಸೂಜಿಮೊನೆಯಷ್ಟು ನೆಲ ಕೊಡಲ್ಲ ಎಂಬ ಮಾತಿನಬಳಿಕ ಮಹಾಭಾರತ ಇಂಟೆರೆಸ್ಟಿಂಗಾಗಿ ಸಾಗುತ್ತದೆ.ಆಮೇಲಿನ ಮತ್ತು ಅದಕ್ಕೂ ಮೊದಲು ಎಷ್ಟೊಂದು ಕಿರೀಟಗಳು ಉರುಳಿ ಬಿದ್ದವು ನೆಲಕ್ಕಾಗಿ ಎಂದು ಚರಿತ್ರೆ ಓದಿದ ನಮಗೆ ಗೊತ್ತಿದೆ.

ಮಾತು ಪಾಕಿಸ್ತಾನದತ್ತವೇ ಹೊರಳಲಿ.

ಬೆನಜೀರ್ ಭುಟ್ಟೋ ಪಾಕಿಸ್ತಾನಕ್ಕೆ ನೂರು ತಿಂಗಳ ಬಳಿಕ ಬಂದಿಳಿದಾಗ ಏನಾಯಿತು ಎಂಬುದು ಕಂಡೆವಲ್ಲ,ಇದು ನಿಜಕ್ಕೂ ಬೇಕಿತ್ತಾ?

೧೯೭೯ ಎಪ್ರಿಲ್ ೪!ಮುಂಜಾನೆ !ಸಾವಿರ ವರ್ಷಕಾಲ ಭಾರತದೊಂದಿಗೆ ಯುದ್ಧ ಮಾಡುವೆ ಎಂದಿದ್ದ ಜುಲ್ಪಿಕರ್ ಆಲಿ ಭುಟ್ಟೋ ದಾರುಣವಾಗಿ ಉರುಳಿಗೆ ಕೊರಳು ಒಡ್ಡಿ ನಿಂತಿದ್ದ.ಅದು ಮುಕ್ತಾಯ ಮಾತ್ರಾ ಆಗಿರಲಿಲ್ಲ.ಆದರೆ ಅದು ಮುಕ್ತಾಯವಲ್ಲ ಎಂಬುದು ಇಡೀ ಪಾಕಿಸ್ತಾನಕ್ಕೆ ಗೊತ್ತೇ ಇರಲಿಲ್ಲ.ಪ್ರತಿಬಾರಿಯೂ ಈ ಪೆದ್ದ ಪಾಕಿಗಳು ಹೀಗೇ ಆಗುತ್ತಾರೆ.ನಮ್ಮ ಸ್ವತಂತ್ರ ಭಾರತದ ವಯಸ್ಸು ಅದಕ್ಕೆ.೬೦ವರ್ಷದಲ್ಲಿ ಅಲ್ಲಿ ೬ ವರ್ಷವಾದರೂ ಪ್ರಜಾಸತ್ತೆ ನಡೆದಾಡಿತ್ತೋ ಏನೋ.ಪ್ರಜಾಸತ್ತೆ ಸ್ಥಾಪನಾರ್ಥಯಾ ಸಂಭವಾಮಿ ಎಂದು ಬಂದ ಬೆನಜೀರ್ ಕಣ್ಣೆದುರೇ ಏನಾಗಿದೆ ಎಂದರೆ ಮರುದಿನವೇ ಆಕೆ ಪ್ರಜಾಸತ್ತೆಯ ಮಾತು ಬಿಟ್ಟು ಭಯೋತ್ಪಾದನೆಯ ಮಾತು ಶುರು ಮಾಡಿದ್ದಾಳೆ.ಇದು ಅಲ್ ಖೈದಾದ್ದೇ ಕೆಲಸ ಅಥವಾ ಅದರಂಥದ್ದು.ಹಾಗೆಂದು ಜಗತ್ತಿಗೇ ಗೊತ್ತಿದೆ. ಆದರೆ ಬೆನಜೀರ್ ಮಾತ್ರಾ ಈ ಕೆಲಸ ಮುಸ್ಲಿಂ ಮಾಡಲಾರ ಎಂದು ಹೇಳುತ್ತಾ ಪನ್ ಮಾಡುತ್ತಾಳೆ.

ಪಾಕಿಸ್ತಾನದಲ್ಲೇ ತವರುಮನೆ ಮಾಡಿಕೊಂಡು ಜಗತ್ತನ್ನೇ ಚದುರಾಡಿದ ಮುಸ್ಲಿಂ ಉಗ್ರವಾದಿಗಳು ಈಗ ಪಾಕಿಸ್ತಾನವನ್ನೇ ಯಾಮಾರಿಸುತ್ತಿದ್ದಾರೆ.ಏಕೆಂದರೆ ಪಾಕಿಸ್ತಾನ ಈಗ ಅಮೇರಿಕಾದ ಏಜಂಟ್ ಆಗಿರುವುದು ಅವರಿಗೆ ಅರ್ಥವಾಗಿದೆ.ಅಥವಾ ಕೊನೆಗೂ ಪಾಕಿಸ್ತಾನ ಉಗ್ರವಾದಿಗಳನ್ನು ನೇರಾನೇರಾ ಎದುರುಹಾಕಿಕೊಂಡಿದೆ,ಅಮೇರಿಕಾದ ಅಪ್ಪಣೆ ಮೇರೆಗೆ.ಒಂದುಕೈಲಿತೊಟ್ಟಿಲು ತೂಗುತ್ತಾ ಇನ್ನೊಂದು ಕೈಲಿ ಚಿವುಟುತ್ತಿದ್ದ ಪಾಕಿಸ್ತಾನ ಈಗ ಅದುವೇ ಸ್ಥಾಪಿಸಿದ ಮತಾಂಧತೆಗೆ ಬಲಿಯಾಗುತ್ತಿರುವುದನ್ನು ವಿಷಾದದಿಂದ ನೋಡುತ್ತೇವೆ ನಾವು.

ಅಮೇರಿಕಾ ಮಾಡಿದ್ದನ್ನೇ ನೋಡಿ.ಜುಲ್ಫಿಕರ್ ಆಲಿ ಭುಟ್ಟೋ ಯಾವಾಗ ಅಫ್ಘಾನಿಸ್ಥಾನದ ನೆಲೆಯ ಮೇಲೆ ಕಣ್ಣಿಟ್ಟನೋ ಅಮೇರಿಕಾ ಜಿಯಾ-ಉಲ್ ಹಕ್ ನ ನ ಕೈಗೆ ಬಂದೂಕು ಕೊಟ್ಟಿತು.ಏನಾಗುತ್ತಿದೆ ಎಂದು ಗೊತ್ತಾಗುವ ಮೊದಲೇ ಭುಟ್ಟೋ ಗಲ್ಲು ಕಂಬದಲ್ಲಿ ತೂಗಾಡುತ್ತಿದ್ದ.ಆದರೆ ಆಗ ಅವನ ಮಗಳಿದ್ದಳಲ್ಲ ;ಅವಳನ್ನು ಅಮೇರಿಕಾ ಚೆನ್ನಾಗಿ ನೋಡಿಕೊಂಡಿತು. ಜೈಲಿನಲ್ಲಿ ಕೊಳೆಯುತ್ತಿದ್ದ ಅವನ ಮಗಳು ಬೆನಜೀರ್‌ಗೆ ಆಗ ಹಸಿ ಹಸಿ ೨೭ ವರ್ಷ ವಯಸ್ಸು.ಜಿಯಾ ಉಲ್ ಹಕ್ ಮನಸ್ಸು ಮಾಡುತ್ತಿದ್ದರೆ ಒಂದೇ ಏಟಿಗೆ ಆ ಹುಡುಗಿಯನ್ನೂ ಫಿನಿಶ್ ಮಾಡಬಹುದಿತ್ತು. ಆದರೆ ಆತ ಮಾಡಲಿಲ್ಲ. ಕಾರಣ ಆತ ಈ ಹುಡುಗಿ ಕೂಡಾ ಸೀದಾ ಸೀದಾ ಮುಗಿದೇ ಹೋಗುತ್ತಾಳೆ ಎಂದು ಲೆಕ್ಕ ಹಾಕಿದ್ದ.ಮಾತ್ರವಲ್ಲ ಮೂಲಭೂತವಾದಿ ಇಸ್ಲಾಂ ವರ್ತುಲವನ್ನು ಪಾಕಿಸ್ತಾನದ ಸುತ್ತಾ ಸುತ್ತುತ್ತಿದ್ದ ಆತನಿಗೆ ಇಸ್ಲಾಂ ಧಾರ್ಮಿಕ ಜಗತ್ತಿನಲ್ಲಿ ಈ ಹುಡುಗಿ ಚಿಗುರುವುದು ಸಾಧ್ಯವೇ ಇಲ್ಲ ಎಂಬ ಅಭಿಪ್ರಾಯವಿತ್ತು.ಅಮೇರಿಕಾಕ್ಕೂ ಜಿಯಾನಿಗೆ ಅಷ್ಟೇ ಅರ್ಥವಾದರೆ ಸಾಕು ಎಂದನಿಸಿತ್ತು.

ಇಂದಲ್ಲ ನಾಳೆ ಜಿಯಾನಿಗೆ ಪ್ರತಿಯಾಗಿ ಬೆನಜೀರ್ ಬೇಕೇ ಬೇಕಾಗುತ್ತದೆ ಎಂದು ಅಮೇರಿಕಾ ಕ್ಕೆ ಗೊತ್ತಿತ್ತು.ಆಮೇಲೆ ಬೆನಜೀರ್ ಜೈಲಿಂದ ಬಿಡುಗಡೆಯಾದದ್ದು,ದೇಶ ತೊಲಗಿದ್ದು, ಮತ್ತೆ ಬಂದದ್ದು ಎಲ್ಲಾ ಈಗ ಇತಿಹಾಸ. ಬೆನಜೀರ್ ಜೈಲಿಂದ ಸೀದಾ ದೇಶ ತೊರೆದು ಹೋದಾಗಲೂ ಪಾಕಿಸ್ತಾನದ ಇಸ್ಲಾಂ ಮನಸ್ಸು ಜಿಯಾ ನ ಥರಾನೇ ಯೋಚಿಸಿತು. ಆಮೇಲೆ ೩೬ನೇ ವಯಸ್ಸಿಗೆ ಬೆನಜೀರ್ ಪ್ರಧಾನಿಯಾದಳು.ಮುಸ್ಲಿಂ ದೇಶದಲ್ಲಿ ಮಹಿಳೆಯೊಬ್ಬಳು ಪ್ರಧಾನಿಯಾದದ್ದು ಅದೇ ಮೊದಲು.ಬುರ್ಖಾದೊಳಗೆ ಮಹಿಳೆಯನ್ನು ಕೂರಿಸುವ ಇಸ್ಲಾಂ ಪಾಕಿಸ್ತಾನದಲ್ಲಿ ಬೆನಜೀರ್ ಳನ್ನು ಸ್ವೀಕರಿಸಿತ್ತು ಎಂದರೆ ಅದಕ್ಕೆ ಬೇರೆ ಬೇರೆ ಕಾರಣಗಳಿದ್ದವು.ಇಪ್ಪತ್ತೇ ತಿಂಗಳು.ಯಾವುದೋ ನೆಪ ಹೂಡಿ ಬೆನಜೀರ್‌ಳನ್ನು ದಬ್ಬಲಾಯಿತು. ಕಾರಣ ಮತ್ತೆ ಇಸ್ಲಾಂ ಮನಸ್ಸು ಬೆನಜೀರ್ ಳನ್ನು ಒಪ್ಪಿಕೊಳ್ಳುವ ಸ್ಥಿತಿಯಲ್ಲಿರಲಿಲ್ಲ.ಆದರೆ ಮತ್ತೊಮ್ಮೆ ಚುನಾವಣೆಯಲ್ಲಿ ಆಕೆ ಗೆದ್ದಳು.ಪ್ರಧಾನಿಯಾದಳು. ಭ್ರಷ್ಠಾಚಾರ ಮೈಮೇಲೆ ತುಂಬಿಸಿಕೊಂಡಳು. ಗಂಡ ಮತ್ತು ಕುಟುಂಬಿಕರು ಬಾಚಿಕೊಂಡು ಉಂಡಾಗ ಆಕೆ ಏನನ್ನೂ ಮಾಡದೇ ಕುಳಿತಳು.ಇಡೀ ಪಾಕಿಸ್ತಾನ ಧರ್ಮಾಂಧತೆ, ಬಡತನಗಳಿಂದ ನರಳುತ್ತಿದ್ದಾಗ, ಬೆನಜೀರ್ ತನ್ನ ಬ್ರಿಟನ್ ಇಂಗ್ಲೀಷ್ ಮಾತನಾಡುತ್ತಾ ಯುರೋಪ್ ದೇಶಗಳಲ್ಲಿ ಮನೆ ಮಂದಿರ ಕಟ್ಟಿಸಿಕೊಂಡು ಕುಳಿತಳು. ಕಾರಣ ಅವಳಿಗೂ ಗೊತ್ತಿತ್ತು, ಇದೇ ಮುಕ್ತಾಯ ಅಲ್ಲ ಎಂಬುದು.

ಮುಂದಿನದ್ದು ನವಾಬಶರೀಫರ ಯುಗ.ಅದೂ ಡಿಟ್ಟೋ.

ಕೊನೆಗೊಮ್ಮೆ ಮುಶ್ರಫ್ ಯುಗಾರಂಭ.

ಮುಶರಫ್ ಪಾಕಿಸ್ತಾನ ಪ್ರೆಸಿಡೆಂಟ್- ಇನ್- ಯುನಿಫಾರಂ ಆದ ಹೊತ್ತಿಗೆ ಜಗತ್ತು ಸಾಕಷ್ಟು ಬದಲಾಗಿತ್ತು.ಮತ್ತು ದಿನೇ ದಿನೇ ಜಗತ್ತು ಬದಲಾಗುತ್ತಿತ್ತು.ಇಸ್ಲಾಂ ಭಯೋತ್ಪಾದನೆ ಯಾವ ಪರಿ ಬೆಳೆಯಿತು ಎಂದರೆ ಅಮೇರಿಕಾ ಕ್ಕೆ ಅಮೇರಿಕಾವೇ ಇಂದಿಗೂ ಅದರೆದುರು ಸುಣ್ಣ ಸುಣ್ಣವಾಗುತ್ತಲೇಇದೆ.ಅಲ್ ಖೈದಾ ದ ಬೇರು ಪಾಕಿಸ್ತಾನದಲ್ಲೇ ಇದೆ ಎಂದು ಅಮೇರಿಕಾಗೆ ಗೊತ್ತಿದೆ. ಆದರೆ ಇಂದಿಗೂ ಮುಶ್ರಫ್ ಹಾಗೇನೂ ಇಲ್ಲಾ ಎಂದು ತೋರಿಸಲು ಪಾಡುಪಡುತ್ತಿದ್ದಾನೆ.

ಅಮೇರಿಕಾ ತನ್ನ ಜೊತೆ ಇರಬೇಕು ಎಂದು ಪಾಕಿಸ್ತಾನ ಸದಾ ಬಯಸುತ್ತಿರುವುದು ಈ ಹೈಡ್ ಔಟ್ ಮಾನಸಿಕತೆಗಾಗಿ ಮತ್ತು ಭಾರತ ವಿರೋಧಿ ಅದರ ವಿಕ್ಷಿಪ್ತತೆಗಾಗಿ.ಅಮೇರಿಕಾವನ್ನು ತನ್ನ ದೋಸ್ತ್ ಮಾಡಿಕೊಂಡರೆ ಎಂದಾದರೊಮ್ಮೆ ಭಾರತವನ್ನು ಬಗ್ಗು ಬಡಿಯಬಹುದು ಎಂಬ ವಿಕಲಾಂಗ ಮನಸ್ಸು ಪಾಕಿಸ್ತಾನದ್ದು.ಈ ಎರಡು ಕಾಂಪ್ಲೆಕ್ಸ್‌ನಿಂದಾಗಿ ಅದು ತನ್ನನ್ನು ತಾನಾಗಿ ಅಮೇರಿಕಾಗೆ ಮಾರಿಕೊಂಡಿದೆ.

ಇದುವೇ ಅಲ್ ಖೈದಾ ದ ಸಿಟ್ಟಿಗೆ ಕಾರಣ.ಅಮೇರಿಕಾ ತಮ್ಮನ್ನು ತಮ್ಮವರಿಂದಲೇ ನಾಶಪಡಿಸುತ್ತಿದೆ ಎಂದು ಪಾಕಿಸ್ತಾನದ ಮುಸ್ಲಿಂ ಮೂಲಭೂತವಾದಿಗಳನ್ನು ಮೊದಲು ಟಚ್ ಮಾಡಿದೆ ಅಲ್ ಖೈದಾ. ಆ ಕ್ಯಾಂಪೈನ್ ಈಗ ದಿನಗಳೆದಂತೆ ಸುಡುಬಯಲ ಗಾಳಿಯಂತೆ ಹಬ್ಬಿ ಇಡೀ ಪಾಕಿಸ್ತಾನವನ್ನು ಆವರಿಸಿದೆ.ಇದು ಅಮೇರಿಕಾಗೆ ಗೊತ್ತಾಗುವುದಿಲ್ಲ ಎಂದರೆ ಹೇಗೆ?

ಮುಶ್ರಫ್ ಪಾಕಿಸ್ತಾನದಲ್ಲಿ ಯೂನಿಫಾರಂ ಏನು; ಚಡ್ಡಿ ಕಳಚಿ ನಿಲ್ಲುವಂತಾಗಿದ್ದಾನೆ ಎಂದು ಗೊತ್ತಾದದ್ದೇ ಅಮೇರಿಕಾ ಬೆನಜೀರ್ ಹೆಗಲಿಗೆ ಕೈ ಹಾಕಿದೆ.ಎರಡು ವರ್ಷಗಳ ಹಿಂದೆ ಇದೇ ಮುಶ್ರಫ್ ಫಾರಂನಲ್ಲಿದ್ದ. ಅಮೇರಿಕಾ ಆತನನ್ನು ಹೀರೋ ಎಂದು ಆದರಿಸುತ್ತಿತ್ತು.ಆಗ ಇದೇ ವಾಷಿಂಗ್ಟನ್‌ನಲ್ಲಿ ಬೆನಜೀರ್ ಒಂದು ಅಂತರರಾಷ್ಟ್ರೀಯ ಡಿನ್ನರ್ ಏರ್ಪಾಟು ಮಾಡಿದ್ದಳು.ಅದಕ್ಕೆ ಶ್ವೇತಭವನದ ಒಂದು ನೊಣ ಕೂಡಾ ಬರಲಿಲ್ಲ.ಈಗ ಮುಶ್ರಫ್ ವೀಕ್ ಆಗುತ್ತಿರುವುದು ಶ್ವೇತಭವನಕ್ಕೆ ಗೊತ್ತಾಗಿದೆ.ವಿಶ್ವಸಂಸ್ಥೆಯ ಅಮೇರಿಕಾ ರಾಯಭಾರಿ ಬೆನಜೀರ್ ಗಾಗಿ ತಾನೇ ತಾನು ಬಾಡೂಟ ಏರ್ಪಾಟು ಮಾಡಿದ್ದಾನೆ.ಊಟದ ಬಳಿಕ ವಿಮಾನದಲ್ಲಿ ಆಕೇನ ಕೂರಿಸಿಕೊಂಡು ಹಾರಾಡಿದ್ದಾನೆ.ಕಂಡೋಲಿನಾ ರೈಸ್ ಒಂದಲ್ಲ ಹತ್ತಲ್ಲ ನೂರು ಬಾರಿ ಬೆನಜೀರ್ ಗೆ ಫೋನ್ ಮಾಡುತ್ತಾಳೆ.ಮಧ್ಯ ರಾತ್ರಿ ಶ್ವೇತಭವನದ ಪ್ರತಿನಿಧಿ ಲಂಡನ್ ಗೆ ಓಡಿ ಬಂದು ಬೆನಜೀರ್ ಮೇಡಂಗೆ ಸಂದೇಶ ಒಪ್ಪಿಸುತ್ತಾನೆ.

೫೫ ವರ್ಷದ ಮೇಮ್‌ಸಾಬ್ ಇದ್ದಕ್ಕಿದ್ದಂತೆ ಅಮೇರಿಕಾದ ಗೆಳತಿಯಾಗಿದ್ದಾಳೆ.ಅದರಿಂದಾಗಿಯೇ ಅವಳ ಮೇಲೆ ತಾನೇ ಹೂಡಿದ್ದ ನೂರಾಇಪ್ಪತ್ತಕ್ಕೂ ಹೆಚ್ಚು ಕೇಸುಗಳನ್ನು ಮುಶ್ರಫ್ ಸಾಹೇಬರು ತಮ್ಮದೇ ಕೈಯಿಂದ ವಾಪಾಸು ತೆಗದುಕೊಳ್ಳುತ್ತಾರೆ. ಇವಳದ್ದೇ ದೇಶದಲ್ಲಿ ಇವಳಂಥದ್ದೇ ರೀತಿಯಲ್ಲಿ ಪ್ರಧಾನಿಯಾಗಿದ್ದ ನವಾಬಶರೀಫನಿಗೆ ಬಂದ ದಾರಿಯನ್ನು ಸೂರ್ಯಮುಳುಗುವ ಮೊದಲೇ ತೋರಿಸಿದ್ದ ಮುಶ್ರಫ್ ಅಮೇರಿಕಾ ಮಾಡಿದ ಪಂಚಾತಿಕೆಗೆ ದಂ..ದಂ ತೆಗೆಯಲಾರದೇ ಕೂರುತ್ತಾನೆ.

ಮಾತೆತ್ತಿದರೆ ಪಾಕಿಸ್ತಾನದಲ್ಲಿ ಪ್ರಜಾಸತ್ತೆಯನ್ನು ಮರಳಿತರಬೇಕು ಎಂದು ಮಾತಾಡುತ್ತಿದ್ದ ಮೇಡಂ ಡೆಮಾಕ್ರೆಸಿಗಿಂತ ಮೊದಲಾದದ್ದು ಟೆರರಿಸಂ ಎಂದು ಹೇಳಲು ಶುರುಮಾಡಿದ್ದಾಳೆ.

ದಟ್ ಈಸ್ ಅಮೇರಿಕಾ.

ಅಲ್‌ಖೈದಾ ಇದನ್ನೆಲ್ಲಾ ನೋಡುತ್ತಿದೆ.ಅಮೇರಿಕಾದ ಅಪ್ಪಣೆಗಳನ್ನೆಲ್ಲಾ ಹೊತ್ತುತಂದ ಆಕೆ, ಹುಟ್ಟಿದ ನೆಲದಲ್ಲಿ ಇಳಿದು ಹತ್ತುಲಕ್ಷ ಜನರ ರ್‍ಯಾಲಿಯಲ್ಲಿ ಹತ್ತು ಮೈಲಿ ಹೋಗುವುದರ ಮೊದಲೇ ೧೪ ಕಿಲೋ ಆರ್‌ಡಿಎಕ್ಸ್ ನ್ನು ಅದು ಉಡಾಯಿಸಿದೆ.ನೂರಾಐವತ್ತು ಜೀವಗಳು ಚಿಂದಿಯಾಗುತ್ತವೆ,ಐದು ಸಾವಿರಮಂದಿ ಬದುಕಿಯೂ ಸತ್ತಬಾಳಿಗೆ ಹೋಗುತ್ತಾರೆ.

ಬೆನಜೀರ್ ಇದನ್ನೆಲ್ಲಾ ಕಣ್ಣಾರೆ ನೋಡುತ್ತಾಳೆ.

ಅವಳು ಹಾಗೇ ನೋಡುವುದೇ ಅಲ್ ಖೈದಾದ ಅಜೆಂಡಾವಾಗಿತ್ತು.

ಇದೂ ಒಂದು ಸ್ಯಾಂಪಲ್ಲು ಅಷ್ಟೇ,ನಿಜವಾದ್ದು ಇನ್ನೂ ಬಂದಿಲ್ಲ,ಬರಲಿದೆ ಎಂಬ ತಣ್ಣಗಿನ ಸಂದೇಶವನ್ನು ಬೆನಜೀರ್ ಮೂಲಕ ಅಲ್ ಖೈದಾ ಅಮೇರಿಕಾಗೆ ರವಾನಿಸಿದೆ.

ಬೆನಜೀರ್ ಆಗಲಿ,ಮುಶ್ರಫ್ ಆಗಲಿ ಸಾಯುವುದು ಅಲ್ ಖೈದಾಕ್ಕೆ ಅಗತ್ಯವಿಲ್ಲ.ಅವರು ಸತ್ತರೆ ಮತ್ತೊಬ್ಬರನ್ನು ಅಮೇರಿಕಾ ತಯಾರಿಸುತ್ತದೆ ಎಂದು ಅದಕ್ಕೂ ಗೊತ್ತಿದೆ.

ಪಾಕಿಸ್ತಾನ ತಾನೇ ತಾನಾಗಿ ತನ್ನ ದುಶ್ಮನಿಗೆ ಕಳೆದುಹೋಗುತ್ತದೆ.

20071016

ನಾಲ್ಕು ಸಾಲು-17


೧.

ಆಕಾಶದ ಪ್ರೀತಿಗಾಗಿ

ಒಂದು ಪದ್ಯಬರೆದು

ಭೂಮಿಯ ಮೇಲಿಟ್ಟೆ.

ಗಾಳಿ ಅದನ್ನೆತ್ತಿ ಕೊಂಡೊಯ್ಯಿತು.

ಆಕಾಶಕ್ಕೆ ಆ ಪದ್ಯ ಸಿಗದಿದ್ದರೆ

ನನ್ನ ಪದ್ಯವ ಅಪ್ಪಿಕೊಳ್ಳುವೆಯಾ?೨.

ಕಣಿವೆಯಲ್ಲಿ

ಹುಲ್ಲು ತಿನ್ನುತ್ತಿದ್ದ ಕಡವೆ

ಕಾನನದ ಬೆಂಕಿಯನ್ನು

ಕಣ್ಣಲ್ಲೇ ಆರಿಸಿತು.೩.

ಒಂದು ಯುದ್ಧವನ್ನೂ ಮಾಡದ

ದೇಶದಲ್ಲಿ

ಪ್ರೀತಿ ಎಂದರೇನೆಂದು

ಗೊತ್ತಿಲ್ಲದ ಪ್ರಜೆಗಳೇಇರುವರು.೪.ಮುರುಕು ಕೋಟೆಯ ಹಾದಿಯಲ್ಲಿ

ಕಲ್ಲು ಹಾಸಿನ

ಮೇಲೆ ಬೆಳೆದ ಪಾಚಿ

ನೂರಾರು ಯುದ್ಧಮುಗಿದ ಮೇಲೆ

ರಾಜನ ನೆನಪು

ಹೊತ್ತುಕುಳಿತಿತು.

20071015

ಎಂಥಾ ಲೋಕವಯ್ಯಾ.. ಇದು ಎಂಥಾ ಲೋಕವಯ್ಯಾ..


ಇದು ಆಧುನಿಕ ಲೋಕ ..ಆಧುನಿಕ ಕಾಲ...

ಇಲ್ಲಿ ಎಲ್ಲಾ ಡಿಫರೆಂಟೇ.

ಹಳೆಯದು ಹಳೆಯದಾಯಿತು.ಹೊಸತು ತೀರಾ ನಮ್ಮದಾಯಿತು.

ಎಲ್ಲವನ್ನೂ ಗೆದ್ದವರು ತಾನೇ ನಾವು.ಏನ್ ಹಳೇ ಕಾಲದ ಗೊಡ್ಡುಗಳಲ್ಲವಲ್ಲಾ.ನಮ್ಮ ಸ್ಟೈಲೇ ಬೇರೆ.

೧.ನಮ್ಮದು ದೊಡ್ಡ ಮನೆ,ಮನೆಯಲ್ಲ ಬಂಗಲೋ..ಆದರೆ ನಾಲ್ಕು ಜನರೂ ಇಲ್ಲದ ಸಂಸಾರ.

೨.ಅಗಲ ರಸ್ತೆ. ರಸ್ತೆಯಲ್ಲ, ಹೆದ್ದಾರಿ.ಅದೂ ಅಲ್ಲ,ವೈಡರ್ ಫ್ರೀವೇ..ಆದರೆ ಸಣ್ಣ ವ್ಯೂ ಪಾಯಿಂಟ್.

೩.ನಾವು ತುಂಬಾ ಸ್ಪೆಂಡ್ ಮಾಡ್ತೇವೆ,ಆದರೆ ಉಳಿಸೋದು, ಇರೋದು ತುಂಬಾ ಕಡಿಮೆ.

೪.ನಾವು ತುಂಬಾ ಬೈ ಮಾಡ್ತೇವೆ ಆದರೆ ಅನುಭವಿಸೋದು ತೀರಾ ಕಡಿಮೆ.

೫.ನಮಗೆ ಅನುಕೂಲತೆಗಳು ಧಾರಾಳ ಇವೆ ಆದರೆ ಅನುಭವಿಸಲು ಸಮಯ ಮಾತ್ರಾ ಇಲ್ಲ.

೬.ನಮ್ಮ ಬಳಿ ಬೇಕಾದಷ್ಟು ಡಿಗ್ರೀಸ್ ಇವೆ ಆದರೆ ಆದರೆ ಸೆನ್ಸ್ ಮಾತ್ರಾ ಇಲ್ಲ.

೭.ಸಿಕ್ಕಾಪಟ್ಟೆ ನಾಲೇಜ್ ಇದೆ ಆದರೆ ನಿರ್ಧಾರ ಮಾತ್ರಾ ಇಲ್ಲ.

೮.ನಾವು ಭಾರೀ ಎಕ್ಸ್‌ಪರ್ಟ್ಸ್ ಜೊತೆಗೆ ಹೆಚ್ಚೆಚ್ಚು ಪ್ರಾಬ್ಲೆಂಸ್.

೯.ನಾವು ನಮ್ಮ ಪೊಸೆಶನ್ಸ್‌ನ ಮಲ್ಟಿಪಲ್ ಮಾಡಿಕೊಂಡೆವು ಹಾಗೇ ವ್ಯಾಲ್ಯೂಸ್‌ನ ಮೈನಸ್ ಮಾಡಿಕೊಂಡೆವು.

೧೦.ಹೇಗೆ ಜೀವಿಸೋದು ಅಂತ ನಮಗೆ ಚೆನ್ನಾಗಿ ಗೊತ್ತು ಆದರೆ ಬದುಕೋದು ಹೇಗೆ ಅಂತ ಗೊತ್ತೇ ಇಲ್ಲ.

೧೧.ಏನ್ ನಮ್ಮಲ್ಲಿ ಬೇಕಾದಷ್ಟು ಔಷಧಿಗಳಿವೆ ಮದ್ದು ಮಾತ್ರೆಗಳಿವೆ.ಹಾಗಂತ ಆರೋಗ್ಯ ಮಾತ್ರಾ ಇಲ್ಲ ಅಷ್ಟೇ.

೧೨.ನಾವು ವರ್ಷಗಳನ್ನು ಬದುಕಿಗೆ ಸೇರಿಸುತ್ತಾ ಹೋಗುತ್ತಿದ್ದೇವೆ ವಿನಃ ಬದುಕಿಗೆ ವರ್ಷಗಳನ್ನು ಸೇರಿಸಲಾರೆವು.

೧೩.ಸ್ಪೇಸನ್ನೇ ಗೆದ್ದ ಜನ ನಾವು ಆದರೆ ಎಂದೂ ನಮ್ಮೊಳಗಿನ ಸ್ಪೇಸನ್ನು ಮುಟ್ಟಲೇ ಇಲ್ಲ.

೧೪.ದೊಡ್ಡ ದೊಡ್ಡ ಕೆಲಸ ಮಾಡಿದ್ದೇವೆ ನಿಜ ಆದರೆ ಒಳ್ಳೆಯ ಕೆಲಸ ಮಾಡಲು ಆಗ್ತಾ ಇಲ್ಲ.

೧೫.ಗಾಳಿಯನ್ನೇ ಮಡಿ ಮಾಡಿದೆವು;ಆತ್ಮವನ್ನು ಮೈಲಿಗೆ ಮಾಡಿಟ್ಟೆವು.

೧೬.ನಮಗೆ ರಶ್ ಆಗೋದು ಗೊತ್ತು ವೈಟ್ ಮಾಡೋದು ಗೊತ್ತೇ ಇಲ್ಲ.

೧೭.ಕಂಪ್ಯೂಟರ್ ಗೊತ್ತು ಆದರೆ ಕಮ್ಯುನಿಕೇಶನ್ ಗೊತ್ತಿಲ್ಲ.

ನಮ್ಮ ಇ-ಕಾಲ ಎಂದರೆ,

೧೮.ದೊಡ್ಡ ಜನ ಮತ್ತು ಸಣ್ಣತನದ ಕಾಲ,

೧೯.ಫಾಸ್ಟ್ ಫುಡ್ಡು ಮತ್ತು ಸ್ಲೋ ಡೈಜೆಶನ್ ಕಾಲ,

೨೦.ಫಾನ್ಸಿ ಮನೆಗಳು ಮತ್ತು ಮುರಿದ ಮನೆತನಗಳ ಕಾಲ,

೨೧.ಇದು,ಕ್ವಿಕ್ ಟ್ರಿಪ್ಸ್,ಡಿಸ್ಪೊಸೆಬಲ್ ಡಯಾಪರಸ್,ತ್ರೋಅವೇ ಮೊರಾಲಿಟೀಸ್‌ಗಳ ಯುಗ.

೨೨.ಈ ಇ-ಕಾಲದಲ್ಲಿ ನಾಲ್ಕು ಮಾತ್ರೆಗಳು ಎಲ್ಲಾನೂ ಮಾಡುತ್ತವೆ;ಚೀಯರಪ್,ಕ್ವೈಟ್,ಆಂಡ್ ಕಿಲ್..

೨೩.ಈ ಇ- ಕಾಲದಲ್ಲಿ ಶೋರೂಮಲ್ಲೇ ಇಲ್ಲಾ ಇವೆ ಸ್ಟಾಕ್ ರೂಂ ಮಾತ್ರಾ ಭರ್ಜರಿ ಖಾಲಿ.

೨೪.ತುಂಬಾ ಬರೆಯುವವರು ನಾವು;ಕಲಿಯೋದು ಮಾತ್ರಾ ಕಮ್ಮಿ.(ನನ್ನ ಹಾಗೇ)

20071013

ವಾರವಾರ-೨


ಏನು ಮಾಡೋದು,ಇದೆಲ್ಲಾ ಅನಿವಾರ್ಯ.ಕಾಲವೇ ಹಾಗಾಗಿದೆ.

ಅದು ಹೌದು ಎಂದು ಒಪ್ಪುವಿರಾದರೆ ಇದನ್ನೂ ನೀವು ಒಪ್ಪಲೇ ಬೇಕು.

ನ್ಯೂಕ್ಲಿಯರ್ ಡೀಲ್.

ಸದ್ಯಕ್ಕೆ ಯಾರು ಯಾರಿಗೆ ತಗ್ಗಿದರೋ ಗೊತ್ತಾಗುತ್ತಿಲ್ಲ. ಆದರೆ ಕಮ್ಯುನಿಸ್ಟರಿಗೆ ಒಂದು ರಿಲೀಫ್‌ನ್ನು ಕಾಂಗ್ರೆಸ್ ತಾನೇ ತಾನಾಗಿ ಕೊಟ್ಟಿದೆ. ಇಲ್ಲದಿದ್ದರೆ ಈ ಎಡಗಳು ವಚನಭಂಗ ಮಾಡಿ ನಮ್ಮ ಕುಮಾರಸ್ವಾಮಿ ಥರ ಗೋಳೋ ಎಂದು ಅಳುತ್ತಾ ಕೂರಬೇಕಿತ್ತು. ಆಗಲೇ ಅಮೆರಿಕಾ ಜೊತೆ ೧೨೩ ಮಾತಾಡಬಾರದು ಎಂದೂ ಮಾತಾಡಿದರೆ ನಾವು ನಿಮ್ಮನ್ನು ದೂಡಿ ಹಾಕುತ್ತೇವೆಂದೂ ಈ ಎಡಗಳು ಹೇಳಿ ಸಿಕ್ಕಿ ಹಾಕಿಕೊಂಡಿದ್ದರು.ಮಾತ್ರವಲ್ಲ ಮೇಡಂ ಕೂಡಾ ಅಮೆರಿಕಾ ಯಾತ್ರೆಯ ಜೋಶ್‌ನಲ್ಲಿ ಈ ಎಡಗಳನ್ನು ದೇಶದ್ರೋಹಿಗಳೆಂದು ಬಹಿರಂಗವಾಗಿ ಬೈದೂ ಆಗಿತ್ತು. ಏನು ಮಾಡೋಣ ಸದ್ಯಕ್ಕೆ ಈ ದೇಶದ್ರೋಹಿಗಳ ಜೊತೆ ಇರುವುದೇ ಕಾಂಗ್ರಸ್ಸಿಗರಿಗೆ ತುಂಬಾ ಖುಶ್ ಇರಬೇಕು,ಇಲ್ಲದಿದ್ದರೆ ಅದು ಹೇಗೆ ಸದ್ಯಕ್ಕೆ ೧೨೩ ದೂರ ಇಡುವ ಮಾತನ್ನು ಮೇಡಂ ಮತ್ತು ನಮ್ಮ ಯೆಸ್ ಪ್ರೈಂಮಿನಿಸ್ಟರ್ ಮಾತಾಡಿದರೋ?

ಒಬ್ಬರ ಬೆನ್ನು ಒಬ್ಬರು ತುರಿಸುತ್ತಿರೋ ರಾಜಕಾರಣ ಎಂದರೆ ಇದೇ.ಎಡಗಳಿಗೂ ಈಗ ದುಡ್ಡು ಮಾಡೋ ಸುಪರ್ವ. ಕಾಂಗ್ರೆಸ್ಸಿಗರಿಗೂಎಡಗಳಿದ್ದರೆ ಮಾತ್ರಾ ಅಧಿಕಾರ ಮತ್ತು ಅಧಿಕಾರ ಇದ್ದರೆ ಮಾತ್ರಾ ದುಡ್ಡು.

ಇದೇನು ಕಾಂಗ್ರೆಸ್ಸಿಗರಿಗೆ ಮಾತ್ರಾ ಮೀಸಲಾದ ಘೋಷವಾಕ್ಯವೇನಲ್ಲ.

ಇರಲಿ,

ನೀರು, ಗಾಳಿ ಅಥವಾ ಮಸಿಯಿಂದ ವಿದ್ಯುತ್ ತರೋ ಕಾಲ ಎಂದೋ ಹೊರಟುಹೋಗಿದೆ.ಈಗ ಏನಿದ್ದರೂ ಅಣು,ಪರಮಾಣು.ಒಂದು ಅಣು ಬೀಜವನ್ನು ಅದರ ಮೂಲ ಗುಣವಾದ ಒಡೆಯುವ ಕ್ರಿಯೆಯಲ್ಲಿ ತಾನೇ ತಾನಾಗಿ ತೊಡಗಿಸಿಬಿಟ್ಟಾಗ ಅದು ನಿರಂತರ ಒಡೆಯುತ್ತಾ ಒಡೆಯುತ್ತಾ ಶಕ್ತಿಯ ಸಾನ್ನಿಧ್ಯವೇ ಆಗಿ ಅಪಾರ ಶಕ್ತಿಯನ್ನು ಬಿಟ್ಟುಕೊಡುತ್ತಿದ್ದರೆ ,ನಮ್ಮ ತಾಂತ್ರಿಕತೆ ಬಳಸಿ ಅದನ್ನು ಎತ್ತಿಕೊಂಡರೆ ಅದು ನಮ್ಮದು.ಇದುವೇ ಅಣು ವಿದ್ಯುತ್.

ಸರಳವಾಗಿದೆ ಎಂದು ತೋರುತ್ತಿದ್ದರೂ ಇದಕ್ಕೆ ಅಪಾರ ತಾಂತ್ರಿಕತೆ ಬೇಕು.ಅದು ಹಿಂದಿನಿಂದಲೂ ಇತ್ತು. ನಾವು ಭಾರತೀಯರು ಹೋಮಿಬಾಬಾ ಹೇಳುತ್ತಿದ್ದಾಗಲೇ ಅಣು ವಿದ್ಯುತ್ ಕುರಿತು ಮುಂದಾಗಿದ್ದರೆ ಈಗ ಈ ಪರಿ ಕತ್ತಲಿನಲ್ಲಿ ಕೂರಬೇಕಿರಲಿಲ್ಲ.ಫ್ರಾನ್ಸ್ ಕೂಡಾ ೬೦ರ ದಶಕದಲ್ಲೇ ನಮ್ಮಂತೆ ಅಣು ವಿದ್ಯುತ್ ಕುರಿತು ಚಿಂತಿಸಿದೆ.ಅದು ಮಾತ್ರಾ ನಮ್ಮ ಥರ ಅದೂ ಇದೂ ಎಂದು ಅತ್ತಿತ್ತ ನೋಡುತ್ತಾ ಬಾಕಿಯಾಗಲಿಲ್ಲ.ವಿದ್ಯುತ್ ಬೇಕು ಮತ್ತು ಅದಕ್ಕಾಗಿ ಏನಾದರೂ ಮಾಡಲೇಬೇಕಲ್ಲ ಎಂಬ ಸತ್ಯದ ಬೆನ್ನು ಹತ್ತಿದ ಫ್ರಾನ್ಸ್‌ನಲ್ಲಿ ಇಂದು ಶೇ.೮೦ರಷ್ಟು ವಿದ್ಯುತ್ ನ್ಯೂಕ್ಲಿಯರ್ ಶಕ್ತಿಯಿಂದಲೇ ದೊರೆಯುತ್ತಿದೆ ಮತ್ತು ಅಲ್ಲಿ ಶಕ್ತಿಯ ಕೊರತೆಯೇ ಇಲ್ಲ.

೭೦ರದಶಕದಲ್ಲೂ ನಾವು ಇದೇ ಥರ ಹಿಂದೆ ಮುಂದೆ ನೋಡಿದೆವು.ಎನ್.-ಪವರ್ ನಮ್ಮ ಕಾಲ ಬಳಿ ಬಂದಾಗಲೂ ನಾವು ಡಂಕಿದೆವು.ಆಗೇನಾದರೂ ಎಡವಟ್ಟು ಮಾಡದೇ ಇರುತ್ತಿದ್ದರೆ ಈಗ ನಮ್ಮ ಬಳಿ ವಿದ್ಯುತ್ ಮಿಗತೆ ಇರುತ್ತಿತ್ತು.ನಮ್ಮ ರಾಜಕಾರಣ ಆಗಲೂ ಈಗಿನಂತೆ ತೆವಳಿತು.ಬೆನ್ನೆಲುಬೇ ಇಲ್ಲದ ಹಾಗೇ.

ನಮ್ಮ ಮೊದಲ ರಿಯಾಕ್ಟರ್ ತಾರಾಪುರ.ಅದು ರೂಪುಗೊಂಡದ್ದೇ ಅಮೆರಿಕಾದ ನೆರವಿಂದ.ಕಾಂಡೂ ರಿಯಾಕ್ಟರ್‌ನಲ್ಲಿ ಅಮೆರಿಕಾ ನೆರವು ನಮಗೆ ಬೇಕಿರಲಿಲ್ಲ.ಏಕೆಂದರೆ ಆಗ ನಾವು ಯಾರೆಂದು ಜಗತ್ತಿಗೆ ಗೊತ್ತಾಗಿತ್ತು.ಆದರೆ ಈ ಅಮೆರಿಕಾ ಎಂಥಾ ಗುಳ್ಳೆನರಿ ಎಂದರೆ ತಾರಾಪುರ ಓಬಿರಾಯನ ಕಾಲದ ರಿಯಾಕ್ಟರ್ ಆಗಿರುವಂತೆ ಅದು ಚೆನ್ನಾಗಿ ನೋಡಿಕೊಂಡಿತು. ಇಂದಿಗೂ ತಾರಾಪುರ್ ನಲ್ಲಿ ಆಧುನಿಕ ತಾಂತ್ರಿಕತೆ ಇಲ್ಲ.ಅಣು ಶಕ್ತಿ ವಿಚಾರದಲ್ಲಿ ಹೆವಿವಾಟರ್,ರೆಪ್ರೊಸ್ಸೆಸಿಂಗ್,ಎನ್ರಿಚ್ಚ್ಮೆಂಟ್,ಫಾಸ್ಟ್ ಬ್ರೀಡರ್,ಎಂಬೆಲ್ಲಾ ಪ್ಲಾಂಟ್,ರಿಯಾಕ್ಟರ್ ತಾಂತ್ರಿಕತೆ ಬಂದದ್ದೇ ರಶ್ಯಾ,ಫ್ರಾನ್ಸ್ ಗಳು ನಮಗೆ ಕೈಜೋಡಿಸಿದ್ದರಿಂದ.

೧೯೭೪ ರಲ್ಲಿ ನಾವು ಮೊದಲ ಬಾರಿಗೆ ಅಣು ಶಕ್ತಿ ಪರೀಕ್ಷೆ ಮಾಡಿದೆವಲ್ಲಾ, ಆಗ ಅಮೆರಿಕಾ ಕೈ ಕೊಟ್ಟಿತು. ತಾರಾಪುರ ರಿಯಾಕ್ಟರ್‌ನಲ್ಲಿ ಕಾಫಿಬೀಜ ಹುರಿಯಬೇಕಿತ್ತು.ಆಗ ರಶ್ಯಾ ಯುರೇನಿಯಂ ಕಳುಹಿಸಿತು.ನಮ್ಮ ಶಕ್ತಿ ಬೆಳೆಯಿತು.ಈಗ ರಶ್ಯಾ ಯುರೇನಿಯಂ ತರೋದು ಆಸ್ಟ್ರೇಲಿಯಾದಿಂದ.ಆದರೂ ನಮ್ಮನ್ನು ಅದು ದೂರ ಇಟ್ಟಿಲ್ಲ.ಎನ್.-ಡೀಲ್ ನಲ್ಲಿರುವ ಹಕೀಕತ್ತೇ ಅದು.ಅಮೇರಿಕಾದ ಜೊತೆ ನಾವೀಗ ಐಎಇಎ/ಎನ್‌ಎಸ್‌ಜಿ ಒಪ್ಪಂದ ಮಾಡಿಕೊಂಡರೆ ನಾವು ರಶ್ಯಾದ ಬಳಿಗೆ ಈ ವಿಚಾರದಲ್ಲಿ ಹೋಗುವಂತಿಲ್ಲ.ಅಮೆರಿಕಾಕ್ಕೆ ಇನ್ನೂ ರಶ್ಯಾದ ಮೇಲಿನ ಕೋಪ ಹೋಗಿಲ್ಲ.

ಅದಕ್ಕೇ ಎಡಗಳು ಈ ಕ್ಯಾತೆ ತೆಗೆದಿರೋದು.ಎಷ್ಟಾದರೂ ರಶ್ಯಾದಲ್ಲಿ ಮಳೆ ಬಂದರೆ ಇಂಡಿಯಾದಲ್ಲಿ ಕೊಡೆ ಬಿಡಿಸೋ ಜನ. ಸುಮ್ಮನಿರುತ್ತಾರಾ?

ಇಷ್ಟೆಲ್ಲಾ ಆದರೂ ನಮಗೆ ವಿದ್ಯುತ್ ಬೇಕೇ ಬೇಕು ಹಾಗಾಗಿ ಅಣುಶಕ್ತಿ ಬೇಕು ಹಾಗಾಗಿ ಅಮೆರಿಕಾ ಬೇಕು ಮತ್ತು ಅಮೇರಿಕಾ ಬೇಕೇಬೇಕು..

ನೀವು ನೋಡ್ತಾ ಇದ್ದೀರಲ್ಲ ಈ ಕಂಪ್ಯೂಟರ್ ಇದರ ಸಿಪಿಯು,ಸಾಫ್ಟ್‌ವೇರ್,ವಿಂಡೋಸ್ ಎಕ್ಸ್‌ಪ್ಲೋರ್ ಎಲ್ಲಾ ಅಮೇರಿಕಾದಿಂದಲೇ ತಂದದ್ದು.ಒಂದಾದರೂ ರಶ್ಯಾದ ಕಂಪ್ಯೂಟರ್ ಅಥವಾ ಅಂಥದ್ದೊಂದು ನಮ್ಮತ್ರ ಇದ್ದರೆ ಹೇಳಿ..ಯಾರಾದರೂ ಅಮೇರಿಕಾಗೆ ಹೋಗುವ ಹಾಗೇ ರಶ್ಯಾಕ್ಕೆ ಹೋಗುತ್ತಾರಾ?

ಕೊನೆಗೂ ಸರಕಾರ ಉಳಿಯಲಿ ಬೀಳಲಿ ಅಣುಶಕ್ತಿಯ ಬೆನ್ನು ಹಿಡಿಯಲೇ ಬೇಕು..ಅಲ್ಲಿ ನಮ್ಮತನವೆಂಬ ಮಡಿಯಾಗಲಿ,ಅಮೇರಿಕಾ ಎಂಬ ಮೈಲಿಗೆಯಾಗಲಿ ಸಾಧ್ಯವೇ ಇಲ್ಲ.

20071011

ಪಾಪ! ಪುಣ್ಯ


ಜಾತಸ್ಯ ಮರಣಂ ಧ್ರುವಂ-- ಎಂದಾಗ ಈ ಮಾತು ನನಗಲ್ಲ ಎಂಬ ಜಾಣಕಿವುಡು ಯಾಕೋ ಆವರಿಸುತ್ತದೆ.

ನಮಗೆ ಚೆನ್ನಾಗಿ ಗೊತ್ತಿದೆ ನಾವು ಒಂದು ದಿನ ಸಾಯುತ್ತೇವೆ ಎಂಬುದು. ಆದರೂ ಬದುಕಲು ಕಸರತ್ತು ಮಾಡುತ್ತಾ ಉಳಿಯುತ್ತೇವೆ. ಸಾವು ನಮ್ಮನ್ನು ಆವರಿಸುವುದಾಗಲಿ,ಅಪ್ಪಿಕೊಳ್ಳುವುದಾಗಲಿ ನಮಗೆ ಇಷ್ಟವೇ ಇರದಿದ್ದರೂ ಒಂದಲ್ಲ ಒಂದು ಬಾರಿ ಮತ್ತು ಒಂದೇ ಒಂದು ಬಾರಿ ಆ ಆಲಿಂಗನ ಅನಿವಾರ್ಯವೇ ಹಾಗೂ ಅದು ಅಂತಿಮವೇ.

ಸಾವಿನ ನಂತರ ಏನು ಎಂದರೆ ಸಾವನ್ನು ಕಂಡು ಬಂದವರು ಯಾರೂ ಇಲ್ಲದೇ ಇರುವುದರಿಂದ ಎಲ್ಲಾ ಊಹಾಪೋಹಗಳ ಮೇಲೆ ನಾವು ವ್ಯಾಖ್ಯಾನ ಮಾಡಬೇಕು. ಒಬ್ಬ ಸತ್ತ ನಂತರ ಮತ್ತೆ ಹುಟ್ಟುತ್ತಾನೆ ಎಂಬ ಪುನರ್ಜನ್ಮದ ನಂಬಿಕರೂ, ಇಲ್ಲಿಲ್ಲ ಸಾವಿನ ನಂತರ ಏನೂಇರಲ್ಲ, ದಾಟ್ಸ್ ದ ಎಂಡ್ ಎಂಬ ಅಂತಿಮವಾದಿಗಳೂ ನಮ್ಮಂಥ ಸಂಶಯಾತ್ಮರನ್ನು ಮತ್ತಷ್ಟು ಗೊಂದಲಮಾಡಿ ಹಾಕಿದ್ದಾರೆ.

ಏನೇ ಇರಲಿ ಇದ್ದಾಗ ಚೆನ್ನಾಗಿದ್ದರಾಯಿತು ಎಂದು ಬದುಕೋಣವೇ?

ವೆರಿ ಗುಡ್.ಅಷ್ಟು ಸಾಕು.

ಚೆನ್ನಾಗಿ ಬದುಕೋಣ ಎಂದರೆ ಹೇಗೆ?

ನಾನು ನನ್ನಿಷ್ಟ ಅಂತ ಬದುಕಿದರೆ ಅದು ಸರಿಯೇ ಅಥವಾ ಅಪ್ಪ ಹೇಳಿದಂತೆ ಬದುಕೋಣವೇ ಅಥವಾ ಸಮಾಜ ತಿಳಿಸಿದಂತೆ ಬದುಕುವುದೇ ಅಥವಾ ಶಾಸ್ತ್ರ ಬರೆದಂತೆ ಬದುಕಿದರಾಯಿತಾ ಅಥವಾ ಯಾರು ಹೇಳಿದಂತೆ ಬದುಕೋಣ?ಯಾರಿಗಾಗಿ ಬದುಕೋಣ ಮತ್ತು ಯಾರುಹೇಳಿದಂತೆ ಬದುಕುತ್ತಿರೋಣ?ಅಲ್ಲಿದಿಷ್ಟು,ಇಲ್ಲಿಂದಿಷ್ಟು ಕೇಳಿ,ಕದ್ದು ನೋಡಿ ,ಕಲಿತು ಬದುಕಿದರೆ ಹೇಗೆ?ಪಾಪ ಮಾಡೋಣವೇ?

ಅಥವಾ ಪುಣ್ಯ ಮಾಡೋಣವೇ?

ಎರಡೂ ಮಾಡುತ್ತಾ ಇದ್ದರೆ ಹೇಗೆ?ಪಾಪ ಅಂದರೆ ಯಾವುದು?ಗುಂಡು ಹಾಕಿದರೆ ಪಾಪ ಆಗುತ್ತದಾ?ಇಂಡಿಯಾದಲ್ಲಿ ಹೊಳೆಯಲ್ಲಿ ಮಿಂದರೆ ಪಾಪ ಹೋಗುತ್ತದೆ ಎಂದಾದರೆ ಅಮೆರಿಕಾದಲ್ಲಿ ಮಿಂದರೂ ಹೋಗಬೇಕಲ್ಲ, ಐಸ್‌ಲ್ಯಾಂಡ್‌ನಲ್ಲಿ ಗುಂಡುಹಾಕದೇ ಇರಲು ಸಾಧ್ಯವೇ ಇಲ್ಲವಂತೆ,ಅಂದ ಮೇಲೆ ಇಂಡಿಯಾದಲ್ಲಿ ಪಾಪ ಆಗೋದು ಅಲ್ಲಿ ಪುಣ್ಯ ಆಗುವುದು ಹೇಗೆ?ಕರ್ನಾಟಕದಲ್ಲಿ ಬ್ರಾಹ್ಮಣರು ಚಿಕನ್ ಫಿಶ್ ತಿಂದರೆ ಮಹಾ ಪಾಪ.ಆದರೆ ಬೆಂಗಾಲಿ ಬ್ರಾಹ್ಮಣರ ಮೇನ್ ಫುಡ್ಡೇ ಮೀನು ಅಂದರೆ ಅವರು ಪಾಪಿಗಳಾ?ಒಬ್ಬರನ್ನು ನೋಯಿಸಿದರೂ ಅದು ಪಾಪವಂತಾದರೆ,ಆ ಟೆರರಿಸ್ಟ್‌ಗಳಿದ್ದಾರಲ್ಲ,ಅವರ ಪಾಪವನ್ನು ಎಲ್ಲಿ ತುಂಬಿಡೋದು?ನೂರಾಐವತ್ತು ಕೊಲೆ ಮಾಡಿದವರು ಆರಾಮವಾಗಿ ಮಂತ್ರಿ ಆಗಿರುತ್ತಾರಲ್ಲಾ,ಅವರ ಪಾಪ ಏನಾಯಿತು? ಅವರಿಗೆ ಅದು ಹೇಗೆ ಮಂತ್ರಿಯಾಗೋ ರಾಜಯೋಗ ಬಂತು?

ಈ ರೀತಿ ಪಾಪ ಪುಣ್ಯ ಬಗ್ಗೆ ಯೋಚಿಸುತ್ತಾ ಏನಿದು ಪಾಪ ಏನಿದು ಪುಣ್ಯ ಏನಿದು ಏನಿದು ಅಂತ ಮತ್ತಷ್ಟು ಯೋಚಿಸುತ್ತೇನೆ.

ಪಾಪಪರಿಹಾರ ಮಾಡುವುದು ಎಂದು ದೇವಸ್ಥಾನ ಸುತ್ತೋದು, ಪೂಜಾ ಹೋಮಾ ಮಾಡಿಸೋದು,ತಲೆ ಬೋಳಿಸೋದು,ಹುಂಡಿ ಹಾಕೋದು,..ಸರಿ,ಪಾಪವೇನೋ ಕಳೆಯಿತು ಎಂದರೆ ಪುಣ್ಯ ಅಲ್ಲಿಗೆ ಬಂದು ತುಂಬುತ್ತದಾ?

ಪಾಪ ಕಳೆದರೆ ಪುಣ್ಯ ತುಂಬುವುದಾದರೆ ಮೊದಲಾಗಿ ಪಾಪಿಯಾಗಿ ಮಜಾ ಮಾಡಿ ಆಮೇಲೆ ನಿವಾರಣಾ ಮಾಡಿ ಪುಣ್ಯವಂತರಾಗೋದು ಸುಖವಲ್ಲವೇ..

ಆಗ ಒಬ್ಬರು ಬಂದು ಹೇಳಿದರು..

"ಎರಡನ್ನೂ ಮಾಡಬಾರದು,ಪಾಪ ಮತ್ತು ಪುಣ್ಯ."

ಪಾಪವನ್ನು ಹೇಗೆ ಮಾಡಬಾರದೋ ಹಾಗೇ ಪುಣ್ಯವನ್ನೂ ಮಾಡಬಾರದು.

ಪಾಪ ಮಾಡುತ್ತಾ ಮಾಡುತ್ತಾ ಪಾಪಿಯಾಗುತ್ತಾ ಹೇಗೆ ಪತನ ಆಗುವೆಯೋ ಹಾಗೇ ಪುಣ್ಯ ಸಂಪಾದಿಸುತ್ತಾ ಸಂಪಾದಿಸುತ್ತಾ ಪುಣ್ಯವಂತನಾಗುತ್ತಾ ಕಳೆದುಹೋಗುತ್ತೀಯಾ..ಎಂದರು.

ಮತ್ತೆ ಹುಟ್ಟಬಾರದು ಎಂದರೆ ಪುಣ್ಯ ಮಾಡಬೇಡ,ಪುಣ್ಯ ಮಾಡಿದವನು ಮತ್ತೊಂದು ಜನ್ಮತಾಳಲೇ ಬೇಕು ಏಕೆಂದರೆ ಅವನು ಪುಣ್ಯದ ಗಂಟನ್ನು ಅನುಭವಿಸಲೇಬೇಕು.ಪುಣ್ಯ ಸಂಪಾದಿಸಿಟ್ಟು ಸತ್ತವನಿಗೆ ಆ ಪುಣ್ಯವನ್ನು ಮುಂದಿನ ಜನ್ಮದಲ್ಲಿ ಅನುಭವಿಸುವ ಋಣ ಉಳಿದುಬಿಡುತ್ತದೆ.ಆದ್ದರಿಂದ ಪಾಪವನ್ನು ಹೇಗೆ ನಿವಾರಿಸುವೆಯೋ ಹಾಗೇ ಪುಣ್ಯವನ್ನೂ ಕಳೆದುಕೋ..

ಪುಣ್ಯವನ್ನು ಕಳೆಯೋದು ಹೇಗೆ ಎಂದರೆ ..?

ಸಿಂಪಲ್,

ನಿನ್ನನ್ನು ನೀನು ಕಳೆದುಕೊಂಡರಾಯಿತು..ಅಷ್ಟೇ..

ನನ್ನನ್ನು ನಾನು ಕಳೆದುಕೊಳ್ಳುವುದು ಪಾಪಿಗೆ ಸುಲಭ, ಪುಣ್ಯವಂತನಿಗೆ ಕಷ್ಟ''-ಎಂದು ಹೇಳಿದ ಅವರು, "ಮತ್ತೊಮ್ಮೆ ಸಿಗುತ್ತೇನೆ,ಉಳಿದ ವಿಚಾರ ಆಮೇಲೆ ವಿವರವಾಗಿ ಹೇಳುತ್ತೇನೆ" ಎಂದು ಹೊರಟೇಹೋದರು.

ಅವರು ಮತ್ತೆ ಬರುವ ತನಕ ಕಾಯಬೇಕು.

20071010

ನಾಲ್ಕು ಸಾಲು-16


೧.

ಕತ್ತಲಿನ

ಗುಹೆಯೊಳಗೆ

ಕಣ್ಣುಚ್ಚಿ ಕುಳಿತ

ತಪಸ್ವಿ

ಮನಸ್ಸನ್ನು ಬಂಧಿಸಿ

ದೇವರನ್ನು ಪ್ರೀತಿಸಿದ

ಅಚ್ಚರಿಯಲ್ಲವೇ?


೨.ಮಳೆ

ಬಂದು ಹೋದ ನೆನಪಿಗೆ

ಬಿಸಿಲು

ಬಣ್ಣದ ಶಾಲನ್ನು

ಬಾನಿಗೆ ತೊಡಿಸಿ ಮರೆಯಾಯಿತು.೩.

ಅವಳು

ಕಾರಣವಿಲ್ಲದೇ ಅವನನ್ನು ಪ್ರೀತಿಸಿದ್ದಳು

ಅದಕ್ಕೇ

ಅವಳ ಮೈತುಂಬಾ ಅವನು

ಮುತ್ತಿನ ಹಚ್ಚೆ ಹಚ್ಚಿ

ಕಾರಣ ತಿಳಿಸಿದ೪.ಓಡೋಡಿ ಬಂದ ನದಿಯನ್ನು

ಅಪ್ಪಿ ಮುದ್ದಾಡಿದ

ಸಾಗರದ

ತೆಕ್ಕೆಯಲ್ಲಿ

ನದಿಯ ಸುಳಿವೇ ಇಲ್ಲ !

ಪ್ರೀತಿಗೆ

ಸಾಗರವೇ ಎತ್ತರವೂ

ಆಳವೂ.

20071003

ವಾರವಾರ........1


ಸ್ನೇಹಿತರೇ,ನಿಮಗೆ ಇಷ್ಟವಾಗುತ್ತದೋ ಇಲ್ಲವೋ ಗೊತ್ತಿಲ್ಲ, ಆದರೂ ಈ ಅಂಕಣ ಅರಂಭಿಸಿದ್ದೇನೆ.ವಾರವಾರವೂ ಆ ವಾರದ ಆಗುಹೋಗುಗಳ ಕುರಿತು ನಿಮ್ಮೊಂದಿಗೆ ನನ್ನ ಸಂವಾದ.ಇಂಥದ್ದೇ ವಿಷಯ ಎಂಬ ಉಪಚಾರವಿಲ್ಲ.ಸುಮ್ಮನೇ ಅದೂ ಇದೂ ಇತ್ಯಾದಿ.ಒಂದರ್ಥದಲ್ಲಿ ಉಭಯಕುಶಲೋಪರಿಸಾಂಪ್ರತ..ವಾರಕ್ಕೆ ಒಂದೇ ಒಂದು ಬಾರಿ ಈ ಹಿಂಸೆ ಸಹಿಸಿಕೊಳ್ಳಬೇಕು ಪ್ಲೀಸ್......ಇದು ಅಧಿಕಾರದ ಪ್ರಶ್ನೆಯೇ ಅಲ್ಲ.ಅಸ್ಥಿತ್ವದ ಪ್ರಶ್ನೆ.

ತಂತಮ್ಮ ಆಯಾಮಗಳನ್ನು ಗಟ್ಟಿಗೊಳಿಸುತ್ತಾ ದುಡ್ಡು ಮಾಡುವ ಆ ಮೂಲಕ ಒಂದು ಸಾಮ್ರಾಜ್ಯ ಸ್ಥಾಪಿಸುವ ಮತ್ತು ಆ ಸಾಮ್ರಾಜ್ಯದಲ್ಲಿ ಮತ್ತೆ ಕೊಳ್ಳೆಹೊಡೆಯುತ್ತಾ ಮತ್ತೆ ಮತ್ತೆ ರಾಜಕಾರಣ ಮಾಡುವ..ಹೀಗೆ ಸಾಗುವ ತಂತ್ರ ಪ್ರತಿತಂತ್ರ.

ಒಂದು ಮನೆ.ಅಪ್ಪ ಮತ್ತು ಪ್ರಾಯಕ್ಕೆ ಬಂದ ಮಗ.ಇಬ್ಬರೂ ಜೊತೆಯಾಗಿ ವಹಿವಾಟು ಮಾಡುತ್ತಾ ಇದ್ದಾರೆ.ಎಲ್ಲೋ ಒಂದು ಕಡೆ ಇಬ್ಬರಲ್ಲೂ ತೀರಾ ಪೀಳಿಗೆಯ ಅಂತರ ಇದ್ದೇ ಇರುತ್ತದೆ.ಹೆಚ್ಚಾಗಿ ಅಪ್ಪನೇ ಹೆಚ್ಚಿನವನಾಗಿ ಇರುತ್ತಾನೆ.ಮಗ ಏನಿದ್ದರೂ ಮಗ. ಸಬಾರ್ಡಿನೇಟ್.

ಅಪ್ಪನನ್ನು ಒಪ್ಪಿಯೂ ,ವಿರೋಧಿಸುತ್ತಾ ,ವಿರೋಧಿಸಿಯೂ ಒಪ್ಪುತ್ತಾ ಮನೆಗೆಲಸವನ್ನುಅಂದರೆ ವ್ಯವಹಾರವನ್ನು ಮಗ ನಡೆಸಿಕೊಂಡುಹೋಗುತ್ತಾನೆ ಅಪ್ಪನ ಜೊತೆಗೆ.ಅಪ್ಪ ಮಗನನ್ನು ತನ್ನೊಳಗೆ ಹಿಡಿದಿಟ್ಟುಕೊಂಡಿದ್ದೇನೆಂದು ಭ್ರಮಿಸುತ್ತಾ ಸಾಗುತ್ತಾನೆ.ಮನೆ ನಡೆದುಕೊಂಡುಹೋಗುತ್ತದೆ.

ಈ ಮೌನ ಒಡಂಬಡಿಕೆ ಒಬ್ಬಳು ಸೊಸೆಯ ಆಗಮನದಿಂದ ಮುರಿದುಹೋಗಬಹುದು.ಕಾರಣ ಅವಳಿಗೆ ಅವಳ ಅಪ್ಪನನ್ನು ಒಪ್ಪಿಕೊಳ್ಳುವ,ನಿರಾಕರಿಸುವ ಪ್ರಮೇಯಗಳೇ ಇರಲಿಲ್ಲ.ಇಲ್ಲಿಗೆ ಬಂದಾಗಲೂ ಅವಳಿಗೆ ತನ್ನ ಗಂಡನೊಂದಿಗೆ ಅಂಥದ್ದೊಂದು ಮೌನ ಒಡಂಬಡಿಕೆ ಮಾಡಿಕೊಳ್ಳುವ ಅಗತ್ಯವಿರುವುದಿಲ್ಲ.ಅವರ ಸಂಬಂಧ ಅಂಥ ವ್ಯಾವಹಾರಿಕವಾದ್ದೂ ಅಲ್ಲ ಅಥವಾ ಆ ಹೊದ್ದಿನಲ್ಲಿ ಇರುವುದೂ ಇಲ್ಲ.ಮಾತ್ರವಲ್ಲ ಮನೆ ಮುದುಕ ಅವಳಿಗೇನು ಅಪ್ಪ ಅಲ್ಲವಲ್ಲ.

ಕರ್ನಾಟಕದ ಅಧಿಕಾರ ಆಟೋಟಗಳನ್ನು ಈ ವಿವರಣೆಯ ಮೂಲಕ ಒಮ್ಮೆ ವಿಚಾರಿಸಿ ಎಂದು ಇಲ್ಲಿ ಸೂಚಿಸಬಯಸುತ್ತೇನೆ.

ಇರಲಿ,

ಈಗ ಕುಮಾರಸ್ವಾಮಿ ೨೦:೨೦ ಒಪ್ಪಂದದಂತೆ ಅಧಿಕಾರ ಬಿಟ್ಟುಕೊಡಬೇಕು ಎಂಬುದು ಯಡಿಯೂರಪ್ಪ ಬೇಡಿಕೆ. ಜೇಡಿಎಸ್ ಕೆಳಗೆ ಬಿಜೆಪಿ ಮೇಲೆ ಇರುವಂತೆ ಮಾಡಬೇಕೆಂಬುದು ಅವರ ಟಿಪ್ಪಣಿ.ಈ ಅಧಿಕಾರ ಹಸ್ತಾಂತರ ಎಂಬ ವಿಚಾರವನ್ನು ಎರಡು ಆಯಾಮಗಳಿಂದ ನೋಡಬಹುದು.

೧.ರಾಜಕಾರಣ

೨.ನೈತಿಕತೆ.

ರಾಜಕಾರಣದಲ್ಲಿ ನೆನಪಿಗಿಂತ ಹೆಚ್ಚು ಮರೆವಿಗೆ ಸ್ಥಾನ.ಅಲ್ಲಿ ಮಾತು-ಕೃತಿ ಅರ್ಥಪಡೆದುಕೊಳ್ಳುವುದಿಲ್ಲ.ನುಡಿದಂತೆ ನಡೆಯುವುದು ರಾಜಕಾರಣವಗುವುದಿಲ್ಲ.ಕೌರವ ಪಾಂಡವರಿಗೆ ಸೂಜಿಮೊನೆಯಷ್ಟೂ ಭುವಿ ಕೊಡಲಾರೆ ಎಂದಾಗಲೂ ಇದೇ ರಾಜಕಾರಣ ಅವನದ್ದಾಗಿತ್ತು.ಮುಶರಫ್ ಮಾಡುತ್ತಿರುವ ರಾಜಕಾರಣವೂ ಇಂಥದ್ದೇ.ದೆಹಲಿ ಗದ್ದುಗೆಯಲ್ಲಿ ಎಷ್ಟೋ ತಲೆಗಳು ಉರುಳುರುಳಿ ಬಿದ್ದ ಇತಿಹಾಸ ಇಂಥದ್ದೇ ರಾಜಕಾಣದಿಂದಲೇ.ಆರ್ಯರಾಗಲಿ,ದ್ರಾವಿಡ ದೊರೆಗಳಾಗಲಿ ರಾಜಕೀಯ ಮಾಡಿದ್ದು ಇಂತೆಯೇ.ಅಮೆರಿಕ ಇರಾಕ್ ಮೇಲೆ ದಂಡೆತ್ತಿ ಹೋದಾಗಲೂ, ಸದ್ದಾಂ ತನ್ನದೇ ಜನರನ್ನು ಸಫಾಯಿ ಮಾಡಿದಾಗಲೂ ಇದೇ ರಾಜಕಾರಣ ದುಡಿದಿತ್ತು.ಆದ್ದರಿಂದ ರಾಜಕೀಯ ದೃಷ್ಟಿಯಿಂದ ನೋಡಿದರೆ ಕುಮಾರಸ್ವಾಮಿ ಅಧಿಕಾರ ಬಿಟ್ಟುಕೊಡುವುದು ಎಂಬುದೇ ಇಲ್ಲ.

ಇಪ್ಪತ್ತು ತಿಂಗಳ ಆಡಳಿತ ಮುಗಿಸಿ ಆತ ಹೊರಟು ಹೋದರೆ ಯೆಡಿಯೂರಪ್ಪ ಮುಖ್ಯಮಂತ್ರಿ ಆಗಬೇಕೆಂದೇನೂ ಇಲ್ಲ.

ಯೆಡಿಯೂರಪ್ಪ ಹೇಗೆ ಕುಮಾರಸ್ವಾಮಿಗೆ ಸಾಥ್ ಕೊಟ್ಟನೋ ಹಾಗೇ ಯೆಡಿಯೂರಪ್ಪನಿಗೆ ಕುಮಾರಸ್ವಾಮಿ ಸಾಥ್ ನೀಡಿದರೆ ಅದು ರಾಜಕಾರಣ ಆಗುವುದಿಲ್ಲ.

''ನನಗೆ ಇನ್ನು ಅಧಿಕಾರ ಬೇಡ,ಹಾಗಂತ ನಿನ್ನ ಅಧಿಕಾರ ನಾನು ಒಪ್ಪಲ್ಲ'' ಎಂದು ಕುಮಾರಸ್ವಾಮಿ ಥೇಟ್ ರಾಜಕೀಯ ಮಾತನಾಡಿದರೆ ಯೆಡಿಯೂರಪ್ಪ ಮುಖ್ಯಮಂತ್ರಿ ಆಗುವುದಿಲ್ಲವಲ್ಲ,ಅದೇ ರಾಜಕೀಯ.

ನಾವು ರಾಜಕೀಯ ಎಂದರೆ ತುಂಬಾ ಡಿಫರೆಂಟಾಗಿ ಯೋಚಿಸುತ್ತೇವೆ.ನಮ್ಮ ರಾಜಕೀಯ ಧಣಿಗಳೂ ಹಾಗೇ ಒಂದು ಇಮೇಜನ್ನು ನಮ್ಮ ಮುಂದೆ ಇಟ್ಟಿದ್ದಾರೆ.ಅವರಿಗೂ ಗೊತ್ತಿದೆ ನಮಗೆ ಗೊತ್ತಾಗುವುದಿಲ್ಲೆಂದು.ನಿಜವಾದ ರಾಜಕಾರಣದ ಗರ್ಭದಲ್ಲಿ ಹುಟ್ಟಿಬಂದರೆ ಎಲ್ಲಾ ಗೊತ್ತಾಗುತ್ತದೆ.

ಇನ್ನು ನೈತಿಕತೆಯ ವಿಚಾರ.

ಇವರ ೨೦:೨೦ ಒಪ್ಪಂದವೇ ಅಪ್ಪಟ ಅನೈತಿಕ.ಕೇವಲ ಅಧಿಕಾರಕ್ಕಾಗಿ ಮಾಡಿಕೊಂಡ ಅಪವಿತ್ರ ಸಂಬಂಧ.ವಿಭಿನ್ನವಾಗಿ ಯೋಚಿಸುತ್ತಾ ವಿಭಿನ್ನವಾಗಿ ಬದುಕುತ್ತಾ ಇದ್ದವರು ಬೇರೆಬೇರೆಯಾಗಿಯೇ ಜನರ ಬಳಿಯಿಂದ ಬಂದವರು ಎಂದೂ ಸಮಾನ ಮನಸ್ಸಿನವರೇ ಆಗಿರದಿದ್ದವರು ಗದ್ದುಗೆಗಾಗಿ ಒಂದಾಗಿದ್ದಾರೆ.ಇದು ನಂಬರ್ ಗೇಮ್ ಅಂತ ಹೇಳಬಹುದು.ಪ್ರಜಾಪ್ರಭುತ್ವದಲ್ಲಿ ನಂಬರ್ ಮುಖ್ಯವಾಗಬೇಕೇ ಹೊರತು ನಂಬರ್ ಗೇಮ್ ಅಲ್ಲ.

ಆತ್ಮಸಾಕ್ಷಿಗೆ ವಿರುದ್ಧವಾಗಿ ವರ್ತಿಸಿದಾಗ ಇಂಥಾ ಎಡವಟ್ಟುಗಳನ್ನೂ ಎದುರಿಸಲೇ ಬೇಕಾಗುತ್ತದೆ ಮತ್ತು ಆಗ ಅದನ್ನು ಎದುರಿಸುವ ಛಾತಿ, ಚೈತನ್ಯ ಉಳಿಯುವುದೂ ಇಲ್ಲ. ಅನೈತಿಕ ಸಂಬಂಧಗಳನ್ನು ಸಮಾಜ ಸ್ಥಿರೀಕರಿಸಲಾರದು.ಕುಮಾರಸ್ವಾಮಿ ಕೈ ಕೊಟ್ಟರೆ ಅದೂ ಒಂದು ಅನೈತಿಕ ಸಂಬಂಧದ ಮುಕ್ತಾಯ ಎಂದೇ ಸ್ವೀಕರಿಸಬೇಕು ವಿನಃ ನೈತಿಕ ದ್ರೋಹ ಎನ್ನಲಾಗದು.

ಅನೈತಿಕತೆಯಲ್ಲಿ ನೈತಿಕ ವಿಚಾರವೇ ಇರುವುದಿಲ್ಲವಲ್ಲ.

ಅಧಿಕಾರದ ಸಂದರ್ಭದಲ್ಲಿ ಅವಕಾಶಗಳ ಬಳಕೆ ಅಧಿಕಾರಸ್ಥರ ಹಿಕ್ಮತ್ತು.

ಬುದ್ಧಿವಂತ ಕುಮಾರಸ್ವಾಮಿ ಅದನ್ನು ಮಾಡಿದ.ಪೆದ್ದ ಯೆಡಿಯೂರಪ್ಪನಿಗೆ ಇದು ಗೊತ್ತಾಗಲಿಲ್ಲ.

20071002

ನಾಲ್ಕು ಸಾಲು


೧.


ಗಾಂಧೀಜಿ

ನಮ್ಮ ಕನಸಲ್ಲ.

ನಮ್ಮ ಕನಸುಗಳಿಗೆ ಚಿತ್ರ ಬೇರೆಯೇ ಇವೆ.

ಗಾಂಧೀಜಿ ನಿದ್ದೆಗೂ ಮೊದಲೇ ಕಳೆದು ಹೋಗಿದ್ದಾನೆ.


೨.


ನೆಲದ ಪ್ರೀತಿ

ಜನರ ಮನಸ್ಸು

ಎರಡೂ ಅರ್ಥವಾಗದೇ

ರಾಜಕಾರಣಿಗಳು

ಉಂಡು ನಿದ್ದೆಹೋದರು.

ಪಾಳುಬಿದ್ದ ನೆಲದಲ್ಲಿ ಜನರು ಬಂಜೆ ಬೀಜ ಬಿತ್ತಿದರು.


೩.


ಕೋಟಿ ಮನಸುಗಳ

ಒಂದೇ

ಬುಟ್ಟಿಯಲ್ಲಿ ತುಂಬಿ

ರಾಜಕಾರಣದ ಪಾಠ ಓದಿದ

ಗಾಂಧೀಜಿ

ಕೊನೆಗೂ ರಾಜಕಾರಣಿಯಾಗದೇ

ನಿರ್ಗಮಿಸಿದ್ದನ್ನು

ಸೋಜಿಗದಿಂದ ಈಗ ನೋಡುತ್ತಿರುವೆ.


೪.


ಗಾಂಧೀಜಿಯನ್ನು

ಒಂದು ಗಿಡದ ಜೀವ ಸಂಹಿತೆಯಿಂದ

ನೋಡಲಾಗದ

ನಮ್ಮ ರಾಜಕಾರಣಿಗಳು

ಸಿದ್ಧಾಂತದ ಮರಗಳನ್ನು ಉರುಳಿಸಿದರು,

ಅಚ್ಚರಿಯೇನಲ್ಲ.

20070929

ಬ್ರಾಹ್ಮಣೋಸ್ಯಮುಖಮಾಸೀತ್..


ಜಾಗತೀಕರಣದ ತೆಕ್ಕೆಗೆ ಬ್ರಾಹ್ಮಣರು ತಾವೇ ಸ್ವಸಂತೋಷದಿಂದ ಸೇರಿಕೊಂಡಿದ್ದಾರೆ .

ತಪ್ಪೇನಲ್ಲ.

ಯಾರಿಗೆ ತಾನೇ ಅದೇ ಜನಿವಾರ,ಜುಟ್ಟು,ಮೂರು ನಾಮದ ಬದುಕು ಬೇಕು?

ಬೆಳಗಾತ ಎದ್ದು, ಕೊಡಪಾನತಣ್ಣೀರು ತಲೆಗೆ ಸುರಿದು, ದೇವರ ತಲೆಗೂ ಹೊಯ್ದು,ಕಂಚಿನ ಉರುಳಿಯಲ್ಲಿ ಇಂಗಿಸಿದ ಬೋನ ತಿನ್ನುವ ಕಾಲ ಎಂದೋ ಹೋಗಿದೆ.ಅದೇ ಮೂರು ಖಂಡಿ ಅಡಿಕೆ,ಮೂವತ್ತು ಗುಂಟೆ ಜಮೀನು,ಗೊಬ್ಬರದ ಹಟ್ಟಿ, ಮಂಗಗಳ ಕಾಟ, ಕೊಳೆರೋಗ,ನಂಬ್ರ, ಜಂಬ್ರ ಅಂತ ನಿತ್ಯವೂ ವಾರ್ ಡಿಕ್ಲೇರ್ ಮಾಡುತ್ತಾ ಬದುಕುವುದೂ ಈಗ ಕಷ್ಟ ಎಂದು ಅನಿಸತೊಡಗಿದೆ.

ಹಾಗೇ ಅನಿಸುವಂತೇ ಮಾಡಿದ್ದೇ ಜಾಗತೀಕರಣ.

ಅಸಂತುಷ್ಟೋ ದ್ವಿಜೋ ನಷ್ಟಃ,ಸಂತುಷ್ಟೇನ ಕ್ಷತ್ರಿಯಃ..ಈ ಮಾತು ಈಗ ಔಟ್‌ಡೇಟ್.

ಬ್ರಾಹ್ಮಣ ಮನಸ್ಸೇ ಹೇಳುತ್ತಿದೆ,-ಇದೆಲ್ಲಾ ಅನಿವಾರ್ಯ.ಏಕೆಂದರೆ ಬದುಕನ್ನು ತುಂಬಾ ಸಂತೋಷದಿಂದ ಅನುಭವಿಸಬೇಕು ಎಂಬುದು ಎಲ್ಲರ ಬಯಕೆ. ಬ್ರಾಹ್ಮಣರಿಗೆ ಆ ಸಂತೋಷ ಬೇಗನೇ ಸಿಕ್ಕಿದರೆ ತಪ್ಪೇನು?ಇಷ್ಟಕ್ಕೂ ಯಾರಿಗೆ ತಾನೇ ಸ್ವಂತ ಕಾರಲ್ಲಿ ತಿರುಗಾಡೋ,ಪಾರ್ಲರ್‌ನಲ್ಲಿ ತಿಂಬೋ,ಟಿವಿ ಎದುರು ಕಾಂಬೋ ಆಸೆಗಳು ಇರೋದಿಲ್ಲ?''

ಕಳೆದ ವಾರ ಕನ್ನಡಕದ ಅಂಗಡಿಯೊಂದರಲ್ಲಿ ಒಬ್ಬರು ಮಧ್ಯವಯಸ್ಕರು ಸಿಕ್ಕಿದ್ದರು.ಮಾತನಾಡುತ್ತಾ ಅವರು ಬಹು ದೊಡ್ಡ ದೇವಸ್ಥಾನವೊಂದರ ಪೂಜೆ ಭಟ್ಟರು ಎಂದು ಗೊತ್ತಾಯಿತು.ದೇವಸ್ಥಾನ,ಅಲ್ಲಿನ ವೈಭವ,ಆಡಳಿತಗಾರರ ಕುರಿತು ಅವರು ಬಾಯ್ತುಂಬಾ ಹೇಳಿದ್ದು ನಾವು ಕೇಳಿದ್ದೂ ಆಯಿತು.ನಾನು ಕಣ್ ಬಾಯ್ ಬಿಟ್ಟು ಅವರನ್ನು ನೋಡಿದೆ.ಟೀ ಶರಟು,ಪ್ಯಾಂಟು ಹಾಕಿದ್ದರು. ಮ್ಯಾಚಿಂಗಾಗಿತ್ತು. ಪರವಾಗಿಲ್ಲ ಭಟ್ರಿಗೆ ಡ್ರೆಸ್ ಸೆನ್ಸ್ ಚೆನ್ನಾಗಿದೆ ಎಂದುಕೊಂಡೆ.ಕ್ರಾಪನ್ನು ಹೇಗೆ ಬಾಚಿಕೊಂಡಿದ್ದರು ಎಂದರೆ ಜುಟ್ಟು ಆದಷ್ಟೂ ಫೇಡ್ ಆಗುವಂತೆ ನೋಡಿಕೊಂಡಿದ್ದರು.ಇಂಪೋರ್ಟೆಡ್ ಕೂಲಿಂಗ್ಲಾಸು ಶರಟಿನ ಎದೆಯಂಚಿನಲ್ಲಿ ಕುಳಿತಿತ್ತು.ಊರ ಹೊರಗೆ ಏರ್ಪಾಟಾಗಿರುವ ಉನ್ನತ ಧ್ಯಾನಶಿಬಿರಕ್ಕೆ ಅವರು ಹೋಗಬೇಕಾಗಿತ್ತು.

ಅವರು ಹೋದ ಮೇಲೆ ನನಗೆ ಅಚ್ಚರಿ ಎನಿಸಿದ್ದು. ನನ್ನ ಪ್ಲಾಟಿನಾದಲ್ಲಿ ನಾನು ಹೋಗುತ್ತಿದ್ದಾಗ ಅವರು ನನಗಿಂತ ವೇಗದಲ್ಲಿ ಡಿಸ್ಕವರಿಯಲ್ಲಿ ಧೂಂ ಅಂತ ಹೋದರು.ದಿನಾ ಆ ದೇವರ ಜೊತೆ ಇರುವ,ನಮಗೆಲ್ಲರಿಗಿಂತಲೂ ಆ ದೇವರಿಗೆ ಕ್ಲೋಸ್ ಫ್ರೆಂಡ್ ಆಗಿರುವ, ನಮ್ಮ ಪ್ರಾರ್ಥನೆಗಳನ್ನು ದೇವರಿಗೆ ಕಳುಹಿಸುವ ಮೀಡಿಯೇಟರ್ ಆಗಿರುವ ಭಟ್ಟರಿಗೆ ಊರ ಹೊರಗಿನ ಉನ್ನತ ಧ್ಯಾನ ಶಿಬಿರ ಬೇಕಾಗುತ್ತದಾ?ದೇವರ ಜೊತೆ ಇವರ ಅನುಸಂಧಾನ ಹಾಗಾದರೆ ಏನು?ಅವರು ಮಾಡೋ ಪೂಜೆ ಪ್ರಾರ್ಥನೆ ಕೂಡಾ ಬರೀ ಜಾಬ್ ಮಾತ್ರಾ ಇರಬಹುದಾ?

ಜಾಗತೀಕರಣ ಹುಟ್ಟು ಹಾಕಿದ ಆಸೆಗಳಿವು.

ಕೈಗಾರೀಕಣ ಆದಾಗ ಬ್ರಾಹ್ಮಣ ವರ್ಗದಲ್ಲಿ ಆ ಕಾಲದ ಕಟ್ಟುಪಾಡುಗಳೆಲ್ಲಾ ದಡಬಡ ಆಗಿದ್ದವು, ಒಂದು ಹಂತದಲ್ಲಿ ಬ್ರಾಹ್ಮಣರೆಲ್ಲಾ ಆಗ ಒಂದು ಗೀಟು ದಾಟಿ ಹೋಗಿದ್ದರು ಎಂದು ಅಪ್ಪ ಹೇಳುತ್ತಿದ್ದುದು ಈಗ ನೆನಪಾಗುತ್ತಿದೆ.ಈ ರೀತಿಯ ರೂಪಾಂತರಗಳು ಎಷ್ಟೊಂದು ಬಾರಿ ಆಗಿದ್ದವೋ..

ಈಗ ಆಗುತ್ತಿರುವುದನ್ನು ನೋಡಿ.ಮಲೆನಾಡು ಒಳನಾಡುಗಳಲ್ಲಿ ಬ್ರಾಹ್ಮಣರು ಕೃಷಿಜಮೀನುಗಳನ್ನು ಸಾರಾಸಗಟಾಗಿ ಮಾರುತ್ತಿದ್ದಾರೆ.ಹತ್ತು ವರ್ಷಗಲ ಹಿಂದೆ ಶುಂಠಿ ಕೃಷಿ ಮಾಡಲೆಂದು ಬಂದ ಮಲೆಯಾಳೀ ಕ್ರಿಶ್ಚಿಯನ್ನರು ಸಿಕ್ಕ ಸಿಕ್ಕ ಗದ್ದೆಗಳನ್ನೆಲ್ಲಾ ಗೇಣಿಗೆ ಪಡೆದು ಶುಂಠಿ ಹಾಕಿ ಹಣ ಬಾಚಿದ್ದರು.ಆ ದಿನಗಳ್ಲೇ ಈ ಮಲೆಯಾಳಿಗಳಿಗೆ ಈ ಭಾಗದ ಭೂಮಿಯ ರುಚಿ ಸಿಕ್ಕಿದೆ.ಇದೇ ಹೊತ್ತಿಗೆ ಬ್ರಾಹ್ಮಣ ಕುಟುಂಬಗಳು ಕಿರಿದಾಗುತ್ತಾ ಆಗುತ್ತಾ ಬಾಜಿರಕಂಬದ ಸುತ್ತು ಪೌಳಿಯ ಮನೆಗಳೆಲ್ಲಾ ಬಿದ್ದು ಹೋಗಿ ಸಿಂಗಲ್‌ಬೆಡ್ ರೂಮುಗಳಾಗಿವೆ.

ಅಪ್ಪನಿಗೆ ಐವತ್ತು ವರ್ಷ,ಜೊತೆಗೆ ಬೆನ್ನು ನೋವು. ಅಮ್ಮನಿಗೆ ಮೊಣಕಾಲು ಸೆಳೆತ. ಇದ್ದ ಇಬ್ಬರು ಮಕ್ಕಳಲ್ಲಿ ಮಗಳನ್ನು ಲಂಡನ್ ವಾಸಿ ಡಾಕ್ಟರ್ ಮಾಣಿಗೆ ಧಾರೆ ಎರೆದಿದ್ದಾರೆ.ಮಗ ಎಂಎನ್‌ಸಿಯಲ್ಲಿ ಇಂಜೀನಿಯರ್ ಆಗಿ ಬೆಂಗಳೂರಿಗೆ ನುಸುಳಿಕೊಂಡಿದ್ದಾನೆ.ಇವರ ಎಲ್ಲಾ ಮೋಹ ಮಮಕಾರಗಳೂ ಮಕ್ಕಳ ಜೊತೆಗೆ ತೆರಳಿವೆ.

ಇವನ ಮಗ ಅದು ಹೇಗೆ ಕೃಷಿ ಕೆಲಸ ಮಾಡುವುದಿಲ್ಲವೋ ಇವನ ಆಳಿನ ಮಗನೂ ಕೃಷಿ ಕೂಲಿ ಮಾಡುವುದಿಲ್ಲ.ಅವನೂ ಪೇಟೆ ಸೇರಿದ್ದಾನೆ.

ಇವನ ಅಪ್ಪ ಕೃಷಿಯನ್ನೇ ಬದುಕು ಮಾಡಿಕೊಂಡಿದ್ದ, ಇವನ ಕಾಲಕ್ಕೆ ಅದು ಅರೆಬೆಂದ ಸಿದ್ಧಾಂತವಾಯಿತು ಈಗ ಪೂರ್ತಿ ಕದಡಿದೆ.ತನ್ನಿಚ್ಛೆಯಂತೆ ಕೃಷಿ ಆಗುತ್ತಿಲ್ಲ ಎಂದು ಅವನ ಮನಸ್ಸು ಗೊಣಗುಟ್ಟುತ್ತದೆ.ಮತ್ತು ಅವನ ಮನಸ್ಸಿನಂತೆ ಆಗಿಯೂ ಬಿಡುತ್ತದೆ.

ಜಾಗತೀಕರಣದ ಸವಲತ್ತುಗಳು,ಐಷಾರಾಮಗಳು ಅವನನ್ನೂ ಮತ್ತು ಅವನ ಹೆಂಡತಿಯನ್ನೂ ಹಾಂಟ್ ಮಾಡುತ್ತವೆ. ವರ್ಷ ವರ್ಷ ಅಸಬಡಿದೂ ಮಾಡಿದ್ದಾದರೂ ಏನು ಎಂದು ಮನಸ್ಸು ಕೇಳುತ್ತಿದ್ದರೆ ಉತ್ತರವೇ ಇರುವುದಿಲ್ಲ.ಇದೇ ಡಿಪ್ರೆಶನ್ನು ಅವನನ್ನು ಟೀವಿ ಧಾರಾವಾಹಿಗಳ ಮೂಲಕ ನಗರದ ಸುಖ ಸಂಸ್ಕೃತಿಯಲ್ಲಿ ಪವಡಿಸುತ್ತದೆ.ಅದೇ ಮುರಿದ ಮನಸ್ಸಿನಲ್ಲಿ ಕೊಳೆರೋಗ,ಕುಸಿದ ರೇಟು,ಪಡುವ ಪಾಡು ಬಂದು ಸೇರುತ್ತವೆ.

ಎಲ್ಲಾ ಲೊಳಲೊಟ್ಟೆ ಎಮದು ಅನಿಸುತ್ತಲೇ ಶುಂಠಿ ಮಲೆಯಾಳೀ ದೂರದ ಗದ್ದೆಯಿಂದಲೇ ತನ್ನ ಖಜಾನೆ ತೆರೆಯುತ್ತಾನೆ.ದುಬೈ ಹಣ ಉದುರುತ್ತದೆ.

ಬೆಂಗಳೂರು ಸೇರಿದ ಈ ಬ್ರಾಹ್ಮಣ ದಂಪತಿ ಬ್ಯಾಚುಲರ್ ಮಗ,ಅವನ ರಾತ್ರಿ ಪಾಳಿ,ಜರ್ಮನಿಯ ಟ್ರಿಪ್ಪು, ಐಷಾರಾಮಿ ಸೋಫಾಸೆಟ್ಟು, ಪ್ಲಾಸ್ಮಾ ಟೀವಿ,ಪಕೇಟು ಹಾಲು,ಸ್ವಿಫ್ಟ್ ಕಾರು,ಗರುಡಾ ಮಾಲುಗಳಲ್ಲಿ ಕಳೆದುಹೋಗುತ್ತಾರೆ.ನೋಡ್ತಾ ನೋಡ್ತಾ ಅಮ್ಮನಿಗೆ ನವರಾತ್ರಿಯಲ್ಲಿ ದುರ್ಗಾನಮಸ್ಕಾರ ಮಾಡಿಸಲಿಲ್ಲ ಎಂದನಿಸುತ್ತಾ ಇರುತ್ತಿದ್ದಂತೆಯೇ ಅಪ್ಪನಿಗೆ ಊರಲ್ಲಿ ಅಡಿಕೆ ರೇಟು ಎಷ್ಟಾಗಿದೆಯೋ ಎಂದು ಕೇಳೋಣಾ ಎಂದಾಗುತ್ತದೆ.ಇಷ್ಟೆಲ್ಲಾ ಆದಾಗ ಅವರ ಮನೆಗೆ ಆ ಸೊಸೆ ಬಂದಿದ್ದಾಳೆ,ಅವಳು ಕೊನೆಗೂ ಅವರ ಕಳೆದುಹೋದ ಕಾಮನೆಗಳೇ ಆಗಿದ್ದಾಳೆ.

20070926

ಎಲ್ಲಾ ಖಾವಂದರಿಗಾಗಿ..


ಏನಪ್ಪಾ ! ಚೆನ್ನಾಗಿ ಆಡಿದ್ದಾರೆ, ಗೆದ್ದಿದ್ದಾರೆ,ನಮ್ಮ ಟೀಮು,ನಮ್ಮ ದೇಶಕ್ಕೆ ಹೆಸರು ತಂದಿದ್ದಾರೆ,ಭಲೇ ಖುಷಿ,ಕಂಗ್ರಾಟ್ಸ್..

ಅಷ್ಟು ಸಾಲದೇ?

ಸಿನಿಮಾ ಚೆನ್ನಾಗಿದೆ.ಅವನ ನಟನೆ ಅವಳ ಆಕ್ಟಿಂಗು ಉತ್ತಮವಾಗಿದೆ.ಈ ಸಿನಿಮಾವೂ ಖುಷಿ ಕೊಟ್ಟಿದೆ. ಪಸಂದ್ ಆಯಿತು.ಕೀಪ್ ಇಟ್ ಅಪ್..

ಇಷ್ಟು ಸಾಲದೇ?

ಅಲ್ಲಿಗೆ ಆ ಕ್ರಿಕೆಟ್ಟನ್ನೂ ಮರೆಯೋಣ,ಆ ಸಿನಿಮಾವನ್ನೂ ದೂರವಿಡೋಣ..

ಅವರದ್ದೂ ಆಟ, ಇವರದ್ದೂ ನಟನೆ.ನಮಗೆ ಮಾಡಲು ಬೇಕಾದಷ್ಟು ಕೆಲಸಗಳಿವೆ.

ಆದರೂ ನಮ್ಮಿಂದ ಯಾಕೆ ಆಗೋದಿಲ್ಲ ?

ಯಾಕೆ ಆ ಕ್ರಿಕೆಟ್ಟು ಮತ್ತು ಆ ಬ್ಯಾಟ್ಸ್‌ಮ್ಯಾನು, ಯಾಕೆ ಆ ಸಿನಿಮಾ ಮತ್ತು ಆ ಹಿರೋಯಿನ್ನು ನಮ್ಮಲ್ಲಿ ನೇತಾಡುತ್ತಾರೆ?

ನೋಡ್ತಾ ನೋಡ್ತಾ ಏನಿದ್ದರೂ ಅವರೇ ಶ್ರೇಷ್ಠ ಅಂತ ನಾವು ಡಿಸೈಡ್ ಮಾಡ್ತೇವೆ..

ಅದು ಮನುಷ್ಯ ಮಾತ್ರ ಗುಣ.ಸಮಾಜ ಜೀವಿ ಮನುಷ್ಯ ತನ್ನ ಸಮಾಜದಲ್ಲಿ ತಾನೇ ತಾನಾಗಿ ಹೇಗೆ ಇರಲಾರನೋ ಹಾಗೇ ತನ್ನಲ್ಲಿ ತನ್ನನ್ನು ಕಾಣಲಾರನು.ಅವನೇನಿದ್ದರೂ ಪರರಲ್ಲಿ ತನ್ನನ್ನು ಕಂಡು ಸುಖಪಡುವ ಜಾಯಮಾನಿ.

ಅದೇ ಹೀರೋ ವರ್ಷಿಪ್.

ಯಾವ ಕರಡಿಯೂ ಮತ್ತೊಂದು ಕರಡಿಯನ್ನು ಶ್ರೇಷ್ಠ ಅಂತ ಭಾವಿಸುವುದಿಲ್ಲ. ಹುಲಿಗೆ ತನಗಿಂತ ದೊಡ್ಡ ಹುಲಿ ಎಂಬುದಿಲ್ಲ.ಗುಬ್ಬಚ್ಚಿಯೊಂದಕ್ಕೆ ತಾನೇ ತಾನು ಹೀರೋ.ಆನೆ ಕೂಡ ಇನ್ನೊಂದು ಆನೆಯನ್ನು ಎತ್ತಿ ಆರಾಧಿಸುವುದಿಲ್ಲ.ಸಿಂಹ ಏನಿದ್ದರೂ ಸ್ವಯಮೇವ ಮೃಗೇಂದ್ರತಾ.

ಆದರೆ ಮನುಷ್ಯ?

ಅವನಿಗೆ ಸದಾ ಇನ್ನೊಬ್ಬ ಶ್ರೇಷ್ಠ ಇರಲೇ ಬೇಕು. ತನಗಿಂತ ಬಲಶಾಲಿಯೊಬ್ಬ ಅವನಿಗೆ ಬೇಕು.

ತಾನೇನಿದ್ದರೂ ಸೆಕೆಂಡ್.

ಇದು ನಮ್ಮ ರಕ್ತಗತ.

ನಾವು ಎಂದೂ ಹಿರಿಯರಾಗಲಾರೆವು.ನಮಗೊಬ್ಬ ಖಾವಂದರು ಬೇಕು.

ಜೀಹುಜೂರ್ ಎನ್ನದೇ ನಮಗೆ ಇದ್ದು ಇರಲಾಗದು.ಬಾಸ್ ಕೈಕೆಳಗೇ ನಮಗೆ ಸುಖ.ಯಜಮಾನ ಒಬ್ಬ ಇದ್ದರೆ ನಮಗೆ ಸೇಫ್.ರಾಜನೋ ರಾಜಕಾರಣಿಯೋ ಯಾರೂ ಸರಿ ನಾವೇ ನಮಗೊಬ್ಬ ಅಧಿನಾಯಕನನ್ನು ಹಾಕಿಕೊಳ್ಳುವೆವು.ಅರಸೊತ್ತಿಗೆಯೋ ಪ್ರಜಾಸತ್ತೆಯೋ ಅಂತೂ ನಮಗೆ ಮಹಾರಾಜ ಬೇಕೇಬೇಕು.

ಹಾಳಾಗಿ ಹೋಗಲಿ.

ಈ ಕ್ರಿಕೆಟ್ಟಿನಲ್ಲೂ ನಮಗೆ ಹೀರೋ ಬೇಕಾ?ಸಿನಿಮಾ ನೋಡಿ ಸುಮ್ಮನೆ ಇರಲು ನಮಗೇಕೆ ಆಗಲ್ಲ?ಏಕೆಂದರೆ ಅಲ್ಲಿ ನಮಗೆ ಅತಿ ಸುಲಭದಲ್ಲಿ 'ದೇವರುಗಳು' ಸಿಗುತ್ತಾರೆ.ನಮಗೆ ಬೇಕಾದ ಹೀರೋ ಅಥವಾ ಹೀರೋಯಿನ್ನುಗಳು ಅಲ್ಲೇ ನಿತ್ಯವೂ ಕಾಣಲುಸಿಗುತ್ತಾರೆ.ಇಷ್ಟೇ ಅಲ್ಲ,ಇಲ್ಲಿ ಹಣದ ಹೊಳೆ ಇದೆ.ಎಲ್ಲಿ ಕಾಂಚಣ ಝಣಝಣ ಎನ್ನುತ್ತದೆ ಅಲ್ಲಿ ನಾವು ನಮ್ಮ ಆರಾಧ್ಯಮೂರ್ತಿಗಳನ್ನು ನಿರ್ಮಿಸುತ್ತೇವೆ.ಹಣ,ಸೆಕ್ಸ್,ಸಾಧನೆ ನಮ್ಮನ್ನು ಆವರಿಸುವ ರೀತಿ ಏನೆಂಬೆ!

ಈ ದೇವತಾರಾಧನೆ ಕೊನೆಗೂ ನಮ್ಮ ಅತೃಪ್ತ ಕಾಮನೆಯ ಫಲಶೃತಿ.

ಕ್ರಿಕೆಟ್ಟು ಸಿನಿಮಾಗಳಲ್ಲಿ ನಾವು ಹೀರೋ ಹೀರೋಯಿನ್ನುಗಳನ್ನು ತಬ್ಬಿಕೊಳ್ಳುವುದು ಇದೇ ಕಾಮನೆಗಾಗಿಯೇ ಇರಬೇಕು.

ಬೆಡಗಿಯರ ಬಿನ್ನಾಣ, ಹುಡುಗರ ವಡ್ಯಾಣ, ನಮ್ಮಲ್ಲಿ ಕಾಮವಾಸನೆಯಾಗಿ ರೂಪಾಂತರಗೊಂಡು ಕೊನೆಯಲ್ಲಿ ಆರಾಧನೆಯಾಗಿ ಸಾಗುತ್ತದೆ.ನಮ್ಮ ದೌರ್ಬಲ್ಯಗಳೂ ಇಲ್ಲಿ ಬೇಕಾದಷ್ಟು ಕೆಲಸ ಮಾಡುತ್ತವೆ.

ಮನುಷ್ಯನ ನಡಾವಳಿಗಳು ವಿಚಿತ್ರ.

ಬಯಕೆಗಳು ಹೆಪ್ಪುಗಟ್ಟಿದಾಗ ನಾವು ಇನ್ನೊಬ್ಬರಲ್ಲಿ ಪರಕಾಯಪ್ರವೇಶ ಮಾಡುತ್ತೇವೆ.ಹರೆಯದಲ್ಲಿ ಶುರುವಾಗೋ ಈ ಲಾಲಸೆ ಸಾಯೋತನಕ ಸಾಗುತ್ತಲೇ ಇರುತ್ತದೆ.ನಾನು ಯಾರನ್ನೂ ಇಲ್ಲಿ ಹೆಸರಿಸುವುದಿಲ್ಲ.ನಿಮ್ಮನ್ನು ಗೊತ್ತು ಗುರುತೇ ಇಲ್ಲದ ನೀವು ಯಾರೆಂದು ಅರಿತೇ ಇರದ ವ್ಯಕ್ತಿ ನಿಮಗೆ ಏಕಾದರೂ ಅಷ್ಟೊಂದು ಇಷ್ಟವಾಗಬೇಕು...

ಮತ್ತು ನಿಮ್ಮನ್ನೇ ನೀವು ಮಾರಿಕೊಳ್ಳುವಷ್ಟು.. ಎಂದು ನೀವು ಮೊದಲಾಗಿ ನನಗೆ ಹೇಳಬೇಕು.

ಅಷ್ಟು ಮಾಡಿದರೆ ನಾನು ಧನ್ಯ.

20070925

ಕನಸುಗಳೆಲ್ಲಾ ಕೈ ಕೊಡುವ ಜಾತ್ರೆಯಲ್ಲಿ..


ಇದು ಜಾಗತೀಕರಣದ ಪ್ರಭಾವ.

ನಂಬಲಿಕ್ಕಿಲ್ಲ;

ಬ್ರಾಹ್ಮಣ ಜಾತಿಯಲ್ಲಿ ಹುಡುಗಿಯರೇ ಇಲ್ಲ ಎನ್ನುವುದಕ್ಕೂ ಈ ಜಾಗತೀಕರಣಕ್ಕೂ ಏನು ಸಂಬಂಧ ಎಂದು ಕೇಳಬಹುದು.

ನಿಜವನ್ನೇ ಹೇಳುತ್ತಿದ್ದೇನೆ: ಜಾಗತೀಕರಣಕ್ಕೆ ಮೊದಲಾಗಿ ಬಲಿಯಾದವರು ಅಥವಾ ಯೀಲ್ಡ್ ಆದವರು ಬ್ರಾಹ್ಮಣರೇ.ಆದ್ದರಿಂದಲೇ

ಈ ಬ್ರಾಹ್ಮಣರಲ್ಲಿ ಹುಡುಗಿಯರೇ ಇಲ್ಲದೇ ಹುಡುಗರು ಒದ್ದಾಡುತ್ತಿದ್ದಾರೆ ಅಥವಾ ಹುಡುಗರು ಗಂಡಸರಾಗುತ್ತಿದ್ದಾರೆ ಅಥವಾ ಮುದುಕರಾಗುತ್ತಿದ್ದಾರೆ ಅಥವಾ ಮದುವೆಯಿಲ್ಲದ ಬ್ರಹ್ಮಚಾರಿಗಾಳಾಗುತ್ತಿದ್ದಾರೆ ಅಥವಾ ಎಲ್ಲಾ ಕನಸುಗಳು ನಾಶ ಮಾಡಿಕೊಳ್ಳುತ್ತಿದ್ದಾರೆ.

ಬ್ರಾಹ್ಮಣರಲ್ಲಿ ಹಿಂದೆಲ್ಲಾ ಹುಡುಗಿ ದೊಡ್ಡವಳಾದಳೆಂದರೆ ದೊಡ್ಡ ಚಿಂತೆ ಅಪ್ಪ ಅಮ್ಮಂಗಾಗುತ್ತಿತ್ತು.ದೊಡ್ಡದಾದ ಮೇಲೆ ಮದುವೆಯ ಚಿಂತೆ ಆವರಿಸುತ್ತಿತ್ತು.

ನಾನೇನು ಐವತ್ತು ವರ್ಷಗಳ ಹಿಂದಿನ ಕಾಗೆಗುಬ್ಬಿ ಕಥೆ ಹೇಳುತ್ತಿಲ್ಲ. ತೀರಾ ಇಪ್ಪತ್ತು ವರ್ಷಗಳ ಹಿಂದೆ.

ಅದೆಷ್ಟು ಹೆಣ್ಣು ಮಕ್ಕಳು ಮದುವೆ ಎಂಬ ಅನಿವಾರ್ಯ ಸ್ಥಿತಿಯಲ್ಲಿ ತಮ್ಮನ್ನು ತಾವು ಕಳೆದುಕೊಳ್ಳುತ್ತಿದ್ದರು.ಅದೆಲ್ಲೋ ಒಬ್ಬ ಹುಡುಗ ಇದ್ದಾನೆ ಎಂದರೆ ಏನೋ ಆಸೆ ಹೆತ್ತವರಿಗೆ. ಯಾರ್‍ಯಾರನ್ನೋ ಹಿಡಿದು ಕಾಡಿ ಬೇಡಿ ಆ ಹುಡುಗನ ಮನೆಯವರಿಗೆ ಕಾಂಟಾಕ್ಟ್ ಮಾಡಿಸಿ ಜಾತಕ ಒಪ್ಪಿಸಿ ಅದು ಪಾಸ್ ಆಗುತ್ತದೆ ಎಂದು ದಿನಾ ಬರಬಹುದಾದ ಕಾಗದ ಫೋನಿಗೆ ಕಾಯುತ್ತಾ ಕುಳ್ಳಿರುತ್ತಿದ್ದರು.ಹುಡುಗನ ದಂಡೇ ಹುಡುಗಿ ನೋಡಲು ಬರುವುದೇನು, ಅವನ ಕಡೆಯಿಂದ ಹುಡುಗಿಯ ಮೈಕೈ ಟೆಸ್ಟ್ ಮಾಡಲೆಂದೇ ಹೆಂಗಸರು ಬಂದು ಸುತ್ತುಹಾಕುವುದೇನು,ಹುಡುಗಿಯ ಕಡೆಯವರು ತಗ್ಗಿ ಬಗ್ಗಿ ತೆವಳುವುದೇನು, ಕೊನೆಗೊಮ್ಮೆ ಜಾತಕ ಕೂಡಿಬರಲಿಲ್ಲ ಎಂದು ಉತ್ತರ ಬರುವುದೇನು , ಅಂತೂ ಜಾತಕ ಕೂಡಿದರೆ ಹುಡುಗಿಯ ಸರೌಂಡಿಂಗ್ಸ್‌ನಲ್ಲಿ ಸರಿ ತಪ್ಪು ಹೆಕ್ಕುವುದೇನು...

ಎಲ್ಲಾ ಬದಲಾಗಿದೆ.

ಅದೇ ಆ ಹುಡುಗಿ ಈಗ ಅಮ್ಮ ಆಗಿದ್ದಾಳೆ.

ಅವಳ ಅರ್ಧ ಸತ್ತ ಕನಸುಗಳು, ಆಕಾಂಕ್ಷೆಗಳು, ಆಸೆಗಳು..ಅಷ್ಟೇ ಏಕೆ ಅವಳ ಒಳಗಿನ ಹುಡುಗಿ ಎಲ್ಲಾ ಈಗ ಮಗಳಾಗಿ ಬಂದಿದ್ದಾಳೆ.

ಆ ಮಗಳು ಅವಳ ಛಾಲೆಂಜು.

ಇದೇ ಹೊತ್ತಿಗೆ ಜಾಗತೀಕರಣ ಬಂದಿದೆ.ಬ್ರಾಹ್ಮಣರು ಜಾಗತೀಕರಣದ ಬಟ್ಟಲಿಗೆ ಬಿದ್ದಿದ್ದಾರೆ.ಟೀವಿ, ಕೇಬಲ್ಲು, ಟಾಟಾಸ್ಕೈ, ಮೊಬೈಲ್ಲು, ಕಾರು, ಏಸೀ,ವ್ಯಾಕ್ಯೂಂ ಕ್ಲೀನರ್,ಸೋಫಾ ಸೆಟ್ಟು, ತಾರಸಿಮನೆ, ಕಂಪ್ಯೂಟರು, ಮಗನಿಗೆ ಮೊಬೈಕು, ಮಗಳಿಗೆ ಸ್ಕೂಟಿ,ಶನಿವಾರ ರಾತ್ರಿ ಹೋಟೇಲಿನಲ್ಲಿ ತಾಲಿ, ಮನೆಯಲ್ಲಿ ಗೋಬಿ ಮಂಚೂರಿ, ಡೈರಿ ಹಾಲು ಬಂದಿದೆ.

ನೆಲದಲ್ಲಿ ಮಣೆ ಇಟ್ಟು ಪಟ್ಟಾಗಿ ಬಾಳೆ ಎಲೆ ಮೇಲೆ ಬಾಚಿ ಉಣ್ಣುತ್ತಿದ್ದ ಬ್ರಾಹ್ಮಣರು ಟೇಬಲ್ಲು ಮೇಲೆ ಕುಳಿತು,ಪೈಬರ್ ಪ್ಲೇಟಿನಲ್ಲಿ ಫ್ರೈಡ್ ರೈಸ್ ಕಲಸುತ್ತಿದ್ದಾರೆ.

ಸತ್ಯನಾರಾಯಣ ಪೂಜೆಯ ಊಟದಲ್ಲಿ ಪ್ರುಟ್ಸಲಾದ್, ಐಸ್‌ಕ್ರೀಂ ಅವರ ಮೆನು ಆಗಿದೆ.

ಹಟ್ಟಿಯಲ್ಲಿ ಹಸುಗಳಿಲ್ಲ.ತೋಟದಲ್ಲಿ ಕೂಲಿಯಾಳುಗಳು ಕೆಲಸ ಮಾಡುವಾಗ ಯಜಮಾನ ಪೇಟೆಯಲ್ಲಿ ಶಾಪಿಂಗ್ ಮಾಡುತ್ತಿದ್ದಾನೆ.

ಅಂಗಳದಲ್ಲಿ ಅವರೆ ಗಿಡ ಈಗ ಯಾರೂ ಬೆಳೆಯುವುದಿಲ್ಲ, ಪೇಟೆ ಅಂಗಡಿಯಿಂದ ತೊಂಡೆಕಾಯಿ ಖರೀದಿ ಮಾಡುತ್ತಾರೆ.ಬಸಳೆಯ ಸ್ಥಾನದಲ್ಲಿ ಪಾಲಕ್ ಬಂದಿದೆ.ಚಕ್ಕುಲಿಯನ್ನು ಕುರುಕುರೆ ತಿನ್ನುತ್ತಿದೆ.

ಜಾಗತೀಕರಣದ ಮೂಲಕವೇ ಮನೆಯೊಡತಿ ಕಟ್ಟಿಕೊಂಡ ಕನಸುಗಳು. ಮಗಳು ಹಾಸ್ಟೆಲ್‌ನಲ್ಲಿ ಓದುವುದು ಅಮ್ಮನಿಗೆ ಅಪಾರ ಗೌರವ ತಂದಿದೆ. ತೆಂಗಿನ ಕಾಯಿ ತುರಿಯುವುದು ಮಗಳಿಗೆ ತಿಳಿಯುವುದಿಲ್ಲ ಎಂಬುದು ಅಮ್ಮನ ಹೆಗ್ಗಳಿಕೆ.ಬಾಳೆಲೆ ಬಾಡಿಸೋದು ಗೊತ್ತಿದ್ದರೆ ಅದು ತುಂಬಾ ಇನ್‌ಸಲ್ಟು.ಮಗಳು ಸೀರೆ ಉಟ್ಟರೆ ಅದು ಸರಿಯಲ್ಲ. ಸೀರಿಯಲ್ಲಿನಲ್ಲಿ ಹಾಕುವ ಹಾಫ್ ಪ್ಯಾಂಟ್ ಟೀ ಶರಟು ಹಾಕಿದರೆ ಸೊಗಸು.ವಾರಕ್ಕೊಮ್ಮೆ ಬ್ಲೀಚು,ನಿತ್ಯವೂ ಶ್ಯಾಂಪು ಬೇಕು.

ಈ ಮೂಲಕವೇ ಅವಳ ಒಳಗೆ ಆಸೆಗಳನ್ನು ಅಮ್ಮನೇ ನಿರ್ಮಿಸಿದ್ದಾಳೆ.ಏಕೆಂದರೆ ಅವೆಲ್ಲಾ ಅವಳದ್ದೇ ಆಗಿದ್ದವು ಅಂದು.

ಹುಡುಗಿಗೆ ಈ ರೀತಿಯಲ್ಲಿ ಕೋಟೆಗಳನ್ನು ಕಟ್ಟಿಕೊಟ್ಟ ಕಾರಣದಿಂದ ಆ ಹುಡುಗಿ ಈಗ ಏಳುಕೋಟೆ ಏಳು ಸಮುದ್ರ ಏಳು ಬೆಟ್ಟಗಳಾಚೆ ಬಂಧಿ.ಇಪ್ಪತ್ತರ ಮೇಲೆ ವರ್ಷ ಹೊರಳಿ ಹೊರಳಿ ಹೋದರೂ ಮದುವೆಯಾಗಲಾರಳು. ಕಾರಣ ನಮ್ಮ ಹುಡುಗಿಯ ಟೇಸ್ಟೇ ಬೇರೆ. ಅದನ್ನು ಅರಿತ ರಾಜಕುಮಾರ ಈ ಅಮ್ಮನ ಸರ್ಪಗಾವಲನ್ನು ಭೇಧಿಸಿ ಬರುವುದಾದರೂ ಹೇಗೆ?

ಹತ್ತೊಂಭತ್ತಕ್ಕೇ ಸಹಜವಾದ ಬಯಕೆಗಳು ಹುಡುಗಿಯಲ್ಲಿ ಮೊಳೆತಿರುತ್ತವೆ. ಅದು ಅಮ್ಮನಿಗೆ ಗೊತ್ತಿದೆ.ಜಾಗತೀಕರಣದ ಕಾರಣದಿಂದಾಗಿಅದನ್ನು ಹತ್ತಿಕ್ಕಲಾಗುತ್ತದೆ. ಮುಗ್ದ ಹುಡುಗಿ ಕಾಯುತ್ತಾಳೆ.ಅವಳಿಗೂ ಇನ್ನೊಂದು ಜೀವದ ತುಡಿತ.ಸಾಲದ್ದಕ್ಕೆ ಸುತ್ತಲೂ ಬಯಕೆಗಳನ್ನು ಕೆರಳಿಸುವ ತೋಟ.ಈ ಎಲ್ಲದರ ನಡುವೆ ಬ್ರಾಹ್ಮಣ ಹುಡುಗಿಯರು ಮದುವೆಯಿಂದ ದೂರವಾಗುತ್ತಿದ್ದಾರೆ.

ಕೃಷಿ ಕೆಲಸ ಮಾಡೋ ರೈತ ಹುಡುಗ ಬೇಡ.ನಗರವಾಸಿ ಉದ್ಯೋಗಿಯೇ ಬೇಕು ಮತ್ತು ಅವನಿಗೆ ಹಳ್ಳಿಯಲ್ಲಿ ತೋಟ, ಜಮೀನು ಬೇಕು ಮತ್ತು ಆ ಜಮೀನಿನಲ್ಲಿ ಅವನು ಇರಬಾರದು ಮತ್ತು ಅವನು ಅಮೇರಿಕಾ-ಬೆಂಗಳೂರಿನ ಸುತ್ತಾ ಇರಬೇಕು.ಕಾರು ಮಸ್ಟ್.ಗುಂಡು ಹಾಕುವುದಾದರೂ ಪರವಾಗಿಲ್ಲ.ಅಪ್ಪ ಅಮ್ಮ ಸತ್ತರೆ ಉತ್ತಮ, ಒಂದೊಮ್ಮೆ ಜೀವಂತ ಇದ್ದರೂ ಅವರು ಹಳ್ಳಿಯಲ್ಲಿದ್ದರಾಯಿತು.ಹುಡುಗನಿಗೆ ಅವನ ಸಂಸಾರದ ಟಚ್ ಇರಬಾರದು.ಇಂಥಾ ಹುಡುಗನಿಗೆ ಈಗ ಹುಡುಕಾಟ.

ಚೆನ್ನಾಗಿ ಹೆಂಡತಿ ಜೊತೆ ಸೆಕ್ಸ್ ಕೂಡಾ ಮಾಡಲು ಪುರುಸೊತ್ತಿಲ್ಲದ ರಾತ್ರಿ ಹಗಲಿನ ಕತ್ತೆ ದುಡಿತ ಮಾಡುವ ತಥಾಕಥಿತ ಇಂಜೀನೀಯರ್‌ಗಳಿಗೇ ಮಣೆ.

ಇನ್ನು ಹುಡುಗೀನ ಕೇಳಿದರೆ, ಮೊದಲಾಗಿ ಆಕೆ ಹೇಳುವುದು 'ನನ್ನನ್ನು ಫ್ರೀಯಾಗಿ ನನ್ನ ಪಾಡಿಗೆ ಇರಗೊಡುವವನಾಗಬೇಕು..ಅಷ್ಟೇ.'ನನಗೆ ನನ್ನ ಸ್ವಾತಂತ್ರ್ಯ ಮುಖ್ಯ.ಅವನಿಗೆ ಮದುವೆ ಮುಂಚೆ ಗರ್ಲ್ ಫ್ರೆಂಡ್ಸ್ ಇರಲಿ ಪರವಾಗಿಲ್ಲ.ಬಟ್ ಇನ್ನು ಇರದಿದ್ದರಾಯಿತು..ತುಂಬಾ ಬಿಂದಾಸ್ ಆಗಿರೋ ಲೈಫ್ ಬೇಕು ಅಷ್ಟೇ.

ಹುಡುಗ ನನ್ನವನಾಗಿರಬೇಕೆಂಬ ಬಯಕೆ ಯಾವ ಹುಡುಗಿಯಲ್ಲೂ ಇರುವುದಿಲ್ಲ ಎಂದರೆ ಜಾಗತೀಕಣ ಅಲ್ಲದೇ ಇನ್ನೇನು?ಏಕೆಂದರೆ ಜಾಗತೀಕರಣದ ತಿರುಳೇ ನಾವೆಂಬುವುದು ಇಲ್ಲದಾಗುವುದು.