20161006

ಮಿಸ್ಸಿಂಗ್ ಸ್ಟೋರಿಘಟ್ಟದ ಮೇಲೆ ಏಲಕ್ಕಿ ಮಲೆಗೆ ಹೋಗುವುದಾಗಿ ಹೇಳಿ ಹೋದ ಸಣ್ಣಜ್ಜ ಕಾಣೆಯಾಗಿ ಸರೀ ಐವತ್ತು ವರ್ಷ ಆಯಿತು.
ಗ್ರೀನ್ ಕೆಫೆಯಲ್ಲಿ ಹಂಡ್ರಡ್ ಪೈಪರ್‍ಸ್ ನ ಮೊದಲ ಕಂತು ಮುಗಿಸಿದ ಹೊತ್ತಿಗೇ ಸಣ್ಣಜ್ಜನ ನೆನಪಾದುದು ಶಂಭುವಿಗೆ ಅಚ್ಚರಿ ಹುಟ್ಟಿಸಿತ್ತು.
ಈ ಸಣ್ಣಜ್ಜ ಈಗ ಏಕೆ ನನ್ನೊಳಗೆ ಹುಟ್ಟುತ್ತಿದ್ದಾನೆ,ಇವನೇಕೆ ನನ್ನಲ್ಲೇ ಅವತರಿಸುತ್ತಿದ್ದಾನೆ?
ಶಂಭು ಹೀಗೆ ಅಚ್ಚರಿಪಡುತ್ತಾ ಸಿಗರೇಟ್ ಹಚ್ಚಿ ಒಂದು ಧಂ ಕೂಡಾ ಬಿಟ್ಟಿಲ್ಲ, ಬೇರರ್ ಬಂದು ಸ್ಸಾರಿ ಸರ್ ಸ್ಮೋಕಿಂಗ್ ಅಲ್ಲಿ ಎಂದು ಯಾವುದೋ ಹಡಬ್ಬೇ ಕ್ರಿಕೆಟ್ ಮ್ಯಾಚ್ ತೋರಿಸುತ್ತಿದ್ದ ಆ ಟೀವಿಯತ್ತ ಕೈಮಾಡುತ್ತಾನೆ.
ಶಂಭು ಜೋರಾಗಿ ನಗುತ್ತಾನೆ.
ಎಲ್ಲಪ್ಪಾ, ಆ ಮ್ಯಾಚ್ ನಡೆಯೋ ಪ್ಲೇಸಲ್ಲಾ? ಅಲ್ಲಿಗೆ ನಾನು ಈಗ ಹೊರಟರೂ ಅಲ್ಲಿಗೆ ತಲುಪೋ ತನಕ ಈ ಸಿಗರೇಟ್ ಉಳಿಯುತ್ತಾ?
ಹೆಹೆಹೆಹೆಹೆ
ಜೋಕ್ ಜೋಕ್
ಬೇರರ್ ನಗೋದಿಲ್ಲ.
ಅವನು ಹಾಗೇ ನಿಂತೇ ಇದ್ದಾನೆ.
ಪ್ಲೀಸ್ ಸರ್.
ಹೋಗಲ್ಲ ಕಣಯ್ಯಾ.ಏನೀವಾಗಾ? ಇಲ್ಲೇ ಸೇದ್ತೀನಿ..ಹೆಹೆಹೆಹೆಹೆ
ಸರ್ ಪ್ಲೀಸ್..
ನನಗೆ ಸಣ್ಣಜ್ಜ ಬೇಕು ಹುಡುಕಿ ಕೊಡ್ತೀಯಾ?
ಸರ್
ನನಗೆ ಸಣ್ಣಜ್ಜ ಬೇಕು ಕಣಯ್ಯಾ.. ಹುಡುಕಿ ಕೊಡುತ್ತೀಯಾ ಅಂತ ಕೇಳಿದ್ದು.
ಸರ್,ಸಾರಿ ಸರ್ ನನಗೆ ಅರ್ಥವಾಗುತ್ತಿಲ್ಲ..
ಶಂಭು ನಿಧಾನವಾಗಿ ಏಳುತ್ತಾನೆ,ಮೆಲ್ಲಗೇ ನಡೆಯುತ್ತಾನೆ,ಅದೇ ಹಡಬೇ ಮ್ಯಾಚು ತೋರಿಸುತ್ತಿದ್ದ ಟಿವಿ ಪರದೆ ಬಳಿ ಬರುತ್ತಾನೆ.
ಯಾರ್ರೀ ಅಲ್ಲಿ, ಸ್ಟಾಪ್ ದಿಸ್..ಐ ಹೇಟ್ ದಿಸ್ ಬ್ಲಡೀ ಮ್ಯಾಚ್... ಜೋರಾಗಿ ಕೂಗುತ್ತಾನೆ.
ಅದು ಬಾರ್,ಅಲ್ಲಿ ಅವನ ಯಾವ ಕೂಗಿಗೂ ಆ ಮಂದಬೆಳಕಿನ ಹ್ಯಾಂಗ್‌ಓವರ್‌ನಲ್ಲಿ ಯಾರೂ ಕಿಮ್ಮತ್ತು ಕಟ್ಟುವುದಿಲ್ಲ.
ಶಂಭು ರೆಸ್ಟ್‌ರೂಂನಲ್ಲಿ ನಿಂತು ಸಣ್ಣಜ್ಜ ಎಲ್ಲಿಗಾದರೂ ಹೋಗಿರಬಹುದು ಅಂದುಕೊಳ್ಳುತ್ತಾನೆ.ಈ ರಾತ್ರಿ ಸಣ್ಣಜ್ಜನನ್ನು ಹುಡುಕಿ ತರಲೇಬೇಕು ಎಂದು ತೂಕಡಿಸುತ್ತಾನೆ.

ಶಂಭು ಕುಳಿತಿದ್ದ ಪಕ್ಕದ ಟೇಬಲಲ್ಲಿ ಕುಳಿತ ನಾಲ್ಕು ಮಂದಿ ಪೈಕಿ ಒಬ್ಬ ಪೊಲೀಸ್ ಆಫೀಸರನೇ ಇರಬೇಕು. ಅವನ ಮಾತು ಆಗಿಂದ ಕೇಳುತ್ತಾ ಇದೆ. ಅದೇನೋ ಅವನ ರಣಹೇಡಿ ಸಾಹಸಗಳನ್ನು ಆತ ಉಳಿದವರಿಗೆ ಬಿತ್ತುತ್ತಿದ್ದಾನೆ.
ಅವನೇ ಬಿಲ್ಲು ಕೊಡುವವನಿರಬೇಕು,ಇಲ್ಲವಾದರೆ ಅಷ್ಟೊಂದು ಪ್ರೀತಿಯಿಂದ ಉಳಿದವರು ಅವನ ವರ್ಣಚರಿತ್ರೆಯನ್ನು ಕೇಳುತ್ತಿರಲಿಲ್ಲ.
ಸಣ್ಣಜ್ಜ ಎಲ್ಲಿ ಹೋದನೋ..
ಶಂಭು ತನ್ನೊಳಗೆ ತಾನೇ ತನಿಖೆ ಆರಂಭಿಸಿದ.
ಹುರ್ರೇ..ಅನದರ್ ಡೌನ್..ಎಂದು ಯಾರೋ ಯಾವುದೋ ಟೇಬಲ್ಲಿಂದ ಕೂಗಿದರು.
ಸಣ್ಣಜ್ಜ ಅಂಥಿಂಥ ಅಸಾಮಿಯಲ್ಲ.
ಬ್ಯಾರಿಮಾಸ್ಟ್ರ ಭೂಮಿಯನ್ನು ಒಂದೇ ಮಾತಿಗೆ ಕ್ರಯಚೀಟು ಮಾಡಿಕೊಂಡವನು.ಮಾಸ್ಟ್ರೇ ನಿಮಗೆ ಇನ್ನು ಆಗಬೇಕಾದ್ದಾದರೂ ಏನುಂಟು,ಮಕ್ಕಳಿಲ್ಲ,ಮದುವೆಯಿಲ್ಲ,ಕಾಡು ಹತ್ತಿರವಾಗಿದೆ,ಊರು ದೂರವಾಗಿದೆ. ಎಂದು ಕೊಂಡಾಟ ಮಾಡಿದಂತೆ ಮಾಡಿ ಹೆದರಿಸಿ..
ಸಣ್ಣಜ್ಜನ ಆರ್ಭಟಕ್ಕೆ ಹೆದರಿಯೇ ಬ್ಯಾರಿ ಮಾಸ್ಟ್ರು ಭೂಮಿ ಮಾರಿದ್ದರು ಎಂದು ಮಧುಸೂದನ್ ರಾವ್ ಎಂಎ ಬಿಎಡ್ ಹಲವಾರು ಬಾರಿ ಶಂಭುವಿನ ಬಳಿ ಹೇಳಿದ್ದರು.
ಬ್ಯಾರಿಮಾಸ್ಟ್ರು ಆಮೇಲೆ ಸೀದಾ ಹೋಗಿ ನಿಂತದ್ದು ಅದೇ ಮಧುಸೂದನ್ ರಾವ್ ಎಂಎ ಬಿಎಡ್ ಅವರ ಮನೆಯ ಮುಂದೆ.
ನನ್ನ ಜಾಗವನ್ನು ಅರ್ಧಕ್ರಯಕ್ಕೆ ಕ್ರಯಚೀಟು ಮಾಡಿಸಿಕೊಂಡನಲ್ಲಾ ಅವನು ಕೂಡಾ ನನ್ನ ಹಾಗೇ ಇದ್ದೂ ಇಲ್ಲದವನಾಗಲಿ..ಎಂದು ತುಳಸಿಕಟ್ಟೆ ಮುಂದೆ ಒದ್ದೆ ಬಟ್ಟೆಯಲ್ಲಿ ಕೈ ನೆಲಕ್ಕೆ ಬಡಿದಿದ್ದನಂತೆ.
ಬ್ಯಾರಿ ಮಾಸ್ಟ್ರ ಸಿಟ್ಟು ಅಷ್ಟಿತ್ತು.
ಆಗ ಆ ಕುರಿತು ಏನೂ ಮಾತನಾಡದ ಮಧುಸೂದನ್ ರಾವ್ ಎಂಎ ಬಿಎಡ್ ಆಮೇಲೆ ಶರ್ಮಿಳೆ ಕೇಳಿಕೊಂಡಳು ಅಂತ ತನಿಖೆಗೆ ಹೊರಡುವುದಾ?
ಸಣ್ಣಜ್ಜನೂ ಬರಲಿ,ಬ್ಯಾರಿಮಾಸ್ಟ್ರೂ ಬರಲಿ..ಎಂದು ಅವರು ಕೂಗಿದರು.
ಮಧುಸೂದನ್ ರಾವ್ ಎಂಎ ಬಿಎಡ್ ಅವರಿಗೆ ಈ ಬ್ಯಾರಿಮಾಸ್ಟ್ರು,ಈ ಸಣ್ಣಜ್ಜ ಎಂದರೆ ಯಾರು ಏನು ಎತ್ತ ಎಂದು ಗೊತ್ತಾಗುತ್ತದಾ..
ಬ್ಯಾರಿಮಾಸ್ಟ್ರೇ..ಎಂದರೆ ಅಲ್ಲಿ ಖಡಕ್ ಮೌನ.
ಸಣ್ಣಜ್ಜನೇ..ಎಂದರೆ ಯಾರೋ ಹೋಯ್ ಎಂದರಂತೆ..
ಎದುರು ಬನ್ನಿ ..
ಬಂದವನು ಗಿಳಿರಾಮಣ್ಣ.
ನೀನು ಸಣ್ಣಜ್ಜ ಅಲ್ಲ.. ಮಧುಸೂದನ್ ರಾವ್ ಎಂಎ ಬಿಎಡ್ ಉವಾಚ.
ಹೌದು,ನಾನು ಸಣ್ಣಜ್ಜ ಅಲ್ಲ..ಗಿಳಿರಾಮ.
ನನಗೆ ಅವನೇ ಬೇಕು.
ಗಿಳಿರಾಮನಿಗೆ ಕೋಪ ನೆತ್ತಗೇರಿ ಅನಾಹುತ ಆಗಿಬಿಡಬೇಕು..
ಹೌದೂ.. ನಾನೇನು ಮಾಡಬೇಕು ಸ್ವಾಮೀ? ಹುಡುಕಿಕೊಡಿ ನೀವೇ..ಎಲ್ಲಿ ಹೋದ ಅಂತ ಯಾರಿಗೆ ಗೊತ್ತು..
ಹೋ..ಹೋ..ಬ್ಯಾರಿಮಾಸ್ಟ್ರೂ ಇಲ್ಲಾ..ಸಣ್ಣಜ್ಜನೂ ಇಲ್ಲಾ..ಇಬ್ಬರೂ ಒಬ್ಬರನ್ನೊಬ್ಬರೂ ಬೆನ್ನು ಹಿಡಿದುಕೊಂಡು ಹೋಗಿದ್ದಾರೆ..
ಎಲ್ಲಿಗೆ..ಎಂದು ಕೇಳಿದರೆ ನನಗೇನು ಗೊತ್ತಿದೆ?
ಮಧುಸೂದನ್ ರಾವ್ ಎಂಎ ಬಿಎಡ್ ಅವರ  ಮಗ ಶಂಭು ಇದನ್ನೆಲ್ಲಾ ಮೊಗಸಾಲೆಯಲ್ಲಿ ನಿಂತು ಕೇಳುತ್ತಿದ್ದ.
ಅವನ ಅಜ್ಜಿ ಮನೆಯಲ್ಲಿ ಸಣ್ಣಜ್ಜ ಎಂಬ ಒಂದು ಪಾತ್ರ ಕಣ್ಮರೆಯಾಗಿರುವ ಕುರಿತು ಆಗಾಗ್ಗೆ ಕಥೆ ದಂತ ಕಥೆಗಳು ಅವನ ಹೈಸ್ಕೂಲು ಮುಗಿಯುವ ತನಕದ ದಸರೆಯ ರಜೆಗಳಲ್ಲಿ ಕೇಳಿ ಬರುತ್ತಿದ್ದವು.ಈಗ ಮಧುಸೂದನ್ ರಾವ್ ಅವರ ಮುಂದೆ ಶರ್ಮಿಳೆ ನಿಂತಾಗ ಈ ಕಥೆಗೆ ಮತ್ತೆ ರೆಕ್ಕೆ ಸಿಕ್ಕಿಸಲು ಸಾಧ್ಯವಾಗುವುದೇ?
ಶಂಭು ಮತ್ತೆ ರೆಕ್ಕೆ ಸಿಕ್ಕಿಸಲು ಮನಸೆಂಬ ಹಾರುವ ಯಂತ್ರವನ್ನು ಮುಂದಿಟ್ಟ.

ಸಣ್ಣಜ್ಜ ಎಲ್ಲಿ ಹೋಗಿರಬಹುದು..ಏಲಕ್ಕಿ ಮಲೆಯಲ್ಲಿ ತುಂಬಾ ಕೆಲಸ ಇದೆ ಎನ್ನೋದು ವಾಡಿಕೆ.ಕಳ್ಳ ರೈಟರ್‌ಗಳು ಮರಕಡಿದು ವಹಿವಾಟು ಮಾಡುತ್ತಾರೆ.ಹೇಳಿಕೇಳಿ ನಟ್ಟ ಬಿಸಿಲುಗಾಲ.ಏಲಕ್ಕಿ ಮಲೆಗೆ ಯಾವುದಾದರೂ ಟ್ರಾಕ್ಟರ್ ತರಿಸಿ,ಹಾಡಹಗಲೇ ಮರ ಸಾಗಿಸಿ ಕಿಸೆ ತುಂಬಿಸಿಕೊಳ್ತಾರಂತೆ.ಈ ಧಣಿಗಳಿಗೆ ಎಲ್ಲಿ ಮರವುಂಟು,ಎಲ್ಲಿ ಗಿಡವುಂಟು ಎಂದು ಗೊತ್ತಾಗುತ್ತದೆ?ಕೊಯಿಲಿನ ಟೈಮಿಗೆ ಒಮ್ಮೆ ಬಂದರೆ ಬಂದರು ಇಲ್ಲದಿದ್ದರೆ ಇಲ್ಲ.
ಧಣಿಗಳು ಮೂರು ಗುಡ್ಡ ಹತ್ತಿ ಮಲೆಗೆ ಬಂದರೆ ಆ ದಿನ ಅವರಿಗೆ ಬೇಕಾದ ಹಾಗೇ ಇದ್ದರಾಯಿತು.ರಾತ್ರಿ ಶೆಡ್‌ನಲ್ಲಿ ಚಿಮಿಣಿದೀಪದಲ್ಲಿ ಅಕೌಂಟು ಬುಕ್ಕು ಬಿಡಿಸುತ್ತಾರೆ..ಅದೇನು,ಇದೇನು ಅಂತ ಕೇಳ್ತಾರೆ..ಆಮೇಲೆ ಹೇಳಿದ್ದಕ್ಕೆಲ್ಲಾ ತಲೆಯಾಡಿಸ್ತಾರೆ..ಮಾತಾಡ್ತಾ ಮಾತಾಡ್ತಾ ಗೊರಕೆ ಹೊಡಿತಾರೆ..ಅವರ ಅಪ್ಪ ಈ ರೀತಿ ಒಂದೇ ದಿನ ಇಷ್ಟು ದೂರ ಕಾಡಲ್ಲಿ ಹತ್ತಿ ಇಳಿದು ಮಾಡಿದ್ದಾನಾ..
ಸಣ್ಣಜ್ಜ ಇದೇ ರೀತಿ ಶೆಡ್‌ನಲ್ಲಿ ಧಣಿಗೆ ಕಿತಾಬು ಬಿಡಿಸಿ ಲೆಕ್ಕ ಹೇಳಿದ್ದಾನೆ,ಧಣಿ ಅಲ್ಲೇ ಬೆತ್ತದ ಪಲ್ಲಂಗದಲ್ಲಿ ಕುಕ್ಕರಿಸಿದಾಗ ಕೆಲಸ ಮಾಡಿ ಮುಗಿಸಿದ್ದಾನೆ..
ಮತ್ತೆಂದೂ ಸಣ್ಣಜ್ಜನನ್ನು ಯಾರೂ ಕಂಡಿಲ್ಲ..
ಧಣಿಯ ಶವವನ್ನು ಬೋಪಯ್ಯನ ಟ್ರಾಕ್ಟರ್‌ನಲ್ಲಿ ಸಂಪಾಜೆಗೆ ತಂದು ಆಮೇಲೆ ಮೋರೀಸ್ ಕಾರಿನಲ್ಲಿ ಊರಿಗೆ ಸಾಗಿಸಲಾಗಿತ್ತು.
ಹೌದೂ ಸಣ್ಣಜ್ಜ ಏಕೆ ಹಾಗೇ ಮಾಡಿದ,ಅವನು ಹಾಗೇ ಮಾಡುವುದಕ್ಕೂ ಬ್ಯಾರಿಮಾಸ್ಟ್ರೂ ಕಾಣೆಯಾಗುವುದಕ್ಕೂ ಏನು ಸಂಬಂಧ..ಮೂಕಂಪಾರೆಯ ಭೂತ ಮೂಡಲಾಗಿ ಕೈ ಸನ್ನೆ ಮಾಡಿದ್ದು ಎಂದರೆ ಅದೇ ಏಲಕ್ಕಿ ಮಲೆಯಾಚೆಗೆ ಇರಬೇಕಾ..
ಶಂಭು ಎಲ್ಲವನ್ನೂ ಎರಡನೇ ಕಂತನ್ನು ಇಳಿಸೋ ಹೊತ್ತಿಗೆ ಚುಕ್ತಾ ಮಾಡುತ್ತಿದ್ದ.
ಆ ಪಕ್ಕದ ಟೇಬಲ್ಲಿನಲ್ಲಿ ಐಪಿಎಲ್ ಮ್ಯಾಚು ಆರಂಭವಾಗೋ ಹೊತ್ತಿಗೇ ಡಿಸ್ಕಶನ್‌ಗೆ ಕುಳಿತಿದ್ದ ಗೆಳೆಯರ ಪೈಕಿ ಪೊಲೀಸ್ ಆಫೀಸರ್ ಪಕ್ಕದವನ ಹತ್ತಿರ ಅಂಗಲಾಚುತ್ತಿದ್ದ,
ಸಾರ್ ನೀವು ಮನಸ್ಸು ಮಾಡಿದರೆ ಈ ಸ್ಟೋರಿಯನ್ನು ಫಿಲಂ ಮಾಡಬಹುದು ಸಾರ್ ..ಸ್ಟೋರಿ ವೆರಿ ಸಿಂಪಲ್ ಸಾರ್ ಮತ್ತು ಅಷ್ಟೇ ಕಾಂಪ್ಲೆಕ್ಸೂ ಇದೆ ಸಾರ್..ಒಬ್ಬ ಏಲಕ್ಕಿ ತೋಟದಲ್ಲಿ ರೈಟರ್ ಆಗಿರ್‍ತಾನೆ ಸಾರ್..ಅವನು ತೋಟಕ್ಕೆ ಬಂದ ಓನರ್‌ನ್ನು ಮರ್ಡರ್ ಮಾಡಿ ಬಿಡ್ತಾನೆ..ಸಾರ್..ಆಮೇಲೆ ಅವನು ಕಾಣೆಯಾಗುತ್ತಾನೆ ಸಾರ್..ಇಷ್ಟಕ್ಕೂ ಅವನೇ ಇವನನ್ನು ಮರ್ಡರ್ ಮಾಡಿದ ಅಂತ ಎಲ್ಲೂ ಹೇಳೋಕೇ ಆಗಲ್ಲ ಸಾರ್ ಅಂಥಾ ಸೀನ್ ಕ್ರಿಯೇಟ್ ಆಗಿಬಿಡುತ್ತೆ ಸಾರ್..ಕಥೆ ಸೊಗಸಾಗಿದೆ ಸಾರ್ ..ಡಿಟೈಲ್ಲಾಗಿ ಹೇಳ್ತೇನೆ ಸಾರ್..ಇಲ್ಲಲ್ಲ..ನಂದಿಹಿಲ್ಸ್‌ನಲ್ಲಿ..ಮುಂದಿನ ಭಾನುವಾರ..ಮೂರು ರೂಮ್ ಬುಕ್ ಮಾಡಿದೀನಿ ಸಾರ್,ಬನ್ನಿ ಕಥೆ ಹೇಳೋಣ ಸಾರ್.
ಶಂಭು ಕಥೆ ಕೇಳುತ್ತಿದ್ದ ಟೇಬಲ್ಲಿನತ್ತ ತಿರುಗಿದ..
ಕಥೆ ಹೇಳುತ್ತಿದ್ದ ಪೊಲೀಸ್ ಆಫೀಸರ ನಿಧಾನವಾಗಿ ಅಂಗಲಾಚುತ್ತಿದ್ದವನಂತೆ ಕಂಡ,ಅವನ ಜೊತೆಗಿದ್ದವರು ಎದ್ದುನಿಂತಿದ್ದರು.ಅವರು ಹೊರಡುವ ಧಾವಂತದಲ್ಲಿದ್ದರು.
ಶಂಭು ಮೂರನೇ ಕಂತನ್ನು ಇಳಿಸಿದ್ದರಿಂದ ತೀರಾ ಸುಸ್ಥಿತಿಯಲ್ಲಿ ಇರಲಿಲ್ಲ.ಆದರೆ ಈ ಪೊಲೀಸ್ ಆಫೀಸರ್ ಎಂಬವನು ಹೇಳುತ್ತಿದ್ದ ಸ್ಟೋರಿಗೆ ಅವನು ಲಿಂಕ್ ಬಿಗಿಯುತ್ತಿದ್ದ.ಆದರೆ ಬಿಗಿಯಲು ಸಾಧ್ಯವಾಗುತ್ತಿಲ್ಲ.
ಯಾರಿದು ಆಫೀಸರ್?ಇವನಿಗೆ ಸಣ್ಣಜ್ಜನ ಸ್ಟೋರಿ ಹೇಗೆ ಗೊತ್ತು?ಅದೂ ಐವತ್ತು ವರ್ಷಗಳ ಹಿಂದಿನದ್ದು.ಉಫ್..
ಶಂಭು ಬೇರರ್ ಅಂದ.ಬೇರರ್ ಬಂದ. ಫೋನ್ ಎತ್ತಿ ಅವನ ಕೈಗಿಟ್ಟ.ಸರಿ ರಾತ್ರಿಯಲ್ಲಿ ಕರೆ ಮಾಡಬಾರದು ಬಾಯ್,ಬಟ್ ಮಾಡಲೇಬೇಕಾಗಿದೆ.ನಾನು ಕನ್ನಡಕ ತಂದಿಲ್ಲ,ಸೋ,ಈ ಫೋನ್‌ನಲ್ಲಿ ಶರ್ಮಿಳೆ ಅಂತ ಒಂದು ಹೆಸರಿದೆ ನೋಡು, ಹುಡುಕು ಅಂದ
ಬೇರರ್ ಹುಡುಕಿ ಕೊಟ್ಟ.
ಈ ಶರ್ಮಿಳೆ ನಾನು ಹುಡುಕುತ್ತಿರುವ ಸಣ್ಣಜ್ಜನ ಕುಟುಂಬಸ್ಥಳು,ಐ ಮೀನ್ ಶೀ ಈಸ್ ಫ್ರಾಂ ಹಿಸ್ ಫ್ಯಾಮಿಲಿ.
ಡಯಲ್ ಮಾಡಿ ನನಗೆ ಕೊಡು.
ಬೇರರ್ ಡಯಲ್ ಮಾಡಿದ.
ಸರ್ ರಿಂಗಾಗುತ್ತಿದೆ ಎಂದ.
ರಿಂಗಾಗುತ್ತಿದೆ,ನೋಡ್ತಾ ಇರು ಇನ್ನು ರಂಗಾಗುತ್ತದೆ ಹೆಹೆಹೆಹೆಹೆಹೆ..ಶಂಭು ಅಮಲುಪೂರ್ತಿ ತನಗೊಬ್ಬನಿಗೇ ಎಂಬ ಹಾಗೇ ನಕ್ಕ.
ಹಲೋ ಅಂದಿತು ಹೆಣ್ಣುಧ್ವನಿ.
ಬೇರರ್ ಇನ್ನು ತನಗಿಲ್ಲ ಉಸಾಬರಿ ಎಂಬ ಹಾಗೇ ಫೋನ್ ಶಂಭುವಿನ ಕೈಗಿತ್ತ.ಅವನ ಕೈಯನ್ನು ಹಿಡಿದುಕೊಂಡ ಶಂಭು ಹಲೋ ಡಾರ್ಲಿಂಗ್..ಎಂದ
ಬೇರರ್ ಸುಮ್ಮನೇ ನಕ್ಕ.
ವಾನಾ ಮೀಟ್ ಯುವರ್ ಸಣ್ಣಜ್ಜಾ ಎಂದ.
ಫಕ್‌ಆಫ್ ಅಂತ ಗದರಿದ ಹೆಣ್ಣು ಧ್ವನಿ.
ಯೂಪ್ ಟು ನೈಟ್ ಐ ವಾನಾ ಫಕ್ ಯೂ...ಹೆಹೆಹೆಹೆಹೆ ಶಂಭು ಪೂರ್ತಿ ಬೋರಲಾಗಿದ್ದ.
ಫೋನ್ ಸ್ತಬ್ದವಾಗಿತ್ತು.
ನೆಕ್ಸ್ಟ್ ಸಂಡೇ ನಂದೀಹಿಲ್ಸ್‌ನಲ್ಲಿ ಇದೇ ಪೊಲೀಸ್ ಆಫೀಸರ್ ಮತ್ತೆ ಅವನ ಫ್ರೆಂಡ್ಸ್ ಸೇರಲಿದ್ದಾರೆ,ಅಲ್ಲಿ ತಾನೂ ಹೋಗಬೇಕು ಎಂದು ಬೇರರ್‌ಗೆ ಶಂಭು ಹೇಳುತ್ತಿದ್ದರೆ ಅದನ್ನು ಸ್ವತಃ ಬೇರರ್ ಗಂಭೀರವಾಗಿ ಪರಿಗಣಿಸಲೇ ಇಲ್ಲ.


20160915

ಎಲ್ಲಿ ನೆಡಬೇಕು ನಾನೆಂಬ ಸ್ಥಿತಿಯಎಸ್.ಜಿ.ಮಾಸ್ಟ್ರನ್ನು ಕಂಡವರೆಲ್ಲಾ ಅವರು ಊರಿಗೇ ಮಾಸ್ಟ್ರು ಎಂದು ಲೇವಡಿ ಮಾಡುತ್ತಾರೆ.ಅದಕ್ಕೆ ಕಾರಣ ಅವರ ಘನಗಾಂಬೀರ್ಯ.
ಸ್ವಲ್ಪ ಮಟ್ಟಿಗೆ ಅವರು ತನ್ನಲ್ಲಿ ಗಾಂಭೀರ್ಯವನ್ನು ನಾಟಕೀಯವಾಗಿ ರೂಢಿಸಿಕೊಂಡಿದ್ದಾರೆ.ಶಾಲೆಯಲ್ಲಿ ಮಕ್ಕಳ ಮಟ್ಟಿಗೆ ಅಂತ ಅಭ್ಯಾಸ ಮಾಡಿದ್ದ ಗಾಂಭೀರ್ಯವನ್ನು ಅವರು ಊರಿನ ಮಟ್ಟಿಗೂ ವಿಸ್ತರಿಸಿದರು.ಮಾತಾಡಿದರೆ ಮಾತ್ರಾ ಮಾತನಾಡುವುದು.ಹಾಸ್ಯ,ಚಟಾಕಿಗಳಿಗೆ ನಗದೇ ಇರುವುದು,ಯಾರು ಏನೇ ಮಾತನಾಡಿದರೂ ಅದೆಲ್ಲಾ ಬಾಲಿಶ ಅಂತ ಅಂದುಕೊಳ್ಳುವುದು ಅವರ ಗಾಂಭೀರ್ಯದ ಲಕ್ಷಣಗಳಾಗಿದ್ದವು.ಎಸ್.ಜಿ,ಮಾಸ್ಟ್ರ್ರಿಗೆ ಈ ಗಾಂಭೀರ್ಯ ಆಮೇಲೆ ಬಿಡಲಾರದ ಪರಿಸ್ಥಿತಿ ತಂದೊಡ್ಡಿತು.ಅವರು ಸದಾ ಗಂಭೀರವಾಗಿ ಇರುವುದು,ಮಿತಭಾಷಿಯಾಗಿರುವ ಕಾರಣದಿಂದ ಊರವರೂ ಅವರನ್ನು ಮಹಾ ಪಂಡಿತರೆಂದೂ ವಿಚಾರವಾದಿಗಳೆಂದೂ ಜ್ಞಾನಭಂಡಾರವೇ ಎಂದೂ ಭಾವಿಸಿದ್ದರು.ಹಾಗಾಗಿ ಅನೇಕರು ಅನೇಕ ಸಮಸ್ಯೆಗಳ ಕುರಿತು ಅವರ ಬಳಿ ಪರಿಹಾರಕ್ಕೆ ಬರುತ್ತಿದ್ದರು.ಎಸ್.ಜಿ.ಮಾಸ್ಟ್ರು ಪರಿಹಾರ ಹೇಳುತ್ತಿರಲಿಲ್ಲ.ಆದರೆ ಕೆಲವೊಂದು ಪ್ರಶ್ನೆ ಕೇಳುತ್ತಿದ್ದರು.ಆ ಪ್ರಶ್ನೆಗಳಲ್ಲೇ ಉತ್ತರ ಇದೆ ಎಂದು ಹೇಳುತ್ತಿದ್ದರು.ಅನೇಕರಿಗೆ ಅವರು ಕೇಳುತ್ತಿದ್ದ ಪ್ರಶ್ನೆಗಳಿಗೆ ಉತ್ತರ ತಮ್ಮೊಳಗೆ ಹುಟ್ಟಿ ಅವರ ಮೂಲ ಸಮಸ್ಯೆಯೇ ಪರಿಹಾರವಾಗಿತ್ತು.ಆ ಮಟ್ಟಿಗೆ ಅವರೊಬ್ಬ ಸಾರ್ಥಕ ಕೌನ್ಸಿಲರ್ ಆಗಿದ್ದರು.
ಇಂಥ ಎಸ್.ಜಿ.ಮಾಸ್ಟ್ರು ಜೀವನದಲ್ಲಿ ಎಂದೂ ಎಡವಿದರವರಲ್ಲ ಅಂತ ಊರವರು ಭಾವಿಸಿದ್ದರು. ಅವರು ಅತ್ಯಂತ ಸಂಯಮಿ ಮತ್ತು ಶಿಸ್ತೇ ಮೂರ್ತಿವೆತ್ತ ಮೇಧಾವಿ ಎಂದುಕೊಂಡಿದ್ದರು.ಅದು ಸರಿಯೇ ಇತ್ತು.ಆದರೆ ಅನೇಕ ಬಾರಿ ಊರವರು ಭಾವಿಸಿಂತೆ ನಾನಿಲ್ಲ ಎಂದು ಎಸ್.ಜಿ.ಮಾಸ್ಟ್ರಿಗೆ ಅನಿಸಿ ಏನೋ ಕಳ್ಳಾಟವಾಗುತ್ತಿತ್ತು. ಬ್ರಹ್ಮಚರ್ಯದಲ್ಲಿ ಅವರು ಅದೆಷ್ಟು ಬಾರಿ ಖಡಕ್ ಆಗಿ ಬ್ರಹ್ಮಚಾರಿಯಾಗಿರಬೇಕು ಎಂದು ಯೋಚಿಸಿ ಸಂಕಲ್ಪಿಸಿ ಸೋತುಹೋದವರೇ.ಅವರ ಬ್ರಹ್ಮಚರ್ಯದಲ್ಲಿ ಅವರೂ ಎಂದೂ ಕಡ್ಡಾಯ ಬ್ರಹ್ಮಚಾರಿಯಾಗಿರಲಿಲ್ಲ. ಅವರಿಗೆ ಅಕ್ಕಿರಾಶಿಯ ಮೇಲೆ ಕೆಂಪುಗೂಡಿ ಹಾಕಿ ಜನಿವಾರ ತೊಡಿಸಿದ ಭಟ್ಟರು ಬ್ರಹ್ಮಚಾರಿ ಏನೆಲ್ಲಾ ಮಾಡಬಾರದು ಎಂಬುದನ್ನು ಉಪದೇಶಿಸಿ ಅವರಿಂದ ಬಾಡಂ ಹೇಳಿಸಿದ್ದರು.ಅದರಲ್ಲಿ ಮರದಲ್ಲಿ ತಲೆ ಕೆಳಗಾಗಿ ನೇತಾಡಬಾರದು, ಸ್ತ್ರೀಗೋಷ್ಠಿ ಮಾಡಬಾರದು,ದಂತಧಾವನ ಮಾಡಬಾರದು, ಉದ್ದಿನ ಪದಾರ್ಥ ತಿನ್ನಬಾರದು, ನೀರಾಟವಾಡಬಾರದು ಎಂದಿತ್ಯಾದಿ ಶರತ್ತುಗಳಿದ್ದವು. ಆಗ ಮೂರು ಬಾರಿ ಬಾಡಂ ಬಾಡಂ ಬಾಡಂ ಅಂತ ಹೇಳಿ ಒಪ್ಪಿದ್ದ ಅವರು ಯಾವಾಗ ತರುಣರಾದರೋ ಬಾಡಂ ಮರೆತೇ ಬಿಟ್ಟರು. ಬಾಡಂ ಮರೆತರೆ ತಪ್ಪೇ ಎಂದು ಅವರು ಒಮ್ಮೆ ಕಾಲೇಜಿನಿಂದ ಪುರೋಹಿತರ ಮನೆಗೇ ಹೋಗಿ ಕೇಳಿದ್ದರು.ಆಗ ಅವರ ಪುರೋಹಿತರು ತಪ್ಪೇನಿಲ್ಲ ಮಾಣೀ.ಉಪನಯನದ ದಿನ ನೀನು ಉದ್ದಿನ ಹಪ್ಪಳ ತಿನ್ನಲಿಲ್ಲವಾ ? ಆಗ ನನ್ನೊಟ್ಟಿಗೇ ಕೂತಿದ್ದೆ ಎಂದು ಲೇವಡಿ ಮಾಡಿದ್ದರು.
ಬ್ರಹ್ಮಚರ್ಯವನ್ನು ತುಂಡರಿಸಿ ಚೆಂಡಾಡಿದ ಬಗ್ಗೆ ಎಸ್.ಜಿ.ಮೇಸ್ಟ್ರಿಗೆ ಸ್ವಲ್ಪವೂ ವಿಷಾದವೇ ಇರಲಿಲ್ಲ. ಅವರ ಬೊಂಬಾಯಿ ಗೆಳೆಯ ಶ್ರೀನಿವಾಸ ವರೇಕರ್ ಜೊತೆಗೆ ಅವರು ಮೊದಲ ಬಾರಿಗೆ ಸ್ಕಾಚ್ ಹೊಯ್ಯಿಸಿಕೊಂಡಾಗ ಅವರು ಈ ವಿಚಾರದಲ್ಲಿ ನಮ್ಮ ಭಟ್ಟರು ನನ್ನಿಂದ ಬಾಡಂ ಹೇಳಿಸಿಕೊಳ್ಳಲಿಲ್ಲ ನೋಡು ಅಂತ ಪಕಪಕ ನಕ್ಕಿದ್ದರು. ಆ ನಗುವಿಗೆ ಐಸ್‌ಕ್ಯೂಬು ಗ್ಲಾಸಿನಿಂದ ಉದುರುವ ಹಾಗೇ ಗ್ಲಾಸೂ ಕುಲುಕಿತ್ತು.
ಎಸ್.ಜಿ.ಮೇಸ್ಟ್ರು ಪದವಿಪೂರ್ವ ಕಾಲೇಜಿಗೆ ರಜೆ ಹಾಕಿ ನೇತ್ರಾವತಿಯಲ್ಲಿ ಈಜುತ್ತಿದ್ದರು.ಅವರಿಗೆ ಅತ್ಯಂತ ಸುಖದ ಸಂಗತಿ ಅದಾಗಿತ್ತು.ಹಾಗೇ ಅವರು ಈಜುವ ವೇಳೆ ಹೊಳೆ ದಂಡೆಯಲ್ಲಿ ಅವರಿಗೆ ಬಟ್ಟೆ ಒಗೆಯುತ್ತಿದ್ದ ಕಲ್ಯಾಣಿಯ ಗೆಳೆತನವಾದುದು,ಆಮೇಲೆ ಹೊಳೆ ಪಕ್ಕದ ಕಾಡಿನಲ್ಲಿ ಅವಳೇ ಅವರ ಬ್ರಹ್ಮಚರ್ಯದ ಸೆರಗು ಬಿಡಿಸಿದ್ದು ಇತ್ಯಾದಿ ವಿಚಾರಗಳು  ಲಿಂಬೆ ಎಸರು ಹಿಂಡಿ ಮಾಡಿದ ಕಟ್ಟಂಚಾಯದ ಹಾಗಿದೆ.ಅವರೇನು ಬಿಡಿ ಅದನ್ನು ಅರಗಿಸಿಕೊಂಡಿದ್ದಾರೆ.ಕಲ್ಯಾಣಿ ಚೆನ್ನಾಗಿದ್ದಳು,ಅವಳಿಗೆ ಆ ಕ್ಷಣಕ್ಕೆ ಒಂದು ಸಾಂಗತ್ಯ ಬೇಕಿತ್ತು.ಅದನ್ನು ಅವಳು ಚೆನ್ನಾಗಿ ಬಳಸಿಕೊಂಡಿದ್ದಾಳೆ.ಸಾಂಗತ್ಯ ಬೇಕು ಅನಿಸುವ ವಯಸ್ಸು ಅವರದ್ದಾಗಿರಲಿಲ್ಲ ಆಗ.ಆದರೆ ಅವಳದ್ದಾಗಿತ್ತು.ಅವಳ ಸಾಂಗತ್ಯದಲ್ಲಿ ಅವರಿಗೆ ಸಾಂಗತ್ಯ ಎಂಬ ತಹತಹದ ಅನುಭವ ವೇದ್ಯವಾಗಿದ್ದು ಮಾತ್ರವಲ್ಲ ಅಂಟಿಕೊಂಡೂ ಬಿಟ್ಟಿತು.
ಇದೆಲ್ಲಾ ಪೂರ್ವಾಧ್ಯಾಯ.ಈಗ ನಾವು ಕಥೆ ಕಟ್ಟುತ್ತಿರುವುದು ಉತ್ತರಾಧ್ಯಾಯದಲ್ಲಿ.
ಇಲ್ಲಿ ಅದೇ ಪೂರ್ವಖಂಡದ ಎಸ್.ಜಿ.ಮಾಸ್ಟ್ರು ಇದ್ದಾರೆ.ಅವರಿಗೆ ವಯಸ್ಸಾಗಿದೆ.ಆದರೆ ಮನಸ್ಸು ಈಗಲೂ ಹದಿನೆಂಟರಲ್ಲೇ ಇದೆ.ಸಂಸಾರವಂದಿಗನಲ್ಲದ ಕಾರಣ ಅವರು ಒಂಥರಾ ಏಕಾಂಗಿ ಅಂತ ಊರವರಿಗೆ ಕಂಡರೂ ಅವರು ಮಾತ್ರಾ ಎಂದೂ ಹಾಗನಿಸಿಕೊಂಡಿಲ್ಲ.ಏಕೆಂದರೆ ಅವರಿಗೆ ಏಕಾಂಗಿ ಎನಿಸುವ ವಾತಾರಣವೇ ಇರುವುದಿಲ್ಲ.ಈಗ ಈ ಕಥೆಯ ಉತ್ತರಾಧ್ಯಾಯದಲ್ಲಿ ಒಬ್ಬಳು ಮಧ್ಯವಯಸ್ಕ ಗೃಹಿಣಿ ಮತ್ತು ಅವಳ ಮಗಳೂ ಬಂದು ನಿಂತಿದ್ದಾರೆ.ಅವರಿಗೆ ಎಸ್.ಜಿ.ಮಾಸ್ಟ್ರಲ್ಲಿ ಏನೂ ಹೇಳುವುದಕ್ಕೆ ಉಳಿದಿಲ್ಲ.ಆದರೆ ಅವರಿಗೆ ಒಂದು ಸಾಂಗತ್ಯದ ಇತ್ಯೋಪರಿಯ ನಿವೇದನೆ ಆಗಬೇಕಿದೆ ಅಷ್ಟೇ.ಅದನ್ನು ಈ ಕಥೆಗಾರ ನಿರೂಪಿಸುವ ಜವಾಬ್ದಾರಿ ಮಾತ್ರಾ ಹೊಂದಿದ್ದಾನೆ.
ಸಾಂಗತ್ಯದ ಬಗ್ಗೆ ಈಗ ಕೇಳಿದರೆ ಎಸ್.ಜಿ.ಮಾಸ್ಟ್ರು ಹೇಳುತ್ತಾರೆ,ಈಗಿನ ಕಾಲವೇ ಬೇರೆ ಅಂತ.ಈಗ ಮೊಬೈಲ್ ಫೋನ್ ಮತ್ತು ಒಂದು ಜಿಬಿ ನೆಟ್‌ಪ್ಯಾಕ್ ಇದ್ದರಾಯಿತು.ಸಾಂಗತ್ಯಕ್ಕೇನೂ ಕಷ್ಟವಿಲ್ಲ.
ಎಸ್.ಜಿ.ಮಾಸ್ಟ್ರ ಶಿಷ್ಯೆ ಸುಕನ್ಯಾ ಇದ್ದಳಲ್ಲ,ಅವಳ ಮಗಳದ್ದು ಅದೇ ಸಂಗತಿ.ಅದನ್ನು ಸಮಸ್ಯೆ ಅಂತ ಸುಕನ್ಯಾ ಹೇಳುತ್ತಿದ್ದಳು.ಆದರೆ ಎಸ್.ಜಿ.ಮಾಸ್ಟ್ರು ಅದಕ್ಕೆ ಅರ್ಥ ಪಡೆದುಕೊಂಡಿದ್ದರು.
ಸುಕನ್ಯಾಳ ಮಗಳು ಸುನೀತಾ ಚಂದದ ಹುಡುಗಿ.ಅವಳಿಗೆ ಬೇಗ ಮದುವೆ ಮಾಡಿ ಜವಾಬ್ದಾರಿ ಅಂತ ಇರುವುದನ್ನು ಕಳೆದುಕೊಳ್ಳಬೇಕು ಎಂದು ಸುಕನ್ಯಾ ಹೇಳುವವಳು.ಅವಳೋ ಸ್ವಲ್ಪವೂ ಅಪ್‌ಡೇಟ್ ಆದೋಳಲ್ಲ.ಆಗುವವಳೂ ಅಲ್ಲ.ಸನ್‌ಸಾವಿರದೊಂಭೈನ್ನೂರಾ ಎಪ್ಪತೈದರ ಮಾಡೆಲ್‌ನ ಹಾಗೇ ವರ್ತಿಸುತ್ತಾಳೆ. ಮಗಳಿಗೆ ಗಂಡಿನ ಆಸರೆ ಸಿಕ್ಕರೆ ಸಾಕು ಅಂತ ಒದ್ದಾಡುತ್ತಾಳೆ.ತವರು ಮನೆಗೆ ಹೋದರೆ ಪುಟ್ಟತ್ತೆ ಮತ್ತು ಸುಕನ್ಯಾ ಮಗಳ ಮದುವೆ ಆಗದೇ ನಿದ್ದೆಯೇ ಬರುವುದಿಲ್ಲ ಎಂದು ರಾತ್ರಿ ಇಡೀ ಮಾತನಾಡುತ್ತಾ ಕೂರುತ್ತಾರೆ. ಸುನೀತಾ ಏನೇ ಆದರೂ ಮದುವೆ ಒಲ್ಲೆ ಅನ್ನುವವಳು.ಯಾಕಮ್ಮಾ ಅಂತ ಕೇಳಿದರೆ,ಈಗಷ್ಟೇ ನಾನು ಓದುತ್ತಿದ್ದೇನೆ,ಓದು ಮುಗಿಯಲಿ ಆಮೇಲೆ ಮದುವೆ ಎಂದಳು. ಓದು ಮುಗಿದರೆ ಕಲಿಕೆ ಈಗ ತಾನೇ ಮುಗಿಸಿದ್ದೇನೆ,ನನ್ನ ಕಾಲಲ್ಲಿ ನಾನು ಮೊದಲು ನಿಲ್ಲುತ್ತೇನೆ ಅಂದಳು.ಕೆಲಸಕ್ಕೆ ಅಂತ ಬೆಂಗಳೂರಿಗೆ ಹೋದವಳು ವಯಸ್ಸು ಇಪ್ಪತ್ತನಾಲ್ಕು ಕಳೆದು ಇಪ್ಪತ್ತೈದು ಆಗಿ ಇಪ್ಪತ್ತಾರು ದಾಟಿ ಇಪ್ಪತ್ತೆಂಟು ಆದರೂ ಈಗ ಬೇಡ ಮದುವೆ ಈಗ ಬೇಡ ಮದುವೆ ಎಂದಳು.ಕೊನೆಗೂ ಅವಳು ಮದುವೆಗೆ ಒಪ್ಪಿದಾಗ ಮೂವತ್ತಕ್ಕೆ ಹತ್ತಿರ ಹತ್ತಿರ ಆಗಿತ್ತು.ಮದುವೆ ಆಗಿ ಒಂದೇ ವರ್ಷಕ್ಕೆ ಗಂಡ ಇವಳನ್ನು ಬಿಟ್ಟನೋ ಇವಳು ಗಂಡನನ್ನು ಬಿಟ್ಟಳೋ ಗೊತ್ತಿಲ್ಲ.
ಎಸ್.ಜಿ.ಮಾಸ್ಟ್ರ ಬಳಿಗೆ ಸುಕನ್ಯಾ ಗೋಳೋ ಅಂತ ಅಳುತ್ತಾ ಬಂದು ವಿಚಾರ ಮಂಡಿಸಿದಾಗಲೇ ಇದೆಲ್ಲಾ ಸಾಂಗತ್ಯದ ವಿಚಾರ ಅಂತ ಗೊತ್ತಾದದ್ದು.
ಯಾರಿಗಿಲ್ಲ ಸಾಂಗತ್ಯ ಎಂದು ಕೇಳಿದಳು ಸುನೀತಾ.ಯಾರ ಮನಸ್ಸೂ ಸಾಂಗತ್ಯವಿಲ್ಲದೇ ಉಳಿದೀತಾದರೂ ಹೇಗೆ? ಮೇಸ್ಟ್ರೇ ನಾನು ಓದಿದ ಅದೆಷ್ಟೋ ಇತಿಹಾಸದ ಕಿತಾಬುಗಳಲ್ಲಿ ಅಂಥ ಸಾಂಗತ್ಯ ಕಂಡಿದ್ದೇನೆ.ಸುಳ್ಳೇಕೆ ಹೇಳಲಿ ನಾನೂ  ನನ್ನ ಬದುಕಿನಲ್ಲಿ  ಒಬ್ಬ ಗೆಳೆಯನ ಸಾಂಗತ್ಯ ಪಡೆದಿದ್ದೆ,ಅದಕ್ಕೇ ಮದುವೆ ಬೇಡ ಅಂತ ಮುಂದೂಡುತ್ತಿದ್ದೆ. ಯಾಕೆಂದರೆ ಮದುವೆಯ ಕಡ್ಡಾಯ ಸಾಂಗತ್ಯಕ್ಕಿಂತ ಅದುವೇ ಮಿಗಿಲು ಅಂತ ಗೊತ್ತಿತ್ತು ನನಗೆ.ಅದಕ್ಕೇ ಅವನ ಜೊತೆ ಇಡೀ ಮನಸ್ಸನ್ನು ಶೇರ್ ಮಾಡುತ್ತೇನೆ,ಅವನು ನನ್ನ ಭಾವನೆಗಳನ್ನು ಬೆಳೆಸಿದ್ದಾನೆ.ಮನಸ್ಸನ್ನು ಅರಳಿಸಿದ್ದಾನೆ.ಲಾಂಗ್ ಡ್ರೈವ್ ಹೋಗಿದ್ದೇನೆ.ಕಾರಲ್ಲಿ ಅವನ ತೊಡೆ ಮೇಲೆ ತಲೆ ಇಟ್ಟು ಸಣ್ಣ ನ್ಯಾಪ್ ತೆಗೆದಿದ್ದೇನೆ.ಅದರಲ್ಲಿ ಏನು ತಪ್ಪಿದೆ ಎಂದು ನನಗಂತೂ ಗೊತ್ತಾಗುತ್ತಿಲ್ಲ ಮೇಸ್ಟ್ರೇ ಅಂದಳು ಸುನೀತಾ.
ಈ ಅಮ್ಮನ ನಂಬುಗೆಗೂ ನನ್ನ ನಂಬುಗೆಗೂ ಕೂಡಿ ಬರುವುದಿಲ್ಲ ಎಂದು ತಿಳಿದುಕೊಂಡಿದ್ದೆ ಮೇಸ್ಟ್ರೇ.ಈಗ ನೋಡಿದರೆ ನಾನು ಮಾಲೆ ಹಾಕಿದವನಿದ್ದಾನಲ್ಲ,ಅದೇ ನನ್ನ ಕತ್ತಿಗೆ ಕರಿಮಣಿಸರದಲ್ಲಿ ತಾಳಿ ಕಟ್ಟಿ ತಂದು ಕಟ್ಟಿದವನು ಅವನೂ ಅಷ್ಟೇ.ಅರ್ಥ ಮಾಡಿಕೋ ಎಂದು ಪರಿಪರಿಯಾಗಿ ಹೇಳಿದೆ.ನಿನಗೆ ಬೇಕಾದದ್ದು ನನ್ನ ಶರೀರ,ಮನಸ್ಸಲ್ಲ ಅಂತ ಕೊನೆಗೆ ಹೇಳಿದರೆ ಅವನು ಹೌದೂ ನನಗೆ ಬೇಕಾದದ್ದು ಶರೀರ ಅಂದು ಬಿಟ್ಟ .ಬೇಸರ ಎನಿಸಿತು.ಅವನಿಗೆ ವಾರಕ್ಕೊಮ್ಮೆ ಒಂದು ಸ್ಟೋರ್ ರೂಂ ಬೇಕು,ಅದು ನಾನು. ಉಫ್...ಆಗಲ್ಲ ಅಂದೆ ಅಂದಳು ಸುನೀತಾ.
ಎಸ್.ಜಿ.ಮಾಸ್ಟ್ರು ಅರ್ಥ ಮಾಡಿಕೊಳ್ಳುತ್ತಿದ್ದರು.
ಕಲ್ಯಾಣಿ ಜೊತೆ ನೇತ್ರಾವತಿ ದಂಡೆಯಲ್ಲಿ ಕುಳಿತು ಮಾತನಾಡುತ್ತಿದ್ದುದು.ಅವಳ ಕೈ ಹಿಡಿದು ಎಲ್ಲಿ ಅಂಗೈ ತೋರಿಸು,ನಾನು ಹಸ್ತಸಾಮುದ್ರಿಕ ಬಲ್ಲೆ,ನಿನ್ನ ಅಂಗೈ ಗೆರೆಗಳನ್ನು ಓದಿ ನೀನೇನಾಗುತ್ತೀಯಾ ಅಂತ ಹೇಳಬಲ್ಲೆ ಎಂದದ್ದು.ಅವಳು ಅಂಗೈ ಬಿಚ್ಚಿ ನನ್ನ ಅಂಗೈ ಮೇಲಿಟ್ಟು ಆಮೇಲೆ  ನನ್ನ  ಕಣ್ಣುಗಳಲ್ಲಿ ಅವಳು ನೆಟ್ಟ ನೋಟದಲ್ಲಿ ಕಾಣುತ್ತಿದ್ದ ದಾಹ,ಮುಖಕ್ಕೆ ರಾಚುತ್ತಿದ್ದ ಅವಳ ಏದುಸಿರಿನ ಶಾಖ.
ಅಮ್ಮನಿಗೊಂದು ಮೊಮ್ಮಗು ಬೇಕು.ನನ್ನ ಮಗಳು ಅಳಿಯ ಅಂತ ರಾಗ ಜೋಡಿಸುವುದಕ್ಕೊಂದು ಸಾಹಿತ್ಯ ಬೇಕು.ಅದು ನಾನೇ ಆಗಬೇಕಾ?ಅಮ್ಮನಿಗಾಗಿ ನಾನು ಇವನ ಕೂಡಿಕೆ ಮಾಡಿಕೊಳ್ಳುವುದೇ ಆದರೆ ನಾನು ಅಂತ ಇರುವ ಒಂದು ಸ್ಥಿತಿ ಇದೆಯಲ್ಲಾ ಅದನ್ನು ಎಲ್ಲಿ ನೆಡಬೇಕು ಮೇಸ್ಟ್ರೇ?
ನಂಗೊತ್ತು ನೀವೀಗ ಕೇಳುವುದಿಲ್ಲ,ಆದರೆ ಮನಸ್ಸಲ್ಲೇ ಪ್ರಶ್ನಿಸುತ್ತಿದ್ದೀರಿ,ನನ್ನ ಮನಸ್ಸನ್ನಾಳಿದವನಿದ್ದಾನಲ್ಲ ಅವನೇನಾದ ಅಂತ ತಾನೇ?
ಅವನು ಇನ್ಯಾವಳನ್ನೋ ಕೂಡಿಕೆ ಮಾಡಿಕೊಂಡ.ಅವಳೀಗ ಗರ್ಭಿಣಿ.ಅವಳೊಳಗೆ ಅವನು ನೆಟ್ಟ ಬೀಜ ಅದು ಅವನದ್ದೇ ಇರಬಹುದು ತಾತ್ವಿಕವಾಗಿ,ಆದರೆ ಭಾವನಾತ್ಮಕವಾಗಿ ಅದು ನನ್ನದೇ..
ಎಸ್.ಜಿ.ಮಾಸ್ಟ್ರು ಬವಳಿ ಬಂದವರ ಹಾಗೇ ಆ ಬೀಟಿ ಮರದ ಕುರ್ಚಿಯಲ್ಲಿ ಗರ್ಕರಾದರು.ಎರಡೂ ಕೈಗಳನ್ನು ಕುರ್ಚಿಯ ಹಿಡಿಯಲ್ಲಿ ಬಿಗಿ ಮಾಡಿದರು.
ಸುಕನ್ಯಾ ಮೇಸ್ಟ್ರ ಕಣ್ಣಾಲಿಗಳಲ್ಲಿ ಏನೆಲ್ಲಾ ಕಾಣಿಸಬಹುದು ಎಂದು ನೋಡುತ್ತಿದ್ದಳು.
ಮುಂದೇನೂ ಅಂತ ತಾನೇ ನಿಮ್ಮ ಕಣ್ಣು ಪ್ರಶ್ನಿಸುತ್ತಿರುವುದು ಮೇಸ್ಟ್ರೇ ಎಂದಳು ಸುನೀತಾ.
ಎಸ್.ಜಿ.ಮಾಸ್ಟ್ರು ವಿಷಾದದಿಂದ ಎಂಬ ಹಾಗೆಯೂ ನಸು ನಾಚಿಕೆ ಎಂಬ ಹಾಗೆಯೂ ನಕ್ಕರು.
ನಿಮ್ಮ ನಗುವಿನಲ್ಲಿ ನಾನು ಅರ್ಥ ಮಾಡಿಕೊಂಡಿದ್ದೇನೆ ಮೇಸ್ಟ್ರೇ.ಸಾಂಗತ್ಯದ ಪ್ರಶ್ನೆ ಬಂದಾಗಲೆಲ್ಲಾ ಹೆಣ್ಣು ದಯನೀಯವಾಗಿ ಸೋಲುತ್ತಾಳೆ.ಇಷ್ಟು ಕಾಲ ನಾನು ಅಂದುಕೊಂಡಿದ್ದೆ ಮನಸ್ಸನ್ನು ಮಹಾರಾಣಿಯಂತೆ ಆಳಬಲ್ಲೆ ಅಂತ.ಆದರೆ ಆಳಿಸಿಕೊಳ್ಳುತ್ತಾ ಇರುವಾಗ ಆಹಾ ಒಂದು ಸಾಮ್ರಾಜ್ಯದ ದೊರೆಸಾನಿ ಅಂತ ಸುಖಿಸುತ್ತೇವೆ.ಆದರೆ ನಮ್ಮ ಮನಸ್ಸನ್ನು ಆವರಿಸಿಕೊಂಡ ಆ ಸಾಮ್ರಾಜ್ಯದ ಸೀಮೆಯಾಚೆಗೆ ಯಾವಾಗ ದೊರೆಯ ಸೇನೆ ದಾಟಿತೋ ಅರಮನೆಯೇ ಕೆಡಹಿಬೀಳುತ್ತದೆ.
ಕಲ್ಯಾಣಿ ಆ ದಿನ ಆ ನೇತ್ರಾವತಿಯಲ್ಲಿ ಕೊಚ್ಚಿಹೋದಾಗ ಹೀಗೇ ಅಂದುಕೊಂಡಿದ್ದಾಳಾ? ಎಸ್.ಜಿ.ಮಾಸ್ಟ್ರು ಮೊದಲ ಬಾರಿಗೆ ತನ್ನೊಳಗೆ ಒಂದು ಕ್ವಶ್ಚನ್ ಮಾಡಿಕೊಂಡರು.
ಕಲ್ಯಾಣಿಗೂ ಒಂದು ಮನಸ್ಸೂ ಅಂತ ಇತ್ತಲ್ಲ.ಅದನ್ನು ನಾನು ಆಳಿದ್ದಿರಬಹುದಾ? ಅಥವಾ ಅವಳ ಅರಸೊತ್ತಿಗೆಯಲ್ಲಿ ನಾನೊಬ್ಬ ಸಾಮಂತ ಮಾತ್ರಾ ಆಗಿದ್ದಿರಬಹುದಾ?
ಹೆದರುವವಳಲ್ಲ ಮೇಸ್ಟ್ರೇ ಈ ಸುನೀತಾ.ಯಾವತ್ತಾದರೂ ನೇತ್ರಾವತಿಗೆ ಹಾರಿ ಸತ್ತೇನು ಅಂತ ಈ ಸುಕನ್ಯಾ ಅಂತ ನನ್ನ ಹೆತ್ತವಳಿದ್ದಾಳಲ್ಲ ಅವಳಿಗೆ ಭಯ ಮೇಸ್ಟ್ರೇ..ಥಾಕ್..ಈ ಸುನೀತಾಳ ಮನೋರಾಜ್ಯದಲ್ಲಿ ಯಾವತ್ತೂ ಸಾಮಂತರ ಆಳ್ವಿಕೆ ಇರುವುದೇ ಇಲ್ಲ..ಬಿಲೀವ್ ಮಿ..
ಏನಾದರೂ ಹೇಳಿ ಮೇಸ್ಟ್ರೇ..ಸುಕನ್ಯಾ ತನ್ನ ಅತ್ಯಂತ ಪ್ರೀತಿಯ ಮಾಸ್ಟ್ರ ಮುಂದೆ ಸೆರಗೊಡ್ಡಿ ಬೇಡಿಕೊಂಡಂತೆ ಕೇಳಿದಳು.
ಎಸ್.ಜಿ.ಮಾಸ್ಟ್ರು ಜೋರಾಗಿ ನಕ್ಕರು.ಸುಕನ್ಯಾ ನಿನ್ನ ಜೀವನದಲ್ಲಿ ನೀನು ಒಬ್ಬಳೇ ಇದ್ದದ್ದಾ?ಅಲ್ಲ ತಾನೇ.ಇರಲಿ ಬಿಡು ಹುಡುಗಿ ಅವಳಿಗೆ ಯಾವುದು ಇಷ್ಟ ಅದರಂತೆ ಬದುಕಲಿ ಅಂದರು.
ಆ ರಾತ್ರಿ ಸುಕನ್ಯಾಳಿಗೆ ಆ ವಯಸ್ಸಲ್ಲೂ ಎಸ್.ಜಿ.ಮಾಸ್ಟ್ರು ಕೇಳಿದ ಆ ಪ್ರಶ್ನೆಯಿಂದ ನಿದ್ದೆಯೇ ಬರಲಿಲ್ಲ.
ಅವಳೂ ದಡ್ಡಿಯೇ ಇರಬಹುದು ಆದರೆ ಎಸ್.ಜಿ.ಮಾಸ್ಟ್ರ ಪ್ರಶ್ನೆ ಅರ್ಥವಾಗದಷ್ಟು ದಡ್ಡಿಯೇನಲ್ಲ.